ಸಾಲದ ಎಫೆಕ್ಟ್; ಟಾಪ್-10 ಶ್ರೀಮಂತರ ಪಟ್ಟಿಯಿಂದ ಮುಕೇಶ್ ಅಂಬಾನಿ ಹೊರಕ್ಕೆ; ರೋಷನಿ ನಾದರ್ ಹೊಸ ದಾಖಲೆ

Indians in Hurun global rich list 2025: ಹುರೂನ್ ಗ್ಲೋಬಲ್ ರಿಚ್ ಲಿಸ್ಟ್ 2025 ಪಟ್ಟಿ ಪ್ರಕಾರ ವಿಶ್ವದ ಅಗ್ರ 10 ಅತಿ ಶ್ರೀಮಂತರ ಪೈಕಿ ಅಂಬಾನಿ ಈ ವರ್ಷ ಇಲ್ಲ. ಕಳೆದ ಒಂದು ವರ್ಷದಲ್ಲಿ ಶೇ. 13ರಷ್ಟು ಆಸ್ತಿ ಕಳೆದುಕೊಂಡ ಪರಿಣಾಮ ಟಾಪ್-10 ಪಟ್ಟಿಯಿಂದ ಹೊರಬಿದ್ದಿದ್ದಾರೆ. ಆದರೆ, ಭಾರತದ ಮತ್ತು ಏಷ್ಯಾದ ನಂಬರ್ ಒನ್ ಶ್ರೀಮಂತ ಎನಿಸಿದ್ದಾರೆ. ಅದಾನಿ ಮತ್ತು ಅಂಬಾನಿ ನಡುವಿನ ಅಂತರ ಬಹಳ ಸಣ್ಣದಿದೆ. ರೋಷನಿ ನಾದರ್ ಭಾರತದ ಮೂರನೇ ಅತಿ ಶ್ರೀಮಂತೆ ಎನಿಸಿದ್ದಾರೆ.

ಸಾಲದ ಎಫೆಕ್ಟ್; ಟಾಪ್-10 ಶ್ರೀಮಂತರ ಪಟ್ಟಿಯಿಂದ ಮುಕೇಶ್ ಅಂಬಾನಿ ಹೊರಕ್ಕೆ; ರೋಷನಿ ನಾದರ್ ಹೊಸ ದಾಖಲೆ
ಮುಕೇಶ್ ಅಂಬಾನಿ

Updated on: Mar 27, 2025 | 3:31 PM

ನವದೆಹಲಿ, ಮಾರ್ಚ್ 27: ಹುರೂನ್ ಜಾಗತಿಕ ಶ್ರೀಮಂತರ ಪಟ್ಟಿ (Hurun Global Rich List 2025) ಬಿಡುಗಡೆಯಾಗಿದ್ದು, ಟಾಪ್-10 ಪಟ್ಟಿಯಿಂದ ಮುಕೇಶ್ ಅಂಬಾನಿ ಅವರ ಹೊರಬಿದ್ದಿದ್ದಾರೆ. ಅಂಬಾನಿ ಅವರ ಸಾಲದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರ ನಿವ್ವಳ ಆಸ್ತಿ ಮೌಲ್ಯ ಇಳಿಕೆ ಆಗುತ್ತಿದೆ. 2024ರ ಹುರೂನ್ ಪಟ್ಟಿಗೆ ಹೋಲಿಸಿದರೆ ಒಂದು ವರ್ಷದಲ್ಲಿ ಅಂಬಾನಿ ಆಸ್ತಿ ಮೌಲ್ಯ ಒಂದು ಲಕ್ಷ ಕೋಟಿ ರೂನಷ್ಟು ಕಡಿಮೆ ಆಗಿದೆ. 2025ರಲ್ಲಿ ಅವರ ಸಂಪತ್ತು 8.6 ಲಕ್ಷ ಕೋಟಿ ರೂನಷ್ಟಿದೆ. ಇಷ್ಟಾದರೂ ಮುಕೇಶ್ ಅಂಬಾನಿ ಭಾರತದ ನಂಬರ್ ಒನ್ ಶ್ರೀಮಂತ ಎನ್ನುವ ಹಣೆಪಟ್ಟಿ ಮುಂದುವರಿಸಿದ್ದಾರೆ. ಭಾರತ ಮಾತ್ರವಲ್ಲ, ಏಷ್ಯಾದಲ್ಲೂ ಅವರೇ ನಂಬರ್ ಒನ್ ಶ್ರೀಮಂತ.

ಒಂದೆಡೆ ಅಂಬಾನಿ ಶ್ರೀಮಂತಿಕೆ ಕಡಿಮೆ ಆಗುತ್ತಿದ್ದರೆ, ಇನ್ನೊಂದೆಡೆ ಅದಾನಿ ಶ್ರೀಮಂತಿಕೆ ಹೆಚ್ಚಿದೆ. ಅಂಬಾನಿ ಒಂದು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ ಕಳೆದುಕೊಂಡರೆ, ಅದಾನಿಯವರು ಅದೇ ಅವಧಿಯಲ್ಲಿ ಅಷ್ಟೇ ಪ್ರಮಾಣದಲ್ಲಿ ಗಳಿಕೆ ಕಂಡಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 8.4 ಲಕ್ಷ ಕೋಟಿ ರೂನಷ್ಟಿದೆ. ಅಂಬಾನಿಗೂ ಅದಾನಿಗೂ ಸಂಪತ್ತಿನಲ್ಲಿ ಕೂದಲೆಳೆಯ ಅಂತರ ಇದೆಯಷ್ಟೇ. ಈ ಟ್ರೆಂಡ್ ಹೀಗೆಯೇ ಮುಂದುವರಿದರೆ 2022ರಲ್ಲಾದಂತೆ ಅಂಬಾನಿಯನ್ನು ಅದಾನಿ ಹಿಂದಿಕ್ಕುವ ಸಾಧ್ಯತೆ ಎದ್ದು ಕಾಣುತ್ತಿದೆ.

ಇದನ್ನೂ ಓದಿ: ದೆಹಲಿ ಶಾಸಕರಿರಲಿ, ಕೇರಳ ಶಾಸಕರ ಬೇಸಿಕ್ ಸ್ಯಾಲರಿ ಕೇವಲ 2,000 ರೂ; ಬೇರೆ ರಾಜ್ಯಗಳಲ್ಲಿ ಹೇಗಿದೆ ಸಂಬಳ? ಇಲ್ಲಿದೆ ಪಟ್ಟಿ

ಇದನ್ನೂ ಓದಿ
ಹೊಸ ಎಸಿ ಖರೀದಿಗೆ ಸರ್ಕಾರದ ಇನ್ಸೆಂಟಿವ್ ಸ್ಕೀಮ್
ಕೇರಳ ಶಾಸಕರ ಮೂಲ ವೇತನ 2,000 ರೂ ಮಾತ್ರ
ಮಾರ್ಚ್ 31ರೊಳಗೆ ರೇಷನ್ ಕಾರ್ಡ್​​ಗೆ ಇ-ಕೆವೈಸಿ ಸಲ್ಲಿಸಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ

ಇಲಾನ್ ಮಸ್ಕ್ ನಂಬರ್ ಒನ್ ಶ್ರೀಮಂತ

ಎಕ್ಸ್, ಟೆಸ್ಲಾ, ಸ್ಪೇಸ್ ಎಕ್ಸ್ ಇತ್ಯಾದಿ ಸಂಸ್ಥೆಗಳ ಮುಖ್ಯಸ್ಥ ಇಲಾನ್ ಮಸ್ಕ್ ಅವರ ನಂಬರ್ ಒನ್ ಶ್ರೀಮಂತನೆಂಬ ಪಟ್ಟ ಅಬಾಧಿತವಾಗಿ ಮುಂದುವರಿಯುತ್ತಿದೆ. ಒಂದು ವರ್ಷದಲ್ಲಿ ಅವರ ಆಸ್ತಿ ಶೇ. 82ರಷ್ಟು ಹೆಚ್ಚಳವಾಗಿದೆ. ಈಗ ಅವರು 420 ಬಿಲಿಯನ್ ಡಾಲರ್​ನಷ್ಟು ಆಸ್ತಿ ಹೊಂದಿರುವ ಕುಬೇರನಾಗಿದ್ದಾರೆ.

ಜಾಗತಿಕ ಟಾಪ್ 10 ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ರೋಷನಿ ನಾದರ್

ಎಚ್​​ಸಿಎಲ್ ಸಂಸ್ಥಾಪಕ ಶಿವ್ ನಾದರ್ ಅವರ ಮಗಳಾದ, ಮತ್ತು ಸಂಸ್ಥೆಯ ಛೇರ್ಮನ್ ಆಗಿರುವ ರೋಷನಿ ನಾದರ್ ಭಾರತದ ಅತಿ ಶ್ರೀಮಂತ ಮಹಿಳೆ ಎನಿಸಿದ್ದಾರೆ. ಶಿವ್ ನಾದರ್ ತಮ್ಮ ಶೇ. 47ರಷ್ಟು ಷೇರುಗಳನ್ನು ಮಗಳಿಗೆ ಧಾರೆ ಎರೆದುಕೊಟ್ಟ ಪರಿಣಾಮ ಇದು.

ರೋಷನಿ ನಾದರ್ ವಿಶ್ವದ ಐದನೇ ಅತಿ ಶ್ರೀಮಂತ ಮಹಿಳೆಯಾಗಿದ್ಧಾರೆ. ಜಾಗತಿಕ ಟಾಪ್-10 ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಸೇರ್ಪಡೆಯಾಗಿದ್ದು ಇದೇ ಮೊದಲಾಗಿದೆ. ಭಾರತದಲ್ಲಿ ಅಂಬಾನಿ, ಅದಾನಿ ಬಳಿಕ ನಾದರ್ ಕುಟುಂಬವೇ ಅತಿ ಶ್ರೀಮಂತ ಎನಿಸಿರುವುದು.

ಇದನ್ನೂ ಓದಿ: ಹಳೆಯ ಎಸಿ ಕೊಟ್ಟು ಹೊಸ 5 ಸ್ಟಾರ್ ಎಸಿ ಪಡೆಯಿರಿ; ವಿದ್ಯುತ್ ಉಳಿತಾಯದ ಜೊತೆಗೆ ಸರ್ಕಾರದಿಂದಲೂ ಇನ್ಸೆಂಟಿವ್

ಹುರೂನ್ ಪಟ್ಟಿ: ಭಾರತದ ಟಾಪ್-10 ಶ್ರೀಮಂತರು

  1. ಮುಕೇಶ್ ಅಂಬಾನಿ ಮತ್ತು ಕುಟುಂಬ: 8.6 ಲಕ್ಷ ಕೋಟಿ ರೂ
  2. ಗೌತಮ್ ಅದಾನಿ ಮತ್ತು ಕುಟುಂಬ: 8.4 ಲಕ್ಷ ಕೋಟಿ ರೂ
  3. ರೋಷನಿ ನಾದರ್ ಮತ್ತು ಕುಟುಂಬ: 3.5 ಲಕ್ಷ ಕೋಟಿ ರೂ
  4. ದಿಲೀಪ್ ಸಾಂಘವಿ ಮತ್ತು ಕುಟುಂಬ: 2.5 ಲಕ್ಷ ಕೋಟಿ ರೂ
  5. ಅಜೀಂ ಪ್ರೇಮ್​​ಜಿ ಮತ್ತು ಕುಟುಂಬ: 2.2 ಲಕ್ಷ ಕೋಟಿ ರೂ
  6. ಕುಮಾರಮಂಗಲಂ ಬಿರ್ಲಾ ಮತ್ತು ಕುಟುಂಬ: 2 ಲಕ್ಷ ಕೋಟಿ ರೂ
  7. ಸೈರಸ್ ಪೂನಾವಾಲಾ ಮತ್ತು ಕುಟುಂಬ: 2 ಲಕ್ಷ ಕೋಟಿ ರೂ
  8. ನೀರಜ್ ಬಜಾಜ್ ಮತ್ತು ಕುಟುಂಬ: 1.6 ಲಕ್ಷ ಕೋಟಿ ರೂ
  9. ರವಿ ಜೈಪುರಿಯಾ ಮತ್ತು ಕುಟುಂಬ: 1.4 ಲಕ್ಷ ಕೋಟಿ ರೂ
  10. ರಾಧಾಕೃಷ್ಣ ದಮಾನಿ ಮತ್ತು ಕುಟುಂಬ: 1.4 ಲಕ್ಷ ಕೋಟಿ ರೂ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ