
ಬೆಂಗಳೂರು, ಜೂನ್ 25: ವಾಹನ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕುವ ಅವಕಾಶ ಮತ್ತು ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಟಾಟಾ ಮೋಟರ್ಸ್ನ ಟಾಪ್ ಎಕ್ಸಿಕ್ಯೂಟಿವ್ವೊಬ್ಬರು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಇಟಿಆಟೋಟೆಕ್ ಎಸ್‌ಡಿವಿ ಶೃಂಗಸಭೆ’ಯಲ್ಲಿ (ETAutoTech SDV Summit) ಮಾತನಾಡಿದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವಾಹನ ವಿಭಾಗದ ಸಿಟಿಒ ಆದ ಸ್ವೆನ್ ಪಟುಶ್ಕಾ (Sven Patuschka) ಅವರು ಮಾತನಾಡುತ್ತಾ ಈ ಆಶಾವಾದ ತುಂಬಿದ್ದಾರೆ. ಸಾಫ್ಟ್‌ವೇರ್ ಆಧಾರಿತ ವಾಹನಗಳಲ್ಲಿ (Software-Defined Vehicles – SDVs) ಚೀನಾ ಹಾದಿಯಲ್ಲೇ ಭಾರತ ಸಾಗಬೇಕಿಲ್ಲ. ಬದಲಿಗೆ, ತನ್ನಲ್ಲಿರುವ ಅಪಾರ ಸಾಫ್ಟ್‌ವೇರ್ ಪ್ರತಿಭೆ, ಬಲಿಷ್ಠ ಡಿಜಿಟಲ್ ಇಕೋಸಿಸ್ಟಂ ಮತ್ತು ದೇಶದ ಸವಾಲಿನ ಸಂಚಾರ ವ್ಯವಸ್ಥೆಯನ್ನೇ ಬಂಡವಾಳವಾಗಿಸಿಕೊಂಡು, ನೇರವಾಗಿ ‘ಎಐ-ಚಾಲಿತ ವಾಹನಗಳ’ (AI-Defined Vehicles) ಯುಗಕ್ಕೆ ಜಿಗಿಯಬಹುದು. ಈ ಮೂಲಕ ವಾಹನ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕುವ ಸುವರ್ಣ ಅವಕಾಶ ಭಾರತಕ್ಕಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಆಟೋಮೊಬೈಲ್ ಉದ್ಯಮವು ಪ್ರಸ್ತುತ ಹೊಸದೊಂದು ಮಹತ್ವದ ಬದಲಾವಣೆಯ ಹಂತದಲ್ಲಿದೆ. ಇನ್ಮುಂದೆ ಕೇವಲ ಹಾರ್ಸ್‌ಪವರ್, ಮೈಲೇಜ್ ಅಥವಾ ಬೆಲೆ ಮಾತ್ರವಲ್ಲದೆ, ವಾಹನಗಳ ಒಳಗಿರುವ ಬುದ್ಧಿವಂತಿಕೆ (Intelligence) ಹಾಗೂ ಕೃತಕ ಬುದ್ಧಿಮತ್ತೆ (AI) ಪ್ರಮುಖ ಆದ್ಯತೆಯಾಗಲಿದೆ ಎಂದಿದ್ದಾರೆ.
“ಭಾರತವು ಚೀನಾದ ಮಾದರಿಯನ್ನು ನಕಲು ಮಾಡಬೇಕಾಗಿಲ್ಲ. ನಾವು ನೇರವಾಗಿ ಮುಂದಿನ ಹಂತಕ್ಕೆ ಜಿಗಿದು ನಮ್ಮದೇ ಆದ ಹೊಸ ಹಾದಿಯನ್ನು ಸೃಷ್ಟಿಸಬಹುದು,” ಎಂದು ಪಟುಶ್ಕಾ ಹೇಳಿದ್ದಾರೆ. ಭಾರತದ ವೈವಿಧ್ಯಮಯ ರಸ್ತೆಗಳು ಮತ್ತು ಸವಾಲಿನ ಸಾರಿಗೆ ವ್ಯವಸ್ಥೆಯು ಮುಂದಿನ ಪೀಳಿಗೆಯ ಆಟೋಮೋಟಿವ್ ಎಐ (Automotive Intelligence) ತಂತ್ರಜ್ಞಾನವನ್ನು ತರಬೇತುಗೊಳಿಸಲು ಮತ್ತು ಪರೀಕ್ಷಿಸಲು ಅತ್ಯಂತ ಸೂಕ್ತವಾದ ವೇದಿಕೆಯಾಗಿದೆ” ಎಂದು ಅವರು ವಾದಿಸಿದ್ದಾರೆ.
“ಆಟೋಮೊಬೈಲ್ ಉದ್ಯಮವು ಕೇವಲ ಸಾಫ್ಟ್‌ವೇರ್-ಚಾಲಿತ ವಾಹನಗಳ (ಎಸ್‌ಡಿವಿ) ಹಂತವನ್ನು ದಾಟಿ, ಈಗ ಎಐ-ಚಾಲಿತ ವಾಹನಗಳ ಕಡೆಗೆ ಹೆಜ್ಜೆ ಇಡುತ್ತಿದೆ. ಸಾಫ್ಟ್‌ವೇರ್ ವಾಹನಗಳು ಕೇವಲ ಓವರ್-ದಿ-ಏರ್ (OTA) ಅಪ್ಡೇಟ್‌ಗಳಿಗೆ ಸೀಮಿತವಾಗಿದ್ದರೆ, ಎಐ-ಚಾಲಿತ ವಾಹನಗಳು ಸಂದರ್ಭಗಳನ್ನು ಅರ್ಥಮಾಡಿಕೊಳ್ಳಬಲ್ಲವು, ಚಾಲಕನ ಹವ್ಯಾಸಗಳನ್ನು ಕಲಿಯಬಲ್ಲವು ಮತ್ತು ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ನಿರಂತರವಾಗಿ ಬದಲಾಗಬಲ್ಲವು. “ಕಳೆದ ಒಂದು ಶತಮಾನದಿಂದ ನಾವು ಮನುಷ್ಯರು ಅರ್ಥಮಾಡಿಕೊಳ್ಳಬೇಕಾದ ಕಾರುಗಳನ್ನು ತಯಾರಿಸಿದ್ದೇವೆ. ಆದರೆ ಇಂದು ನಾವು ಮನುಷ್ಯರನ್ನು ಅರ್ಥಮಾಡಿಕೊಳ್ಳುವ ಕಾರುಗಳನ್ನು ತಯಾರಿಸಲು ಆರಂಭಿಸಿದ್ದೇವೆ,” ಎಂದು ಅವರು ಬಣ್ಣಿಸಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ, ಭಾರತದ ರಸ್ತೆ ಮೂಲಸೌಕರ್ಯ, ಟ್ರಾಫಿಕ್ ಶೈಲಿ, ಭಾಷೆಗಳು ಮತ್ತು ಗ್ರಾಹಕರ ಬಳಕೆಯ ವಿಧಾನಗಳು ವಿಭಿನ್ನ ಹಾಗೂ ಸಂಕೀರ್ಣವಾಗಿವೆ. ಇದನ್ನು ಒಂದು ಸವಾಲಾಗಿ ನೋಡುವ ಬದಲು ಭಾರತದ ತಾಂತ್ರಿಕ ಶಕ್ತಿಯಾಗಿ ಬಳಸಿಕೊಳ್ಳಬೇಕು. ಭಾರತದ ಇಂತಹ ಅನಿಶ್ಚಿತ ರಸ್ತೆ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ತರಬೇತಿ ಪಡೆದ ಎಐ ವ್ಯವಸ್ಥೆಗಳು, ಜಾಗತಿಕ ಮಟ್ಟದಲ್ಲೂ ಅತ್ಯಂತ ಸುಲಭವಾಗಿ ಯಶಸ್ವಿಯಾಗಬಲ್ಲವು ಎಂಬುದು ಸ್ವೆನ್ ಪಟುಶ್ಕಾ ಅವರ ಅನಿಸಿಕೆ.
“ಇಂದಿನ ಗ್ರಾಹಕರು ತಮ್ಮ ವಾಹನಗಳಲ್ಲಿ ಕನೆಕ್ಟೆಡ್ ಸೇವೆಗಳು, ವಾಯ್ಸ್ ಇಂಟರ್‌ಫೇಸ್ (ಧ್ವನಿ ನಿಯಂತ್ರಣ) ಮತ್ತು ನಿರಂತರವಾದ ಫೀಚರ್ ಅಪ್‌ಗ್ರೇಡ್‌ಗಳನ್ನು ನಿರೀಕ್ಷಿಸುತ್ತಿದ್ದಾರೆ. “ಈಗ ವಾಹನಗಳಿಗೆ ಮತ್ತೊಂದು ಕಾರು ಮೈಲಿಗಲ್ಲಲ್ಲ (Benchmark), ಬದಲಿಗೆ ಸ್ಮಾರ್ಟ್‌ಫೋನ್ ಹೊಸ ಮೈಲಿಗಲ್ಲಾಗಿದೆ,” ಎಂದು ಪಟುಶ್ಕಾ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಟ್ರಾನ್ಸಾಕ್ಷನ್ಸ್ನಲ್ಲಿ ಸಣ್ಣ ಮೊತ್ತದ ವಂಚನೆ ಸಿಗಲಿದೆ ಪರಿಹಾರ; ಆರ್ಬಿಐನಿಂದ ಹೊಸ ನಿಯಮಗಳು ಜಾರಿಗೆ
ಎಐ-ಚಾಲಿತ ವಾಹನಗಳನ್ನು ಸೃಷ್ಟಿಸಲು ಪ್ರಮುಖ ಆರು ಅಂಶಗಳು ಅತ್ಯಗತ್ಯ ಎಂದು ಟಾಟಾ ಮೋಟರ್ಸ್ ಪಿವಿ ಸಿಟಿಒ ಪಟ್ಟಿ ಮಾಡಿದ್ದಾರೆ:
ಯಾವುದೇ ಒಂದು ವಾಹನ ತಯಾರಕ ಕಂಪನಿ (OEM) ಇಡೀ ಎಐ ಮೊಬಿಲಿಟಿ ತಂತ್ರಜ್ಞಾನವನ್ನು ಏಕಾಂಗಿಯಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಭವಿಷ್ಯದ ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಕ್ಲೌಡ್ ಪೂರೈಕೆದಾರರು, ಎಐ ಪ್ಲಾಟ್‌ಫಾರ್ಮ್ ಕಂಪನಿಗಳು ಮತ್ತು ಡಿಜಿಟಲ್ ಮೂಲಸೌಕರ್ಯ ಒದಗಿಸುವವರ ಜೊತೆ ಕೈಜೋಡಿಸುವುದು ಅನಿವಾರ್ಯವಾಗಿದೆ. ಕಾರಿನ ಸುರಕ್ಷತೆ, ಸಿಸ್ಟಮ್ ವಿನ್ಯಾಸ ಮತ್ತು ಗ್ರಾಹಕರ ಅನುಭವದ ನಿಯಂತ್ರಣವನ್ನು ವಾಹನ ಕಂಪನಿಗಳು ತಮ್ಮ ಬಳಿಯೇ ಇಟ್ಟುಕೊಂಡು, ಉಳಿದ ತಂತ್ರಜ್ಞಾನಕ್ಕೆ ಪಾಲುದಾರಿಕೆಯನ್ನು ಅವಲಂಬಿಸಬೇಕಾಗುತ್ತದೆ ಎಂದು ಸ್ವೆನ್ ಪಟುಶ್ಕಾ ವಿವರಿಸಿದ್ದಾರೆ.
ಕೊನೆಯದಾಗಿ ಮಾತನಾಡಿದ ಪಟುಶ್ಕಾ, “ಈಗ ಭಾರತದಿಂದ, ಭಾರತಕ್ಕಾಗಿ ಮತ್ತು ಇಡೀ ಜಗತ್ತಿಗಾಗಿ ಅತ್ಯಾಧುನಿಕ ಕಾರುಗಳನ್ನು ನಿರ್ಮಿಸುವ ಸಮಯ ಬಂದಿದೆ,” ಎಂದು ಉತ್ಸಾಹ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ