ನವದೆಹಲಿ, ಏಪ್ರಿಲ್ 24: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ (Congress election manifesto) ನೀಡಲಾಗಿರುವ ಸಂಪತ್ತು ಮರುಹಂಚಿಕೆ (wealth redistribution) ಭರವಸೆ ಈಗ ಚರ್ಚೆಯ ವಿಷಯವಾಗಿದೆ. ಸಂಪತ್ತನ್ನು ಅವರಿಂದ ಕಿತ್ತು ಇವರಿಗೆ ಹಂಚುವುದಿಲ್ಲ. ವಿವಿಧ ನೀತಿ, ಯೋಜನೆಗಳ ಮೂಲಕ ದೀನರಿಗೆ ಸಂಪತ್ತು ಪಡೆಯುವ ಶಕ್ತಿ ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ತಮ್ಮ ಚುನಾವಣಾ ಭಾಷಣಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಂಗಸರ ಮಾಂಗಲ್ಯವನ್ನೂ ಬಿಡದೆ ನುಸುಳುಕೋರರಿಗೆ ಕೊಟ್ಟುಬಿಡುತ್ತಾರೆ ಎಂದು ಆರೋಪಿಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದ ತಾತ್ವಿಕ ಗುರು ಹಾಗೂ ಪಕ್ಷದ ವಿದೇಶೀ ವಿಭಾಗದ ಛೇರ್ಮನ್ ಸ್ಯಾಮ್ ಪಿತ್ರೋಡ (Sam Pitroda) ಅವರು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕುತೂಹಲಕಾರಿ ಎನಿಸುವ ವಿಚಾರವನ್ನು ಉಲ್ಲೇಖಿಸಿದ್ದಾರೆ. ಅದು ಅಮೆರಿಕದ ಇನ್ಹೆರಿಟೆನ್ಸ್ ಟ್ಯಾಕ್ಸ್ ವಿಚಾರ.
ಒಬ್ಬ ವ್ಯಕ್ತಿ ಸತ್ತಾಗ ಆತನ ಆಸ್ತಿಗೆ ಸರ್ಕಾರ ವಿಧಿಸುವ ತೆರಿಗೆಯೇ ಇನ್ಹೆರಿಟೆನ್ಸ್ ಟ್ಯಾಕ್ಸ್. ಕಾಂಗ್ರೆಸ್ ಪಕ್ಷದ ಸಂಪತ್ತು ಮರುಹಂಚಿಕೆ ವಿಚಾರ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಸ್ಯಾಮ್ ಪಿತ್ರೋಡ ಈ ತೆರಿಗೆ ಪದ್ಧತಿಯನ್ನು ಉಲ್ಲೇಖಿಸಿರುವುದು ಗಮನಾರ್ಹ ಸಂಗತಿ.
‘ಅಮೆರಿಕದಲ್ಲಿ ಇನ್ಹೆರಿಟೆನ್ಸ್ ಟ್ಯಾಕ್ಸ್ ಜಾರಿಯಲ್ಲಿದೆ. ಒಬ್ಬ ವ್ಯಕ್ತಿ ಬಳಿ 100 ಮಿಲಿಯನ್ ಮೌಲ್ಯದ ಆಸ್ತಿ ಇದ್ದು ಆತ ಸತ್ತರೆ ಮಕ್ಕಳಿಗೆ ಶೇ. 40ರಷ್ಟು ಆಸ್ತಿಯನ್ನು ಮಾತ್ರ ವರ್ಗಾಯಿಸಬಹುದು. ಉಳಿದ ಶೇ. 55ರಷ್ಟು ಆಸ್ತಿ ಸರ್ಕಾರಕ್ಕೆ ಹೋಗುತ್ತದೆ. ಇದು ನಿಜಕ್ಕೂ ಕುತೂಹಲ ಎನಿಸುವ ಕಾನೂನು.
ಇದನ್ನೂ ಓದಿ: ಜನಸಂಖ್ಯಾ ಬಲದ ಲಾಭ ಪಡೆಯಲು ಭಾರತ ಶೇ. 8ರಿಂದ 10ರಷ್ಟು ವೇಗದಲ್ಲಿ ಬೆಳೆಯಬೇಕು: ಆರ್ಬಿಐ ಬುಲೆಟಿನ್
‘ನಿಮ್ಮ ತಲೆಮಾರಿನಲ್ಲಿ ಆಸ್ತಿ ಸಂಪಾದಿಸಿ ಅದನ್ನು ಬಿಟ್ಟು ಹೋಗುತ್ತಿದ್ದೀರೆಂದರೆ, ಸಾರ್ವಜನಿಕರಿಗೆ ನೀವು ಆಸ್ತಿ ಬಿಟ್ಟುಹೋಗಬೇಕಾಗುತ್ತದೆ. ಎಲ್ಲಾವೂ ಅಲ್ಲ, ಅರ್ಧದಷ್ಟು ಆಸ್ತಿ ಮಾತ್ರ. ಇದು ನನಗೆ ನ್ಯಾಯಯುತ ಎನಿಸುತ್ತದೆ…’ ಎಂದು ಸ್ಯಾಮ್ ಪಿತ್ರೋಡ ಅವರು ತರ್ಕ ಮುಂದಿಟ್ಟಿದ್ದಾರೆ.
‘ಭಾರತದಲ್ಲಿ ಈ ಕಾನೂನು ಇಲ್ಲ. ಇಲ್ಲಿ 10 ಬಿಲಿಯನ್ ಹೊಂದಿರುವ ಯಾರಾದರೂ ವ್ಯಕ್ತಿ ಸತ್ತರೆ ಆತನ ಮಕ್ಕಳಿಗೆ ಎಲ್ಲಾ 10 ಬಿಲಿಯನ್ ಹಣ ಹೋಗುತ್ತದೆ. ಸಾರ್ವಜನಿಕರಿಗೆ ಏನೂ ಸಿಕ್ಕಲ್ಲ.
#WATCH | Chicago, US: Chairman of Indian Overseas Congress, Sam Pitroda says, “…In America, there is an inheritance tax. If one has $100 million worth of wealth and when he dies he can only transfer probably 45% to his children, 55% is grabbed by the government. That’s an… pic.twitter.com/DTJrseebFk
— ANI (@ANI) April 24, 2024
‘ಈ ರೀತಿಯ ವಿಚಾರಗಳು ಚರ್ಚಿತವಾಗಬೇಕು. ಅಂತಿಮವಾಗಿ ಯಾವ ಅಭಿಪ್ರಾಯ ನಿಲ್ಲುತ್ತದೆ ಗೊತ್ತಿಲ್ಲ. ಆದರೆ, ಸಂಪತ್ತು ಮರುಹಂಚಿಕೆ ವಿಚಾರ ಮಾತನಾಡುವಾಗ ನಾವು ಅತಿ ಶ್ರೀಮಂತರಿಗೆ ಮಾತ್ರವಲ್ಲ ಬಡವರ ಹಿತಾಸಕ್ತಿಯನ್ನೂ ಪರಿಗಣಿಸಿ ಹೊಸ ನೀತಿ ಮತ್ತು ಯೋಜನೆಗಳನ್ನು ಪ್ರಸ್ತಾಪಿಸುತ್ತೇವೆ,’ ಎಂದು ಎಎನ್ಐ ಸಂದರ್ಶನದಲ್ಲಿ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಮುಖ ನೀತಿಗಳ ಹಿಂದೆ ಸ್ಯಾಮ್ ಪಿತ್ರೋಡ ಇದ್ದಾರೆ. ಹೀಗಾಗಿ ಅವರ ಹೇಳಿಕೆ ಬಹಳ ಗಮನಾರ್ಹವಾದುದು. ಸಂಪತ್ತು ಮರುಹಂಚಿಕೆ ಮಾಡಲು ಕಾಂಗ್ರೆಸ್ ಯಾವೆಲ್ಲಾ ನೀತಿಗಳನ್ನು ಅನುಸರಿಸಬಹುದು ಎಂಬುದರ ಸುಳಿವನ್ನು ಸ್ಯಾಮ್ ಪಿತ್ರೋಡಾ ನೀಡಿರಬಹುದು.
ಸ್ಯಾಮ್ ಪಿತ್ರೋಡಾ ಹೇಳಿದಂತೆ ಅಮೆರಿಕದಲ್ಲಿ ಇನ್ಹೆರಿಟೆನ್ಸ್ ಟ್ಯಾಕ್ಸ್ ಇಲ್ಲ. ಆದರೆ, ಅದಕ್ಕೆ ಪರ್ಯಾಯವಾದ ಎಸ್ಟೇಟ್ ಟ್ಯಾಕ್ಸ್ ಇದೆ. ಆದರೆ, ಅಮೆರಿಕದ ಎಲ್ಲಾ ರಾಜ್ಯಗಳಲ್ಲೂ ಈ ತೆರಿಗೆ ಇಲ್ಲ. ಐದಾರು ರಾಜ್ಯಗಳಲ್ಲಿ ಮಾತ್ರ ಈ ತೆರಿಗೆ ಇದೆ. ಅದೂ ಶೇ. 55 ಅಲ್ಲ, ಶೇ. 1ರಿಂದ 20ರಷ್ಟು ಮಾತ್ರ ತೆರಿಗೆ ಇರುವುದು ಎಂದು ಒಪಿ ಇಂಡಿಯಾದ ಪತ್ರಕರ್ತ ಅನುರಾಗ್ ಎಂಬುವವರು ಎಎನ್ಐ ಪೋಸ್ಟ್ಗೆ ಮಾಡಿದ ಕಾಮೆಂಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊಡಿ ಕೊಡಿ ಹಳೆ ಸಾಮಾನ್… ಆರ್ಥಿಕ ಪತನ ತಪ್ಪಿಸಲು ಚೀನಾದ ಹೊಸ ಪ್ಲಾನ್
ವಿಶ್ವದಲ್ಲಿ ಕೆಲ ದೇಶಗಳಲ್ಲಿ ಇನ್ಹೆರಿಟೆನ್ಸ್ ಟ್ಯಾಕ್ಸ್ ಅಥವಾ ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿಯಲ್ಲಿದೆ. ಜಪಾನ್ನಲ್ಲಿ ಶೇ. 55ರಷ್ಟು ತೆರಿಗೆ ಹಾಕಲಾಗುತ್ತದೆ. ಒಇಸಿಡಿ ದೇಶಗಳ ಪೈಕಿ ಇದು ಗರಿಷ್ಠ. ಟ್ಯಾಕ್ಸ್ ಫೌಂಡೇಶನ್ ವೆಬ್ಸೈಟ್ನಲ್ಲಿ ಇರುವ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಎಸ್ಟೇಟ್ ಟ್ಯಾಕ್ಸ್ ಶೇ. 40ರಷ್ಟು ಇದೆ. ಸೌತ್ ಕೊರಿಯಾದಲ್ಲಿ ಶೇ. 45, ಬ್ರಿಟನ್ನಲ್ಲಿ ಶೇ. 40ರಷ್ಟು ಇನ್ಹೆರಿಟೆನ್ಸ್ ಟ್ಯಾಕ್ಸ್ ಇದೆ. ಹೆಚ್ಚಿನ ಒಇಸಿಡಿ ದೇಶಗಳಲ್ಲಿ ಈ ರೀತಿಯ ತೆರಿಗೆ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Wed, 24 April 24