ಜಾಗತಿಕ ಸಾಲದ ಪ್ರಮಾಣ 226 ಲಕ್ಷ ಕೋಟಿ ಡಾಲರ್‌ಗೆ ಏರಿಕೆ; ಭಾರತದ ಪರಿಸ್ಥಿತಿ ಹೇಗಿದೆ ಗೊತ್ತೆ?
ಕೊವಿಡ್ 19 ಹಾಗೂ ಅದರ ಪರಿಣಾಮದಿಂದ ಹೊರಬರಲು ಸರ್ಕಾರಗಳು ಕೈಗೊಂಡ ಕ್ರಮಗಳಿಂದಾಗಿ ಜಾಗತಿಕ ಮಟ್ಟದ ಸಾಲವು ದಾಖಲೆಯೆ 226 ಲಕ್ಷ ಕೋಟಿ ಡಾಲರ್ ಮುಟ್ಟಿದೆ. ಇದರಲ್ಲಿ ಭಾರತದ ಪಾಲು ಎಷ್ಟು ಎಂಬ ವಿವರ ಕೂಡ ಇದೆ.
ಕೊವಿಡ್-19 ಮತ್ತು ಅದಕ್ಕೆ ಪ್ರತಿಕ್ರಿಯಿಸಲು ಜಾರಿಗೆ ತಂದ ನೀತಿಗಳಿಂದಾಗಿ ಜಾಗತಿಕ ಸಾಲವು ಹೊಸ ಗರಿಷ್ಠ ಮಟ್ಟವಾದ 226 ಲಕ್ಷ ಕೋಟಿ ಡಾಲರ್‌ಗೆ ಏರಿದೆ (ಒಂದು ಡಾಲರ್‌ಗೆ ಇವತ್ತಿನ ಭಾರತೀಯ ರೂಪಾಯಿ ಮೌಲ್ಯ 75ಕ್ಕೂ ಹೆಚ್ಚಿದೆ). ಇದರಲ್ಲಿ ಭಾರತದ ಬಾಕಿ 2021ರಲ್ಲಿ ಶೇ 90.6ಕ್ಕೆ ಏರಿಕೆಯಾಗಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಬುಧವಾರ ಹೇಳಿದೆ. 2020ರಲ್ಲಿ ವಿಶ್ವವ್ಯಾಪಿ ಸಾಲ ಮಾಡಿರುವ ಮುಂದುವರಿದ ಆರ್ಥಿಕತೆಗಳು ಮತ್ತು ಚೀನಾದ ಕೊಡುಗೆಯೇ ಶೇ 90ಕ್ಕಿಂತ ಹೆಚ್ಚಿದೆ. ಉಳಿದಂತೆ ಉದಯೋನ್ಮುಖ ಆರ್ಥಿಕತೆಗಳು ಮತ್ತು ಕಡಿಮೆ ಆದಾಯದ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಕೇವಲ ಶೇಕಡಾ 7ರಷ್ಟು ಮಾತ್ರ ಕೊಡುಗೆ ನೀಡಿವೆ. “ಕೊವಿಡ್ 19 ಮತ್ತು ಅದಕ್ಕೆ ಪ್ರತಿಕ್ರಿಯಿಸಲು ಜಾರಿಗೊಳಿಸಲಾದ ನೀತಿಗಳ ಕಾರಣದಿಂದಾಗಿ ಸಾಲದ ಮಟ್ಟವು ವೇಗವಾಗಿ ಹೆಚ್ಚಾಯಿತು ಹಾಗೂ ಎತ್ತರಕ್ಕೆ ತಲುಪಿತು. ಅಧಿಕ ಮತ್ತು ಹೆಚ್ಚುತ್ತಿರುವ ಸಾರ್ವಜನಿಕ ಮತ್ತು ಖಾಸಗಿ ಸಾಲಗಳು ಹಣಕಾಸಿನ ಸ್ಥಿರತೆ ಹಾಗೂ ಸಾರ್ವಜನಿಕ ಹಣಕಾಸಿನ ಅಪಾಯಗಳಿಗೆ ಸಂಬಂಧಿಸಿವೆ,” ಎಂದು ಹಣಕಾಸು ವ್ಯವಹಾರಗಳ ಇಲಾಖೆಯ ಐಎಂಎಫ್ ನಿರ್ದೇಶಕ ವಿಟರ್ ಗ್ಯಾಸ್ಪರ್ 2021ರ ಆರ್ಥಿಕ ನಿಗಾ ವರದಿಯ ಬಿಡುಗಡೆ ಸಮಯದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಸರ್ಕಾರಗಳು, ಕುಟುಂಬಗಳು ಮತ್ತು ಹಣಕಾಸೇತರ ನಿಗಮಗಳ ಸಾಲವು 2020ರಲ್ಲಿ 226 ಲಕ್ಷ ಕೋಟಿ ಅಮೆರಿಕನ್ ಡಾಲರ್‌ಗೆ ಹೆಚ್ಚಿದೆ- 2019ರಲ್ಲಿ ಇದ್ದುದಕ್ಕಿಂತ 27 ಲಕ್ಷ ಕೋಟಿ ಡಾಲರ್ ಹೆಚ್ಚಿನ ಮೊತ್ತ ಇದಾಗಿದೆ. ಈ ಏರಿಕೆಯು ಇದುವರೆಗಿನ ದಾಖಲೆಯಲ್ಲೇ ಅತಿ ದೊಡ್ಡದು,” ಎಂದು ಅವರು ಹೇಳಿದ್ದಾರೆ. ಈ ಅಂಕಿ- ಅಂಶವು ಸಾರ್ವಜನಿಕ ಮತ್ತು ಹಣಕಾಸೇತರ ಖಾಸಗಿ ವಲಯದ ಸಾಲಗಳನ್ನು ಸಹ ಒಳಗೊಂಡಿದೆ. ಐಎಂಎಫ್ ತನ್ನ 2021ರ ಹಣಕಾಸು ನಿಗಾ ವರದಿಯಲ್ಲಿ ತಿಳಿಸಿರುವಂತೆ, ಭಾರತದ ಸಾಲವು 2016ರಲ್ಲಿ ತನ್ನ ಜಿಡಿಪಿಯ ಶೇ 68.9ರಿಂದ 2020ರಲ್ಲಿ ಶೇ 89.6ಕ್ಕೆ ಏರಿಕೆಯಾಗಿದೆ. ಇದು 2021ರಲ್ಲಿ ಶೇ 90.6ಕ್ಕೆ ಜಿಗಿಯುತ್ತದೆ ಮತ್ತು ನಂತರ 2022ರಲ್ಲಿ ಶೇ 88.8ಕ್ಕೆ ಇಳಿಯುತ್ತದೆ. 2026ರ ಹೊತ್ತಿಗೆ ಕ್ರಮೇಣ ಶೇಕಡಾ 85.2ಕ್ಕೆ ತಲುಪಬಹುದು ಎಂದಿದೆ.
ಇಳಿಕೆ ಆಗುವ ನಿರೀಕ್ಷೆ ಇದೆ ಬಡ ರಾಷ್ಟ್ರಗಳಿಗೆ ಹಣಕಾಸಿನ ಮೇಲಿನ ನಿರ್ಬಂಧಗಳು ತೀವ್ರವಾಗಿವೆ ಎಂದು ಗ್ಯಾಸ್ಪರ್ ಹೇಳಿದ್ದಾರೆ. 2020ರಲ್ಲಿ ಹಣಕಾಸಿನ ನೀತಿಯು ತನ್ನ ಮೌಲ್ಯವನ್ನು ಸಾಬೀತುಪಡಿಸಿತು ಎಂದು ಹೇಳಿದ್ದು, ಸಾರ್ವಜನಿಕ ಸಾಲದ ಹೆಚ್ಚಳವು 2020ರಲ್ಲಿ ಕೊವಿಡ್-19 ಮತ್ತು ಅದರ ಆರ್ಥಿಕ, ಸಾಮಾಜಿಕ ಮತ್ತು ಹಣಕಾಸು ಪರಿಣಾಮಗಳಿಗೆ ಪ್ರತಿಕ್ರಿಯಿಸುವ ಅಗತ್ಯದಿಂದ ಸಂಪೂರ್ಣವಾಗಿ ಸಮರ್ಥಿಸಲಾಗಿದೆ. ಆದರೆ ಏರಿಕೆಯು ಒಂದೇ ಬಾರಿಗೆ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸಾಲವು ಈ ವರ್ಷ ಮತ್ತು ಮುಂದಿನ ವರ್ಷದಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ – ಪ್ರತಿ ವರ್ಷಕ್ಕೆ ಜಿಡಿಪಿಯ ಸುಮಾರು ಶೇ 1 ಪಾಯಿಂಟ್ ಇಳಿಕೆ ಆಗಬಹುದು ಎಂದು ಗ್ಯಾಸ್ಪರ್ ಹೇಳಿದ್ದಾರೆ. ಅದರ ನಂತರ ಜಿಡಿಪಿಯ ಸುಮಾರು ಶೇ 97ರಷ್ಟು ಸ್ಥಿರಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ಈ ಸಾಲದ ಡೈನಾಮಿಕ್ಸ್ ಅನ್ನು ನಾಮಿನಲ್ ಜಿಡಿಪಿ ಬೆಳವಣಿಗೆಯಿಂದ ಪ್ರಬಲ ಕೊಡುಗೆಯಿಂದ ನಡೆಸಲಾಗುತ್ತದೆ. ಇದರೊಂದಿಗೆ ಪ್ರಾಥಮಿಕ ಕೊರತೆಯಲ್ಲಿ ಇನ್ನಷ್ಟು ಕ್ರಮೇಣ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಐಎಂಎಫ್ ತನ್ನ ವರದಿಯಲ್ಲಿ, ಹಣಕಾಸಿನ ದೃಷ್ಟಿಕೋನದ ಅಪಾಯಗಳನ್ನು ಹೆಚ್ಚಿಸಿದೆ ಎಂದು ಹೇಳಿದೆ. ಲಸಿಕೆ ಉತ್ಪಾದನೆ ಮತ್ತು ವಿತರಣೆಯನ್ನು ಹೆಚ್ಚಿಸುವುದು, ವಿಶೇಷವಾಗಿ ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಕಡಿಮೆ ಆದಾಯದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ, ಜಾಗತಿಕ ಆರ್ಥಿಕತೆಗೆ ಮತ್ತಷ್ಟು ಹಾನಿಯನ್ನು ಮಿತಿಗೊಳಿಸುತ್ತದೆ ಎಂದಿದೆ. “ಕೊರೊನಾದ ಹೊಸ ರೂಪಾಂತರಗಳು, ಅನೇಕ ದೇಶಗಳಲ್ಲಿ ಕಡಿಮೆ ಲಸಿಕೆ ಕವರೇಜ್ ಮತ್ತು ಕೆಲವರು ಲಸಿಕೆಯನ್ನು ಹಾಕಿಸುವಲ್ಲಿ ವಿಳಂಬವಾಗುವುದು ಹೊಸ ಹಾನಿ ಉಂಟು ಮಾಡಬಹುದು ಮತ್ತು ಸಾರ್ವಜನಿಕ ಬಜೆಟ್‌ಗಳ ಮೇಲೆ ಒತ್ತಡವನ್ನು ಹೆಚ್ಚಿಸಬಹುದು. ಅನಿಶ್ಚಿತ ಹೊಣೆಗಾರಿಕೆಗಳು ಉದ್ಭವಿಸುವುದು- ಸಾಲ ಮತ್ತು ಖಾತ್ರಿ ಕಾರ್ಯಕ್ರಮಗಳು ಸೇರಿದಂತೆ- ಸರ್ಕಾರಿ ಸಾಲದಲ್ಲಿ ಅನಿರೀಕ್ಷಿತ ಹೆಚ್ಚಳಕ್ಕೆ ಕಾರಣವಾಗಬಹುದು,” ಎಂದು ವರದಿ ಹೇಳಿದೆ.
65 ರಿಂದ 75 ಮಿಲಿಯನ್ ಜನರನ್ನು ಬಡತನಕ್ಕೆ ನೂಕಿದ ಕೊರೊನಾ “ಹೆಚ್ಚಿನ ಒತ್ತಡಗಳು ಸಾಮಾಜಿಕ ಅತೃಪ್ತಿಯಿಂದ ಬರಬಹುದು. ಕೊರೊನಾ ಮುಂಚಿನ ಸ್ಥಿತಿಗೆ ಹೋಲಿಸಿದರೆ 2021ರಲ್ಲಿ ಈ ಬಿಕ್ಕಟ್ಟು 65 ರಿಂದ 75 ಮಿಲಿಯನ್ ಜನರನ್ನು ಬಡತನಕ್ಕೆ ತಳ್ಳಿದೆ ಎಂದು ಅಂದಾಜಿಸಲಾಗಿದೆ. ದೊಡ್ಡ ಸರ್ಕಾರಿ ಹಣಕಾಸಿನ ಅಗತ್ಯಗಳು ದುರ್ಬಲತೆಯ ಮೂಲವಾಗಿದೆ. ವಿಶೇಷವಾಗಿ ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಕಡಿಮೆ ಆದಾಯದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹಣಕಾಸಿನ ಪರಿಸ್ಥಿತಿಗಳು ಜಾಗತಿಕ ಬಡ್ಡಿದರಗಳ ಮೇಲೆ ನಿಂತಿರುತ್ತವೆ. ಮತ್ತು ಕೇಂದ್ರ ಬ್ಯಾಂಕ್ಗಳು ಅಲ್ಪಾವಧಿಯ ರೆಫರೆನ್ಸ್ ದರಗಳನ್ನು ಹೆಚ್ಚಿಸಲು ಪ್ರಾರಂಭಿಸಿವೆ,” ಎಂದು ಐಎಂಎಫ್ ಹೇಳಿದೆ.
ಹಣಕಾಸಿನ ನೀತಿಯು ಈ ಸವಾಲುಗಳಿಗೆ ಚುರುಕಾಗಿ ಪ್ರತಿಕ್ರಿಯಿಸಬೇಕು. ಜಾಗತಿಕ ಆರ್ಥಿಕತೆಯನ್ನು ಹೆಚ್ಚು ಉತ್ಪಾದಕ, ಒಳಗೊಳ್ಳುವಿಕೆ, ಹಸಿರು ಮತ್ತು ಭವಿಷ್ಯದ ಆರೋಗ್ಯ ಅಥವಾ ಇತರ ಬಿಕ್ಕಟ್ಟುಗಳಿಗೆ ಸ್ಥಿರವಾಗಿ ನಿಲ್ಲಲು, ಪರಿವರ್ತನೆ ಮಾಡಲು ಸಹಾಯ ಮಾಡಬೇಕಾಗುತ್ತದೆ ಎಂದು ಅದು ಹೇಳಿದೆ. ಅದೇ ಸಮಯದಲ್ಲಿ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತ್ರಿಪಡಿಸುವುದು, ಹಣಕಾಸಿನ ಪ್ರಮುಖ ವಲಯಗಳನ್ನು ಪುನರ್ ನಿರ್ಮಿಸಲು ಮಧ್ಯಮ ಅವಧಿಯ ಮಾರ್ಗವನ್ನು ಯೋಜಿಸುವುದು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಯತ್ತ ಪ್ರಗತಿ ಸಾಧಿಸುವುದು ನಿರ್ಣಾಯಕವಾಗಿ ಇರುತ್ತದೆ ಎಂದು ಅದು ಹೇಳಿದೆ.
ಇದನ್ನೂ ಓದಿ: Fiscal Deficit: 2021ರ ಏಪ್ರಿಲ್ನಿಂದ ಆಗಸ್ಟ್ ಅವಧಿಯಲ್ಲಿ ಕೇಂದ್ರದ ವಿತ್ತೀಯ ಕೊರತೆ 4.7 ಲಕ್ಷ ಕೋಟಿ ರೂಪಾಯಿ
ಭಾರತದ ಲಸಿಕೆ ಹಾಕುವ ದರವು ಆರ್ಥಿಕತೆಗೆ ಸಹಾಯಕ ಎಂದ ಐಎಂಎಫ್ನ ಗೀತಾ ಗೋಪಿನಾಥ್