
ನವದೆಹಲಿ, ಜೂನ್ 25: ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ದೇಶದ ಮೊತ್ತಮೊದಲ ಖಾಸಗಿ ಚಿನ್ನದ ಗಣಿ (Private Gold Mine) ತನ್ನ ಕಮರ್ಷಿಯಲ್ ಆಪರೇಷನ್ಸ್ ಅನ್ನು ಆರಂಭಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕರ್ನೂಲು ಜಿಲ್ಲೆಯ ಜೊನ್ನಗಿರಿಯಲ್ಲಿ (Jonnagiri) ಈ ಬಹುನಿರೀಕ್ಷಿತ ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣಾ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಭಾರತ ರಫ್ತಿಗಿಂತ ಬಹಳ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಈ ಆಮದಿನಲ್ಲಿ ಚಿನ್ನ ಮತ್ತು ತೈಲವೇ ಅತಿಹೆಚ್ಚು. ಚಿನ್ನದ ಬಳಕೆ ಕಡಿಮೆ ಮಾಡಿ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಕರೆಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಜೊನ್ನಗಿರಿಯಲ್ಲಿ ಖಾಸಗಿ ಗೋಲ್ಡ್ ಮೈನಿಂಗ್ ಆರಂಭವಾಗಿದೆ. ಇದರಿಂದ ಚಿನ್ನದ ಆಮದು ಸ್ವಲ್ಪ ಮಟ್ಟಿಗೆ ಕಡಿಮೆಗೊಳ್ಳುವ ನಿರೀಕ್ಷೆ ಇದೆ. ಈ ಖಾಸಗಿ ಗಣಿಯ ಕುರಿತಾದ ಪ್ರಮುಖ ವಿಚಾರಗಳು:
ಸ್ವತಂತ್ರ ಭಾರತದಲ್ಲಿ ಇದುವರೆಗೆ ಕರ್ನಾಟಕದ ಕೋಲಾರ (KGF) ಮತ್ತು ರಾಯಚೂರಿನ ಹಟ್ಟಿ (HGML) ಚಿನ್ನದ ಗಣಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಇವೆರಡೂ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಸರ್ಕಾರಿ ಸ್ವಾಮ್ಯದ ಗಣಿಗಳಾಗಿವೆ (ಕೋಲಾರ ಗಣಿ ಸದ್ಯ ಮುಚ್ಚಲ್ಪಟ್ಟಿದೆ). ಸ್ವಾತಂತ್ರ್ಯದ ನಂತರ ದೇಶದಲ್ಲಿ ಆರಂಭವಾಗಿರುವ ಮೊದಲ ವಾಣಿಜ್ಯ ಮಟ್ಟದ ಖಾಸಗಿ ಚಿನ್ನದ ಗಣಿ ಯೋಜನೆ ಇದಾಗಿದೆ. ವಿಶೇಷವೆಂದರೆ, ಈ ಜೊನ್ನಗಿರಿ ಪ್ರದೇಶವು ಮೌರ್ಯ ಸಾಮ್ರಾಜ್ಯದ ಸಾಮ್ರಾಟ ಅಶೋಕನ ಕಾಲದಲ್ಲೂ (ಕ್ರಿ.ಪೂ. 3ನೇ ಶತಮಾನ) ಚಿನ್ನದ ಉತ್ಪಾದನಾ ಕೇಂದ್ರವಾಗಿ ಹೆಸರುವಾಸಿಯಾಗಿತ್ತು.
ಈ ಗಣಿಗಾರಿಕೆ ಯೋಜನೆಯ ಐತಿಹಾಸಿಕ ಮತ್ತು ಭವಿಷ್ಯದ ಮಹತ್ವವನ್ನು ಪರಿಗಣಿಸಿ, ಆಂಧ್ರಪ್ರದೇಶ ಸರ್ಕಾರವು ‘ಜೊನ್ನಗಿರಿ’ ಗ್ರಾಮದ ಹೆಸರನ್ನು ಅಧಿಕೃತವಾಗಿ ‘ಸ್ವರ್ಣಗಿರಿ’ (Swarnagiri) ಎಂದು ಮರುನಾಮಕರಣ ಮಾಡಿದೆ. ಮೌರ್ಯರ ಕಾಲದ ಶಾಸನಗಳಲ್ಲೂ ಈ ಪ್ರದೇಶವನ್ನು ‘ಸುವರ್ಣಗಿರಿ’ ಎಂದೇ ಕರೆಯಲಾಗುತ್ತಿತ್ತು. ಇದರೊಂದಿಗೆ ಇಲ್ಲಿ ಸ್ಥಳೀಯವಾಗಿಯೇ ಆಭರಣ ತಯಾರಿಕೆಯನ್ನು ಉತ್ತೇಜಿಸಲು ಒಂದು ಬೃಹತ್ ‘ಚಿನ್ನದ ಆಭರಣ ತಯಾರಿಕಾ ಪಾರ್ಕ್’ (Jewellery Park) ಸ್ಥಾಪಿಸುವುದಾಗಿಯೂ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಟ್ರಾನ್ಸಾಕ್ಷನ್ಸ್ನಲ್ಲಿ ಸಣ್ಣ ಮೊತ್ತದ ವಂಚನೆ ಸಿಗಲಿದೆ ಪರಿಹಾರ; ಆರ್ಬಿಐನಿಂದ ಹೊಸ ನಿಯಮಗಳು ಜಾರಿಗೆ
ಈ ಬೃಹತ್ ಸಮಗ್ರ ಗ್ರೀನ್‌ಫೀಲ್ಡ್ ಯೋಜನೆಯನ್ನು ಸುಮಾರು ₹405 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ‘ಜಿಯೋಮೈಸೂರು ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ (Geomysore Services) ಮತ್ತು ‘ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್’ ಸಂಸ್ಥೆಗಳು ಜಂಟಿಯಾಗಿ ಮುನ್ನಡೆಸುತ್ತಿದ್ದು, ಲಾಯ್ಡ್ಸ್ ಮೆಟಲ್ಸ್ ಮತ್ತು ತ್ರಿವೇಣಿ ಅರ್ಥ್‌ಮೂವರ್ಸ್ ಸಂಸ್ಥೆಗಳು ಇದಕ್ಕೆ ಬೆಂಬಲ ನೀಡುತ್ತಿವೆ. ಸುಮಾರು 1,500 ಎಕರೆ ಪ್ರದೇಶವನ್ನು ಈ ಯೋಜನೆಗೆ ಹಂಚಿಕೆ ಮಾಡಲಾಗಿದ್ದು, ಸದ್ಯ ಮೊದಲ ಹಂತದಲ್ಲಿ 600 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾಗಿದೆ.
ಪ್ರಸ್ತುತ ಇಲ್ಲಿ ಸುಮಾರು 13.1 ಟನ್ ಚಿನ್ನದ ಅದಿರು ನಿಕ್ಷೇಪ ಇರುವುದನ್ನು ಪ್ರಮಾಣೀಕರಿಸಲಾಗಿದೆ. ಮೊದಲ ವರ್ಷದಲ್ಲಿ ಸುಮಾರು 400 ಕೆಜಿ ಚಿನ್ನವನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಮುಂದಿನ ಹಂತದಲ್ಲಿ ವಾರ್ಷಿಕ ಉತ್ಪಾದನೆಯನ್ನು 900 ಕೆಜಿಗೆ ಏರಿಸಲಾಗುವುದು.
ಯೋಜನೆಯ ಎರಡನೇ ಸಂಸ್ಕರಣಾ ಘಟಕ ಪೂರ್ಣಗೊಂಡ ನಂತರ, ವಾರ್ಷಿಕವಾಗಿ 2 ಟನ್ (2,000 ಕೆಜಿ) ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಗಣಿಯ ಒಟ್ಟು ಅವಧಿಯನ್ನು ಸದ್ಯಕ್ಕೆ 15 ವರ್ಷಗಳೆಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಅಮೆರಿಕದಿಂದ ತವರಿಗೆ ಬಂದ ಭಾರತ ಮೂಲದ ಎಐ ಸಂಶೋಧಕ; ಭಾರತದಲ್ಲಿ ಮಹತ್ವದ ಎಐ ಪ್ರಾಜೆಕ್ಟ್ನಲ್ಲಿ ಭಾಗಿ?
ಈ ಯೋಜನೆಯಿಂದ ಆಂಧ್ರಪ್ರದೇಶ ಸರ್ಕಾರಕ್ಕೆ ಉತ್ಪಾದನೆಯಾಗುವ ಚಿನ್ನದ ಮೌಲ್ಯದ ಮೇಲೆ ಶೇ. 4 ರಷ್ಟು ರಾಯಲ್ಟಿ ಸಿಗಲಿದೆ. 400 ಕೆಜಿ ಉತ್ಪಾದನೆಯಾದರೆ ಸುಮಾರು ₹57 ಕೋಟಿ ಹಾಗೂ 900 ಕೆಜಿ ಉತ್ಪಾದನೆಯಾದಾಗ ₹144 ಕೋಟಿ ವಾರ್ಷಿಕ ಆದಾಯ ಸರ್ಕಾರಕ್ಕೆ ಹರಿದುಬರಲಿದೆ. ಜೊತೆಗೆ ಈ ಯೋಜನೆಯಿಂದ ಸುಮಾರು 700 ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಸಿಗಲಿದ್ದು, ಅದರಲ್ಲಿ ಶೇ. 80 ರಷ್ಟು ಉದ್ಯೋಗಾವಕಾಶಗಳನ್ನು ಸ್ಥಳೀಯ ಸಮುದಾಯದ ಯುವಕ ಮತ್ತು ಮಹಿಳೆಯರಿಗೇ ನೀಡಲಾಗುತ್ತಿದೆ.
ಭಾರತವು ಪ್ರತಿವರ್ಷ ಸುಮಾರು 700 ರಿಂದ 1,000 ಟನ್ ಚಿನ್ನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲದ ನಂತರ ಭಾರತ ಅತಿ ಹೆಚ್ಚು ಆಮದು ಮಾಡಿಕೊಳ್ಳುವುದು ಚಿನ್ನವನ್ನೇ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶಿಯವಾಗಿ ಖಾಸಗಿ ಸಹಭಾಗಿತ್ವದಲ್ಲಿ ಇಂತಹ ಗಣಿಗಳು ಆರಂಭವಾಗುತ್ತಿರುವುದು ಭಾರತದ ಆಮದು ಅವಲಂಬನೆಯನ್ನು ತಗ್ಗಿಸಲು ಮತ್ತು ‘ಆತ್ಮನಿರ್ಭರ ಭಾರತ’ದ ಕನಸಿಗೆ ದೊಡ್ಡ ಬಲ ತುಂಬಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Thu, 25 June 26