ಎನ್ಆರ್ಐಗಳೂ ಆಧಾರ್ ಕಾರ್ಡ್ ಹೊಂದಬಹುದು; ಇಲ್ಲಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ವಿವರವಾದ ಮಾಹಿತಿ
ಆಧಾರ್ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಾಮಾನ್ಯ ಭಾರತೀಯರಿಗೂ ಅನಿವಾಸಿ ಭಾರತೀಯರಿಗೂ ಸಾಮಾನ್ಯವಾಗಿ ಒಂದೇ ರೀತಿ ಇದೆ. ಅನಿವಾಸಿ ಭಾರತೀಯರು ಆಧಾರ್ಗೆ ಅರ್ಜಿ ಸಲ್ಲಿಸುವುದು ಹೇಗೆಂಬ ಹಂತ-ಹಂತದ ವಿವರ ಇಲ್ಲಿದೆ.
ಪಾನ್ ಕಾರ್ಡ್ನಿಂದ ತೊಡಗಿ ಎಲ್ಲ ದಾಖಲೆಗಳನ್ನೂ ಈಗ ಆಧಾರ್ ಕಾರ್ಡ್ನೊಂದಿಗೆ (Aadhaar) ಜೋಡಣೆ ಅಥವಾ ಸಂಯೋಜನೆ ಮಾಡಲಾಗುತ್ತಿದೆ. ಸರ್ಕಾರಿ ಪ್ರಾಯೋಜಿತ ಬಹುತೇಕ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿದೆ. ಅನಿವಾಸಿ ಭಾರತೀಯರಿಗೂ (NRI) ಕೆಲವೊಂದು ದಾಖಲೆಗಳು ಅಗತ್ಯವಾಗಿದ್ದು, ಆಧಾರ್ ಕಾರ್ಡ್ ಅನ್ನೂ ಹೊಂದಬಹುದೇ ಎಂಬ ಸಂದೇಹ ಮೂಡಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಯುಐಡಿಎಐ (UIDAI) ಅನಿವಾಸಿ ಭಾರತೀಯರೂ ಆಧಾರ್ ಕಾರ್ಡ್ ಹೊಂದಬಹುದು ಎಂದು ತಿಳಿಸಿದೆ. ಭಾರತದ ಅಧಿಕೃತ ಪಾಸ್ಪೋರ್ಟ್ ಹೊಂದಿರುವವರು ಆಧಾರ್ಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ಆಧಾರ್ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಾಮಾನ್ಯ ಭಾರತೀಯರಿಗೂ ಅನಿವಾಸಿ ಭಾರತೀಯರಿಗೂ ಸಾಮಾನ್ಯವಾಗಿ ಒಂದೇ ರೀತಿ ಇದೆ.
ಅನಿವಾಸಿ ಭಾರತೀಯರು ಆಧಾರ್ಗೆ ಅರ್ಜಿ ಸಲ್ಲಿಸುವುದು ಹೇಗೆ?
ಅನಿವಾಸಿ ಭಾರತೀಯರು ಆಧಾರ್ ಕಾರ್ಡ್ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಯುಐಡಿಎಐ ಹಂತ ಹಂತದ ಮಾಹಿತಿ ನೀಡಿದೆ.
ಹಂತ 1: ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ
ಹಂತ 2: ಅಧಿಕೃತ ಭಾರತೀಯ ಪಾಸ್ಪೋರ್ಟ್ ನಿಮ್ಮೊಂದಿಗಿರಲಿ.
ಹಂತ 3: ಎನ್ರೋಲ್ಮೆಂಟ್ ಅಥವಾ ದಾಖಲಾತಿ ಅರ್ಜಿ ಪಡೆದು ಎಲ್ಲ ವಿವರಗಳನ್ನು ಭರ್ತಿ ಮಾಡಿ. ನೀವು ಅರ್ಜಿಯಲ್ಲಿ ನಮೂದಿಸುವ ವಿಷಯಗಳು ಪಾಸ್ಪೋರ್ಟ್ನಲ್ಲಿರುವ ವಿವರಗಳೊಂದಿಗೆ ತಾಳೆಯಾಗಬೇಕು.
ಹಂತ 4: ಅರ್ಜಿದಾರನು ಕಡ್ಡಾಯವಾಗಿ ಇ-ಮೇಲ್ ಐಡಿಯನ್ನು ನಮೂದಿಸಬೇಕು.
ಹಂತ 5: ಅನಿವಾಸಿ ಭಾರತೀಯನೆಂದು ನಿಮ್ಮನ್ನು ದಾಖಲಿಸಿಕೊಳ್ಳಲು ಆಧಾರ್ ಸೇವಾ ಕೇಂದ್ರದ ಕಾರ್ಯನಿರ್ವಾಹಕರಿಗೆ ತಿಳಿಸಿ.
ಹಂತ 6: ಅನಿವಾಸಿ ಭಾರತೀಯರು ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಡಿಕ್ಲರೇಷನ್ಗೂ ಸಹಿ ಮಾಡಬೇಕಾಗುತ್ತದೆ. ಅನಿವಾಸಿ ಭಾರತೀಯರಿಗೆ ನಿಗದಿಪಡಿಸಿರುವ ಡಿಕ್ಲರೇಷನ್ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಜಾಗರೂಕತೆಯಿಂದ ಓದಿಯೇ ಭರ್ತಿ ಮಾಡಿ ಹಾಗೂ ಸಹಿ ಮಾಡಿ.
ಹಂತ 7: ನೀವು ಅನಿವಾಸಿ ಭಾರತೀಯ ಎಂಬುದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಲು ಕಾರ್ಯನಿರ್ವಾಹಕರಿಗೆ ಸಹಾಯ ಮಾಡಿ.
ಹಂತ 8: ನಿಮ್ಮ ಪಾಸ್ಪೋರ್ಟ್ ಅನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಗುರುತಿನ ಪ್ರಮಾಣವಾಗಿ ಸಲ್ಲಿಸಲಾಗುತ್ತದೆ.
ಹಂತ 9: ಬಯೋಮೆಟ್ರಿಕ್ ಪ್ರಕ್ರಿಯೆಗಾಗಿ ನಿಮ್ಮ ಬೆರಳುಗಳು ಮತ್ತು ಕಣ್ಣುಗಳ ಸ್ಕ್ಯಾನ್ ಮಾಡಲಾಗುತ್ತದೆ.
ಹಂತ 10: ಅರ್ಜಿಯಲ್ಲಿ ತುಂಬಿದ ವಿವರಗಳನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಬೇಕಾಗುತ್ತದೆ.
ಹಂತ 11: ಅರ್ಜಿ ತುಂಬುವಿಕೆ ಪ್ರಕ್ರಿಯೆಗಳೆಲ್ಲ ಮುಗಿದ ಮೇಲೆ, ಸ್ವೀಕೃತಿ ರಶೀದಿಯನ್ನು ಪಡೆದುಕೊಳ್ಳಿ. ಅದರಲ್ಲಿ 14 ಅಂಕೆಯ ದಾಖಲಾತಿ ಐಡಿ (enrollment ID), ದಿನಾಂಕ ಹಾಗೂ ಸಮಯದ ವಿವರ ಇರುತ್ತದೆ.
ಅರ್ಜಿಯ ಸ್ಟೇಟಸ್ ಪರಿಶೀಲಿಸುವುದು ಹೀಗೆ…
3-4 ದಿನಗಳ ಒಳಗಾಗಿ ನಿಮ್ಮ ಆಧಾರ್ ದಾಖಲೆ ಜನರೇಟ್ ಆಗುತ್ತದೆ. ಕೆಲವೊಮ್ಮೆ ದಾಖಲೆ ಜನರೇಟ್ ಆಗಲು ಹೆಚ್ಚು ದಿನಗಳು ಬೇಕಾಗಿಯೂ ಬರಹುದು. ಅರ್ಜಿದಾರರು ಆಧಾರ್ ವೆಬ್ಸೈಟ್ನ ‘ಚೆಕ್ ಆಧಾರ್ ಸ್ಟೇಟಸ್ (https://myaadhaar.uidai.gov.in/CheckAadhaarStatus)’ ವಿಭಾಗವನ್ನು ಕ್ಲಿಕ್ ಮಾಡಿ ಸ್ಥಿತಿಗತಿ ಪರಿಶೀಲಿಸಬಹುದು.
ಎನ್ರೋಲ್ಮೆಂಟ್ ಐಡಿಯನ್ನು ಕಳೆದುಕೊಂಡಿದ್ದಲ್ಲಿ ನೋಂದಾಯಿತ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬಳಸಿಕೊಂಡು ಸ್ಥಿಗತಿ ಪರಿಶೀಲಿಸಬಹುದು. ಈ ಮೂಲಕ ಎನ್ರೋಲ್ಮೆಂಟ್ ಐಡಿಯನ್ನು ಮರಳಿ ಪಡೆಯಲೂ ಅವಕಾಶವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ