LPG Composite Cylinder: ಇಂಡೇನ್ ಸ್ಮಾರ್ಟ್​ ಸಿಲಿಂಡರ್​ ಜೊತೆ ಹಳೇ ಎಲ್​ಪಿಜಿ ಸಿಲಿಂಡರ್ ಎಕ್ಸ್​ಚೇಂಜ್ ಮಾಡೋದು ಹೇಗೆ?

LPG Cylinder Price: ಇಂಡೇನ್ ಗ್ಯಾಸ್​ನ ಈ ಕಾಂಪೋಸಿಟ್ ಸಿಲಿಂಡರ್ ಅನ್ನು ನಿಮ್ಮ ಮನೆಯಲ್ಲಿರುವ ಹಳೇ ಎಲ್​ಪಿಜಿ ಸಿಲಿಂಡರ್ ಜೊತೆ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. 

LPG Composite Cylinder: ಇಂಡೇನ್ ಸ್ಮಾರ್ಟ್​ ಸಿಲಿಂಡರ್​ ಜೊತೆ ಹಳೇ ಎಲ್​ಪಿಜಿ ಸಿಲಿಂಡರ್ ಎಕ್ಸ್​ಚೇಂಜ್ ಮಾಡೋದು ಹೇಗೆ?
ಸ್ಮಾರ್ಟ್​ ಎಲ್​ಪಿಜಿ ಸಿಲಿಂಡರ್

ಆಧುನಿಕ ಜಗತ್ತಿನಲ್ಲಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬಳಸದವರು ಯಾರಿದ್ದಾರೆ? ಎಲ್ಲೋ ಒಂದು ವರ್ಗದವರು ಎಲೆಕ್ಟ್ರಿಕ್ ಸ್ಟೌವ್, ಮೈಕ್ರೋವೇವ್​ಗಳ ಮೊರೆಹೋಗಿರಬಹುದು. ಆದರೆ, ಈ ದೇಶದ ಬಹುಪಾಲು ಜನರು ಎಲ್​ಪಿಜಿ ಸಿಲಿಂಡರ್​ಗಳ (LPG Gas Cylinder) ಮೇಲೆ ಅವಲಂಬಿತರಾಗಿದ್ದಾರೆ. ಹಳ್ಳಿಗಳಲ್ಲೂ ಈಗ ಸೌದೆ ಒಲೆಯ ಜಾಗದಲ್ಲಿ ಸಿಲಿಂಡರ್​ಗಳು ಬಂದು ಕುಳಿತಿವೆ. ಆದರೆ, ಈ ಎಲ್​ಪಿಜಿ ಸಿಲಿಂಡರ್​ಗಳು ಖಾಲಿಯಾಯಿತೆಂದರೆ ಗೊತ್ತಾಗುವುದು ಹೇಗೆ? ಎಷ್ಟೋ ಬಾರಿ ಮನೆಗೆ ನೆಂಟರು ಬಂದಾಗಲೋ ಅಥವಾ ಅರ್ಜೆಂಟ್​ ಇದ್ದಾಗಲೋ ಎಲ್​ಪಿಜಿ ಸಿಲಿಂಡರ್ ಖಾಲಿಯಾಗಿ ತಲೆನೋವು ತಂದಿಟ್ಟ ಅನುಭವ ಎಲ್ಲ ಮಹಿಳೆಯರಿಗೂ ಆಗಿರುತ್ತದೆ. ಹಾಗಾದರೆ, ನಿಮ್ಮ ಮನೆಯ ಎಲ್​ಪಿಜಿ ಸಿಲಿಂಡರ್​ನಲ್ಲಿ ಎಷ್ಟು ದಿನಗಳಿಗಾಗುವಷ್ಟು ಗ್ಯಾಸ್ ಉಳಿದಿದೆ ಎಂದು ಮೊದಲೇ ತಿಳಿದುಕೊಳ್ಳುವುದು ಹೇಗೆ? ಇದಕ್ಕೆ ಪರಿಹಾರವಾಗಿ ಸ್ಮಾರ್ಟ್​ ಸಿಲಿಂಡರ್ (Indane Composite Cylinder)  ಅನ್ನು ಮಾರುಕಟ್ಟೆಗೆ ತರಲಾಗಿದೆ. 

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್​​ನಿಂದ ಹೊಸ ಬ್ರ್ಯಾಂಡ್​ನ ಎಲ್​ಪಿಜಿ ಸಿಲಿಂಡರ್​ ಅನ್ನು ಪರಿಚಯಿಸಲಾಗಿದೆ. ಇಂಡೇನ್ ಕಾಂಪೋಸಿಟ್ ಸಿಲಿಂಡರ್ ಎಂಬ ಈ ಸ್ಮಾರ್ಟ್​ ಎಲ್​ಪಿಜಿ ಸಿಲಿಂಡರ್​ನಲ್ಲಿ ಎಷ್ಟು ಗ್ಯಾಸ್​ ಬಾಕಿ ಉಳಿದಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಮಾಮೂಲಿ ಕಬ್ಬಿಣದ ಸಿಲಿಂಡರ್​ಗಳ ಬದಲಾಗಿ ಸ್ಮಾರ್ಟ್​ ಆಗಿರಲಿರುವ ಈ ಸಿಲಿಂಡರ್​ಗಳು ಹಲವು ವಿಶೇಷವಾದ ಆಯ್ಕೆಗಳನ್ನು ಹೊಂದಿದೆ. ಮಾಮೂಲಿ ಸಿಲಿಂಡರ್​ಗಳಿಗಿಂತಲೂ ಇಂಡೇನ್ ಗ್ಯಾಸ್​ನ ಈ ಕಾಂಪೋಸಿಟ್ ಸಿಲಿಂಡರ್ ಬಹಳಷ್ಟು ಸೇಫ್ ಆಗಿರಲಿದೆ. ಈ ಸಿಲಿಂಡರ್ ಅನ್ನು ನಿಮ್ಮ ಮನೆಯಲ್ಲಿರುವ ಹಳೇ ಎಲ್​ಪಿಜಿ ಸಿಲಿಂಡರ್ ಜೊತೆ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು.

ಈ ಸ್ಮಾರ್ಟ್​ ಕಂಪೋಸಿಟ್ ಸಿಲಿಂಡರ್​ಗಾಗಿ ಗ್ರಾಹಕರು ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ. 10 ಕೆಜಿ ಸಿಲಿಂಡರ್‌ಗೆ ಭದ್ರತಾ ಠೇವಣಿ 3,350 ರೂ., 5 ಕೆಜಿ ಸಿಲಿಂಡರ್‌ಗೆ ಭದ್ರತಾ ಠೇವಣಿ 2,150 ರೂ. ಪಾವತಿಸಬೇಕಾಗುತ್ತದೆ. ನೀವು ಇಂಡೇನ್ ಗ್ರಾಹಕರಾಗಿದ್ದರೆ, ನಿಮ್ಮ ಮನೆಯಲ್ಲಿ ಈಗಾಗಲೇ ಇರುವ ಹಳೇ ಇಂಡೇನ್ ಎಲ್​ಪಿಜಿ ಸಿಲಿಂಡರ್ ಅನ್ನು ಹೊಸ ಕಾಂಪೋಸಿಟ್ ಸಿಲಿಂಡರ್ ನೊಂದಿಗೆ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. ಇದಕ್ಕಾಗಿ, ಭದ್ರತಾ ಠೇವಣಿಯ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಹೊಸ ಸ್ಮಾರ್ಟ್​ ಸಿಲಿಂಡರ್​ಗಳನ್ನು ಕೂಡ ಬೇರೆ ಸಿಲಿಂಡರ್​ಗಳಂತೆ ಹೋಂ ಡೆಲಿವರಿ ನೀಡಲಾಗುತ್ತದೆ.

ಮೂರು ಲೇಯರ್​ಗಳಲ್ಲಿ ತಯಾರಿಸಲಾಗಿರುವ ಇಂಡೇನ್ ಕಾಂಪೋಸಿಟ್ ಸಿಲಿಂಡರ್ ಬ್ಲೋ ಮೌಲ್ಡ್​ ಹೈ ಡೆನ್ಸಿಟಿ ಪಾಲೆಥೀನ್​ನ ಇನ್ನರ್ ಲೈನರ್, ಪಾಲಿಮರ್​ನಿಂದ ಸುತ್ತಲ್ಪಟ್ಟ ಫೈಬರ್​ ಗ್ಲಾಸ್​ ಮತ್ತು ಹೊರಭಾಗದಲ್ಲಿ ಹೆಚ್​ಡಿಪಿಇ ಜಾಕೆಟ್ ಅನ್ನು ಒಳಗೊಂಡಿರುತ್ತದೆ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ಈ ಸ್ಮಾರ್ಟ್​ ಸಿಲಿಂಡರ್​ ನಿಮ್ಮ ಮನೆಯಲ್ಲಿ ಈಗಾಗಲೇ ಬಳಸುತ್ತಿರುವ ಮಾಮೂಲಿ ಸಿಲಿಂಡರ್​ಗಿಂತಲೂ ಬಹಳ ಹಗುರವಾಗಿರುತ್ತದೆ. ಅರಾಮಾಗಿ ಒಬ್ಬರೇ ಈ ಸಿಲಿಂಡರ್ ಅನ್ನು ಎತ್ತಿಕೊಂಡು ಹೋಗಲು ಸಾಧ್ಯವಿದೆ. ಹಾಗೇ, ಈ ಸ್ಮಾರ್ಟ್​ ಸಿಲಿಂಡರ್​ನ ಕೆಲವು ಭಾಗ ಪಾರದರ್ಶಕವಾಗಿರಲಿದೆ. ಇದರಿಂದ ಸಿಲಿಂಡರ್​ನಲ್ಲಿ ಇನ್ನೂ ಎಷ್ಟು ಗ್ಯಾಸ್​ ಉಳಿದಿದೆ ಎಂಬುದನ್ನು ಗ್ರಾಹಕರು ಸುಲಭವಾಗಿ ತಿಳಿದುಕೊಳ್ಳಬಹುದು.

ಹಾಗೇ, ಈ ಹೊಸ ಸ್ಮಾರ್ಟ್​ ಸಿಲಿಂಡರ್ ತುಕ್ಕು ಹಿಡಿಯುವುದಿಲ್ಲ. ಇದಕ್ಕೆ ಯಾವುದೇ ಮೆಟಲ್ ಬಳಸದ ಕಾರಣದಿಂದ ಈ ಸಿಲಿಂಡರ್​ಗೆ ತುಕ್ಕು ಹಿಡಿಯುವುದಿಲ್ಲ, ಹಾಗೇ ಸ್ಕ್ರಾಚ್​ ಕೂಡ ಆಗುವುದಿಲ್ಲ. ಸದ್ಯಕ್ಕೆ 5 ಕೆಜಿ ಮತ್ತು 10 ಕೆಜಿ ಗಾತ್ರದಲ್ಲಿ ಈ ಕಾಂಪೋಸಿಟ್ ಸಿಲಿಂಡರ್​ಗಳು ಲಭ್ಯ ಇವೆ. ದೆಹಲಿ, ಗುರುಗ್ರಾಮ, ಹೈದರಾಬಾದ್, ಫರೀದಾಬಾದ್, ಲುಧಿಯಾನಾದಲ್ಲಿ ಈ ಸಿಲಿಂಡರ್​ಗಳು ಲಭ್ಯ ಇವೆ. ಮುಂದಿನ ವಾರದಿಂದ ಇಡೀ ದೇಶಾದ್ಯಂತ ಈ ಸ್ಮಾರ್ಟ್​ ಸಿಲಿಂಡರ್​ಗಳು ಲಭ್ಯವಾಗಲಿವೆ.

ಇದನ್ನೂ ಓದಿ: LPG Cylinder Price: ಗೃಹಬಳಕೆ ಸಿಲಿಂಡರ್​ ಬೆಲೆಯಲ್ಲಿ 25 ರೂ. ಹೆಚ್ಚಳ; ಹೀಗಿದೆ ಮಹಾನಗರಗಳಲ್ಲಿ ಎಲ್​ಪಿಜಿ ಸಿಲಿಂಡರ್​ ದರ

ಇದನ್ನೂ ಓದಿ: LPG gas: ಎಲ್​ಪಿಜಿ ಗ್ಯಾಸ್​ ರೀಫಿಲ್​ ಬುಕ್ಕಿಂಗ್ ಯಾವ ವಿತರಕರಿಂದಾದರೂ ಮಾಡಿಸಬಹುದು ಎಂಬ ನಿಯಮ ಶೀಘ್ರದಲ್ಲಿ

(Indane Smart LPG Composite cylinder how to exchange with old Gas Cylinder)