Gold: ಈ ವರ್ಷ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆ ಸಾಧ್ಯತೆ; ದಾಖಲೆ ಬರೆಯಲಿದೆ ಹಳದಿಲೋಹ; ಏನು ಕಾರಣ?

Reasons for gold rates rising swiftly: ಚಿನ್ನದ ಬೆಲೆ ಗ್ರಾಮ್​​ಗೆ 10,000 ರೂ ದಾಟುವ ಸಮಯ ಹತ್ತಿರದಲ್ಲೇ ಇದೆ. 2025ರ ವೇಳೆಗೆ ಚಿನ್ನದ ಬೆಲೆ 12,000 ರೂ ದಾಟಬಹುದು. ಈ ಹಳದಿ ಲೋಹದ ಬೆಲೆ ಏರಿಕೆ ಆಗುತ್ತಿರುವುದಕ್ಕೆ ಬಹುಕಾರಣಗಳು ಇವೆ. ಗೋಲ್ಡ್ ಮ್ಯಾನ್ ಸ್ಯಾಕ್ಸ್ ವರದಿಯು, ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿಸುತ್ತಿರುವುದೂ ಸೇರಿ ಕೆಲ ಕಾರಣಗಳನ್ನು ಹೆಸರಿಸಿದೆ.

Gold: ಈ ವರ್ಷ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆ ಸಾಧ್ಯತೆ; ದಾಖಲೆ ಬರೆಯಲಿದೆ ಹಳದಿಲೋಹ; ಏನು ಕಾರಣ?
ಚಿನ್ನ

Updated on: May 21, 2025 | 2:13 PM

ನವದೆಹಲಿ, ಮೇ 21: ಚಿನ್ನದ ಬೆಲೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುವುದು ಬಹಳ ಸ್ವಾಭಾವಿಕವಾದ ಸಂಗತಿ. ಚಿನ್ನದ ಲಭ್ಯತೆ ಮಿತಿಯಲ್ಲಿರುವುದು ಪ್ರಮುಖ ಕಾರಣ. ಉತ್ಪನ್ನಕ್ಕೆ ಇರುವ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇಲ್ಲದಿದ್ದರೆ ಬೆಲೆ ಏರಿಕೆ ಸಹಜವಾಗಿ ಆಗುತ್ತದೆ. ಚಿನ್ನಕ್ಕೆ ಬಹಳ ಬೇಡಿಕೆ ಹೆಚ್ಚಿರುವ ಚೀನಾ ಮತ್ತು ಭಾರತದಲ್ಲಿ ಮಾತ್ರ ಚಿನ್ನದ ಬೆಲೆ ಏರಿಕೆ ಬಿಸಿ ಹೆಚ್ಚಿರಬೇಕಿತ್ತು. ಆದರೆ, ಜಾಗತಿಕವಾಗಿ ಚಿನ್ನದ ಬೆಲೆ ನಾಗಾಲೋಟ ಮಾಡುತ್ತಿದೆ. ಈ ಪರಿ ಏರಿಕೆಗೆ ಪ್ರಮುಖ ಕಾರಣಗಳೇನು? ಇಲ್ಲಿದೆ ಡೀಟೇಲ್ಸ್….

ಜಾಗತಿಕ ಅನಿಶ್ಚಿತತೆಯಲ್ಲಿ ಚಿನ್ನಕ್ಕೆ ಬೇಡಿಕೆ

ಜಾಗತಿಕವಾಗಿ ಆರ್ಥಿಕ ಮತ್ತು ರಾಜಕೀಯ ತುಮುಲ ಮತ್ತು ಬಿಕ್ಕಟ್ಟುಗಳು ಉದ್ಭವಿಸಿದಾಗ ಹೂಡಿಕೆದಾರರು ಚಿನ್ನವನ್ನು ಅಪ್ಪುವುದು ಹೆಚ್ಚು. ಕೋವಿಡ್​​ನಿಂದ ಆರಂಭವಾಗಿ, ರಷ್ಯಾ ಉಕ್ರೇನ್ ಯುದ್ಧ, ಇಸ್ರೇಲ್ ಸಂಘರ್ಷ, ಟ್ರಂಪ್ ಟ್ಯಾರಿಫ್, ಅಮೆರಿಕ ಚೀನಾ ಟ್ರೇಡ್ ಸಮರ ಇತ್ಯಾದಿ ಘಟನೆಗಳು ಮತ್ತು ವಿದ್ಯಮಾನಗಳು ಜಾಗತಿಕವಾಗಿ ಅನಿಶ್ಚಿತ ಪರಿಸ್ಥಿತಿ ತಂದೊಡ್ಡಿವೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಸಹಜಕ್ಕಿಂತ ಹೆಚ್ಚು ಇದೆ.

ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿಯ ಭರಾಟೆ

ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಹೆಚ್ಚಿಸಿವೆ. ಗೋಲ್ಡ್​​ಮ್ಯಾನ್ ಸ್ಯಾಕ್ಸ್ ವರದಿಯೊಂದರ ಪ್ರಕಾರ ಉಕ್ರೇನ್ ರಷ್ಯಾ ಯುದ್ಧದ ಬಳಿಕ ಚಿನ್ನದ ಖರೀದಿ ಹೆಚ್ಚಾಗಿದೆ. ಉದಾಹರಣೆಗೆ, 2022ಕ್ಕೆ ಮುಂಚೆ ಲಂಡನ್ ಒಟಿಸಿ ಮಾರುಕಟ್ಟೆಯಲ್ಲಿ ಮಾಸಿಕ ಸರಾಸರಿ ಚಿನ್ನದ ಖರೀದಿ ಎಷ್ಟಿತ್ತೋ ಈಗ ಅದರ ನಾಲ್ಕೈದು ಪಟ್ಟು ಹೆಚ್ಚಾಗಿದೆಯಂತೆ.

ಇದನ್ನೂ ಓದಿ
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆ; ಇವತ್ತಿನ ದರಪಟ್ಟಿ

ಇದಕ್ಕೆ ಕಾರಣ, ರಷ್ಯಾದ ಆಸ್ತಿಗಳನ್ನು ಫ್ರೀಜ್ ಮಾಡಿದ್ದು. ಉಕ್ರೇನ್ ಮೇಲೆ ಯುದ್ಧಕ್ಕೆ ಹೋದ ರಷ್ಯಾಗೆ ಪಾಠ ಕಲಿಸಲು ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹೇರಿವೆ. ಅದರ ಭಾಗವಾಗಿ ವಿದೇಶ ಬ್ಯಾಂಕುಗಳಲ್ಲಿರುವ ರಷ್ಯನ್ ಹಣಕಾಸು ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಯಿತು.

ಈ ರೀತಿ ಹಣಕಾಸು ಆಸ್ತಿ ಯಾವುದೇ ಸಂದರ್ಭದಲ್ಲಿ ನಿಂತುಹೋಗುವ ಸಾಧ್ಯತೆ ಇರುವುದರಿಂದ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಹೆಚ್ಚಿಸತೊಡಗಿವೆ ಎನ್ನಲಾಗುತ್ತಿದೆ.

ಗೋಲ್ಡ್ ಇಟಿಎಫ್ ಮತ್ತು ಬಡ್ಡಿದರ ಪರಿಣಾಮ…

ಇಟಿಎಫ್​​ಗಳು ಚಿನ್ನದ ಮೇಲೆ ಹೂಡಿಕೆ ಹೆಚ್ಚಿಸಿವೆ. ಸಾಮಾನ್ಯವಾಗಿ ಬ್ಯಾಂಕ್ ಬಡ್ಡಿದರ ಕಡಿಮೆ ಇದ್ದಾಗ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಬಡ್ಡಿದರ ಹೆಚ್ಚಾದಾಗ ಚಿನ್ನದ ಬೆಲೆ ಕಡಿಮೆ ಆಗುತ್ತದೆ. ಇದರಲ್ಲಿ ಇಟಿಎಫ್​​ಗಳ ಪಾತ್ರವೂ ಇರುತ್ತದೆ. 2023ರಿಂದ ಜಗತ್ತಿನಾದ್ಯಂತ ಬಡ್ಡಿದರ ಬಹಳ ಕಡಿಮೆ ಆಗುತ್ತಿದೆ. ಇದು ಹಳದಿ ಲೋಹಕ್ಕೆ ಬೇಡಿಕೆ ಹೆಚ್ಚಲು ಕಾರಣವಾಗಿದೆ.

ಇದನ್ನೂ ಓದಿ: ಭಾರತೀಯ ಮನೆಗಳಲ್ಲಿದೆ ಜಗತ್ತಿನ ಅತಿಹೆಚ್ಚು ಚಿನ್ನ; ಅವಿಷ್ಟೂ ಸೇರಿಸಿದರೆ ಇವತ್ತಿನ ಮೌಲ್ಯ ಅದೆಷ್ಟು ಅಗಾಧ ಗೊತ್ತಾ?

2025ರಲ್ಲಿ ಹೊಸ ದಾಖಲೆ ಬರೆಯಲಿದೆಯಂತೆ ಚಿನ್ನ

ಗೋಲ್ಡ್​​ಮ್ಯಾನ್ ಸ್ಯಾಕ್ಸ್ ವರದಿ ಪ್​ರಕಾರ 2025ರ ಕೊನೆಯಲ್ಲಿ ಚಿನ್ನದ ಬೆಲೆ ಒಂದು ಟ್ರಯ್​​ ಔನ್ಸ್​​ಗೆ 3,700 ಡಾಲರ್ ಆಗಬಹುದು. ಸದ್ಯ ಅದು 3,220 ಡಾಲರ್ ಇದೆ. ಒಂದು ವೇಳೆ ಆರ್ಥಿಕ ಹಿಂಜರಿತ ಏರ್ಪಟ್ಟರೆ 3,700 ಅಲ್ಲ, 3,880 ಡಾಲರ್​​ಗೂ ಏರಬಹುದು. ಒಂದು ಟ್ರಾಯ್ ಔನ್ಸ್ 31.10 ಗ್ರಾಮ್ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ