ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೊ ದರ ಹೆಚ್ಚಿಸಿದಂತೆಲ್ಲ ಬ್ಯಾಂಕ್ಗಳೂ ಸಾಲ ಮತ್ತು ಠೇವಣಿಗಳ ಬಡ್ಡಿ ದರ (Interest Rate) ಹೆಚ್ಚಳ ಮಾಡಿ ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಹಾಗೆಂದು ಆರ್ಬಿಐ ಎಷ್ಟು ಮೂಲಾಂಶ ಹೆಚ್ಚು ಮಾಡಿದೆಯೋ ಅಷ್ಟೇ ಪ್ರಮಾಣದಲ್ಲಿ ಬ್ಯಾಂಕ್ಗಳು ಬಡ್ಡಿ ದರದಲ್ಲಿ ವ್ಯತ್ಯಾಸ ಮಾಡುವುದಿಲ್ಲ. ಬ್ಯಾಂಕ್ನಿಂದ ಬ್ಯಾಂಕ್ಗೆ ಬಡ್ಡಿ ದರದಲ್ಲಿ ವ್ಯತ್ಯಾಸ ಇರುತ್ತದೆ. ಇತ್ತೀಚೆಗಷ್ಟೇ ಎಚ್ಡಿಎಫ್ಸಿ, ಐಸಿಐಸಿಐ, ಎಸ್ಬಿಐ, ಆ್ಯಕ್ಸಿಸ್ ಬ್ಯಾಂಕ್ಗಳು ಸ್ಥಿರ ಠೇವಣಿ (fixed deposits) ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ಈ ಬ್ಯಾಂಕ್ಗಳು ಎಷ್ಟು ಅವಧಿಯ ಎಫ್ಡಿಗೆ ಎಷ್ಟು ಬಡ್ಡಿ ನೀಡುತ್ತವೆ? ಯಾವ ಬ್ಯಾಂಕ್ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? ಇಲ್ಲಿದೆ ಮಾಹಿತಿ.
ಒಂದು ವರ್ಷ ಅವಧಿಯ ಎಫ್ಡಿ ಬಡ್ಡಿ ದರ
‘ಪೈಸಾಬಜಾರ್’ ಮಾಹಿತಿಯ ಪ್ರಕಾರ ಎಚ್ಡಿಎಫ್ಸಿ, ಐಸಿಐಸಿಐ, ಎಸ್ಬಿಐ, ಆ್ಯಕ್ಸಿಸ್ ಬ್ಯಾಂಕ್ಗಳು ಒಂದು ವರ್ಷದ ವರೆಗಿನ ಅವಧಿಯ ಎಫ್ಡಿಗೆ ಶೇಕಡಾ 6.1ರ ಬಡ್ಡಿ ನೀಡುತ್ತವೆ. ಐಸಿಐಸಿಐ ಬ್ಯಾಂಕ್ ಅಕ್ಟೋಬರ್ 29ರಂದು ಎಫ್ಡಿ ಬಡ್ಡಿ ದರವನ್ನು 30 ಮೂಲಾಂಶಗಳಷ್ಟು ಹೆಚ್ಚಿಸಿತ್ತು.
3 ವರ್ಷ ಅವಧಿಯ ಎಫ್ಡಿ ಬಡ್ಡಿ ದರ
ಆದರೆ, 3 ವರ್ಷ ವರೆಗಿನ ಅವಧಿಯ ಎಫ್ಡಿಗೆ ಎಚ್ಡಿಎಫ್ಸಿ ಬ್ಯಾಂಕ್ ಶೇಕಡಾ 6.25ರ ಬಡ್ಡಿ ನೀಡುತ್ತದೆ. ಐಸಿಐಸಿಐ ಬ್ಯಾಂಕ್ ಶೇಕಡಾ 6.20ರ ಬಡ್ಡಿ ನೀಡಿದರೆ, ಎಸ್ಬಿಐ ಹಾಗೂ ಆ್ಯಕ್ಸಿಸ್ ಬ್ಯಾಂಕ್ಗಳು ಶೇಕಡಾ 6.10ರ ಬಡ್ಡಿ ನೀಡುತ್ತಿವೆ.
5 ವರ್ಷ ಅವಧಿಯ ಎಫ್ಡಿ ಬಡ್ಡಿ ದರ
ಐದು ವರ್ಷಗಳ ವರೆಗಿನ ಅವಧಿಯ ಎಫ್ಡಿಗೆ ಐಸಿಐಸಿಐ ಬ್ಯಾಂಕ್ ಹೆಚ್ಚಿನ, ಅಂದರೆ ಶೇಕಡಾ 6.35ರ ಬಡ್ಡಿ ನೀಡುತ್ತಿದೆ. ಎಚ್ಡಿಎಫ್ಸಿ ಬ್ಯಾಂಕ್ ಶೇಕಡಾ 6.25, ಆಕ್ಸಿಸ್ ಬ್ಯಾಂಕ್ ಮತ್ತು ಎಸ್ಬಿಐ ಬ್ಯಾಂಕ್ಗಳು ಶೇಕಡಾ 6.10ರ ಬಡ್ಡಿ ನೀಡುತ್ತವೆ.
ಬಡ್ಡಿ ದರ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ
ಸಾಲದ ಬೇಡಿಕೆ ಹೆಚ್ಚಳ ಮತ್ತು ಹಣಕಾಸು ಹರಿವು ಬಿಗಿಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ಗಳು ಠೇವಣಿಗಳಿಗೆ 50ರಿಂದ 75 ಮೂಲಾಂಶದಷ್ಟು ಬಡ್ಡಿ ಹೆಚ್ಚಿಸುವ ನಿರೀಕ್ಷೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಸಾಲಕ್ಕೆ ಬೇಡಿಕೆ ಹೆಚ್ಚಿದಾಗ ಠೇವಣಿಯನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳಲು ಬ್ಯಾಂಕ್ಗಳು ಪ್ರಯತ್ನಿಸುತ್ತವೆ. ಸೂಕ್ತ ಪ್ರಮಾಣದಲ್ಲಿ ಹಣಕಾಸಿನ ಹರಿವು ಇರುವಂತೆ ನೋಡಿಕೊಳ್ಳಬೇಕಾದ್ದು ಬ್ಯಾಂಕ್ಗಳಿಗೆ ಅನಿವಾರ್ಯವಾಗುತ್ತದೆ. ಹೀಗಾಗಿ ಠೇವಣಿಗಳ ಮೇಲಿನ ಬಡ್ಡಿ ಹೆಚ್ಚಳದ ಮೂಲಕ ತಮ್ಮ ಬ್ಯಾಲೆನ್ಸ್ಶೀಟ್ನಲ್ಲಿನ ಸಮತೋಲನ ಕಾಯ್ದುಕೊಳ್ಳಲು ಬ್ಯಾಂಕ್ಗಳು ಯತ್ನಿಸುತ್ತವೆ ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ