ನವದೆಹಲಿ, ಮಾರ್ಚ್ 15: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex reserves) ಸತತವಾಗಿ ಏರುತ್ತಿದೆ. ಮಾರ್ಚ್ 8ಕ್ಕೆ ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ಮೊತ್ತ 10.47 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಇದರೊಂದಿಗೆ ಭಾರತದ ಇತ್ತೀಚಿನ ಫಾರೆಕ್ಸ್ ರಿಸರ್ವ್ಸ್ 636.1 ಬಿಲಿಯನ್ ಡಾಲರ್ ಆಗಿದೆ. ಆರ್ಬಿಐ (RBI) ಶುಕ್ರವಾರ ದತ್ತಾಂಶದಲ್ಲಿ ಬಿಡುಗಡೆ ಮಾಡಿದೆ. ಹಿಂದಿನ ವಾರದಲ್ಲಿ, ಅಂದರೆ ಮಾರ್ಚ್ 1ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 6.55 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿತ್ತು. ಭಾರತದ ಈಗಿನ ಫಾರೆಕ್ಸ್ ರಿಸರ್ವ್ಸ್ ಸತತವಾಗಿ ಹೆಚ್ಚುತ್ತಿದ್ದು ಎರಡು ವರ್ಷದ ಹಿಂದಿನ ಗರಿಷ್ಠ ಮಟ್ಟಕ್ಕೆ ಸಮೀಪಿಸುತ್ತಿದೆ.
ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಮಾರ್ಚ್ 8ರ ವಾರದಲ್ಲಿ ಏರಿಕೆಯಾದ 10.47 ಬಿಲಿಯನ್ ಡಾಲರ್ ಫಾರೆಕ್ಸ್ ರಿಸರ್ವ್ಸ್ ಏರಿಕೆಯಲ್ಲಿ ವಿದೇಶೀ ಕರೆನ್ಸಿ ಆಸ್ತಿ ಹೆಚ್ಚಳವೇ ಅಧಿಕ. ಈ ಫಾರೀನ್ ಕರೆನ್ಸಿ ಅಸೆಟ್ಗಳು 8.12 ಬಿಲಿಯನ್ ಡಾಲರ್ನಷ್ಟು ಏರಿವೆ. ಚಿನ್ನದ ಮೀಸಲು ಸಂಪತ್ತು 2.3 ಬಿಲಿಯನ್ ಡಾಲರ್ನಷ್ಟು ಹಿಗ್ಗಿದೆ. ಇನ್ನು, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ 31 ಮಿಲಿಯನ್ ಡಾಲರ್, ಐಎಂಎಫ್ನಲ್ಲಿನ ನಿಧಿ 19 ಮಿಲಿಯನ್ ಡಾಲರ್ನಷ್ಟು ಹೆಚ್ಚಿದೆ.
ಇದನ್ನೂ ಓದಿ: ಮಾಲ್ಡೀವ್ಸ್ಗೆ ಹೋಗೋದು ಬಿಟ್ಟ ಭಾರತೀಯರು; ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ
ಒಟ್ಟು ಫಾರೆಕ್ಸ್ ರಿಸರ್ವ್ಸ್ ನಿಧಿ: 636.1 ಬಿಲಿಯನ್ ಡಾಲರ್
ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 2021ರ ಅಕ್ಟೋಬರ್ ತಿಂಗಳಲ್ಲಿ 645 ಬಿಲಿಯನ್ ಡಾಲರ್ನಷ್ಟಿತ್ತು. ಅದು ಭಾರತದ ಈವರೆಗಿನ ಸಾರ್ವಕಾಲಿಕ ಗರಿಷ್ಠ ಫೋರೆಕ್ಸ್ ರಿಸರ್ವ್ಸ್ ಮೊತ್ತವೆನಿಸಿದೆ. ಈಗ ಮತ್ತೆ ಆ ಎತ್ತರಕ್ಕೆ ಏರುತ್ತಿರುವಂತಿದೆ.
ಇದನ್ನೂ ಓದಿ: ವೈದ್ಯರಿಗೆ ಗಿಫ್ಟ್, ಉಚಿತ ಟೂರ್ ಪ್ಯಾಕೇಜ್ ಇತ್ಯಾದಿ ಕೊಡುವಂತಿಲ್ಲ; ಫಾರ್ಮಾ ಕಂಪನಿಗಳಿಗೆ ಸರ್ಕಾರ ಲಕ್ಷ್ಮಣರೇಖೆ
ಅತಿ ಹೆಚ್ಚು ಫಾರೆಕ್ಸ್ ರಿಸರ್ವ್ಸ್ ಸಂಗ್ರಹದಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಬರೋಬ್ಬರಿ 3.4 ಟ್ರಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಜಪಾನ್ 1.2 ಟ್ರಿಲಿಯನ್ ಡಾಲರ್, ಸ್ವಿಟ್ಜರ್ಲ್ಯಾಂಡ್ 818 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ಸಂಪತ್ತು ಹೊಂದಿದ್ದು, ಭಾರತಕ್ಕಿಂತ ಮೇಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ