
ನವದೆಹಲಿ, ನವೆಂಬರ್ 23: ಪ್ರಚಂಡ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಕೆಲ ತಿಂಗಳಿನಿಂದ ಝರ್ರನೆ ಕುಸಿಯುತ್ತಾ ಬರುತ್ತಿದೆ. ಚಿನ್ನದ ಬೆಲೆ ಉಚ್ಚ್ರಾಯ ಹಂತಕ್ಕೆ ಹೋದಾಗ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದಲ್ಲೊಮ್ಮೆ, ಬಂಗಾರದ ಖರೀದಿಯನ್ನು ಕಡಿಮೆ ಮಾಡಿ ಎಂದು ಕರೆ ನೀಡಿದ್ದರು. ಅಚ್ಚರಿ ಎಂಬಂತೆ ಅದಾದ ಬಳಿಕ ಚಿನ್ನದ ಬೆಲೆ ಬಹುತೇಕ ನಿರಂತರವಾಗಿ ಇಳಿಯುತ್ತಿದೆ. ಭಾರತದಲ್ಲಿ ಚಿನ್ನದ ಖರೀದಿಯೂ ಕಡಿಮೆ ಆಗಿದೆ. ಮೋದಿ ಮಾತನ್ನು ಜನರು ಕೇಳಿದರೋ ಇಲ್ಲವೋ ಆದರೆ, ಬೆಲೆ ಇಳಿದಿರುವುದು ಹೌದು. ಆಭರಣ ಪ್ರೇಮಿಗಳು ಈಗ ಪ್ರಧಾನಿಗಳಿಗೆ ಪರಾಕ್ ಹೇಳುತ್ತಿದ್ದಾರೆ.
ಭಾರತದ ಅತ್ಯಂತ ದೊಡ್ಡ ಆಮದು ವಸ್ತುಗಳಲ್ಲಿ ಪೆಟ್ರೋಲ್ ಮತ್ತು ಚಿನ್ನ ಇವೆ. ವಿಶ್ವದಲ್ಲಿ ಅತಿಹೆಚ್ಚು ಚಿನ್ನ, ಪೆಟ್ರೋಲ್ ಬಳಸುವ ದೇಶಗಳಲ್ಲಿ ಭಾರತ ಇದೆ. ಭಾರತದ ವ್ಯಾಪಾರ ಕೊರತೆ ಬಹಳ ಹೆಚ್ಚಿರಲು ಇವೆರಡೂ ವಸ್ತುಗಳು ಕಾರಣ. ಇವುಗಳ ಆಮದು ಕಡಿಮೆ ಆದಷ್ಟೂ ಭಾರತದ ಫಾರೆಕ್ಸ್ ನಿಧಿ, ವ್ಯಾಪಾರ ಕೊರತೆಗೆ ಉತ್ತಮ. ಈ ದೃಷ್ಟಿಯಿಂದ ಮೋದಿ ಅವರು ಚಿನ್ನದ ಬಳಕೆ ಮಾಡಿ ಎಂದು ಜನರಿಗೆ ಕೊಟ್ಟಿರಬಹುದು ಎನ್ನುತ್ತಾರೆ ತಜ್ಞರು.
ಅದೇನೇ ಇರಲಿ, ಮೋದಿ ಹೇಳಿದ್ದು ಕಾಕತಾಳೀಯವೋ, ಉದ್ದೇಶಪೂರ್ವಕವೋ, ಒಟ್ಟಿನಲ್ಲಿ ಭಾರತದಲ್ಲಿ ಚಿನ್ನದ ವ್ಯಾಪಾರ ಕಡಿಮೆ ಆಗಿರುವುದು ಹೌದು. ಅಖಿಲ ಭಾರತ ವ್ಯಾಪಾರಸ್ಥರ ಮಹಾಒಕ್ಕೂಟವಾದ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲವಾಲ್ ನೀಡಿರುವ ಮಾಹಿತಿ ಪ್ರಕಾರ, 2026ರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಚಿನ್ನದ ಆಮದು ಶೇ. 40ರಷ್ಟು ಕಡಿಮೆ ಆಗಿದೆ.
ಇದನ್ನೂ ಓದಿ: ಚೀನಾದ 7 ಟ್ರಿಲಿಯನ್ ಡಾಲರ್ ಡೆಟ್ ಮಾರುಕಟ್ಟೆಯ ಅಪಾಯ; ಭಾರತದ ಬಾಂಡ್ ಮಾರುಕಟ್ಟೆಗಿಲ್ಲ ಈ ಅಪಾಯ
ವರ್ಷದ ಹಿಂದೆ ಇದೇ ಅವಧಿಯಲ್ಲಿ 41.24 ಬಿಲಿಯನ್ ಡಾಲರ್ನಷ್ಟು ಮೌಲ್ಯದ ಚಿನ್ನದ ಆಮದು ಮಾಡಲಾಗಿತ್ತು. ಈ ವರ್ಷ ಅದು 24.78 ಬಿಲಿಯನ್ ಡಾಲರ್ ಆಗಿದೆ. ಅಂದರೆ, ಆಮದು ಹೊರೆ 16.46 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಅಂದರೆ ಒಂದೂವರೆ ಲಕ್ಷ ಕೋಟಿ ರೂ ಹೊರೆ ಕಡಿಮೆ ಆಗಿದೆ.
ಚಿನ್ನದ ಆಮದು ಕಡಿಮೆಗೊಂಡಿದ್ದರಿಂದಲೇ ಚಿನ್ನದ ಬೆಲೆ ಇಳಿಯಿತು ಎಂದಲ್ಲ. ಬೆಲೆ ಇಳಿಕೆಯಲ್ಲಿ ಅದರ ಪ್ರಭಾವ ಇದೆಯಾದರೂ ಅದೊಂದೇ ಕಾರಣವಲ್ಲ. ಹಲವು ಅಂತರರಾಷ್ಟ್ರೀಯ ಬೆಳವಣಿಗೆ ಮತ್ತು ಮಾರುಕಟ್ಟೆ ಸ್ಥಿತಿ ಕಾರಣವಾಗಿದೆ. ಆ ಇತರ ಪ್ರಮುಖ ಕಾರಣಗಳು ಹೀಗಿವೆ.
ಇದನ್ನೂ ಓದಿ: 2047ಕ್ಕೆ 26 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ: ಸಿಐಐನಿಂದ 15 ಪ್ರಮುಖ ಸುಧಾರಣೆಗಳಿಗೆ ಶಿಫಾರಸು
ಚಿನ್ನದ ಮೇಲೆ ಹೂಡಿಕೆ ಮಾಡಿದವರಲ್ಲಿ ಹೆಚ್ಚಿನವರು ಪ್ರಾಫಿಟ್ ಬುಕಿಂಗ್ ಮಾಡಿಯಾಗಿದೆ. ಬಂಗಾರದ ಹೂಡಿಕೆಯು ಈಗ ಓವರ್ಸೋಲ್ಡ್ ಸ್ಥಿತಿಯಲ್ಲಿದೆ ಎನ್ನುತ್ತಾರೆ ತಜ್ಞರು. ಈ ಹಂತದಿಂದ ಹೆಚ್ಚೇನೂ ತಗ್ಗುವ ಸಾಧ್ಯತೆ ಇಲ್ಲದಿರಬಹುದು. ಅಮೆರಿಕದ ಫೆಡರಲ್ ರಿಸರ್ವ್ ಆ ದೇಶದ ಹಣದುಬ್ಬರಕ್ಕೆ ಕಡಿವಾಣ ಹಾಕಲು ಬಡ್ಡಿದರ ಹೆಚ್ಚಿಸಿದರೆ ಚಿನ್ನದ ಬೆಲೆ ಮತ್ತೊಂದು ಸುತ್ತಿನ ಕುಸಿತ ಕಂಡರೂ ಕಾಣಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Sun, 22 November 26