Positive story: ಹೆಸರಾಂತ ಕಂಪೆನಿ ಫೋರ್ಡ್​ಗೆ ರತನ್​ ಟಾಟಾ ಪ್ರತೀಕಾರ ಹೇಳಿದ್ದು ಹೇಗೆ ಗೊತ್ತಾ?

| Updated By: Srinivas Mata

Updated on: Jun 02, 2022 | 5:15 PM

ತಮಗಾದ ಅವಮಾನಕ್ಕೆ ಉದ್ಯಮಿ ರತನ್ ಟಾಟಾ ಅವರು ಫೋರ್ಡ್ ವಿರುದ್ಧ ಹೇಗೆ ಪ್ರತೀಕಾರ ಹೇಳಿದರು ಎಂಬ ಬಗ್ಗೆ ಆಸಕ್ತಿಕರವಾದ ಸಂಗತಿ ಇಲ್ಲಿದೆ.

Positive story: ಹೆಸರಾಂತ ಕಂಪೆನಿ ಫೋರ್ಡ್​ಗೆ ರತನ್​ ಟಾಟಾ ಪ್ರತೀಕಾರ ಹೇಳಿದ್ದು ಹೇಗೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಒಬ್ಬೊಬ್ಬರ ಸಿಟ್ಟು ಒಂದೊಂದು ಬಗೆಯಲ್ಲಿ ಇರುತ್ತದೆ. ಅದೇ ರೀತಿ ಒಬ್ಬೊಬ್ಬರ ಪ್ರತೀಕಾರ ಒಂದೊಂದು ರೀತಿಯಲ್ಲಿ ಇರುತ್ತದೆ. ಜಗತ್ತಿನ ಅತಿ ದೊಡ್ಡ ಬ್ರ್ಯಾಂಡ್​ಗಳಲ್ಲಿ ಒಂದಾದ “ಫೋರ್ಡ್” ವಿರುದ್ಧದ ಟಾಟಾ “ಪ್ರತೀಕಾರ” ಹೇಗಿತ್ತು ಅನ್ನೋದನ್ನು ವೇದಾಂತ ಬಿರ್ಲಾ ಜೂನ್ 2ರ ಗುರುವಾರದಂದು ನೆನಪಿಸಿಕೊಂಡಿದ್ದಾರೆ. “ಇದು ಟಾಟಾ ಪ್ರತೀಕಾರದ ಕಥೆ, ಅದರಲ್ಲೂ ರತನ್​ ಟಾಟಾ (Ratan Tata) ಜೀ ಅವರು ಫೋರ್ಡ್​ ಮೇಲೆ ನಿಜವಾಗಿಯೂ ಭಾರೀ ಯಶಸ್ಸು ಸಾಧಿಸಿದ ಕಥೆಯೂ ಹೌದು,” ಎಂದು ಬಿರ್ಲಾ ಪ್ರಿಸಿಷನ್ ಟೆಕ್ನಾಲಜೀಸ್​ ಅಧ್ಯಕ್ಷ ವೇದಾಂತ ಬಿರ್ಲಾ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಇದೇ ದಿನ (ಜೂನ್ 2) 2008ರಲ್ಲಿ ಟಾಟಾ ಮೋಟಾರ್ಸ್​ನಿಂದ ಎರಡು ವಿಲಾಸಿ ಕಾರು ಬ್ರ್ಯಾಂಡ್​ಗಳಾದ ಜಾಗ್ವಾರ್ ಮತ್ತು ಲ್ಯಾಂಡ್​ರೋವರ್ ಅನ್ನು ಫೋರ್ಡ್​ನಿಂದ ಸ್ವಾಧೀನ ಮಾಡಿಕೊಳ್ಳಲಾಯಿತು. ಅದು ಕೇವಲ ಭಾರತೀಯ ವಾಹನ ತಯಾರಕ ಸಂಸ್ಥೆಯೊಂದರ ವೃತ್ತಿ ಯಶಸ್ಸಷ್ಟೇ ಆಗಿರಲಿಲ್ಲ. ರತನ್ ಟಾಟಾ ಅವರ ವೈಯಕ್ತಿಕ ಮಹಾ ಗೆಲುವು ಸಹ ಆಗಿತ್ತು ಎಂದು ನೆನಪಿಸಿಕೊಂಡಿದ್ದಾರೆ ವೇದಾಂತ ಬಿರ್ಲಾ.

1998ನೇ ಇಸವಿಯಲ್ಲಿ ಟಾಟಾ ಮೋಟಾರ್ಸ್​ನಿಂದ ಟಾಟಾ ಇಂಡಿಕಾ ಬಿಡುಗಡೆ ಮಾಡಲಾಯಿತು. ಅದು ಭಾರತದ ಮೊದಲ ದೇಶೀ ಕಾರು ಆಗಿತ್ತು. ಆದರೆ ರತನ್ ಟಾಟಾ ಅವರ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಆಗಲಿಲ್ಲ. ಕಡಿಮೆ ಮಾರಾಟದ ಕಾರಣಕ್ಕೆ ಟಾಟಾ ಮೋಟಾರ್ಸ್​ನಿಂದ ಆ ಕಾರು ವ್ಯವಹಾರವನ್ನು ಒಂದು ವರ್ಷದೊಳಗೆ ಮಾರಾಟ ಮಾಡಲು ನಿರ್ಧರಿಸಲಾಯಿತು. ಅಮೆರಿಕದ ಫೋರ್ಡ್​ ಜತೆಗೆ ವ್ಯವಹಾರವೊಂದನ್ನು ಮಾಡಿಕೊಳ್ಳಲು ಟಾಟಾದಿಂದ 1999ರಲ್ಲಿ ನಿರ್ಧರಿಸಲಾಯಿತು. ಸರಿ, ರತನ್ ಟಾಟಾ ಮತ್ತು ಅಚರ ತಂಡ ಬಿಲ್​ ಫೋರ್ಡ್​ರನ್ನು ಭೇಟಿ ಆಗಲು ಅಮೆರಿಕಾಗೆ ತೆರಳಿತು. ಆಗ ಅವರು ಫೋರ್ಡ್​ನ ಅಧ್ಯಕ್ಷರಾಗಿದ್ದರು. ಈ ಭೇಟಿ ವೇಳೆ ಟಾಟಾ ಅವರನ್ನು ಫೊರ್ಡ್ ಅವಮಾನಿಸಿದ್ದರಂತೆ.

ಅಮೆರಿಕದ ಉದ್ಯಮಿ ಬಿಲ್​ ಫೋರ್ಡ್, ವಾಹನ ಉತ್ಪಾದನೆ ಉದ್ಯಮಕ್ಕೆ ನೀವು ಇಳಿದಿದ್ದೇ ತಪ್ಪು ಎಂದಿದ್ದರಂತೆ. ರತನ್ ಟಾಟಾ ಅವರ ತಂಡದಲ್ಲಿ ಇದ್ದ ಪ್ರವೀಣ್ ಕಡ್ಲೆ 2015ರ ಕಾರ್ಯಕ್ರಮವೊಂದರಲ್ಲಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದರು: ನಿಮಗೆ ಏನೂ ಗೊತ್ತಿಲ್ಲ. ನೀವೇಕೆ ಪ್ರಯಾಣಿಕರ ಕಾರಿನ ವಿಭಾಗ ಯಾಕೆ ಶುರು ಮಾಡಿದಿರಿ ಎಂದು ಕೇಳಿದರು ಎಂದು ಅವರು ಹೇಳಿದ್ದರು. ಕಾರು ವಿಭಾಗವನ್ನು ಖರೀದಿಸುವ ಮೂಲಕ ಟಾಟಾಗೆ ಉಪಕಾರ ಮಾಡುತ್ತಿರುವುದಾಗಿ ಹೇಳಿದ್ದರಂತೆ.

ಆದರೆ, ಆ ವ್ಯವಹಾರ ಕುದುರಲಿಲ್ಲ. ಅಂದಿನ ಘಟನೆಯು ತಮ್ಮ ಗುರಿಯ ಕಡೆಗೆ ಇನ್ನಷ್ಟು ಗಮನ ಹರಿಸುವಂತೆ ರತನ್ ಟಾಟಾ ಅವರಿಗೆ ಮಾಡಿತು. ಉತ್ಪಾದನಾ ಘಟಕವನ್ನು ಮಾರಾಟ ಮಾಡಬಾರದು ಎಂದು ನಿರ್ಧರಿಸಿದರು. ಆ ನಂತರ ಏನಾಯಿತು ಅಂದರೆ, ಅತ್ಯುತ್ತಮ ವೈಫಲ್ಯವು ಉದ್ಯಮ ಜಗತ್ತಿನ ಯಶಸ್ವಿ ಕ್ಷಣಗಳಾದವು ಎಂದು ಅವರು ಸೇರಿಸಿದ್ದಾರೆ. 9 ವರ್ಷದ ನಂತರ ಪರಿಸ್ಥಿತಿ- ಸನ್ನಿವೇಶಗಳು ಬದಲಾದವು. 2008ರ ಮಹಾ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಫೋರ್ಡ್ ದಿವಾಳಿ ಅಂಚನ್ನು ತಲುಪಿತು. ಆಗ ಟಾಟಾ ಮೋಟಾರ್ಸ್​ನಿಂದ ಜಾಗ್ವಾರ್ ಮತ್ತು ಲ್ಯಾಂಡ್​ ರೋವರ್ ಪೋರ್ಟ್​ಫೋಲಿಯೋಗಳ ಖರೀದಿಯ ಆಫರ್ ಮಾಡಿದರು.

2008ರ ಜೂನ್​ನಲ್ಲಿ ರತನ್​ ಟಾಟಾ ಅವರು ಜಾಗ್ವಾರ್ ಮತ್ತು ಲ್ಯಾಂಡ್​ ರೋವರ್ ಅನ್ನು ಪೂರ್ತಿ ನಗದು ಮೊತ್ತ 230 ಕೋಟಿ ಅಮೆರಿಕ ಡಾಲರ್ ಮೊತ್ತಕ್ಕೆ ವ್ಯವಹಾರ ಅಂತಿಮವಾಯಿತು. ಆಗ ಫೋರ್ಡ್​ ಅಧ್ಯಕ್ಷ ಬಿಲ್ ಫೋರ್ಡ್ ಅವರು ರತನ್ ಟಾಟಾ ಅವರಿಗೆ ಜೆಎಲ್​ಆರ್ ಖರೀದಿಸುವ ಮೂಲಕ ಮಹದುಪಕಾರ ಮಾಡಿದ್ದೀರಿ ಎಂದರು ಎಂಬುದಾಗಿ ಕಡ್ಲೇ ನೆನಪಿಸಿಕೊಂಡಿದ್ದರು ಎಂದು ಫಸ್ಟ್​ಫೋಸ್ಟ್ ವರದಿ ಮಾಡಿದೆ.

ಜಾಗ್ವಾರ್ ಲ್ಯಾಂಡ್​ ರೋವರ್ ಅನ್ನು ಟಾಟಾ ಅತ್ಯಂತ ಲಾಭದಾಯಕ ಕಂಪೆನಿಯಾಗಿ ಮಾಡಿದರು. ಟಾಟಾದ ಹಣಕಾಸಿನಲ್ಲಿ ಇವತ್ತಿಗೆ ಜೆಎಲ್​ಆರ್ ಬೆನ್ನೆಲುಬಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಸ್ಸಾಂನಲ್ಲಿ ಜನರ ಮನಗೆದ್ದ ರತನ್ ಟಾಟಾ ಭಾಷಣ; ಮೋದಿ ಜತೆ ವೇದಿಕೆ ಹಂಚಿಕೊಂಡ ಹಿರಿಯ ಉದ್ಯಮಿ ಹೇಳಿದ್ದೇನು?

Published On - 5:13 pm, Thu, 2 June 22