Gold Price | ಚಿನ್ನದ ದರ ಸತತ ಇಳಿಕೆ; ಖರೀದಿಗೆ ಮುಂದಾದ ಗ್ರಾಹಕರು

ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನ ದರ ಭಾರೀ ಪ್ರಮಾಣದ ಕುಸಿತ ಕಂಡಿದೆ. ದರ ಇಳಿಕೆಯತ್ತ ಸಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ.

Gold Price | ಚಿನ್ನದ ದರ ಸತತ ಇಳಿಕೆ; ಖರೀದಿಗೆ ಮುಂದಾದ ಗ್ರಾಹಕರು
ಸಾಂದರ್ಭಿಕ ಚಿತ್ರ
Follow us
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 14, 2021 | 2:24 PM

ಬೆಂಗಳೂರು: ಚಿನ್ನದ ಬೆಲೆ ಇಳಿಯುತ್ತಿದ್ದು ಗ್ರಾಹಕರಿಗೆ ಖುಷಿ ತಂದಿದೆ. ಕಳೆದ ಶುಕ್ರವಾರ ಗೋಲ್ಡ್​ ಫ್ಯೂಚರ್ಸ್​ ಕುಸಿತ ಕಂಡಿದ್ದು, 10 ಗ್ರಾಂ ಚಿನ್ನದ ದರ ₹ 44,271ಕ್ಕೆ ಬಂದಿತ್ತು. ಇದು ಒಂದುವರ್ಷದ ಕನಿಷ್ಠ ಮಟ್ಟವಾದ ₹ 44,150ಕ್ಕೆ ಸನಿಹದ ಧಾರಣೆಯಾಗಿದೆ. ಕಳೆದ ವರ್ಷ ಚಿನ್ನದ ವಹಿವಾಟು  ಏರುಗತಿಯಲ್ಲಿಯೇ ಇತ್ತು. ₹ 44,000ದಿಂದ ಮೇಲೇರಲು ಆರಂಭಿಸಿದ ಚಿನ್ನ ₹ 56,000 ಮುಟ್ಟಿ ಮತ್ತೆ ಇಳಿಯಲು ಆರಂಭಿಸಿತ್ತು. ಒಂದು ವರ್ಷದ ಗರಿಷ್ಠ ಮೊತ್ತಕ್ಕೆ ಹೋಲಿಸಿದರೆ ಈಗ ಚಿನ್ನವು ₹ 12,000 ಕಡಿಮೆ ಮೊತ್ತಕ್ಕೆ ವಹಿವಾಟು ನಡೆಸುತ್ತಿದೆ. ಈ ವರ್ಷದ ಆರಂಭದಲ್ಲಿ ನಡೆಯುತ್ತಿದ್ದ ಮೊತ್ತಕ್ಕೆ ಹೋಲಿಸಿದರೆ ಪ್ರತಿ 10 ಗ್ರಾಂ ಚಿನ್ನದ ಬೆಲೆ ಕಳೆದ ಮೂರು ತಿಂಗಳಲ್ಲಿ ₹ 6000ದಷ್ಟು ಕಡಿಮೆಯಾಗಿದೆ.

ಎಂಸಿಎಕ್ಸ್​ನಲ್ಲಿ ಚಿನ್ನದ ಧಾರಣೆ ಸೋಮವಾರ ₹ 44,218, ಮಂಗಳವಾರ ₹ 44,857, ಬುಧವಾರ ₹ 44,792 ರೂಪಾಯಿ ಹಾಗೂ ಗುರುವಾರ ₹ 44,879 ಇತ್ತು. ಮೊದಲೇ ಹೇಳಿದಂತೆ ಶುಕ್ರವಾರದ ಗೋಲ್ಡ್​ ಫ್ಯೂಚರ್ಸ್​ ₹ 44,271ರಲ್ಲಿ ವಹಿವಾಟು ಅಂತ್ಯಕಂಡಿತ್ತು.

ಚಿನ್ನದ ಬೆಲೆಗಳ ಇಳಿಕೆಯು ಚಿನ್ನದ ಮಾರಾಟವನ್ನು ಹೆಚ್ಚಿಸಿದೆ. ಗ್ರಾಹಕರು ಚಿನ್ನ ಕೊಳ್ಳುವತ್ತ ಸಾಗುತ್ತಿದ್ದಾರೆ ಎಂದು ರಾಯಿಟರ್ಸ್ ತನ್ನ ವರದಿಯಲ್ಲಿ ತಿಳಿಸಿದೆ. ಬೆಲೆ ಬದಲಾವಣೆಯಿಂದ ಹೂಡಿಕೆದಾರರು ಹಣವನ್ನು ಎಕ್ಸ್​ಚೇಂಜ್​ಗಳಲ್ಲಿ ಟ್ರೇಡ್ ಆಗುವ ಚಿನ್ನದ ಫಂಡ್​ಗಳಲ್ಲಿ (Exchange Traded Funds – ETF) ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ.

ಚಿನ್ನದ ಫಂಡ್​ಗಳಲ್ಲಿ ಕಳೆದ ಮೂರು ತಿಂಗಳಿನಿಂದ ಗಮನಾರ್ಹ ಮೊತ್ತದ ಹೂಡಿಕೆ ಕಂಡುಬರುತ್ತಿದೆ. ಫೆಬ್ರುವರಿಯಲ್ಲಿ ₹ 491 ಕೋಟಿ, ಜನವರಿಯಲ್ಲಿ ₹ 625 ಕೋಟಿ ಹಾಗೂ ಡಿಸೆಂಬರ್​ ತಿಂಗಳಲ್ಲಿ ₹ 431 ಕೋಟಿ ರೂಪಾಯಿ ಹೂಡಿಕೆ ಆಗಿದೆ ಎಂದು ‘ದಿ ಮಿಂಟ್’ ಜಾಲತಾಣ ವರದಿ ಮಾಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ನ ಮೌಲ್ಯ ತುಸು ಇಳಿದಿರುವುದು ಸಹ ಚಿನ್ನದ ಬೆಲೆಯ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಇದನ್ನೂ ಓದಿ: Gold Silver Price: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ! 1ಕೆಜಿ ಬೆಳ್ಳಿ ದರ 66,900 ರೂಪಾಯಿ

ಇದನ್ನೂ ಓದಿ: Gold Silver Price: ಚಿನ್ನ, ಬೆಳ್ಳಿ ದರ ಕೊಂಚ ಏರಿಕೆ! 22 ಕ್ಯಾರೆಟ್ 10 ಗ್ರಾಂ ಚಿನ್ನ 42,150 ರೂಪಾಯಿ

Published On - 2:21 pm, Sun, 14 March 21