
ನವದೆಹಲಿ, ಸೆಪ್ಟೆಂಬರ್ 6: ಮುಂದಿನ ದಿನಗಳಲ್ಲಿ ವರ್ಷಕ್ಕೆ 50 ಉಡಾವಣೆ ಮಾಡುವ ಮಹತ್ವಾಕಾಂಕ್ಷಿ ಗುರಿ ಇದೆ. ಇದನ್ನು ಮುಟ್ಟಲು ಇಸ್ರೋ ಸಂಘಟನೆಯೊಂದರಿಂದ ಅಸಾಧ್ಯ. ಖಾಸಗಿ ಉದ್ಯಮವೂ ಕೈಜೋಡಿಸಬೇಕಾಗುತ್ತದೆ ಎಂದು ಉದ್ಯಮಿ ಹಾಗೂ ಇನ್ಸ್ಪೇಸ್ (In-SPACe) ಛೇರ್ಮನ್ ಪವನ್ ಕೆ ಗೋಯಂಕಾ ಹೇಳಿದ್ದಾರೆ. ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ರಾಷ್ಟ್ರೀಯ ಆಸ್ತಿಯಾಗಿದ್ದು ಅದನ್ನು ಖಾಸಗಿ ಕ್ಷೇತ್ರಕ್ಕೆ ವಹಿಸಿರುವುದನ್ನು ಪ್ರಶ್ನಿಸಿ ಇಸ್ರೋ ಉದ್ಯೋಗಿಗಳ ಕೆಲ ಸಂಘಟನೆಗಳು ತಗಾದೆ ಎತ್ತಿವೆ. ಈ ಹಿನ್ನೆಲೆಯಲ್ಲಿ ಪವನ್ ಗೋಯೆಂಕಾ ಅವರು ಸರ್ಕಾರದ ನಡೆಯನ್ನು ಸಮರ್ಥಿಸಿ, ವಿವರಣೆ ಕೊಟ್ಟಿದ್ದಾರೆ.
‘ಐದು ವರ್ಷಗಳ ಹಿಂದೆ ಭಾರತವು ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದಾಗ ಎರಡು ಸ್ಪಷ್ಟ ಉದ್ದೇಶಗಳಿದ್ದುವು: ಇಸ್ರೋ ಹೊಸ ಸಾಧನೆಗಳನ್ನು ಮಾಡಬೇಕು, ಮತ್ತು ಖಾಸಗಿ ಉದ್ಯಮವು ವಿಸ್ತರಣೆ ಮಾಡಲು ಶಕ್ತವಾಗಬೇಕು. ಇವತ್ತು ಆ ಎರಡೂ ಉದ್ದೇಶ ಈಡೇರುವ ನಿಟ್ಟಿನಲ್ಲಿ ಬೆಳವಣಿಗೆ ಆಗುತ್ತಿರುವುದನ್ನು ಕಾಣಬಹುದು’ ಎಂದು ಪವನ್ ಗೋಯೆಂಕಾ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
‘ಇಸ್ರೋ ಇದೀಗ ಭೂ ಪರಿವೀಕ್ಷಣಾ ಉಪಗ್ರಹವಾದ ಇಒಎಸ್-05 ಉಡಾವಣೆ ಮಾಡಿದೆ. ಇದು ಆರಂಭ ಮಾತ್ರ. ಇದೇ ವೇಳೆ, ಐದು ವರ್ಷದ ಹಿಂದೆ ಬೆರಳೆಣಿಯಷ್ಟಿದ್ದ ಸ್ಪೇಸ್ ಸ್ಟಾರ್ಟಪ್ಗಳ ಸಂಖ್ಯೆ ಇವತ್ತು 450ಕ್ಕೂ ಹೆಚ್ಚಿದೆ. ಖಾಸಗಿ ಉದ್ಯಮವು ರಾಕೆಟ್ ಅನ್ನು ಕಕ್ಷೆಗೆ ಕಳುಹಿಸಿದ್ದಾಗಿದೆ. ಈಗ 2030ರಷ್ಟರಲ್ಲಿ ವರ್ಷಕ್ಕೆ 50 ರಾಕೆಟ್ ಉಡಾವಣೆ ಆಗುವ ಗುರಿ ಇದೆ. ಇದನ್ನು ಒಂದು ಸಂಘಟನೆ ಮಾತ್ರದಿಂದ ಈಡೇರಿಸಲು ಸಾಧ್ಯವಿಲ್ಲ. ಸರ್ಕಾರ ಮತ್ತು ಖಾಸಗಿ ಉದ್ಯಮ ಎರಡೂ ಕೂಡ ಒಟ್ಟುಗೂಡಿ ಮುನ್ನಡೆಯಬೇಕು’ ಎಂದು ಅವರು ತಿಳಿಸಿದ್ದಾರೆ.
ಪವನ್ ಗೋಯೆಂಕಾ ಅವರ ಎಕ್ಸ್ ಪೋಸ್ಟ್
Five years ago, when India opened up its space sector, we had two clear objectives: enable ISRO to conquer new frontiers and empower our private industry to scale up.
Today, we are seeing both take shape.
EOS-05 is a major achievement by ISRO, and this is just the beginning.…
— Pawan K Goenka (@GoenkaPk) September 6, 2026
ಇದನ್ನೂ ಓದಿ: ಭಾರತದ ಫಾರೆಕ್ಸ್ ನಿಧಿ 740 ಬಿಲಿಯನ್ ಡಾಲರ್; ಹೊಸ ಸಾರ್ವಕಾಲಿಕ ದಾಖಲೆ; ಒಂದೇ ವಾರದಲ್ಲಿ ಲಕ್ಷ ಕೋಟಿ ರೂ ಹೆಚ್ಚಳ
ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೂ ತೆರೆದಿರುವ ವಿಚಾರದಲ್ಲಿ ಕೆಲ ಅಂಶಗಳ ಬಗ್ಗೆ ಇಸ್ರೋ ನೌಕರರ ಸಂಘಟನೆಗಳು ಸ್ಪಷ್ಟನೆ ಬಯಸಿವೆ. ಹಾಗೆಯೇ, ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು ರಾಷ್ಟ್ರೀಯ ಸಂಪತ್ತಾಗಿದ್ದು, ಅವನ್ನು ಖಾಸಗಿಯವರಿಗೆ ವರ್ಗಾವಣೆ ಮಾಡುವುದು ಎಷ್ಟು ಸರಿ ಎಂದೂ ಈ ಸಂಘಟನೆಗಳು ಪ್ರಶ್ನೆ ಮಾಡಿವೆ. ಈ ಸಂಬಂಧ ಇಸ್ರೋ ಛೇರ್ಮನ್ ವಿ ನಾರಾಯಣನ್ ಅವರಿಗೆ ಪತ್ರ ಬರೆದು ಕೇಳಿವೆ.
ಇದನ್ನೂ ಓದಿ: ವೈ-ಫೈ ಇರುವ ಎಸಿ ಖರೀದಿಸುವುದು ಉತ್ತಮವೇ? ಇದರ ಪ್ರಯೋಜನಗಳೇನು?
ಭಾರತೀಯ ಬಾಹ್ಯಾಕಾಶ ವಲಯದ ಬೆಳವಣಿಗೆಗೆ ಖಾಸಗಿ ಭಾಗವಹಿಸುವಿಕೆ ಅಗತ್ಯವಾಗಿದ್ದರೂ, ಅದು ಸರ್ಕಾರಿ ಸಂಸ್ಥೆಯಾದ ಇಸ್ರೋದ ಅಸ್ತಿತ್ವ ಮತ್ತು ನೌಕರರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಇರಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ In-SPACe ಮುಖ್ಯಸ್ಥ ಪವನ್ ಕೆ ಗೋಯೆಂಕಾ ಅವರು ಇಸ್ರೋ ಮತ್ತೆಂದೂ ರಾಕೆಟ್ ತಯಾರಿಸುವುದಿಲ್ಲ ಎನ್ನುವಂತಹ ಹೇಳಿಕೆ ನಿಡಿದ್ದರು. ಇದಕ್ಕೆ ಇಸ್ರೋ ಉದ್ಯೋಗಿಗಳು ಸ್ಪಷ್ಟನೆ ಕೇಳಿರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ