ಜನಸಂಖ್ಯಾ ಬಲದ ಲಾಭ ಪಡೆಯಲು ಭಾರತ ಶೇ. 8ರಿಂದ 10ರಷ್ಟು ವೇಗದಲ್ಲಿ ಬೆಳೆಯಬೇಕು: ಆರ್​ಬಿಐ ಬುಲೆಟಿನ್

RBI Bulletin 2024 April: ಭಾರತದಲ್ಲಿ ಜನಸಂಖ್ಯಾ ಬಲದ ಲಾಭದ ಅವಕಾಶ 2018ರಿಂದ ಆರಂಭವಾಗಿ 2055ರವರೆಗೂ ಇರಲಿದೆ. ಈ ಬಲದ ಲಾಭ ಸರಿಯಾಗಿ ಪಡೆಯಬೇಕಾದರೆ ಮುಂದಿನ ದಶಕದಲ್ಲಿ ಭಾರತದ ಆರ್ಥಿಕತೆ ಶೇ. 8ರಿಂದ 10ರಷ್ಟು ದರದಲ್ಲಿ ಬೆಳೆಯಬೇಕಾಗುತ್ತದೆ ಎಂದು ಆರ್​ಬಿಐ ತನ್ನ ಏಪ್ರಿಲ್ ತಿಂಗಳ ಮಾಸಿಕ ಬುಲೆಟಿನ್​ನಲ್ಲಿ ಅಭಿಪ್ರಾಯಪಟ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 8ರ ಸಮೀಪ ಬೆಳೆಯಬಹುದು ಎಂದೂ ಈ ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಜನಸಂಖ್ಯಾ ಬಲದ ಲಾಭ ಪಡೆಯಲು ಭಾರತ ಶೇ. 8ರಿಂದ 10ರಷ್ಟು ವೇಗದಲ್ಲಿ ಬೆಳೆಯಬೇಕು: ಆರ್​ಬಿಐ ಬುಲೆಟಿನ್
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 23, 2024 | 6:21 PM

ನವದೆಹಲಿ, ಏಪ್ರಿಲ್ 23: ಭಾರತದಲ್ಲಿ ಜನಸಂಖ್ಯಾ ಬಲದ ಲಾಭ (demographic dividend) 2018ಕ್ಕೆ ಶುರುವಾಗಿದ್ದು 2055 ವರ್ಷದರೆಗೂ ಇರುತ್ತದೆ. ಮುಂದಿನ ಮೂರು ದಶಕ ಕಾಲ ಈ ಜನಸಂಖ್ಯಾ ಬಲದ ಲಾಭ ಸರಿಯಾಗಿ ಸಿಗಬೇಕಾದರೆ ಮುಂದಿನ ಹತ್ತು ವರ್ಷ ಕಾಲ ಶೇ. 8ರಿಂದ 10ರಷ್ಟು ದರದಲ್ಲಿ ಆರ್ಥಿಕತೆ (gdp growth) ಬೆಳೆಯಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮಾಸಿಕ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. 2047ರಷ್ಟರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸರ್ಕಾರದ ಸಂಕಲ್ಪ ಈಡೇರಬೇಕಾದರೆ ಈ ಹತ್ತು ವರ್ಷ ಉತ್ತಮ ಆರ್ಥಿಕ ಪ್ರಗತಿ ಮೂಲಕ ಬುನಾದಿ ಹಾಕಬೇಕಾಗುತ್ತದೆ ಎಂಬುದು ಆರ್​ಬಿಐ ಅನಿಸಿಕೆಯಾಗಿದೆ.

ಮುಂದಿನ ಕೆಲ ದಶಕಗಳಲ್ಲಿ ಭಾರತದ ಯುವ ಮಾನವ ಸಂಪನ್ಮೂಲ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಮೂಲಕ ಕೆಳ ಮಧ್ಯಮ ಆದಾಯದ ಗೆರೆಯನ್ನು ದಾಟಿ ಮೇಲೆ ಏರಲು ಸಾಧ್ಯವಾಗುತ್ತದೆ ಎಂದು ಬುಲೆಟ್​ನಲ್ಲಿ ಸಲಹೆ ನೀಡಲಾಗಿದೆ.

ಇದನ್ನೂ ಓದಿ: ಕೊಡಿ ಕೊಡಿ ಹಳೆ ಸಾಮಾನ್… ಆರ್ಥಿಕ ಪತನ ತಪ್ಪಿಸಲು ಚೀನಾದ ಹೊಸ ಪ್ಲಾನ್

ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಆಗಿದೆ. ಹಿಂದೆ ಇದ್ದ ರೀತಿಯಲ್ಲಿ ಜನಸಂಖ್ಯೆಯು ಭಾರತದ ಆರ್ಥಿಕತೆಗೆ ಹಿನ್ನಡೆ ತರುತ್ತಿಲ್ಲ. ಈಗಿನ ಬೆಳವಣಿಗೆಗೆ ಮಾನ ಸಂಪನ್ಮೂಲ ಬಹಳ ಅಗತ್ಯ ಇದೆ. ಕೆಲಸ ಮಾಡಬಲ್ಲ ವಯೋಮಾನದವರ ಸಂಖ್ಯೆ ಭಾರತದಲ್ಲಿ ಅತಿ ಹೆಚ್ಚಿದೆ. ಚೀನಾದಲ್ಲಿ ವರ್ಕಿಂಗ್ ಏಜ್ ಜನಸಂಖ್ಯೆ ಕಡಿಮೆ ಇದೆ. ಹೀಗಾಗಿ, ಭಾರತ ತನ್ನ ಅಗಾಧ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಲು ಅವಕಾಶ ಪಡೆದುಕೊಂಡರೆ ಬಹಳ ವೇಗದಲ್ಲಿ ಆರ್ಥಿಕ ವೃದ್ಧಿ ಕಾಣಬಹುದು ಎಂಬುದು ಹಲವು ಆರ್ಥಿಕ ತಜ್ಞರ ಅನಿಸಿಕೆ. ಆರ್​ಬಿಐನ ಏಪ್ರಿಲ್ ಬುಲೆಟಿನ್​ನಲ್ಲೂ ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಲಾಗಿದೆ.

ಆರ್​ಬಿಐನ ಈ ಏಪ್ರಿಲ್ ತಿಂಗಳ ಬುಲೆಟಿನ್​ನಲ್ಲಿ ದೇಶದ ಇವತ್ತಿನ ಆರ್ಥಿಕ ಚಟುವಟಿಕೆಗಳ ಬಗ್ಗೆ ಆಶಾದಾಯಕ ಅಭಿಪ್ರಾಯ ನೀಡಲಾಗಿದೆ. ಹೂಡಿಕೆ ಬೇಡಿಕೆ ಪ್ರಬಲವಾಗಿದ್ದು ಬಿಸಿನೆಸ್ ಮತ್ತು ಗ್ರಾಹಕರ ಭಾವನೆಗಳು ಸಕಾರಾತ್ಮಕವಾಗಿವೆ. ಇದರಿಂದ ಆಂತರಿಕವಾಗಿ ಆರ್ಥಿಕ ಚಟುವಟಿಕೆ ಉತ್ತಮವಾಗಿದೆ ಎಂದು ಈ ವರದಿ ಹೇಳಿದೆ.

ಇದನ್ನೂ ಓದಿ: ಕೆಎಂಎಫ್​ಗೆ ಈಗ 50 ವರ್ಷದ ಇತಿಹಾಸ; ನಂದಿನಿ ಬ್ರ್ಯಾಂಡ್ ಶುರುವಾದ ಕಥೆ; ಅಮೂಲ್ ಅನ್ನು ಮೀರಿಸಬಲ್ಲುದಾ?

ಈ ಹಣಕಾಸು ವರ್ಷದಲ್ಲಿ (2024-25) ಭಾರತದ ಆರ್ಥಿಕತೆ ಶೇ. 8ರ ಸಮೀಪ ಆಗಬಹುದು ಎಂದು ಆರ್​ಬಿಐ ಅಂದಾಜು ಮಾಡಿದೆ.

2023ರ ಡಿಸೆಂಬರ್​ನಲ್ಲಿ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿತ್ತು. ಇದೀಗ ಸಾಕಷ್ಟು ತಗ್ಗಿದೆ. ಆದರೂ ಕೂಡ ಆಹಾರ ಬೆಲೆ ಅನಿಶ್ಚಿತ ಸ್ಥಿತಿಯಲ್ಲಿದೆ. ಹವಾಮಾನ ವೈಪರೀತ್ಯವು ಆಹಾರ ಬೆಲೆ ನಿಯಂತ್ರಣವನ್ನು ಕಷ್ಟಸಾಧ್ಯವಾಗಿಸಬಹುದು ಎಂಬುದು ಮಂಗಳವಾರ ಬಿಡುಗಡೆ ಆದ ಆರ್​ಬಿಐ ಬುಲೆಟಿನ್ ಹೇಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Tue, 23 April 24