ITR: ಡೆಡ್ಲೈನ್ ಮುಗಿಯಿತು; ಈವರೆಗೆ ಸಲ್ಲಿಕೆಯಾದ ಐಟಿಆರ್ಗಳೆಷ್ಟು? ಹೊಸ ದಾಖಲೆ ಎಂದು ಐಟಿ ಇಲಾಖೆ ಟ್ವೀಟ್
Income Tax Return: ಆದಾಯ ತೆರಿಗೆ ಪೋರ್ಟಲ್ನಲ್ಲಿರುವ ಮಾಹಿತಿ ಪ್ರಕಾರ ಈವರೆಗೂ 6.77 ಕೋಟಿಗೂ ಹೆಚ್ಚು ಮಂದಿ ಐಟಿ ರಿಟರ್ನ್ ಸಲ್ಲಿಸಿದ್ದಾರೆ. ಜುಲೈ 31ರಂದು ಐಟಿ ಇಲಾಖೆ ಟ್ವೀಟ್ ಮಾಡಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಐಟಿಆರ್ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ನವದೆಹಲಿ, ಆಗಸ್ಟ್ 1: ನಾವು ಗಳಿಸುವ ಆದಾಯಕ್ಕೆ ತಕ್ಕಂತೆ ಸರ್ಕಾರಕ್ಕೆ ತೆರಿಗೆ ಸಲ್ಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆದಾಯದ ಘೋಷಣೆ ಮಾಡುವ ಐಟಿಆರ್ (ITR) ಅನ್ನು ಪ್ರತೀ ವರ್ಷವೂ ಸಲ್ಲಿಕೆ ಮಾಡಬೇಕು. ಈ ವರ್ಷ ಜುಲೈ 31ರವರೆಗೆ ಗಡುವು ಕೊಡಲಾಗಿತ್ತು. ಅದೀಗ ಮುಗಿದಿದೆ. ಕಳೆದ ಬಾರಿಗಿಂತಲೂ ಈಗ ಹೆಚ್ಚು ಐಟಿಆರ್ಗಳು ಸಲ್ಲಿಕೆ ಆಗಿವೆ. ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿರುವ ಮಾಹಿತಿ ಪ್ರಕಾರ, 2022-23ರ ಹಣಕಾಸು ವರ್ಷಕ್ಕೆ ಈವರೆಗೆ ಫೈಲ್ ಮಾಡಲಾಗಿರುವ ಐಟಿ ರಿಟರ್ನ್ಗಳ ಸಂಖ್ಯೆ 6,77,42,303 ಇದೆ. ಅಂದರೆ 6.77 ಕೋಟಿಗೂ ಹೆಚ್ಚು.
ಆದಾಯ ತೆರಿಗೆ ಪೋರ್ಟಲ್ನಲ್ಲಿ ನೊಂದಣಿ ಮಾಡಿಸಿರುವ ವೈಯಕ್ತಿಕ ತೆರಿಗೆ ಪಾವತಿದಾರರ ಸಂಖ್ಯೆ 11.59 ಕೋಟಿಯಷ್ಟಿದೆ. ಈ ಪೈಕಿ 6.77 ಕೋಟಿ ಮಂದಿ ರಿಟರ್ನ್ ಫೈಲ್ ಮಾಡಿದ್ದಾರೆ. ಇದರಲ್ಲಿ 5.62 ಕೋಟಿ ಐಟಿಆರ್ಗಳ ವೆರಿಫಿಕೇಶನ್ ಮುಗಿದಿದ್ದು, 3.44 ಕೋಟಿ ಐಟಿಆರ್ಗಳನ್ನು ಪ್ರೋಸಸ್ ಮಾಡಲಾಗಿದೆ.
ಇದನ್ನೂ ಓದಿ: ಆಗಸ್ಟ್ನಲ್ಲಿನ ಬದಲಾವಣೆಗಳು; ನಿಯಮ, ಜಿಎಸ್ಟಿ, ಗಡುವು, ಬೆಲೆ ವ್ಯತ್ಯಯಗಳ್ಯಾವುವು? ಇಲ್ಲಿದೆ ಪಟ್ಟಿ
ಇನ್ನು, ಆದಾಯ ತೆರಿಗೆ ಇಲಾಖೆ ಜುಲೈ 31 ಸಂಜೆ ಟ್ವೀಟ್ ಮಾಡಿದ್ದು, ಐಟಿಆರ್ ಸಲ್ಲಿಕೆಯಲ್ಲಿ ಹೊಸ ಮೈಲಿಗಲ್ಲು ತಲುಪಲಾಗಿದೆ ಎಂದು ಹೇಳಿದೆ. ಜುಲೈ 31ರ ಸಂಜೆ 6 ಗಂಟೆಯವರೆಗೆ ಒಟ್ಟು 6.50 ಕೋಟಿಗೂ ಹೆಚ್ಚು ಐಟಿಆರ್ಗಳು ಸಲ್ಲಿಕೆಯಾಗಿವೆ. ಸೋಮವಾರ ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೂ 36.91 ಲಕ್ಷ ಐಟಿಆರ್ಗಳನ್ನು ಫೈಲ್ ಮಾಡಲಾಗಿದೆ ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ.
Income Tax Department scales a new peak!
More than 6.50 crore ITRs have been filed so far (31st July), out of which about 36.91 lakh ITRs have been filed today till 6 pm!
We have witnessed more than 1.78 crore successful logins on the e-filing portal till 6 pm, today.
To… pic.twitter.com/urB0d3SMIC
— Income Tax India (@IncomeTaxIndia) July 31, 2023
ಇನ್ನು, 2020-21ರ ಹಣಕಾಸು ವರ್ಷಕ್ಕೆ ಒಟ್ಟು 6.63 ಕೋಟಿ ಐಟಿಆರ್ಗಳು ಸಲ್ಲಿಕೆಯಾಗಿದ್ದವು. ಐಟಿಆರ್ 1, ಐಟಿಆರ್ 3 ಮತ್ತು 4 ಫಾರ್ಮ್ಗಳು ಅತಿಹೆಚ್ಚು ಸಲ್ಲಿಕೆಯಾಗಿದ್ದವು. ಈ ಬಾರಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಐಟಿಆರ್ಗಳು ಸಲ್ಲಿಕೆಯಾಗಿವೆ. ಡೆಡ್ಲೈನ್ ಮುಗಿದರೂ ಇನ್ನೂ ಬಹಳಷ್ಟು ಮಂದಿ ರಿಟರ್ನ್ ಫೈಲ್ ಮಾಡುವುದು ಬಾಕಿ ಇದೆ. ಐಟಿಆರ್ ಸಲ್ಲಿಕೆ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: IT Notice: ಐಟಿ ನೋಟೀಸ್ ಬಂದಾಗ ಗಾಬರಿಯಾಗದಿರಿ; ಏನು ಮಾಡಬೇಕು, ಮಾಡಬಾರದು, ಇಲ್ಲಿದೆ ವಿವರ
ಐಟಿಆರ್ ಸಲ್ಲಿಕೆ ತಡವಾದರೆ ಏನು?
ಐಟಿ ರಿಟರ್ನ್ ಅನ್ನು ಇನ್ನೂ ಸಲ್ಲಿಕೆ ಮಾಡದೇ ಇದ್ದರೆ ವಿಳಂಬ ಶುಲ್ಕ, ಬಡ್ಡಿ ಕಟ್ಟಿ ಐಟಿಆರ್ ಸಲ್ಲಿಸಬಹುದು. ಹೆಚ್ಚು ಡಿಡಕ್ಷನ್ ಕ್ಲೇಮ್ ಮಾಡಲು ಆಗದೇ ಹೋಗಬಹುದು. ಹಾಗೆಯೇ, ಯಾವುದಾದರೂ ವ್ಯವಹಾರದಲ್ಲಿ ನಷ್ಟವಾಗಿದ್ದರೆ ಆ ಲೆಕ್ಕವನ್ನು ಮುಂದಿನ ವರ್ಷಕ್ಕೆ ಮುಂದುವರಿಸಿಕೊಂಡು ಹೋಗಲು ಆಗದೇ ಹೋಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ