ವಾಟ್ಸಾಪ್ ವೆಬ್ ಬಳಸುತ್ತಿದ್ದೀರಾ? ಸರ್ಕಾರದ ಈ ಅಡ್ವೈಸರಿ ತಪ್ಪದೇ ನೋಡಿ; ಸೈಬರ್ ಕ್ರಿಮಿನಲ್​ಗಳ ಗಾಳಕ್ಕೆ ಬೀಳದಿರಿ

ಕಚೇರಿ, ಹಂಚಿಕೆಯ ಅಥವಾ ಸಾರ್ವಜನಿಕ ಕಂಪ್ಯೂಟರ್‌ಗಳಲ್ಲಿ ವಾಟ್ಸಾಪ್ ವೆಬ್ (WhatsApp Web) ಸೆಷನ್‌ಗಳನ್ನು ಲಾಗ್-ಇನ್ ಸ್ಥಿತಿಯಲ್ಲೇ ಬಿಟ್ಟರೆ ಖಾತೆ ದುರ್ಬಳಕೆ ಮತ್ತು ಹೈಜಾಕ್ ಆಗುವ ಅಪಾಯವಿದೆ ಎಂದು ಕೇಂದ್ರ ಗೃಹ ಸಚಿವಾಲಯ (MHA) ಮತ್ತು ಐ4ಸಿ (I4C) ಎಚ್ಚರಿಸಿವೆ. ಇದರ ನಡುವೆಯೇ ರಕ್ಷಣಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮೂಲದ ಏಜೆಂಟರು ವಾಟ್ಸಾಪ್ ಗುಂಪುಗಳಿಗೆ ನುಸುಳಿದ ಪ್ರಕರಣಗಳ ತನಿಖೆಯೂ ಚುರುಕಾಗಿದೆ.

ವಾಟ್ಸಾಪ್ ವೆಬ್ ಬಳಸುತ್ತಿದ್ದೀರಾ? ಸರ್ಕಾರದ ಈ ಅಡ್ವೈಸರಿ ತಪ್ಪದೇ ನೋಡಿ; ಸೈಬರ್ ಕ್ರಿಮಿನಲ್​ಗಳ ಗಾಳಕ್ಕೆ ಬೀಳದಿರಿ
ವಾಟ್ಸಾಪ್
Image Credit source: Getty Images

Updated on: Nov 24, 2026 | 12:28 PM

ನವದೆಹಲಿ, ನವೆಂಬರ್ 24: ಕಚೇರಿ, ಹಂಚಿಕೆಯ ಅಥವಾ ಸಾರ್ವಜನಿಕ ಕಂಪ್ಯೂಟರ್‌ಗಳಲ್ಲಿ ಸೂಕ್ಷ್ಮ ಕೆಲಸಗಳಿಗಾಗಿ ವಾಟ್ಸಾಪ್ ವೆಬ್ ಬಳಸದಂತೆ ಕೇಂದ್ರ ಗೃಹ ಸಚಿವಾಲಯದ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮತ್ತು ಸಂಬಂಧಿತ ಘಟಕಗಳು ಎಚ್ಚರಿಕೆ ನೀಡಿವೆ. ಸಕ್ರಿಯವಾಗಿರುವ ವಾಟ್ಸಾಪ್ ವೆಬ್ ಸೆಷನ್ ಅನ್ನು ದುರುಪಯೋಗಪಡಿಸಿಕೊಂಡು ಸೈಬರ್ ವಂಚಕರು ಖಾತೆಯ ಅನಧಿಕೃತ ಪ್ರವೇಶ ಪಡೆಯಬಹುದು, ಖಾಸಗಿ ಸಂದೇಶಗಳನ್ನು ಓದಬಹುದು, ಸಂಪರ್ಕಗಳು ಮತ್ತು ಗುಂಪು ಚರ್ಚೆಗಳನ್ನು ವೀಕ್ಷಿಸಬಹುದು ಹಾಗೂ ಬಳಕೆದಾರರ ಹೆಸರಿನಲ್ಲಿ ಸಂದೇಶ ಕಳುಹಿಸಿ ವಂಚನೆ, ಫಿಶಿಂಗ್ ಅಥವಾ ಸೋಶಿಯಲ್ ಎಂಜಿನಿಯರಿಂಗ್ ನಡೆಸಬಹುದು ಎಂದು ಎಚ್ಚರಿಸಲಾಗಿದೆ. ನವೆಂಬರ್ 18ಕ್ಕೆ ಈ ಅಡ್ವೈಸರಿಯನ್ನು ಗೃಹ ಸಚಿವಾಲಯ ನೀಡಿದೆ.

ವಾಟ್ಸಾಪ್ ವೆಬ್ ಬಳಸುತ್ತಿದ್ದರೆ ಈ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ

  • ಮ್ಯಾನುವಲ್ ಲಾಗ್-ಔಟ್ ಕಡ್ಡಾಯ: ಬ್ರೌಸರ್ ವಿಂಡೋ ಅಥವಾ ಟ್ಯಾಬ್ ಮುಚ್ಚಿದ ಮಾತ್ರಕ್ಕೆ ಸೆಷನ್ ಕೊನೆಗೊಳ್ಳುವುದಿಲ್ಲ; ಪ್ರತಿ ಬಳಕೆಯ ನಂತರವೂ ತಪ್ಪದೆ ಮ್ಯಾನುವಲ್ ಆಗಿ ಲಾಗ್-ಔಟ್ ಮಾಡಬೇಕು.
  • ಅಪರಿಚಿತ ಸಾಧನಗಳ ಬಳಕೆ ಬೇಡ: ಸೈಬರ್ ಕೆಫೆಗಳು, ಸಾರ್ವಜನಿಕ ಕಿಯೋಸ್ಕ್‌ಗಳು, ಹೋಟೆಲ್ ಬ್ಯುಸಿನೆಸ್ ಸೆಂಟರ್‌ಗಳು ಅಥವಾ ಇತರರು ಬಳಸುವ/ಅಪರಿಚಿತ ಕಂಪ್ಯೂಟರ್‌ಗಳಲ್ಲಿ ವಾಟ್ಸಾಪ್ ವೆಬ್‌ಗೆ ಲಾಗ್-ಇನ್ ಆಗಬಾರದು.
  • ಸೂಕ್ಷ್ಮ ಮಾಹಿತಿ ಕಳುಹಿಸುವುದು ಬೇಡ: ಸರ್ಕಾರ, ಮಿಲಿಟರಿ ಸಂಬಂಧಿತ ಸೂಕ್​ಷ್ಮ ಮಾಹಿತಿಯನ್ನು ವಾಟ್ಸಾಪ್ ವೆಬ್ ಮೂಲಕ ಹಂಚಿಕೊಳ್ಳಬಾರದು.
  • ಇನ್‌ಕಾಗ್ನಿಟೋ ಮೋಡ್ ಮತ್ತು ಎಚ್ಚರಿಕೆ: ವಿಶ್ವಾಸಾರ್ಹ ಕಂಪ್ಯೂಟರ್‌ನಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಇನ್‌ಕಾಗ್ನಿಟೋ ಅಥವಾ ಪ್ರೈವೇಟ್ ಬ್ರೌಸಿಂಗ್ ಮೋಡ್ ಬಳಸಬೇಕು. ಇದನ್ನು ಸಂಪೂರ್ಣ ಭದ್ರತೆಯೆಂದು ಪರಿಗಣಿಸದೆ ಹೆಚ್ಚುವರಿ ಮುನ್ನೆಚ್ಚರಿಕೆಯಾಗಿ ಬಳಸಬೇಕು.
  • ಸಾಫ್ಟ್​ವೇರ್​ಗಳು ಅಪ್​ಟುಡೇಟ್ ಆಗಿರಬೇಕು: ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಮತ್ತು ಭದ್ರತಾ ಸಾಫ್ಟ್‌ವೇರ್‌ಗಳನ್ನು ನವೀಕರಿಸಿಕೊಳ್ಳುತ್ತಿರಬೇಕು.
  • ಅನುಮಾನಾಸ್ಪದ ಫೈಲ್ಸ್ ಬಗ್ಗೆ ಜಾಗ್ರತೆ: ಅನುಮಾನಾಸ್ಪದ ಫೈಲ್‌ಗಳು ಅಥವಾ ಕ್ರ್ಯಾಕ್ಡ್ ಸಾಫ್ಟ್‌ವೇರ್‌ಗಳನ್ನು ಕಾಪಿ ಮಾಡುವುದು, ಇನ್​ಸ್ಟಾಲ್ ಮಾಡುವುದನ್ನು ತಪ್ಪಿಸಬೇಕು. ಖಾತೆಯಲ್ಲಿನ ಅಸಹಜ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಅಗತ್ಯವಾಗಿದೆ.
  • ಲಾಗೌಟ್ ಮರೆತಿದ್ದರೆ ಮೊಬೈಲ್​ನಿಂದಲೇ ಲಾಗೌಟ್ ಆಗಿ: ಒಂದು ವೇಳೆ ನೀವು ಬೇರೆ ಕಂಪ್ಯೂಟರ್​ನಲ್ಲಿ ವಾಟ್ಸಾಪ್ ವೆಬ್ ಬಳಸಿ, ಸೆಷೆನ್ ಲಾಗೌಟ್ ಆಗಲು ಮರೆತಿದ್ದರೆ, ನಿಮ್ಮ ಮೊಬೈಲ್​ನಿಂದಲೇ ಲಾಗೌಟ್ ಮಾಡಬಹುದು.

ಇದನ್ನೂ ಓದಿ: ನಿಮ್ಮ ಪಿಎಫ್ ಹಣದಿಂದ ಮಾಸಿಕ ಆದಾಯ ಸೃಷ್ಟಿಸಲು ದಾರಿ; ಇಪಿಎಫ್​ಒದ ಹೊಸ ಪ್ಲಾನ್ ಬಗ್ಗೆ ಮಾಹಿತಿ

Loading...

ಗೃಹ ಸಚಿವಾಲಯ ಹೊರಡಿಸಿರುವ ಈ ಅಡ್ವೈಸರಿಯು ಎಲ್ಲರಿಗೂ ಅನ್ವಯಿಸುತ್ತದೆ. ಸರ್ಕಾರದ ಸೂಕ್ಷ್ಮ ಮಾಹಿತಿ ಸೋರಿಕೆ ತಡೆಯಲು ಮಾತ್ರವಲ್ಲ, ಪ್ರತಿಯೊಬ್ಬರೂ ಕೂಡ ತಮ್ಮ ವೈಯಕ್ತಿಕತೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಈ ಕ್ರಮ ಅನುಸರಿಸಬೇಕಾಗುತ್ತದೆ.

ರಕ್ಷಣಾ ಗುಂಪುಗಳ ಒಳನುಸುಳುವಿಕೆ ಮತ್ತು ಲೆಕ್ಕಪರಿಶೋಧನೆ

ಈ ಸೈಬರ್ ಸುರಕ್ಷತಾ ಎಚ್ಚರಿಕೆಯ ಬೆನ್ನಲ್ಲೇ, ರಕ್ಷಣಾ ಸಿಬ್ಬಂದಿ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮೂಲದ ಏಜೆಂಟರು ವಾಟ್ಸಾಪ್ ಗುಂಪುಗಳಿಗೆ ಒಳನುಸುಳಿದ ಪ್ರಕರಣಗಳ ಕುರಿತು ತನಿಖೆ ಹಾಗೂ ಗುಂಪುಗಳ ಲೆಕ್ಕಪರಿಶೋಧನೆ (audits) ನಡೆಸಲಾಗುತ್ತಿದೆ. ವರದಿಗಳ ಪ್ರಕಾರ, 50ಕ್ಕೂ ಹೆಚ್ಚು ರಕ್ಷಣಾ ಸಂಬಂಧಿತ ವಾಟ್ಸಾಪ್ ಗುಂಪುಗಳಲ್ಲಿ (ಅದರಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ — BRO ಸಿಬ್ಬಂದಿಗೆ ಸಂಬಂಧಿಸಿದ 11 ಗುಂಪುಗಳೂ ಸೇರಿವೆ) ಪಾಕಿಸ್ತಾನ ಮೂಲದ ಏಜೆಂಟರು ನುಸುಳಿರುವುದು ಕಂಡುಬಂದಿದೆ. ವಿದೇಶಿ ಸಂಖ್ಯೆಗಳ ಬಗ್ಗೆ ಅನುಮಾನ ಬಾರದಂತೆ ತಡೆಯಲು ಸ್ಪೂಫ್ ಮಾಡಿದ ಅಥವಾ ರಾಜಿ ಮಾಡಿಕೊಂಡ ಭಾರತೀಯ ಸಿಮ್/ಸಂಖ್ಯೆಗಳನ್ನು ಬಳಸಿ, ಕೆಲವೆಡೆ ‘ನಿಷ್ಕ್ರಿಯ ಸದಸ್ಯರಂತೆ’ (inactive/dead members) ಒಳನುಸುಳಿ ಗಮನ ಸೆಳೆಯದೆ ಸಂಭಾಷಣೆಗಳನ್ನು ಗಮನಿಸಲಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಒಂದು ತಿಂಗಳ ಆರ್ ಡಿ ಮೊತ್ತ ಬಾಕಿ ಇಟ್ಟುಕೊಂಡರೆ ಈ ಸಮಸ್ಯೆ ಆಗೋದು ಗ್ಯಾರಂಟಿ

ಈ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ (CRPF), ಬಿಎಸ್‌ಎಫ್ (BSF), ಎಸ್‌ಎಸ್‌ಬಿ (SSB) ಮತ್ತು ಐಟಿಬಿಪಿ (ITBP) ಸೇರಿದಂತೆ ವಿವಿಧ ರಕ್ಷಣಾ ಹಾಗೂ ಭದ್ರತಾ ಸಂಸ್ಥೆಗಳಿಗೆ ಜಾಗೃತಿ ಸೂಚನೆಗಳನ್ನು ರವಾನಿಸಲಾಗಿದೆ. ಗುಂಪುಗಳ ನಿರ್ವಾಹಕರು ಎಲ್ಲಾ ಸದಸ್ಯರ ಗುರುತನ್ನು ಪರಿಶೀಲಿಸಿ, ದೃಢೀಕರಿಸದ ಅಥವಾ ಅನುಮಾನಾಸ್ಪದ ಖಾತೆಗಳನ್ನು ತಕ್ಷಣವೇ ತೆಗೆದುಹಾಕಲು ನಿರ್ದೇಶಿಸಲಾಗಿದೆ. ಜೊತೆಗೆ, ಅಧಿಕೃತ, ಗೌಪ್ಯ ಅಥವಾ ವರ್ಗೀಕೃತ ಮಾಹಿತಿಯನ್ನು ವಾಟ್ಸಾಪ್ ಅಥವಾ ಇತರ ಅನಧಿಕೃತ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಒಟ್ಟಾರೆ, ಡಿಜಿಟಲ್ ಗುರುತನ್ನು ರಕ್ಷಿಸಿಕೊಳ್ಳಲು ನಾಗರಿಕರು ಮತ್ತು ಅಧಿಕಾರಿಗಳು ಉತ್ತಮ ಸೈಬರ್ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಈಗ ಅತ್ಯಗತ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us