ನವದೆಹಲಿ: ವಿಶ್ವದ ಅತಿದೊಡ್ಡ ಕಚ್ಛಾ ತೈಲ ಆಮದು ರಾಷ್ಟ್ರಗಳಲ್ಲೊಂದಾದ ಭಾರತ ಈಗ ಸಂಸ್ಕರಿತ ತೈಲೋತ್ಪನ್ನಗಳ (Petroleum Products) ರಫ್ತಿನಲ್ಲಿ ಮುಂಚೂಣಿಗೆ ಬಂದಿದೆ. ತೈಲೋತ್ಪನ್ನಗಳ ಸರಬರಾಜಿಗೆ ಭಾರತದ ಮೇಲೆ ಯೂರೋಪ್ನ ಅವಲಂಬನೆ ಇನ್ನಷ್ಟು ಹೆಚ್ಚಾಗಿದೆ. ರೀಫೈನ್ಸ್ ಫುಯೆಲ್ನಲ್ಲಿ (Refined Fuel) ಯೂರೋಪ್ಗೆ ಭಾರತ ಈಗ ಅತಿದೊಡ್ಡ ಸರಬರಾಜುದಾರ ದೇಶವಾಗಿದೆ. ಈ ವಿಚಾರದಲ್ಲಿ ಸೌದಿ ಅರೇಬಿಯಾವನ್ನೇ ಮೀರಿಸುವಂತೆ ಭಾರತ ಬೆಳೆದಿದೆ. ಕೆಪ್ಲರ್ (Kpler) ಎಂಬ ಅನಾಲಿಟಿಕ್ಸ್ಸ್ ಸಂಸ್ಥೆ ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ ಈ ಮಾಹಿತಿ ಇದೆ. ಈ ವರದಿ ಪ್ರಕಾರ, ಯೂರೋಪ್ ದೇಶಗಳು ಭಾರತದಿಂದ ಆಮದು ಮಾಡಿಕೊಳ್ಳುವ ಸಂಸ್ಕರಿತ ಇಂಧನಗಳ ಪ್ರಮಾಣ ದಿನಕ್ಕೆ 30,000 ಬ್ಯಾರಲ್ನಷ್ಟಾಗಲಿದೆ. ರಷ್ಯಾದಿಂದ ಭಾರತ ಕಡಿಮೆ ಬೆಲೆಗೆ ಕಚ್ಛಾ ತೈಲ ಪಡೆದು ಸಂಸ್ಕರಿತ ತೈಲೋತ್ಪನ್ನಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಪೂರೈಸುತ್ತಿದೆ. ಈ ಮೂಲಕ ಭಾರತ ವಿಶ್ವದ ಅತಿದೊಡ್ಡ ಪೆಟ್ರೋಲಿಯಂ ರಫ್ತುದಾರ ದೇಶಗಳ ಪೈಕಿ ಸೇರಿದೆ.
ಇಲ್ಲಿ ರೀಫೈನ್ಡ್ ಫುಯೆಲ್ ಅಥವಾ ಸಂಸ್ಕರಿತ ಇಂಧನ ಎಂದರೆ ಪೆಟ್ರೋಲ್, ಡೀಸೆಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳು. ಕಚ್ಛಾ ತೈಲವನ್ನು ಸಂಸ್ಕರಿಸಿ ಅದನ್ನು ಪೆಟ್ರೋಲ್, ಡೀಸೆಲ್, ಕೆರೋಸಿನ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ರಿಲಾಯನ್ಸ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಬಿಪಿಸಿಎಲ್, ಎಚ್ಪಿಸಿಎಲ್, ಆಯಿಲ್ ಇಂಡಿಯಾ ಇತ್ಯಾದಿ ಕೆಲವಾರು ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳಿವೆ. ಒಟ್ಟು 23 ತೈಲ ಸಂಸ್ಕರಣಾ ಘಟಕಗಳು ಭಾರತದಲ್ಲಿವೆ. ಅಮೆರಿಕ ಬಿಟ್ಟರೆ ಈಗ ಭಾರತವೆ ಅತಿ ಹೆಚ್ಚು ರಿಫೈನ್ಡ್ ಆಯಿಲ್ ಉತ್ಪನ್ನಗಳನ್ನು ರಫ್ತು ಮಾಡುವುದು.
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕ ಹಾಗೂ ಯೂರೋಪ್ ಆರ್ಥಿಕ ನಿಷೇಧಗಳನ್ನು ಹೇರಿವೆ. ಇದರ ಭಾಗವಾಗಿ ರಷ್ಯಾದ ತೈಲವನ್ನೂ ನಿಷೇಧಿಸಿವೆ. ತಮ್ಮ ಇಂಧನ ಅಗತ್ಯಗಳಿಗೆ ರಷ್ಯಾ ಮೇಲೆ ಪೂರ್ಣ ಅವಲಂಬಿತವಾಗಿದ್ದ ಯೂರೋಪ್ ದೇಶಗಳಿಗೆ ಬೇರೆ ಪರ್ಯಾಯ ವ್ಯವಸ್ಥೆ ಬಳಸುವುದು ಅನಿವಾರ್ಯವಾಗಿದೆ.
ಅತ್ತ, ಯೂರೋಪ್ನಿಂದ ತೈಲ ನಿಷೇಧವಾದ್ದರಿಂದ ರಷ್ಯಾಕ್ಕೂ ಆದಾಯ ಮೂಲಕ್ಕೆ ಹೊಡೆತಬಿದ್ದಂತಾಗಿತ್ತು. ಆದರೆ, ಕಡಿಮೆ ಬೆಲೆಗೆ ಕಚ್ಛಾ ತೈಲ ಮಾರಲು ರಷ್ಯಾ ನಿರ್ಧರಿಸಿತು. ಇದರ ಲಾಭವನ್ನು ಚೀನಾ, ಭಾರತ ಮೊದಲಾದ ದೇಶಗಳು ಪಡೆಯುತ್ತಿವೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿಗಿಂತ ಬಹಳ ಕಡಿಮೆ ಬೆಲೆಗೆ ರಷ್ಯಾದಿಂದ ಕಚ್ಛಾ ತೈಲ ಭಾರತಕ್ಕೆ ಸಿಗುತ್ತಿದೆ. ಈ ಅಗ್ಗದ ಕಚ್ಛಾ ತೈಲವನ್ನು ಭಾರತೀಯ ಕಂಪನಿಗಳು ಸಂಸ್ಕರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುತ್ತಿವೆ. ಒಂದು ಭಾಗವು ಭಾರತಲ್ಲಿ ಬಳಕೆಗೆ ಹೋಗುತ್ತಿದೆ. ಇನ್ನೊಂದು ಭಾಗವು ರಫ್ತಾಗುತ್ತಿದೆ.
ಈ ವ್ಯವಸ್ಥೆ ಒಂದು ರೀತಿಯಲ್ಲಿ ವಿವಿಧ ರಾಷ್ಟ್ರಗಳ ಪ್ರತಿಷ್ಠೆಯನ್ನು ಶಮನಗೊಳಿಸುವಂತೆ ಅನಿಸುತ್ತದೆ. ಪಾಶ್ಚಿಮಾತ್ಯ ದೇಶಗಳಿಗೆ ರಷ್ಯಾಗೆ ನಿಷೇಧ ಹೇರಿದೆವೆಂಬ ಸಮಾಧಾನ ಸಿಕ್ಕಿದೆ; ಭಾರತದ ಮೂಲಕ ತಮ್ಮ ಇಂಧನ ಅಗತ್ಯಗಳನ್ನು ಈ ದೇಶಗಳು ಪೂರೈಸಿಕೊಳ್ಳುತ್ತಿವೆ; ರಷ್ಯಾಕ್ಕೂ ತನ್ನ ಆರ್ಥಿಕತೆ ಕುಸಿಯದಂತೆ ತಡೆಯಲು ಕಚ್ಛಾ ತೈಲ ರಫ್ತು ಸಹಾಯ ಮಾಡಿದೆ.
ಭಾರತ ತನ್ನ ಕಚ್ಛಾ ತೈಲದ ಅಗತ್ಯದಲ್ಲಿ ಶೇ. 44ರಷ್ಟು ಭಾಗ ರಷ್ಯಾದಿಂದಲೇ ಪೂರೈಕೆ ಆಗುತ್ತದೆ. ಉಕ್ರೇನ್ ಯುದ್ಧಕ್ಕೆ ಮುನ್ನ ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಛಾ ತೈಲ ಕೇವಲ ಶೇ. 2ಕ್ಕಿಂತಲೂ ಕಡಿಮೆ. ಈಗ ಅರ್ಧದಷ್ಟು ತೈಲವು ರಷ್ಯಾದಿಂದ ಬರುತ್ತದೆ.
Published On - 4:43 pm, Sun, 30 April 23