Infosys: ಇನ್ಫೋಸಿಸ್‌ಗೆ ಎರಡನೇ ತ್ರೈಮಾಸಿಕದಲ್ಲಿ ರೂ. 5421 ಕೋಟಿ ಲಾಭ; 15 ರೂ. ಡಿವಿಡೆಂಡ್ ಘೋಷಣೆ
ಬೆಂಗಳೂರು ಮೂಲದ ಐಟಿ ಸೇವಾ ಕಂಪೆನಿಯಾ ಇನ್ಫೋಸಿಸ್ 2021-22ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಫಲಿತಾಂಶವನ್ನು ಘೋಷಿಸಿದ್ದು, ಇದೇ ವೇಳೆ 15 ರೂಪಾಯಿ ಡಿವಿಡೆಂಡ್ ಸಹ ಘೋಷಣೆ ಮಾಡಿದೆ.
ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ದೇಶದ ಎರಡನೇ ಅತಿದೊಡ್ಡ ಐ.ಟಿ. (ಮಾಹಿತಿ ತಂತ್ರಜ್ಞಾನ) ಸೇವಾ ಕಂಪೆನಿಯಾದ ಇನ್ಫೋಸಿಸ್ 2021ರ ಜುಲೈನಿಂದ ಸೆಪ್ಟೆಂಬರ್ ತನಕದ ತ್ರೈಮಾಸಿಕ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ರೂ. 5,421 ಕೋಟಿ ಕ್ರೋಡೀಕೃತ ಲಾಭವನ್ನು ವರದಿ ಮಾಡಿದೆ. ಜೂನ್ ತ್ರೈಮಾಸಿಕದಲ್ಲಿ ಬಂದಿದ್ದ ರೂ. 5,195 ಕೋಟಿಯ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ 4.4ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ ಶೇ 11.9ರಷ್ಟು ಏರಿಕೆ ಆಗಿದೆ. ಡೈಮ್ಲರ್ ಒಪ್ಪಂದದಿಂದ ಬಲವಾದ ಆದಾಯದ ಕೊಡುಗೆ, ಗ್ರಾಹಕರಿಂದ ಡಿಜಿಟಲ್ ರೂಪಾಂತರದ ಹೆಚ್ಚಿನ ಅಳವಡಿಕೆ, ವರ್ಟಿಕಲ್ಗಳಲ್ಲಿನ ಬೆಳವಣಿಗೆ ಇವೆಲ್ಲವೂ ಕಾರಣವಾಗಿದೆ. ಡೈಮ್ಲರ್ ಮತ್ತು ಇನ್ಫೋಸಿಸ್ ಡಿಸೆಂಬರ್ -2020ರಲ್ಲಿ ತಂತ್ರಜ್ಞಾನ ಆಧಾರಿತ ಐಟಿ ಮೂಲಸೌಕರ್ಯ ರೂಪಾಂತರಕ್ಕಾಗಿ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿತ್ತು. ಈ ಪಾಲುದಾರಿಕೆಯ ಮೂಲಕ ಡೈಮ್ಲರ್ ಎಜಿ ತನ್ನ ಐಟಿ ಆಪರೇಟಿಂಗ್ ಮಾದರಿ ಮತ್ತು ಮೂಲಸೌಕರ್ಯ ಲ್ಯಾಂಡ್ ಸ್ಕೇಪ್ ಕೆಲಸದ ಸ್ಥಳ ಸೇವೆಗಳು, ಸರ್ವೀಸ್ ಡೆಸ್ಕ್, ಡೇಟಾ ಸೆಂಟರ್, ನೆಟ್‌ವರ್ಕ್‌ಗಳು ಮತ್ತು ಎಸ್‌ಎಪಿ ಆಧಾರದಲ್ಲಿ ಇನ್ಫೋಸಿಸ್‌ನೊಂದಿಗೆ ಪರಿವರ್ತನೆ ಮಾಡುತ್ತದೆ. ಈ ವ್ಯವಹಾರದ ಒಟ್ಟು ಮೊತ್ತವು ಸುಮಾರು 320 ಕೋಟಿ ಅಮೆರಿಕನ್ ಡಾಲರ್ ಆಗಿತ್ತು.
ಐಟಿ ಸೇವೆಗಳ ಆದಾಯ ಹಿಂದಿನ ತ್ರೈಮಾಸಿಕದಲ್ಲಿ ಬಂದಿದ್ದ 27,896 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ, 2021ರ ಸೆಪ್ಟೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 29,602 ಕೋಟಿಗೆ ಹೆಚ್ಚಾಗಿದೆ. ಆದಾಯ ಗೈಡೆನ್ಸ್ ಶೇ 14- 16ರಿಂದ ಶೇ 16.5ರಿಂದ 17.5ಕ್ಕೆ ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ. ಮತ್ತು ಮಾರ್ಜಿನ್ ಗೈಡೆನ್ಸ್ನಲ್ಲಿ ಏನೂ ಬದಲಾಗದೆ ಶೇ 22ರಿಂದ 24ರಲ್ಲೇ ಉಳಿದಿದೆ. ಈ ಸ್ಟಾಕ್ ಬೆಲೆಯು ಪ್ರಸಕ್ತ ಹಣಕಾಸು ವರ್ಷ FY22ರಲ್ಲಿ ಶೇ 23.71ರಷ್ಟು ಏರಿಕೆಯನ್ನು ದಾಖಲಿಸಿದೆ ಮತ್ತು ಜುಲೈನಿಂದ ಇಂದಿನವರೆಗೆ ಶೇ 7ರಷ್ಟು ಗಳಿಕೆ ಕಂಡಿದೆ. ಅಕ್ಟೋಬರ್ 13 ರಂದು ಇನ್ಫೋಸಿಸ್ 2021-22ರ ಹಣಕಾಸು ವರ್ಷಕ್ಕೆ (ಎಫ್‌ವೈ 22) ಪ್ರತಿ ಷೇರಿಗೆ ಮಧ್ಯಂತರ ಡಿವಿಡೆಂಡ್ 15 ರೂಪಾಯಿಗಳನ್ನು ಘೋಷಿಸಿದೆ. ಇದು ಅಕ್ಟೋಬರ್ 27, 2021 ಅನ್ನು ಮಧ್ಯಂತರ ಲಾಭಾಂಶದ ದಾಖಲೆಯ ದಿನಾಂಕವಾಗಿ ಮತ್ತು ನವೆಂಬರ್ 10, 2021 ಅನ್ನು ಪಾವತಿ ದಿನಾಂಕವಾಗಿ ನಿಗದಿಪಡಿಸಿದೆ.
ಭಾರತದ ಮಹತ್ವಾಕಾಂಕ್ಷೆಯ ಹೊಸ ಆದಾಯ ತೆರಿಗೆ ಪೋರ್ಟಲ್ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕಂಪೆನಿಯು ಸ್ಥಿರ ಪ್ರಗತಿಯನ್ನು ಕಾಣುತ್ತಿದೆ ಎಂದು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ. ಯೋಜನೆಯಲ್ಲಿ ತೊಂದರೆಗಳು ಉಂಟಾದ ತಿಂಗಳ ನಂತರ ಪ್ರತಿ ದಿನ 1.9 ಕೋಟಿ ರಿಟರ್ನ್ಸ್ ಸಲ್ಲಿಸಲಾಗುತ್ತಿದೆ. “ನಾವು ಪ್ರತಿದಿನ 1.9 ಕೋಟಿ ರಿಟರ್ನ್ಸ್ ಸಲ್ಲಿಸುವುದರೊಂದಿಗೆ ಸ್ಥಿರವಾದ ಪ್ರಗತಿಯನ್ನು ಕಾಣುತ್ತಿದ್ದೇವೆ. 1 ರಿಂದ 7 ರ ನಮೂನೆಗಳು ಕ್ರಿಯಾತ್ಮಕವಾಗಿವೆ ಮತ್ತು ಲಭ್ಯವಿವೆ” ಎಂದು ಎರಡನೇ ತ್ರೈಮಾಸಿಕದ ಕಂಪೆನಿಯ ಫಲಿತಾಂಶಗಳ ನಂತರ ಪರೇಖ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 3.8 ಕೋಟಿ ಬಳಕೆದಾರರು ವಹಿವಾಟುಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪ್ರತಿ ದಿನ 2-3 ಲಕ್ಷ ರಿಟರ್ನ್ಸ್ ಸಲ್ಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ತಿಂಗಳು ಮೂರು ಕೋಟಿಗೂ ಅಧಿಕ ತೆರಿಗೆದಾರರು ವಹಿವಾಟುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಮತ್ತು ಹೊಸ ಐಟಿ ಪೋರ್ಟಲ್‌ನಲ್ಲಿ ಸುಮಾರು 1.5 ಕೋಟಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ
ಇನ್ಫೋಸಿಸ್ನ ಉನ್ನತ ಆಪರೇಟಿಂಗ್ ಆಫೀಸರ್ ಮತ್ತು ಕಂಪೆನಿಯ ಅನುಭವಿ ಯು.ಬಿ. ಪ್ರವೀಣ್ ರಾವ್ ನಿವೃತ್ತರಾಗುತ್ತಿರುವುದರಿಂದ ಉನ್ನತ ಮಟ್ಟದ ಬದಲಾವಣೆಯನ್ನು ಕಾಣಲಿದೆ. ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ಮಾತನಾಡಿ, “ಪ್ರವೀಣ್ ನಿವೃತ್ತಿಯಾಗುವ ಮುನ್ನ ಇದು ಕೊನೆಯ ಸಂಪೂರ್ಣ ತ್ರೈಮಾಸಿಕವಾಗಿದೆ. ಮುಂದಿನ ವಾರಗಳಲ್ಲಿ ನಾವು ಹೊಸ ಭವಿಷ್ಯದ ರಚನೆಯನ್ನು ಘೋಷಿಸುತ್ತೇವೆ,” ಎಂದಿದ್ದಾರೆ. ಪ್ರವೀಣ್ ರಾವ್ ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಮಂಡಳಿಯ ಪೂರ್ಣಾವಧಿ ನಿರ್ದೇಶಕರು. ಅವರನ್ನು ಮಂಡಳಿಯ ಸದಸ್ಯರಾಗಿ ಜನವರಿ 10, 2014ರಂದು ಸೇರಿಸಲಾಯಿತು.
ರಾವ್ ಜಾಗತಿಕ ವಿತರಣೆ ಮತ್ತು ವ್ಯಾಪಾರ ಸಕ್ರಿಯಗೊಳಿಸುವಿಕೆಯ ಪ್ರಮುಖ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ. ಅವರು 35 ವರ್ಷಗಳ ಉದ್ಯಮದ ಅನುಭವವನ್ನು ಹೊಂದಿದ್ದಾರೆ. 1986ರಲ್ಲಿ ಇನ್ಫೋಸಿಸ್‌ಗೆ ಸೇರಿದ ನಂತರ, ಅವರು ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಮೂಲಸೌಕರ್ಯ ನಿರ್ವಹಣಾ ಸೇವೆಗಳ ಮುಖ್ಯಸ್ಥರು, ಯುರೋಪ್‌ನ ಡೆಲಿವರಿ ಮುಖ್ಯಸ್ಥರು ಮತ್ತು ಗ್ರಾಹಕರ ಪ್ಯಾಕೇಜ್ಡ್ ಸರಕುಗಳು, ಲಾಜಿಸ್ಟಿಕ್ಸ್ ಮತ್ತು ಲೈಫ್ ಸೈನ್ಸಸ್‌ನ ರಿಟೇಲ್ ಮುಖ್ಯಸ್ಥರು ಸೇರಿದಂತೆ ಹಲವು ಹಿರಿಯ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಿಶಾಲ್ ಸಿಕ್ಕಾ ಕಂಪೆನಿಯನ್ನು ತೊರೆದು, ಸಲೀಲ್ ಪರೇಖ್ ನೇಮಕಗೊಳ್ಳುವ ಕಂಪೆನಿಯ ಸಿಇಒ ಬದಲಾವಣೆ ಕಾಲದಲ್ಲಿ ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.
ಇದನ್ನೂ ಓದಿ: Salary Hike: ಹೊಸ ಉದ್ಯೋಗಿಗಳಿಗೆ ಶೇ 120ರಷ್ಟು ವೇತನ ಹೆಚ್ಚಳಕ್ಕೆ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಯೋಜನೆ