GST Council Meet: ಆನ್ಲೈನ್ ಗೇಮಿಂಗ್, ಜೂಜುಗಳಿಗೆ ಜಿಎಸ್ಟಿ ವಿಧಿಸಲು ಸಪ್ಲೈ ವ್ಯಾಲ್ಯೂ ಹೇಗೆ? ಇಂದು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ
Online Gaming Supply Value For GST: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಆಗಸ್ಟ್ 2ರಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದೆ. ಆನ್ಲೈನ್ ಗೇಮಿಂಗ್ ಮತ್ತು ಜೂಜುಗಳಿಗೆ ಶೇ. 28ರಷ್ಟು ಜಿಎಸ್ಟಿ ವಿಧಿಸುವ ಸಂಬಂಧ ಕೆಲ ನಿಯಮಗಳನ್ನು ಈ ಸಭೆಯಲ್ಲಿ ಅಂತಿಮಗೊಳಿಸುವ ನಿರೀಕ್ಷೆ ಇದೆ.
ನವದೆಹಲಿ, ಆಗಸ್ಟ್ 2: ಆನ್ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಆಟಗಳಿಗೆ ಶೇ. 28ರಷ್ಟು ಜಿಎಸ್ಟಿ ವಿಧಿಸುವ ಸಂಬಂಧ ಯಾವ್ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದು ಇಂದು ನಿರ್ಧಾರವಾಗುವ ಸಾಧ್ಯತೆ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇಂದು (ಆಗಸ್ಟ್ 2) ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ (GST Council Meeting) ಈ ಬಗ್ಗೆ ಚರ್ಚೆ ನಡೆದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನ್ಲೈನ್ ಗೇಮಿಂಗ್ ಉದ್ಯಮ ಕುತೂಹಲದಿಂದ ಸಭೆಯ ಬೆಳವಣಿಗೆಯನ್ನು ಕಾಯುತ್ತಿದೆ.
ಕಳೆದ ಬಾರಿ, ಜುಲೈ 11ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಆನ್ಲೈನ್ ಗೇಮಿಂಗ್, ಹಾರ್ಸ್ ರೇಸಿಂಗ್ ಮತ್ತು ಕ್ಯಾಸಿನೋಗಳ ಪೂರ್ಣ ಬೆಟ್ ಹಣದ ಮೇಲೆ ಶೇ. 28ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕಿತ್ತು. ಸರ್ಕಾರದ ಈ ಕ್ರಮವನ್ನು ಗೇಮಿಂಗ್ ಉದ್ಯಮ ತೀವ್ರವಾಗಿ ವಿರೋಧಿಸಿದೆ. ಇದು ಉದ್ಯಮದ ಬೆಳವಣಿಗೆಯನ್ನೇ ಮೊಟಕುಗೊಳಿಸುತ್ತದೆ ಎಂಬ ಅಭಿಪ್ರಾಯಗಳು ಈ ವಲಯದ ಕಂಪನಿಗಳಿಂದ ಕೇಳಿಬರುತ್ತಿದೆ.
ಇದನ್ನೂ ಓದಿ: ITR: ಡೆಡ್ಲೈನ್ ಮುಗಿಯಿತು; ಈವರೆಗೆ ಸಲ್ಲಿಕೆಯಾದ ಐಟಿಆರ್ಗಳೆಷ್ಟು? ಹೊಸ ದಾಖಲೆ ಎಂದು ಐಟಿ ಇಲಾಖೆ ಟ್ವೀಟ್
ಈ ಮಧ್ಯೆ, ಕೇಂದ್ರ ಹಾಗೂ ರಾಜ್ಯಗಳ ತೆರಿಗೆ ಅಧಿಕಾರಿಗಳನ್ನು ಒಳಗೊಂಡಿರುವ ಕಾನೂನು ಸಮಿತಿ (ಲಾ ಕಮಿಟಿ) ಕರಡು ನಿಯಮಗಳನ್ನು ರೂಪಿಸಿದೆ. ಆನ್ಲೈನ್ ಗೇಮಿಂಗ್, ಕುದುರೆ ರೇಸಿಂಗ್, ಕ್ಯಾಸಿನೋ ಇತ್ಯಾದಿಗಳ ವ್ಯವಹಾರದಲ್ಲಿ ತೆರಿಗೆ ಹೇರಲು ಸಪ್ಲೈ ವ್ಯಾಲ್ಯೂವನ್ನು ಯಾವ ರೀತಿ ನಿರ್ಧರಿಸಬಹುದು ಎಂಬ ಪ್ರಸ್ತಾವಗಳನ್ನು ಸಮಿತಿ ಜಿಎಸ್ಟಿ ಕೌನ್ಸಿಲ್ ಮುಂದಿಟ್ಟಿದೆ. ಇಲ್ಲಿ ಸಪ್ಲೈ ವ್ಯಾಲ್ಯೂ ಎಂಬುದು ಗ್ರಾಹಕನು ಕಂಪನಿಯ ಸೇವೆಯನ್ನು ಪಡೆಯಲು ನೀಡುವ ಶುಲ್ಕ. ತೆರಿಗೆಗೆ ಅರ್ಹವಾದ ಸೇವೆ ಯಾವುದು ಎಂಬುದನ್ನು ನಿರ್ಧರಿಸಲಾಗುತ್ತದೆ.
ಆನ್ಲೈನ್ ಗೇಮಿಂಗ್ ವಿಚಾರದಲ್ಲಿ ಒಬ್ಬ ಆಟಗಾರನ ವತಿಯಿಂದ ಹಣ ಅಥವಾ ವಿಡಿಎ (ವರ್ಚುವಲ್ ಡಿಜಿಟಲ್ ಅಸೆಟ್) ಮೂಲಕ ಇರಿಸಿದ ಠೇವಣಿ ಮೊತ್ತವನ್ನು ಸಪ್ಲೈ ವ್ಯಾಲ್ಯೂ ಎಂದು ಪರಿಗಣಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿರುವುದು ತಿಳಿದುಬಂದಿದೆ.
ಇನ್ನು, ಕ್ಯಾಸಿನೋ ವಿಚಾರಕ್ಕೆ ಬಂದರೆ, ಟೀಲನ್, ಚಿಪ್, ಕಾಯಿನ್ ಅಥವಾ ಟೆಕ್ಗಳ ಖರೀದಿಗೆ ಆಟಗಾರ ಪಾವತಿಸುವ ಹಣವನ್ನು ಸಪ್ಲೈ ವ್ಯಾಲ್ಯೂ ಎಂದು ಪರಿಗಣಿಸಬೇಕೆಂಬ ಸಲಹೆ ಇದೆ.
ಇಂದು ನಡೆಯುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕಾನೂನು ಸಮಿತಿಯ ಪ್ರಸ್ತಾಪಗಳ ಬಗ್ಗೆ ಚರ್ಚೆ ಆಗಲಿದೆ. ಆನ್ಲೈನ್ ಗೇಮಿಂಗ್, ಕ್ಯಾಸಿನೋ, ಹಾರ್ಸ್ ರೇಸಿಂಗ್ನಲ್ಲಿ ಜಿಎಸ್ಟಿ ವಿಧಿಸಲು ಸಪ್ಲೈ ವ್ಯಾಲ್ಯೂ ಯಾವುದೆಂದು ನಿರ್ಧಾರವಾಗುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ