ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಎಂಬುದು ಹೆಸರಾಂತ ಹೂಡಿಕೆ ವಿಧಾನ. ಭಾರತೀಯರು ತಮ್ಮ ಉಳಿತಾಯವನ್ನು ಇದರ ಮೂಲಕ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ. ಯಾರು ತಮ್ಮ ಹೂಡಿಕೆಗೆ ಖಾತ್ರಿ ಹಾಗೂ ಸ್ಥಿರವಾದ ರಿಟರ್ನ್ಸ್ ಬಯಸುತ್ತಾರೋ ಅಂಥವರಿಗೆ ಪಿಪಿಎಫ್ನಲ್ಲಿ ಹಣ ಹೂಡುವುದು ಉತ್ತಮ ಆಯ್ಕೆ ಎನಿಸುತ್ತದೆ. ಶಿಸ್ತಾಗಿ ಪಿಪಿಎಫ್ನಲ್ಲಿ ಹಣ ಹೂಡುತ್ತಾ ಸಾಗಿದಲ್ಲಿ ಮೆಚ್ಯೂರಿಟಿ ಅವಧಿಯಲ್ಲಿ ತುಂಬ ಉತ್ತಮ ಮೊತ್ತವನ್ನು ಪಡೆಯಬಹುದು. ಸರ್ಕಾರದಿಂದ ಮೂರು ಸಂದರ್ಭದಲ್ಲೂ ತೆರಿಗೆ ವಿನಾಯಿತಿ ದೊರೆಯುತ್ತದೆ. ಹೂಡಿಕೆ ವೇಳೆ, ಸಂಚಯ ಹಾಗೂ ವಿಥ್ಡ್ರಾ ಮೇಲೆ ಹೀಗೆ ಮೂರೂ ಸಂದರ್ಭದಲ್ಲಿ ನಿಯಮಾವಳಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಒಬ್ಬ ಖಾತೆದಾರರಿಗೆ ಒಂದು ಹಣಕಾಸು ವರ್ಷದಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡುವುದಕ್ಕೆ ಅವಕಾಶ ಇದೆ. ಮಾಸಿಕವಾಗಿ ಅಥವಾ ವಾರ್ಷಿಕವಾಗಿ ಇದರಲ್ಲಿ ಠೇವಣಿ ಮಾಡಬಹುದು. ಆದರೆ ನಿರ್ದಿಷ್ಟ ಮೊತ್ತವನ್ನು ಒಂದು ವರ್ಷದಲ್ಲಿ ಮೀರುವುದಕ್ಕೆ ಸಾಧ್ಯವಿಲ್ಲ.
ಪಿಪಿಎಫ್ ಖಾತೆಯಿಂದ ಗರಿಷ್ಠ ಪ್ರಯೋಜನ ಪಡೆಯುವುದು ಹೇಗೆ?
ಪಿಪಿಎಫ್ ಖಾತೆಯಿಂದ ಗರಿಷ್ಠ ಪ್ರಯೋಜನ ಪಡೆಯಬೇಕು ಎಂದಾದಲ್ಲಿ ಯಾವುದೇ ತಿಂಗಳಿಗೆ 1 ಮತ್ತು 4ನೇ ತಾರೀಕಿನ ಮಧ್ಯೆ ಖಾತೆ ತೆರೆಯಬೇಕು, ಏಪ್ರಿಲ್ಗೆ ಆದ್ಯತೆ ಮತ್ತು ಠೇವಣಿಗಳನ್ನು ಆ ದಿನಾಂಕದ ಮಧ್ಯೆ ಮಾಡಬೇಕು. ಆದರೆ ಟ್ರೆಂಡ್ನ ಪ್ರಕಾರ ನೋಡುವುದಾದರೆ, ವೇತನದಾರರು ಹಣಕಾಸು ವರ್ಷದ ಕೊನೆಗೆ ತೆರಿಗೆ ಉಳಿತಾಯ ಮಾಡುವ ಸಲುವಾಗಿ ಪಿಪಿಎಫ್ ಖಾತೆಯನ್ನು ತೆರೆಯಲಾಗುತ್ತದೆ. ಗರಿಷ್ಠ ಪ್ರಯೋಜನ ಪಡೆಯಬೇಕು ಅಂದರೆ ಏಪ್ರಿಲ್ 1 ಮತ್ತು ಏಪ್ರಿಲ್ 4ರ ಮಧ್ಯೆ ಪಿಪಿಎಫ್ ಖಾತೆಯನ್ನು ತೆರೆಯಬೇಕು. ಈ ಮೂಲಕ ಹಣಕಾಸು ವರ್ಷದಲ್ಲಿ ಗರಿಷ್ಠ ಬಡ್ಡಿಯನ್ನು ಖಾತ್ರಿಪಡಿಸುತ್ತದೆ. ಒಂದು ವೇಳೆ ಏಪ್ರಿಲ್ 4ರ ನಂತರ ಖಾತೆಯನ್ನು ತೆರೆದರೆ ಬಡ್ಡಿಯನ್ನು ಮುಂದಿನ ತಿಂಗಳು, ಮೇನಲ್ಲಿ ಲೆಕ್ಕ ಹಾಕಲಾಗುತ್ತದೆ.
ಕಾರಣ ಬಹಳ ಸರಳ, ಪಿಪಿಎಫ್ ನಿಯಮಾವಳಿ ಪ್ರಕಾರ, ಆಯಾ ಕ್ಯಾಲೆಂಡರ್ ತಿಂಗಳ 5ನೇ ದಿನದ ಕೊನೆ ಹೊತ್ತಿಗೆ ಅಥವಾ ತಿಂಗಳ ಕೊನೆ ಹೊತ್ತಿಗೆ ಇರುವ ಕನಿಷ್ಠ ಬಾಕಿಯ ಮೇಲೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಈ ಬಡ್ಡಿಯನ್ನು ಪ್ರತ ಹಣಕಾಸು ವರ್ಷದ ಕೊನೆಗೆ ಪಿಪಿಎಫ್ ಖಾತೆಗೆ ಜಮೆ ಮಾಡಲಾಗುವುದು ಹಾಗೂ ಅದಕ್ಕೆ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಯಾವುದೇ ತೆರಿಗೆ ಇರುವುದಿಲ್ಲ.
ಪಿಪಿಎಫ್ ಬಡ್ಡಿ ಲೆಕ್ಕಾಚಾರ
ಸದ್ಯಕ್ಕೆ ಪಿಪಿಎಫ್ ಬಡ್ಡಿ ದರವು ಪಿಎಫ್ ನಂತರದಲ್ಲಿ ಸರ್ಕಾರದಿಂದ ನೀಡುವ ಹೆಚ್ಚಿನ ದರಗಳಲ್ಲಿ ಒಂದಾಗಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ವಾರ್ಷಿಕವಾಗಿ ಶೇ 7.1ರ ಬಡ್ಡಿ ದರ ನೀಡುತ್ತದೆ. ಅದಕ್ಕೆ ಬಡ್ಡಿ ವಿನಾಯಿತಿ ಇದೆ. ಪಿಪಿಎಫ್ನಲ್ಲಿ ವಾರ್ಷಿಕವಾಗಿ ಕನಿಷ್ಠ 500 ರೂಪಾಯಿ ಕೂಡ ಹೂಡಿಕೆ ಮಾಡಬಹುದು. ಇನ್ನು ಗರಿಷ್ಠ ಮೊತ್ತ 1,50,000 ರೂಪಾಯಿ. ಬಡ್ಡಿಯು ವಾರ್ಷಿಕವಾಗಿ ಸಂಚಿತವಾಗುತ್ತಾ ಸಾಗುತ್ತದೆ ಮತ್ತು ನಿಧಿಯು 15 ವರ್ಷಗಳ ನಂತರ ಮೆಚ್ಯೂರ್ ಆಗುತ್ತದೆ. ಹೂಡಿಕೆದಾರರು 5 ವರ್ಷದ ಬ್ಲಾಕ್ನಂತೆ (ಮೆಚ್ಯೂರಿಟಿ ಆದ ಒಂದ ವರ್ಷದೊಳಗೆ) ವಿಸ್ತರಣೆ ಮಾಡಿಸುತ್ತಾ ಸಾಗಬಹುದು.
ಇದನ್ನೂ ಓದಿ: How To Activate PPF: ನಿಷ್ಕ್ರಿಯ ಪಿಪಿಎಫ್ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?