
ನವದೆಹಲಿ, ಮೇ 20: ಅಮೆರಿಕವು ಇರಾನ್ ಮೇಲೆ ಯುದ್ಧ ಮಾಡುತ್ತಿರುವ ಪರಿಣಾಮ ಹಾರ್ಮುಜ್ ಜಲಸಂಧಿಗೆ (Strait of Hormuz) ತಡೆಯಾಗುತ್ತಿದ್ದು, ಜಗತ್ತಿನ ಶೇ. 20ಕ್ಕೂ ಅಧಿಕ ತೈಲ ಪೂರೈಕೆ ವ್ಯತ್ಯಯವಾಗುತ್ತಿದೆ. ಭಾರತ ಸೇರದಂತೆ ಹಲವು ಏಷ್ಯನ್ ದೇಶಗಳಿಗೆ ಪೆಟ್ರೋಲ್, ಗ್ಯಾಸ್ ಕೊರತೆಯ ಸಂಕಷ್ಟ ಎದುರಾಗಿದೆ. ಅದರ ಸೈಡ್ ಎಫೆಕ್ಟ್ಗಳಾಗಿ ಹಣದುಬ್ಬರ ಇತ್ಯಾದಿ ಆರ್ಥಿಕ ಸಮಸ್ಯೆಗಳು ತಲೆದೋರಿವೆ. ಇರಾನ್ ಅಮೆರಿಕ ಯುದ್ಧ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲದಿರುವುದು ಜಗತ್ತಿಗೆ ತಲೆನೋವು ತಂದಿದೆ. ಅರೇಬಿಯನ್ ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯನ್ನು ಸಂಪರ್ಕಿಸುವ ಈ ಕಿರಿದಾದ ಜಲಮಾರ್ಗ ಮುಂದೆ ಅಬಾಧಿತವಾಗಿರುತ್ತದೆ ಎನ್ನುವ ಖಾತ್ರಿ ಏನು? ಇಕೋಗ್ನಾಸಿಸ್ ಅಡ್ವೈಸರಿ ಸಿಇಒ ಆಂಡ್ರೂ ಫ್ರೆರಿಸ್ (Andrew Freris) ಪ್ರಕಾರ, ಮುಂದಿನ ದಿನಗಳಲ್ಲಿ ಹಾರ್ಮುಜ್ ಜಲಸಂಧಿಯ ಅವಶ್ಯಕತೆಯೇ ಇರದಂತೆ. ಅದು ಹೇಗೆ?
ಯುಎಇ, ಸೌದಿ, ಓಮನ್, ಕತಾರ್ ಇತ್ಯಾದಿ ಗಲ್ಫ್ ದೇಶಗಳಿಂದ ತೈಲಗಳು ಹೊರಗೆ ರಫ್ತಾಗುವ ಜಲಮಾರ್ಗದಲ್ಲೇ ಇದೆ ಹಾರ್ಮುಜ್ ಜಲಸಂಧಿ. ಕೆಲವೇ ಕಿಮೀಯಷ್ಟು ಈ ಮಾರ್ಗ ಕಿರಿದಾಗಿದೆ. ಹೀಗಾಗಿ, ಇರಾನ್ ಬಹಳ ಸುಲಭವಾಗಿ ಇದನ್ನು ನಿಯಂತ್ರಿಸುತ್ತದೆ. ಯುದ್ಧದ ಪರಿಣಾಮವಾಗಿ ಇರಾನ್ ಈ ಜಲಸಂಧಿಗೆ ತಡೆ ಹಾಕಿದೆ. ಜಗತ್ತಿನ ಶೇ. 20ರಷ್ಟು ತೈಲ ಪೂರೈಕೆ ನಿಂತು ಹೋಗುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಆಂಡ್ರ್ಯೂ ಫ್ರೆರಿಸ್ ಅವರು ಹಾರ್ಮುಜ್ ಬದಲು ಪರ್ಯಾಯ ಮಾರ್ಗ ರೂಪುಗೊಳ್ಳುವ ಸಾಧ್ಯತೆಯನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್
ಈಗಿನ ಬಿಕ್ಕಟ್ಟು ಪರ್ಯಾಯ ರಫ್ತು ಮಾರ್ಗದ ರಚನೆಗೆ ಅನುವು ಮಾಡಿಕೊಡಬಲ್ಲುದು. ಇನ್ನು 9 ತಿಂಗಳಿಂದ 1 ವರ್ಷದಲ್ಲಿ ಹಾರ್ಮುಜ್‌ಗೆ ಪರ್ಯಾಯ ವ್ಯವಸ್ಥೆ ಬರಬಹುದು. ಹಲವು ಹೂಡಿಕೆದಾರರು ಎಣಿಸುವುದಕ್ಕಿಂತ ವೇಗವಾಗಿ ಜಾಗತಿಕ ಇಂಧನ ವ್ಯವಸ್ಥೆ ಹೊಂದಾಣಿಕೆ ಮಾಡುತ್ತದೆ ಎಂದು ಆರ್ಥಿಕ ತಜ್ಞರೂ ಆಗಿರುವ ಆಂಡ್ರ್ಯೂ ಫ್ರೆರಿಸ್ ಅಭಿಪ್ರಾಯಪಟ್ಟಿದ್ದಾರೆ.
ಹಾರ್ಮುಜ್ ಜಲಸಂಧಿ ತಡೆಯಿಂದಾಗಿ ಜಾಗತಿಕ ಕಚ್ಚಾ ತೈಲವು ಬ್ಯಾರಲ್ಗೆ 110 ಡಾಲರ್ಗಿಂಲೂ ಹೆಚ್ಚಿನ ಬೆಲೆ ಪಡೆದಿದೆ. ಈ ಮಧ್ಯೆ ಅಮೆರಿಕ ಮತ್ತು ಇರಾನ್ ಯುದ್ಧ ನಿಲ್ಲಿಸಲು ನಡೆಯುತ್ತಿರುವ ಸಂಧಾನ ಮಾತುಕತೆಗಳು ಇನ್ನೂವರೆಗೆ ಫಲಪ್ರದವಾಗಿಲ್ಲ. ಯುದ್ಧ ವಿರಾಮ ಯಾವಾಗ ಬೇಕಾದರೂ ಮುರಿದುಬೀಳಬಹುದು.
ಇದನ್ನೂ ಓದಿ: ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ
ಈ ಎರಡೂ ದೇಶಗಳು ಪರಸ್ಪರ ಆರೋಪ ಪ್ರತ್ಯಾರೋಪ, ಎಚ್ಚರಿಕೆ ಮಾತುಗಳನ್ನು ಮುಂದುವರಿಸುತ್ತಲೇ ಇವೆ. ಇರಾನ್ ಅನ್ನು ಹೊಸಕಿ ಹಾಕುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಪದೇ ಪದೇ ಧಮಕಿ ಹಾಕುತ್ತಿದ್ದಾರೆ. ತನ್ನನ್ನು ಟಚ್ ಮಾಡಿದರೆ ಅಮೆರಿಕವು ಹೊಸ ಆಯಾಮದಲ್ಲಿ ದಾಳಿ ಎದುರಿಸಬೇಕಾಗುತ್ತದೆ. ಊಹಿಸಲೂ ಆಗದಂತೆ ಆಘಾತ ಕೊಡುತ್ತೇವೆ ಎಂದು ಇರಾನ್ ಎಚ್ಚರಿಕೆ ಕೊಡುತ್ತಿದೆ. ಈ ದೇಶಗಳ ಜಂಗೀಕುಸ್ತಿಯಲ್ಲಿ ಜಗತ್ತು ಬಡವಾಗುತ್ತಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಉದ್ಭವವಾಗುತ್ತಿರುವುದು ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ