ಪಣಜಿ, ಡಿಸೆಂಬರ್ 4: ಭಾರತೀಯ ಪ್ರವಾಸಿಗರ ಮೊದಲ ನೆಚ್ಚಿನ ಸ್ಥಳಗಳಲ್ಲಿ ಗೋವಾ ಕೂಡ ಒಂದು. ಕಳೆದ ಕೆಲ ವರ್ಷಗಳಲ್ಲಿ ಕಳೆಗುಂದಿದ್ದ ಗೋವಾದ ಪ್ರವಾಸೋದ್ಯಮ (Goa tourism) ಈಗೀಗ ಕಳೆಗಟ್ಟುವುದು ಹೆಚ್ಚಾಗಿದೆ. ವಿದೇಶೀ ಪ್ರವಾಸಿಗರ ಸಂಖ್ಯೆ ಇಳಿಮುಖ ಕಂಡಿದ್ದ ಗೋವಾದ ಕೈಯನ್ನು ದೇಶೀಯ ಪ್ರವಾಸಿಗರು ಹಿಡಿಯುತ್ತಿದ್ದಾರೆ. ಕೋವಿಡ್ ಮುಂಚಿನ ಸ್ಥಿತಿಯಲ್ಲಿ ಗೋವಾಕ್ಕೆ ಹರಿದುಬರುತ್ತಿದ್ದ ಪ್ರವಾಸಿಗರ ಸಂಖ್ಯೆಯನ್ನು ಮೀರಿಸುವಷ್ಟು ಮಂದಿ ಗೋವಾಕ್ಕೆ ಆಗಮಿಸಿ ಹೋಗುತ್ತಿದ್ದಾರೆ. 2019ರಲ್ಲಿ ಗೋವಾಕ್ಕೆ 81 ಮಿಲಿಯನ್ ಪ್ರವಾಸಿಗರು ಬಂದಿದ್ದರು. 2023ರಲ್ಲಿ ಈ ಸಂಖ್ಯೆಯಲ್ಲಿ ಶೇ. 30ರಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ. ಗೋವಾದ ಪ್ರವಾಸೋದ್ಯಮ ಮತ್ತು ಐಟಿ ಸಚಿವ ರೋಹನ್ ಕೌಂಟೆ ಅವರು ಗೋವಾದ ಪ್ರವಾಸೋದ್ಯಮ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಕೋವಿಡ್ ಬಳಿಕ ಗೋವಾ ಮಾತ್ರವಲ್ಲ ಎಲ್ಲೆಡೆ ಪ್ರವಾಸೋದ್ಯಮ ಕುಂಠಿತಗೊಂಡಿದ್ದು ಹೌದು. ಗೋವಾ ಪ್ರವಾಸೋದ್ಯಮದಲ್ಲಿ ಪ್ರಮುಖವಾದುದು ವಿದೇಶೀ ಪ್ರವಾಸಿಗರು. ಹೆಚ್ಚಿನ ವಿದೇಶೀ ಪ್ರವಾಸಿಗರು ಬ್ರಿಟನ್ ಮತ್ತು ರಷ್ಯಾದವರು. ಬ್ರಿಟನ್ ಮತ್ತು ಭಾರತ ನಡುವಿನ ಕೆಲ ವ್ಯಾಜ್ಯ ಹಾಗೂ ರಷ್ಯಾ ಉಕ್ರೇನ್ ಯುದ್ಧವು ಗೋವಾಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲು ಕಾರಣವಾಗಿತ್ತು. ಇದೀಗ ವಿದೇಶೀ ಪ್ರವಾಸಿಗರನ್ನು ಮರಳಿ ತರಲು ಗೋವಾ ಕ್ರ್ಯೂಸ್ ಟೂರಿಸಂ ತಂತ್ರ ಅನುಸರಿಸುತ್ತಿದೆ. ಹಡಗುಗಳ ಮೂಲಕ ಪ್ರವಾಸಿಗರನ್ನು ಕರೆತರುವುದು ಈ ಯೋಜನೆ.
ಇದನ್ನೂ ಓದಿ: Charlie Secrets: ಹಣ, ಹೆಣ್ಣು, ಹೆಂಡ… ಬೇಡ ಬೇಡ ಬೇಡ; ಬುದ್ಧಿವಂತರಿಗೆ ಬುದ್ಧಿಮಾತು ಹೇಳಿದ್ದ ಚಾರ್ಲೀ ಮುಂಗರ್
ಒಂದು ಹಡಗಿನಲ್ಲಿ 3,000 ವ್ಯಕ್ತಿಗಳು ಬರಬಹುದು. ಇವರೆಲ್ಲರೂ ಕೂಡ ಹೆಚ್ಚು ಖರ್ಚು ಮಾಡಬಲ್ಲವರು. ಇವರಿಂದ ಗೋವಾದ ಆರ್ಥಿಕತೆಗೆ ಒಳ್ಳೆಯ ಲಾಭವಾಗುತ್ತದೆ ಎಂದು ಗೋವಾ ಸಚಿವರು ಹೇಳುತ್ತಾರೆ. ಕ್ರ್ಯೂಸ್ ಟೂರಿಸಂ ಎಂಬುದು ಈಗ ಟ್ರೆಂಡಿಂಗ್ನಲ್ಲಿರುವ ಒಂದು ರೀತಿಯ ಪ್ರವಾಸೋದ್ಯಮ.
ಈಗ ಡಿಜಿಟಲ್ ನೋಮ್ಯಾಡ್ ಅಥವಾ ಡಿಜಿಟಲ್ ಅಲೆಮಾರಿಗಳನ್ನು ಸೆಳೆಯಲು ವಿವಿಧ ದೇಶಗಳು ಪ್ರಯತ್ನಿಸುತ್ತಿವೆ. ಗೋವಾ ಸರ್ಕಾರ ಕೂಡ ಹಿಂದುಳಿದಿಲ್ಲ. ಡಿಜಿಟಲ್ ಅಲೆಮಾರಿ ಎಂದರೆ ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ಖಾಯಂ ಆಗಿ ವಾಸಿಸುವ ಡಿಜಿಟಲ್ ಫ್ರೀಲ್ಯಾನ್ಸ್ ಕೆಲಸಗಾರರಾಗಿದ್ದಾರೆ. ಇವರು ಕೆಲಸ ಮತ್ತು ಪ್ರವಾಸ ಎರಡನ್ನೂ ಒಟ್ಟಿಗೆ ಮಾಡುತ್ತಿರುತ್ತಾರೆ.
ಇವರಿಗೆ ವೀಸಾ ಹೇಗೆ ನೀಡುವುದು ಇತ್ಯಾದಿ ಗೊಂದಲಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಬಗೆಹರಿಸಬೇಕು ಎಂಬುದು ಗೋವಾ ಪ್ರವಾಸೋದ್ಯಮ ಸಚಿವರ ನಿರೀಕ್ಷೆ.
ಇದನ್ನೂ ಓದಿ: Indian Economy: ಅಮೃತ ಘಳಿಗೆಯಲ್ಲಿ 5 ಟ್ರಿಲಿಯನ್ ಡಾಲರ್ ಆಗಲಿದೆ ಭಾರತದ ಆರ್ಥಿಕತೆ: ಪಂಕಜ್ ಚೌಧರಿ
ಗೋವಾದಲ್ಲಿ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಹೋಟೆಲ್ಗಳ ಸಂಖ್ಯೆ ಇಲ್ಲ ಎನ್ನಲಾಗಿದೆ. ಗೋವಾದಲ್ಲಿ ಪ್ರವಾಸೋದ್ಮ ಇಲಾಖೆಯಲ್ಲಿ ನೊಂದಾಯಿತವಾದ 6,000 ಹೋಟೆಲ್ಗಳಿವೆ. ಇಲ್ಲಿ ಒಟ್ಟು 85,000 ರೂಮುಗಳಿವೆಯಂತೆ. ಇಷ್ಟು ಸಂಖ್ಯೆಯ ಹೋಟೆಲ್ಗಳು ಸಾಕಾಗುವುದಿಲ್ಲ. ಈ ಎಲ್ಲಾ ಹೋಟೆಲ್ಗಳು ಬಹುತೇಕ ಭರ್ತಿಯಾಗಿರುತ್ತವೆ.
ಗಮನಿಸಬೇಕಾದ ಸಂಗತಿ ಎಂದರೆ, ಸಚಿವರ ನೀಡಿದ ಮಾಹಿತಿ ಪ್ರಕಾರ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಗೋವಾದ ಹೋಟೆಲ್ವೊಂದನ್ನು ಬುಕ್ ಮಾಡುವ ಪ್ರವಾಸಿಗರು, ಆ ವಿಳಾಸಕ್ಕೆ ಬಂದಾಗ ಆ ಹೋಟೆಲ್ ಅಸ್ತಿತ್ವದಲ್ಲೇ ಇರುವುದಿಲ್ಲ ಎನ್ನುವಂತಹ ದೂರು ಬಹಳಷ್ಟು ಬಂದಿವೆ. ಮೇಕ್ ಮೈ ಟ್ರಿಪ್ ಇತ್ಯಾದಿ ಪ್ಲಾಟ್ಫಾರ್ಮ್ಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೊಂದಾಯಿತವಾದ ಹೋಟೆಲ್ಗಳನ್ನು ಮಾತ್ರ ತಮ್ಮ ಲಿಸ್ಟ್ನಲ್ಲಿ ಸೇರಿಸಿಕೊಳ್ಳಬೇಕು ಎಂಬು ರೋಹನ್ ಕೌಂಟೆ ಹೇಳುತ್ತಾರೆ.
ಗೋವಾದ ಪ್ರವಾಸೋದ್ಯಮ ಇಲಾಖೆ ತಮ್ಮಲ್ಲಿ ನೊಂದಾಯಿತವಾದ ಹೋಟೆಲ್ಗಳ ಸಂಖ್ಯೆಯನ್ನು 10,000ಕ್ಕೆ ಹೆಚ್ಚಿಸಲು ಯೋಜಿಸಿದೆ. ಅಂದಹಾಗೆ ಗೋವಾದ ಜನಸಂಖ್ಯೆ 16 ಲಕ್ಷ ಇದ್ದು, ಅದರ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಶೇ. 30ಕ್ಕಿಂತಲೂ ಹೆಚ್ಚಿದೆ. ಹೀಗಾಗಿ, ಪ್ರವಾಸಿಗರೇ ಗೋವಾದ ಪ್ರಮುಖ ಆದಾಯ ಮೂಲವಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ