India Russia Payment Issue: ಭಾರತ ರಷ್ಯಾ ಮಧ್ಯೆ ಚೀನಾ ಕಾಟ; ಪಾಕಿಸ್ತಾನಕ್ಕೆ ಸುಗ್ಗಿ; ಇದು ವಿಧಿ ಆಟವಾ?
India's Problem In Paying Russia for Oil Imports: ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಛಾ ತೈಲ ಖರೀದಿಸುತ್ತಿರುವ ಭಾರತಕ್ಕೆ ಈಗ ಹೊಸ ತಲೆನೋವು ಸೃಷ್ಟಿಯಾಗಿದೆ. ರಷ್ಯಾಗೆ ಯಾವ ಕರೆನ್ಸಿಯಲ್ಲಿ ಹಣ ಪಾವತಿ ಮಾಡುವುದು ಎಂಬ ಪ್ರಶ್ನೆ ಎದುರಾಗಿದೆ. ಡಾಲರ್ನಲ್ಲಿ ವಹಿವಾಟು ಸಾಧ್ಯವಿಲ್ಲ. ರುಪಾಯಿ ಪಡೆಯಲು ರಷ್ಯಾ ತಯಾರಿಲ್ಲ. ಚೀನೀ ಕರೆನ್ಸಿಗೆ ಭಾರತ ಒಪ್ಪಲ್ಲ....
ಉಕ್ರೇನ್ ಯುದ್ಧ ನಡೆದಾಗಿನಿಂದಲೂ ಭಾರತಕ್ಕೆ ಕಚ್ಛಾ ತೈಲ (Crude Oil) ಸಮೃದ್ಧವಾಗಿ ಸಿಗುತ್ತಿದೆ. ರಷ್ಯಾದಿಂದ ಬಹಳ ಕಡಿಮೆ ಬೆಲೆಗೆ ತೈಲವನ್ನು ಚೀನಾ ಮತ್ತು ಭಾರತದ ಪೆಟ್ರೋಲಿಯಂ ಕಂಪನಿಗಳು ಪಡೆಯುತ್ತಿವೆ. ಈಗ ಪಾಕಿಸ್ತಾನವೂ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಪಡೆಯುತ್ತಿದೆ. ಇಷ್ಟೇ ಆಗಿದ್ದರೆ ನಾವೂ ತಿನ್ನುತ್ತೇವೆ, ಅವರೂ ತಿನ್ನಲಿ, ಇವರೂ ತಿನ್ನಲಿ ಎನ್ನಬಹುದಿತ್ತು. ಈಗ ರಷ್ಯಾದ ಕಚ್ಛಾ ತೈಲ ಖರೀದಿಸಲು ಭಾರತಕ್ಕೆ ಚೀನಾ ಅಡ್ಡ ಎನಿಸಿದೆ. ತೈಲ ಖರೀದಿಗೆ ರಷ್ಯಾಗೆ ಹಣ ಪಾವತಿಸಲು ಚೀನೀ ಯುವಾನ್ ಕರೆನ್ಸಿ (Chinese Currency Yuan) ಬಳಕೆ ಮಾಡಲು ಭಾರತ ನಿರಾಕರಿಸುತ್ತಿದೆ. ರೂಪಾಯಿ ಕರೆನ್ಸಿಯಲ್ಲಿ ಹಣ ಪಾವತಿ ಸ್ವೀಕರಿಸಲು ರಷ್ಯ ನಿರಾಕರಿಸುತ್ತಿದೆ. ಇದೇ ಈಗ ಭಾರತಕ್ಕೆ ಪೀಕಲಾಟಕ್ಕಿಟ್ಟುಕೊಂಡಿರುವುದು.
ರಷ್ಯಾ ದೇಶಕ್ಕೆ ಪಾಶ್ಚಿಮಾತ್ಯ ದೇಶಗಳು ಆರ್ಥಿಕ ದಿಗ್ಬಂಧನ ಹೇರಿವೆ. ರಷ್ಯಾ ಡಾಲರ್ ಕರೆನ್ಸಿ ಬಳಕೆ ಮಾಡಲಾಗುವುದಿಲ್ಲ. ಹೀಗಾಗಿ ಹಣದ ವಹಿವಾಟಿಗೆ ಅದು ಪರ್ಯಾಯ ಕರೆನ್ಸಿಗಳನ್ನು ಬಳಸುವುದು ಅನಿವಾರ್ಯ. ಚೀನಾ ಜೊತೆ ರಷ್ಯಾ ಸಂಬಂಧ ಗಾಢವಾಗಿದೆ. ಕೊಡು ಕೊಳ್ಳುವಿಕೆ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ, ಚೀನಾಗೆ ಕಚ್ಛಾ ತೈಲ ಮಾರುವ ರಷ್ಯಾ ಯುವಾನ್ ಕರೆನ್ಸಿಯಿಂದ ಹಣ ಸ್ವೀಕರಿಸಲು ಯಾವ ಸಮಸ್ಯೆಯೂ ಇಲ್ಲ. ಪಾಕಿಸ್ತಾನ ಕೂಡ ಯುಆನ್ ಕರೆನ್ಸಿ ಮೂಲಕವೇ ರಷ್ಯಾಗೆ ಹಣ ಪಾವತಿ ಮಾಡುತ್ತಿದೆ. ಇದು ಪಾಕಿಸ್ತಾನಕ್ಕೂ ಅನುಕೂಲವಾಗಿದೆ, ರಷ್ಯಾಗೂ ಅನುಕೂಲವಾಗಿದೆ.
ರೂಪಾಯಿ ಯಾಕೆ ಬಳಸುವುದಿಲ್ಲ ರಷ್ಯಾ?
ಭಾರತ ಮತ್ತು ರಷ್ಯಾ ಮಧ್ಯೆ ಕೊಡುಕೊಳ್ಳುವಿಕೆ ಬಹಳ ಕಡಿಮೆ. ಭಾರತದಲ್ಲಿ ರಷ್ಯಾದ ಹೂಡಿಕೆಯಾಗಲೀ ಆಮದಾಗಲೀ ತೀರಾ ನಗಣ್ಯ. ಆದರೆ, ರಷ್ಯಾದಿಂದ ಭಾರತ ಮಾಡಿಕೊಳ್ಳುವ ಆಮದು ಬಹಳ ಹೆಚ್ಚಿದೆ. ಒಂದು ವೇಳೆ ಭಾರತದಿಂದ ರೂಪಾಯಿ ಕರೆನ್ಸಿಯಲ್ಲಿ ಹಣ ಪಾವತಿಯನ್ನು ಪಡೆದರೆ ರಷ್ಯಾ ಆ ರೂಪಾಯಿಯನ್ನು ಎಲ್ಲಿ ಉಪಯೋಗಿಸಲು ಸಾಧ್ಯ? ರಷ್ಯಾಗೆ ಯಾವ ಉಪಯೋಗವೂ ಆಗುವುದಿಲ್ಲ.
ರಷ್ಯನ್ ಸಂಸ್ಥೆಗಳನ್ನು ಭಾರತದಲ್ಲಿ ಸೂಕ್ತ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಪುಸಲಾಯಿಸುವುದು ಭಾರತಕ್ಕೆ ಇರುವ ಒಂದು ದಾರಿ. ಆದರೆ, ಇದು ದೂರಗಾಮಿ ಆಲೋಚನೆ. ಸದ್ಯದ ಕಚ್ಛಾ ತೈಲ ಸರಬರಾಜು ವಿಚಾರದಲ್ಲಿ ಭಾರತದ ಹಣ ಪಾವತಿ ಸಮಸ್ಯೆಗೆ ಏನು ಪರಿಹಾರಗಳಿವೆ?
ಇದನ್ನೂ ಓದಿ: Shree Cements: ಶ್ರೀ ಸಿಮೆಂಟ್ಸ್ ವಿರುದ್ಧ 23,000 ಕೋಟಿ ತೆರಿಗೆ ವಂಚನೆ ಆರೋಪ; ಕುಸಿಯುತ್ತಿರುವ ಷೇರುಬೆಲೆ
ಪರ್ಯಾಯ ಕರೆನ್ಸಿಗಳ ಕೊರತೆ
ರಷ್ಯಾಗೆ ಬಳಕೆಗೆ ಸಾಧ್ಯವಾಗಿರುವ ಕರೆನ್ಸಿಗಳ ಕೊರತೆ ಇದೆ. ಚೀನಾದ ಯುಆನ್ ಕರೆನ್ಸಿ ರಷ್ಯಾಗೆ ಸದ್ಯಕ್ಕೆ ಉಪಯುಕ್ತ ಎನಿಸಿದೆ. ಆದರೆ, ಚೀನಾ ಜೊತೆಗಿನ ಪರೋಕ್ಷ ತಿಕ್ಕಾಟದ ಕಾರಣಕ್ಕೆ ಭಾರತಕ್ಕೆ ಆ ಕರೆನ್ಸಿ ಬಳಸಲು ಇಚ್ಛೆ ಇಲ್ಲ. ಅದು ಬಿಟ್ಟರೆ ಯುಎಇ ದೇಶದ ಡಿರ್ಹಾಮ್ ಕರೆನ್ಸಿ ಬಳಕೆ ರಷ್ಯಾಗೆ ಪಥ್ಯ ಇದೆ. ಈ ಕರೆನ್ಸಿ ಬಳಸಲು ಭಾರತಕ್ಕೆ ಸಮಸ್ಯೆ ಏನಿಲ್ಲ. ಆದರೆ, ಡಿರ್ಹಾಮ್ ಕರೆನ್ಸಿ ಡಾಲರ್ಗೆ ಜೋಡಿತವಾಗಿದೆ. ಈ ಕರೆನ್ಸಿಯನ್ನು ಭಾರತ ಬಳಸಿದರೆ ಡಾಲರ್ಗೆ ಹೆಚ್ಚು ಲಾಭವಾಗುತ್ತದೆ. ರೂಪಾಯಿ ಮೌಲ್ಯ ಕುಸಿಯುತ್ತಾ ಹೋಗುತ್ತದೆ. ಹೀಗಾಗಿ, ಡಿರ್ಹಾಮ್ ಬಳಕೆಗೂ ಭಾರತ ಹಿಂದೇಟು ಹಾಕುತ್ತಿದೆ.
ಆದರೆ, ತತ್ಕ್ಷಣದ ಪರಿಸ್ಥಿತಿಯಲ್ಲಿ ಭಾರತ ಆದಷ್ಟೂ ಬೇಗ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. ಭವಿಷ್ಯದ ದಿನಗಳಲ್ಲಿ ಇಂಥ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಭಾರತ ಪರ್ಯಾಯ ಪಾವತಿ ವ್ಯವಸ್ಥೆ ರೂಪಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ