Gold ATM: ಹೈದರಾಬಾದ್​ನ ಎಟಿಎಂನಲ್ಲಿ ಸಿಗುತ್ತೆ ಚಿನ್ನ! ಹೀಗೆ ವಿತ್​​ಡ್ರಾ ಮಾಡಬಹುದು ನೋಡಿ

| Updated By: ಗಣಪತಿ ಶರ್ಮ

Updated on: Dec 05, 2022 | 3:39 PM

ದೇಶದ ಮೊದಲ ರಿಯಲ್​​ಟೈಮ್ ಚಿನ್ನದ ಎಟಿಎಂ ಅನ್ನು ಹೈದರಾಬಾದ್​ನ ಬೇಗಂಪೇಟ್​ನಲ್ಲಿ ಸ್ಥಾಪಿಸಲಾಗಿದೆ. ಎಟಿಎಂನಿಂದ ಚಿನ್ನ ವಿತ್​ಡ್ರಾ ಮಾಡುವುದು ಹೇಗೆಂಬ ಮಾಹಿತಿ ಇಲ್ಲಿದೆ.

Gold ATM: ಹೈದರಾಬಾದ್​ನ ಎಟಿಎಂನಲ್ಲಿ ಸಿಗುತ್ತೆ ಚಿನ್ನ! ಹೀಗೆ ವಿತ್​​ಡ್ರಾ ಮಾಡಬಹುದು ನೋಡಿ
ಹೈದರಾಬಾದ್​ನ ಬೇಗಂಪೇಟ್​ನಲ್ಲಿ ಗೋಲ್ಡ್​ಸಿಕ್ಕಾ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿರುವ ಚಿನ್ನದ ಎಟಿಎಂ
Follow us on

ಹೈದರಾಬಾದ್: ಎಟಿಎಂ ಯಂತ್ರದಿಂದ (ATM) ಹಣ ವಿತ್​​ಡ್ರಾ ಮಾಡುವುದು ಸಾಮಾನ್ಯ. ಚಿನ್ನವನ್ನೂ (Gold) ವಿತ್​ಡ್ರಾ ಮಾಡಬಹುದೇ? ಹೈದರಾಬಾದ್​​ನಲ್ಲಿ (Hyderabad) ಇನ್ನು ಎಟಿಎಂನಿಂದ ಚಿನ್ನವನ್ನೂ ವಿತ್​ಡ್ರಾ ಮಾಡಬಹುದು! ದೇಶದ ಮೊದಲ ರಿಯಲ್​​ಟೈಮ್ ಚಿನ್ನದ ಎಟಿಎಂ (Real-Time Gold ATM) ಅನ್ನು ಹೈದರಾಬಾದ್​ನ ಬೇಗಂಪೇಟ್​ನಲ್ಲಿ (Begumpet) ಸ್ಥಾಪಿಸಲಾಗಿದೆ. ಹೈದರಾಬಾದ್​ನ ಗೋಲ್ಡ್​ಸಿಕ್ಕಾ ಪ್ರೈವೇಟ್ ಲಿಮಿಟೆಡ್ (Goldsikka Pvt Ltd) ಕಂಪನಿಯು ಚಿನ್ನದ ನಾಣ್ಯಗಳನ್ನು ನೀಡುವ ಎಟಿಎಂ ಅನ್ನು ಸ್ಥಾಪಿಸಿದೆ. ಇದು ದೇಶದಲ್ಲೇ ಮೊದಲ ಚಿನ್ನದ ಎಟಿಎಂ. ಜಗತ್ತಿನಲ್ಲೇ ಮೊದಲ ರಿಯಲ್​​ಟೈಮ್ ಚಿನ್ನದ ಎಟಿಎಂ ಎಂದು ಕಂಪನಿ ಹೇಳಿಕೊಂಡಿದೆ.

ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನದ ನಾಣ್ಯ ವಿತ್​ಡ್ರಾ ಮಾಡಿ

ಎಟಿಎಂನಿಂದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನವನ್ನು ವಿತ್​ಡ್ರಾ ಮಾಡಬಹುದಾಗಿದೆ. 0.5 ಗ್ರಾಂ, 1 ಗ್ರಾಂ, 2 ಗ್ರಾಂ, 5 ಗ್ರಾಂ, 10 ಗ್ರಾಂ, 20 ಗ್ರಾಂ, 50 ಗ್ರಾಂ ಹಾಗೂ 100 ಗ್ರಾಂಗಳ ಚಿನ್ನದ ನಾಣ್ಯಗಳನ್ನು ಎಟಿಎಂನಿಂದ ವಿತ್​ಡ್ರಾ ಮಾಡಬಹುದು ಎಂದು ಗೋಲ್ಡ್​ಸಿಕ್ಕಾ ಪ್ರೈವೇಟ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್​ವೈ ತರುಜ್ ತಿಳಿಸಿದ್ದಾರೆ.

ಇದನ್ನೂ ಓದಿ: Gold Loan Interest: ಕಡಿಮೆ ಬಡ್ಡಿಗೆ ಚಿನ್ನದ ಅಡಮಾನ ಸಾಲ ನೀಡುತ್ತಿವೆ ಈ ಬ್ಯಾಂಕ್​ಗಳು

999 ಪರಿಶುದ್ಧತೆಯ ಚಿನ್ನದ ನಾಣ್ಯಗಳು ಎಟಿಎಂನಲ್ಲಿ ದೊರೆಯಲಿದೆ. ಯಂತ್ರದ ಸ್ಕ್ರೀನ್​ನಲ್ಲಿ ಚಿನ್ನದ ನಾಣ್ಯದ ವಿವರಗಳು ಕಾಣಿಸಲಿವೆ. ಕಾರ್ಡ್ ಮೂಲಕ ಪಾವತಿ ಮಾಡಿ ಚಿನ್ನದ ನಾಣ್ಯಗಳನ್ನು ವಿತ್​ಡ್ರಾ ಮಾಡಬಹುದು. ಟ್ಯಾಂಪರ್​ ಪ್ರೂಫ್ ಪ್ಯಾಕೆಟ್​ಗಳಲ್ಲಿ ನಾಣ್ಯಗಳು ಯಂತ್ರದಿಂದ ಹೊರಬರಲಿವೆ. ಈ ಚಿನ್ನ ಪ್ರಮಾಣೀಕರಿಸಿದ್ದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಲಿವೆ ಚಿನ್ನ ಕೊಡುವ ಇನ್ನೂ 3 ಎಟಿಎಂ

ಉದ್ಯಮದ ಉದ್ದೇಶಕ್ಕಾಗಿ ವಾರಂಗಲ್, ಕರೀಮ್​ನಗರ ಹಾಗೂ ಹೈದರಾಬಾದ್​ ವಿಮಾನ ನಿಲ್ದಾಣದ ಬಳಿ ಇನ್ನೂ 3 ಚಿನ್ನದ ಎಟಿಎಂಗಳನ್ನು ಶೀಘ್ರದಲ್ಲೇ ಸ್ಥಾಪಿಸಬೇಕೆಂದು ಉದ್ದೇಶಿಸಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ 3,000 ಯಂತ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.

ದಿನದ 24 ಗಂಟೆಯೂ ಲಭ್ಯ

ದಿನದ 24 ಗಂಟೆಯೂ ಚಿನ್ನದ ಎಟಿಎಂ ಕಾರ್ಯಾಚರಿಸಲಿದೆ. ಸಿಕಂದರಾಬಾದ್​ನ ಗುಲ್ಜಾರ್ ಹೌಸ್ ಹಾಗೂ ಹೈದರಾಬಾದ್​ನ ಅಬ್ದಿಸ್​ನಲ್ಲಿಯೂ ಚಿನ್ನ ಎಟಿಎಂಗಳನ್ನು ಸ್ಥಾಪಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಎಟಿಎಂನಿಂದ ಹಣವನ್ನು ವಿತ್​ಡ್ರಾ ಮಾಡಿದಷ್ಟು ಸುಲಭವಾಗಿ ಇನ್ನು ಚಿನ್ನವನ್ನೂ ಪಡೆಯಬಹುದು. ಈ ಮೂಲಕ ಈ ಎಟಿಎಂ ಖರೀದಿದಾರರನ್ನು ಚಿನ್ನದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆಕರ್ಷಿಸಲಿದೆ. ಗ್ರಾಮೀಣ ಪ್ರದೇಶಗಳಿಗೂ ಚಿನ್ನದ ಎಟಿಎಂ ವಿಸ್ತರಿಸಲಿದ್ದೇವೆ ಎಂದು ಗೋಲ್ಡ್​ಸಿಕ್ಕಾ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Mon, 5 December 22