ನವದೆಹಲಿ, ಜುಲೈ 26: ಕೆಸರಿನಲ್ಲಿ ಕಮಲ ಅರಳುವಂತೆ ಜಾಗತಿಕ ಆರ್ಥಿಕತೆಯ ಡೋಲಾಯಮಾನ ಪರಿಸ್ಥಿತಿಯ ಮಧ್ಯೆ ಭಾರತದ ಆರ್ಥಿಕತೆ ಗಮನೀಯವೆನಿಸುವ ರೀತಿಯಲ್ಲಿ ಬೆಳೆಯುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈ ವರ್ಷದ ಜಾಗತಿಕ ಆರ್ಥಿಕ ಬೆಳವಣಿಗೆ ಬಗ್ಗೆ ಅಂದಾಜು ಮಾಡಿದ್ದು, ಭಾರತದ ಪ್ರಗತಿ ಬಗ್ಗೆ ಆಶಾದಾಯಕವಾಗಿದೆ. 2023ರ ಕ್ಯಾಲಂಡರ್ ವರ್ಷದಲ್ಲಿ ಭಾರತ ಶೇ. 6.1ರಷ್ಟು ಆರ್ಥಿಕವೃದ್ಧಿ ಕಾಣಬಹುದು ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. 2023ರಲ್ಲಿ ಶೇ. 5.9ರಷ್ಟು ಮಾತ್ರ ಭಾರತದ ಆರ್ಥಿಕತೆ ಬೆಳೆಯಬಹುದು ಎಂದು ಐಎಂಎಫ್ ಏಪ್ರಿಲ್ನಲ್ಲಿ ಅಂದಾಜು ಮಾಡಿತ್ತು. ಈಗ ಭಾರತದಲ್ಲಿ ಹೂಡಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐಎಂಎಫ್ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವಂತಾಗಿದೆ.
ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯಲ್ಲಿ ಈ ಸಂಗತಿಗಳನ್ನು ಪ್ರಸ್ತಾಪಿಸಿರುವ ಇಂಟರ್ನ್ಯಾಷನಲ್ ಮಾನಿಟರಿ ಫಂಡ್, 2022ರ ಕೊನೆಯ ಕ್ವಾರ್ಟರ್ನಲ್ಲಿ ಭಾರತ ನಿರೀಕ್ಷೆಮೀರಿದ ಬೆಳವಣಿಗೆ ಕಂಡಿತ್ತು. ಅದೇ ಹಾದಿ ಮುಂದುವರಿದು 2023ರಲ್ಲಿ ಉತ್ತಮ ಪ್ರಗತಿ ಕಾಣಬಹುದು ಎಂದು ಹೇಳಿದೆ.
ಇದನ್ನೂ ಓದಿ: Indian Economy: ಮೂರ್ನಾಲ್ಕು ದಶಕದಲ್ಲಿ ಭಾರತವೇ ವಿಶ್ವದ ನಂಬರ್ ಒನ್: ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ
ಐಎಂಎಫ್ ವರದಿ ಪ್ರಕಾರ, 2022ರಲ್ಲಿ ಶೇ. 3.5ರಷ್ಟು ಇರುವ ಜಾಗತಿಕ ಆರ್ಥಿಕತೆ ಬೆಳವಣಿಗೆ 2023ರಲ್ಲಿ ಶೇ. 3ಕ್ಕೆ ಇಳಿಯಬಹುದು. 2024ರಲ್ಲೂ ಶೇ. 3ರಷ್ಟು ಮಾತ್ರ ಜಾಗತಿಕ ಆರ್ಥಿಕತೆ ವೃದ್ಧಿಸಬಹುದು ಎನ್ನಲಾಗಿದೆ.
ಜಾಗತಿಕ ಆರ್ಥಿಕತೆ ನಿರೀಕ್ಷೆಗಿಂತಲೂ ಮಂದಗತಿಯಲ್ಲಿರುವುದಾದರೂ ಹಣದುಬ್ಬರ ಮುಂಬರುವ ದಿನಗಳಲ್ಲಿ ತಹಬದಿಗೆ ಬರಬಹುದು ಎಂದು ಐಎಂಎಫ್ ಭಾವಿಸಿದೆ. ಜಾಗತಿಕ ಸಮಗ್ರ ಹಣದುಬ್ಬರ (ಹೆಡ್ಲೈನ್ ಇನ್ಫ್ಲೇಷನ್) 2022ರಲ್ಲಿ ಶೇ. 8.7ರಷ್ಟು ಇತ್ತು. ಅದು 2023ರಲ್ಲಿ ಶೇ. 6.8ಕ್ಕೆ ಮತ್ತು 2024ರಲ್ಲಿ ಶೇ. 5.2ಕ್ಕೆ ಇಳಿಯಬಹುದು. ಮುಖ್ಯ ಹಣದುಬ್ಬರ ಇನ್ನೂ ಹೆಚ್ಚು ವೇಗದಲ್ಲಿ ಕಡಿಮೆ ಆಗಬಹುದು. ಜಾಗತಿಕವಾಗಿ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕ್ಗಳು ಬಡ್ಡಿ ದರ ಹೆಚ್ಚಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುತ್ತಿವೆ. ಇದು ಜಾಗತಿಕ ಹಣದುಬ್ಬರ ತಗ್ಗಲು ಸಹಾಯವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ