ಜಾಗತಿಕ ಆಘಾತಗಳಿಗೆ ಭಾರತದ 3 ಆರ್ಥಿಕ ರಕ್ಷಾ ಕವಚಗಳು: ಫಿಚ್ ಬಿಎಂಐ ವಿಶ್ಲೇಷಣೆ

India's Economy Resilient Amidst Geopolitical Tensions: ಫಿಚ್ ಬಿಎಂಐ ವರದಿಯಂತೆ, ಇರಾನ್-ಅಮೆರಿಕ ಉದ್ವಿಗ್ನತೆ ನಡುವೆಯೂ ಭಾರತದ ಆರ್ಥಿಕತೆ ಸ್ಥಿರವಾಗಿದೆ. ತೈಲ ಸಂಸ್ಕರಣಾ ಸಾಮರ್ಥ್ಯ, ಬಲಿಷ್ಠ ವಿದೇಶಿ ವಿನಿಮಯ ಮೀಸಲು ಮತ್ತು ಪ್ರಬಲ ದೇಶೀಯ ಬೇಡಿಕೆ ಭಾರತದ ಪ್ರಮುಖ ರಕ್ಷಣಾ ಕವಚಗಳಾಗಿವೆ. ಜಾಗತಿಕ ತಲ್ಲಣಗಳನ್ನು ಎದುರಿಸಲು ಈ ಮೂರು ಅಂಶಗಳು ಭಾರತಕ್ಕೆ ನೆರವಾಗುತ್ತವೆ ಎಂದು ವರದಿ ಹೇಳುತ್ತದೆ. ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳನ್ನೂ ನಿರೀಕ್ಷಿಸಲಾಗಿದೆ.

ಜಾಗತಿಕ ಆಘಾತಗಳಿಗೆ ಭಾರತದ 3 ಆರ್ಥಿಕ ರಕ್ಷಾ ಕವಚಗಳು: ಫಿಚ್ ಬಿಎಂಐ ವಿಶ್ಲೇಷಣೆ
ಭಾರತ ಆರ್ಥಿಕತೆ
Image Credit source: AI generated

Updated on: Apr 22, 2026 | 5:07 PM

ನವದೆಹಲಿ, ಏಪ್ರಿಲ್ 22: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ (Geopolitical Tensions) ಜಾಗತಿಕ ಆರ್ಥಿಕತೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಆದರೆ, ಫಿಚ್ (Fitch) ಸಮೂಹದ ವಿಶ್ಲೇಷಣಾ ಘಟಕವಾದ ಬಿಎಂಐ (BMI) ವರದಿಯ ಪ್ರಕಾರ, ಭಾರತವು ಇಂತಹ ಆರ್ಥಿಕ ಬಿರುಗಾಳಿಯನ್ನು ಎದುರಿಸಲು ಮೂರು ಪ್ರಮುಖ ‘ಬಫರ್’ಗಳನ್ನು (ರಕ್ಷಣಾತ್ಮಕ ಅಂಶಗಳನ್ನು) ಹೊಂದಿದೆ.

1. ಅನಿಲ ಅವಲಂಬನೆಗಿಂತ ತೈಲದ ಮೇಲಿನ ನಿಯಂತ್ರಣ

ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಒಂದು ದೊಡ್ಡ ಅನುಕೂಲವಿದೆ. ಪ್ರಸ್ತುತ ಸಂಘರ್ಷದಿಂದ ನೈಸರ್ಗಿಕ ಅನಿಲ (Natural Gas) ಪೂರೈಕೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಆದರೆ ಭಾರತವು ಕಚ್ಚಾ ತೈಲ ಮತ್ತು ಡೀಸೆಲ್ ರಫ್ತಿನಲ್ಲಿ ಬಲಿಷ್ಠ ಸ್ಥಾನದಲ್ಲಿದೆ. ಭಾರತವು ವಿಶ್ವದ ದೊಡ್ಡ ಸಂಸ್ಕರಣಾಗಾರಗಳನ್ನು (Refineries) ಹೊಂದಿರುವುದರಿಂದ, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಇದು ದೇಶದ ಸಾರಿಗೆ ಮತ್ತು ಇಂಧನ ವ್ಯವಸ್ಥೆಯನ್ನು ತಕ್ಷಣದ ಆಘಾತದಿಂದ ರಕ್ಷಿಸುತ್ತದೆ.

2. ವಿದೇಶಿ ವಿನಿಮಯ ಮೀಸಲು (Forex Reserves)

ಭಾರತದ ಬಳಿ ಇರುವ ಬಲಿಷ್ಠ ವಿದೇಶಿ ವಿನಿಮಯ ಮೀಸಲು ನಿಧಿಯು ರೂಪಾಯಿ ಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿಯದಂತೆ ತಡೆಯಲು ಸಹಾಯ ಮಾಡುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಸ್ಥಿರವಾಗಿರಲು ಈ ನಿಧಿ ಒಂದು ದೊಡ್ಡ ಶ್ರೀರಕ್ಷೆಯಾಗಿದೆ.

ಇದನ್ನೂ ಓದಿ: ಈ ವರ್ಷದ ಪ್ರಮುಖ ಸೆಕ್ಟರ್ ಇದು; ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್​ಗಳಿವು

3. ಮಾರುಕಟ್ಟೆ ವೈವಿಧ್ಯತೆ ಮತ್ತು ದೇಶೀಯ ಬೇಡಿಕೆ

ಭಾರತದ ಆರ್ಥಿಕತೆಯು ಕೇವಲ ರಫ್ತಿನ ಮೇಲೆ ಅವಲಂಬಿತವಾಗಿಲ್ಲ. ನಮ್ಮ ದೇಶದ ಒಳಗಿನ ಬಲವಾದ ಬೇಡಿಕೆ (Domestic Demand) ಜಾಗತಿಕ ಕುಸಿತದ ಸಮಯದಲ್ಲಿ ಆರ್ಥಿಕತೆಗೆ ಆಧಾರ ನೀಡುತ್ತದೆ. ಇರಾನ್ ಅಥವಾ ಮಧ್ಯಪ್ರಾಚ್ಯದಲ್ಲಿ ತೊಂದರೆಯಾದಾಗ, ಭಾರತವು ಬೇರೆ ದೇಶಗಳಿಂದ (ಉದಾಹರಣೆಗೆ ರಷ್ಯಾ ಅಥವಾ ಆಫ್ರಿಕಾ ರಾಷ್ಟ್ರಗಳು) ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ತನ್ನ ಪೂರೈಕೆ ವ್ಯವಸ್ಥೆಯನ್ನು ವೈವಿಧ್ಯಮಯಗೊಳಿಸಿದೆ.

ಸವಾಲುಗಳು ಏನು?

ವರದಿಯ ಪ್ರಕಾರ ಎಲ್ಲವೂ ಸುಗಮವಾಗಿದೆ ಎಂದರ್ಥವಲ್ಲ. ಕೆಲವು ಸವಾಲುಗಳೂ ಇವೆ. ಅಡುಗೆ ಅನಿಲದ ಆಮದು ವೆಚ್ಚ ಹೆಚ್ಚಾಗಬಹುದು. ಸಮುದ್ರ ಮಾರ್ಗಗಳಲ್ಲಿ (Strait of Hormuz) ಸಂಘರ್ಷ ಇರುವುದರಿಂದ ವಿಮೆ ಮತ್ತು ಹಡಗು ಬಾಡಿಗೆ ದರಗಳು ಏರಿಕೆಯಾಗುತ್ತಿವೆ. ಕೃಷಿಗೆ ಬೇಕಾದ ರಾಸಾಯನಿಕ ಗೊಬ್ಬರಗಳ ಆಮದಿನ ಮೇಲೆ ಪರಿಣಾಮ ಬೀರಬಹುದು.

ಜಾಗತಿಕವಾಗಿ ತೈಲ ಬೆಲೆ ಏರಿದರೂ, ಭಾರತದ ಬಳಿ ಇರುವ ಈ ಮೂರು ‘ರಕ್ಷಣಾ ಕವಚಗಳು’ ನಮ್ಮ ಆರ್ಥಿಕತೆಯು ಅತಿ ದೊಡ್ಡ ಕುಸಿತ ಕಾಣದಂತೆ ತಡೆಯಬಲ್ಲವು ಎಂದು ಫಿಚ್ ಬಿಎಂಐ ವಿಶ್ಲೇಷಿಸಿದೆ.

ಹಾಗೆಯೇ, ಆರ್ಥಿಕತೆಯ ಪ್ರಮುಖ ವಲಯಗಳಿಗೆ ಇಂಧನ ಮತ್ತಿತರ ಅಗತ್ಯ ವಸ್ತುಗಲ ಪೂರೈಕೆ ನಿಲ್ಲದಂತೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಆದ್ಯತೆ ಕೊಡಬಹುದು ಎಂದು ಫಿಚ್ ನಿರೀಕ್ಷಿಸಿದೆ. ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್​ಗೆ ಬಹಳ ಬೇಕಾಗಿರುವ ಹೀಲಿಯಂ, ಸಲ್ಫರ್​ನಂತಹ ವಿರಳ ಕಚ್ಚಾ ವಸ್ತುಗಳ ರಫ್ತಿಗೆ ಸರ್ಕಾರ ನಿರ್ಬಂಧ ಹಾಕಬಹುದು.

ಇದನ್ನೂ ಓದಿ: ಆರ್​ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್​ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್​ಗೆ ಒಟಿಪಿ ಬೇಕಿಲ್ಲ

ಸರ್ಕಾರದಿಂದ ಫಿಚ್ ನಿರೀಕ್ಷಿಸಿರುವ ಎರಡನೇ ಹಂತದ ಕ್ರಮಗಳೆಂದರೆ, ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನಿಂದ ಬಾಧಿತವಾಗಿರುವ ಬ್ಯುಸಿನೆಸ್​ಗಳಿಗೆ ವೆಚ್ಚ ಏರಿಕೆಯನ್ನು ತಡೆಯುವುದು ಇತ್ಯಾದಿ ಒಳಗೊಂಡಿವೆ. ಎಕನಾಮಿಕ್ ಸ್ಟೆಬಿಲೈಸೇಶನ್ ಫಂಡ್ ಇತ್ಯಾದಿ ಯೋಜನೆ ಇದರಲ್ಲಿದೆ.

ಉದ್ದಿಮೆಗಳಿಗೆ ತೆರಿಗೆ ರಿಯಾಯಿತಿ, ಹಣಕಾಸು ನೆರವಿನ ಪ್ಯಾಕೇಜ್, ಸಾಲ ಖಾತ್ರಿ ಸ್ಕೀಮ್ ಇತ್ಯಾದಿ ಕ್ರಮಗಳನ್ನೂ ಸರ್ಕಾರ ತೆಗೆದುಕೊಳ್ಳುತ್ತಿದೆ. ಫಿಚ್​ನ ಬಿಎಂಐ ವರದಿಯಲ್ಲಿ ಈ ಎಲ್ಲವನ್ನೂ ಉಲ್ಲೇಖಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us