ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದಲ್ಲಿ ಅಕ್ಟೋಬರ್ ತಿಂಗಳಲ್ಲಿ ಶೇಕಡಾ 16.6ರಷ್ಟು ಹೆಚ್ಚಳವಾಗಿದೆ. ಈ ತಿಂಗಳಲ್ಲಿ 1.51 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಜಿಎಸ್‌ಟಿ ಸಂಗ್ರಹದಲ್ಲಿ ಈವರೆಗಿನ ಎರಡನೇ ಗರಿಷ್ಠ ಮೊತ್ತವಾಗಿದೆ. ಈ ವರ್ಷ ಅಕ್ಟೋಬರ್ನಲ್ಲಿ 1,51,718 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ 26,039 ಕೋಟಿ ರೂ. ಹಾಗೂ ರಾಜ್ಯ ಜಿಎಸ್‌ಟಿ 33,396 ಕೋಟಿ ರೂ. ಆಗಿದೆ.
ಸರಕುಗಳ ಆಮದಿನಿಂದ ಸಂಗ್ರಹಿಸಿರುವ 37,297 ಕೋಟಿ ರೂ ಸೇರಿದಂತೆ 81,778 ಕೋಟಿ ರೂ. ಸಂಚಿತ ಜಿಎಸ್‌ಟಿ ಸಂಗ್ರಹವಾಗಿದೆ. ಆಮದು ಸರಕುಗಳಿಂದ ಸಂಗ್ರಹಿಸಿದ 825 ಕೋಟಿ ರೂ. ಸೇರಿದಂತೆ 10,505 ಕೋಟಿ ರೂ. ಸೆಸ್ ಸಂಗ್ರಹಿಸಲಾಗಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ಸತತ ಎಂಟು ತಿಂಗಳ ಜಿಎಸ್‌ಟಿ ಮಾಪ್-ಅಪ್ ಮೊತ್ತ ಸುಮಾರು 1.40 ಲಕ್ಷ ಕೋಟಿ ರೂ. ಆಗಿದೆ. ಸೆಪ್ಟೆಂಬರ್ನಲ್ಲಿ 8.3 ಕೋಟಿ ಇ-ವೇ ಬಿಲ್ಗಳನ್ನು ಜನರೇಟ್ ಮಾಡಲಾಗಿತ್ತು. ಇದು ಆಗಸ್ಟ್ನಲ್ಲಿ ಜನರೇಟ್ ಮಾಡಿದ್ದ ಇ-ವೇ ಬಿಲ್ಗಳಿಂದ ಹೆಚ್ಚಾಗಿತ್ತು. ಆಗಸ್ಟ್ನಲ್ಲಿ 7.7 ಕೋಟಿ ಇ-ವೇ ಬಿಲ್ಗಳನ್ನು ಜನರೇಟ್ ಮಾಡಲಾಗಿತ್ತು ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ 1.47 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಕರ್ನಾಟಕ ನಂಬರ್ 2
The gross GST revenue collected in the month of October 2022 is Rs 1.51 lakh crores – the second-highest collection to date, next only to the collection in April 2022. Monthly GST revenues more than Rs 1.4 lakh crores for 8 months in a row: Finance Ministry pic.twitter.com/MWB9WgRH9o
— ANI (@ANI) November 1, 2022
ಈ ಹಿಂದೆ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಅದು ಬಿಟ್ಟರೆ ಈಗ ಅಕ್ಟೋಬರ್ನಲ್ಲಿ ಆಗಿರುವ 1.51 ಲಕ್ಷ ಕೋಟಿ ರೂ. ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.
ಉಳಿದಂತೆ, ಮೇ ತಿಂಗಳಲ್ಲಿ ಜಿಎಸ್‌ಟಿ ಆದಾಯ 1.41 ಲಕ್ಷ ಕೋಟಿ ರೂ., ಜೂನ್‌ನಲ್ಲಿ 1.44 ಲಕ್ಷ ಕೋಟಿ ರೂ., 1.49 ಲಕ್ಷ ಕೋಟಿ ರೂ. (ಜುಲೈ) ಮತ್ತು 1.43 ಲಕ್ಷ ಕೋಟಿ (ಆಗಸ್ಟ್) ಆಗಿತ್ತು. ಅತೀ ಹೆಚ್ಚು ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಆಗಸ್ಟ್ನಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಆಗಸ್ಟ್ನಲ್ಲಿ ಮಹಾರಾಷ್ಟ್ರ 18684 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 9583 ಕೋಟಿ ರೂ. ಸಂಗ್ರಹದೊಂದಿಗೆ ಎರಡನೇ ಸ್ಥಾನಕ್ಕೇರಿತ್ತು. ಅಕ್ಟೋಬರ್ನಲ್ಲಿ ಕರ್ನಾಟಕದ ಜಿಎಸ್‌ಟಿ ಸಂಗ್ರಹ ಎಷ್ಟೆಂಬುದು ಇನ್ನಷ್ಟೇ ತಿಳಿಯಬೇಕಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ