
ನವದೆಹಲಿ, ಜೂನ್ 21: ಸುಧಾರಣಾ ಯೋಜನೆಗಳಿಗೆ ಬೆಂಬಲ ನೀಡಲು, ಏರುತ್ತಿರುವ ಸಬ್ಸಿಡಿ ವೆಚ್ಚಗಳನ್ನು ಸರಿದೂಗಿಸಲು ಮತ್ತು ನಗರಾಭಿವೃದ್ಧಿ ಯೋಜನೆಗಳಿಗೆ ಧನಸಹಾಯ ನೀಡಲು ಭಾರತ ಸರ್ಕಾರವು ಅಂತಾರಾಷ್ಟ್ರೀಯ ಬ್ಯಾಂಕುಗಳಿಂದ ಭಾರೀ ಮೊತ್ತದ ಸಾಲ ಪಡೆಯುತ್ತಿದೆ. ವಿಶ್ವ ಬ್ಯಾಂಕ್ (World Bank) ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನಿಂದ ಸುಮಾರು $2.5 ಬಿಲಿಯನ್ (24,000 ಕೋಟಿ ರೂ) ಸಾಲ ಪಡೆಯಲು ಮಾತುಕತೆ ನಡೆಸುತ್ತಿದೆ.
ವಿಶ್ವ ಬ್ಯಾಂಕ್‌ನಿಂದ $1.5 ಬಿಲಿಯನ್ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ $1 ಬಿಲಿಯನ್ ಸಾಲ ಪಡೆಯುವ ನಿರೀಕ್ಷೆ ಇದೆ. ಮುಂದಿನ ಎರಡು ತಿಂಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಬಹುದು. ವರದಿ ಪ್ರಕಾರ ವಿಶ್ವ ಬ್ಯಾಂಕ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ಗಳ ಮಂಡಳಿಯು ಭಾರತದ ಸಾಲಕ್ಕೆ ಶುಕ್ರವಾರ (ಜೂನ್ 19) ಅನುಮೋದನೆ ನೀಡಿರುವುದು ತಿಳಿದುಬಂದಿದೆ.
ಸಾಲಕ್ಕೆ ಕಾರಣವೇನು?: ಮಧ್ಯಪ್ರಾಚ್ಯದಲ್ಲಿ (ಇರಾನ್ ಸಂಘರ್ಷ) ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಭಾರತವು ತನ್ನ 80% ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ದೇಶದ ನಾಗರಿಕರನ್ನು ಬೆಲೆ ಏರಿಕೆಯಿಂದ ರಕ್ಷಿಸಲು ಇಂಧನ ಮತ್ತು ರಸಗೊಬ್ಬರಗಳ ಮೇಲಿನ ಸಬ್ಸಿಡಿ ವೆಚ್ಚವನ್ನು ಸರ್ಕಾರ ಹೆಚ್ಚಿಸಬೇಕಾಗಿ ಬಂದಿದೆ. ಇದರಿಂದಾಗಿ ಬಜೆಟ್ ಕೊರತೆ ಎದುರಾಗಿದ್ದು, ದೊಡ್ಡ ಯೋಜನೆಗಳಿಗೆ ಹಣದ ಕೊರತೆಯಾಗಿದೆ.
ಹಣದ ಬಳಕೆ ಎಲ್ಲಿ?: ಈ ಸಾಲದ ಮೊತ್ತವನ್ನು ಮುಖ್ಯವಾಗಿ ನಗರ ಮೂಲಸೌಕರ್ಯಗಳ ಅಭಿವೃದ್ಧಿ (Urban Infrastructure) ಮತ್ತು ಹೊಸ ಉದ್ಯೋಗ ಸೃಷ್ಟಿಗೆ ಪೂರಕವಾದ ಯೋಜನೆಗಳಿಗಾಗಿ ಬಳಸಿಕೊಳ್ಳಲು ಸರ್ಕಾರ ಯೋಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದು, ಅದಕ್ಕೆ ಈ ಹಣ ಸಹಕಾರಿಯಾಗಲಿದೆ.
ಇದನ್ನೂ ಓದಿ: ರಿಲಯನ್ಸ್ನ ಸೆಲ್ ಮತ್ತು ಬೆಸ್ ತಯಾರಿಕೆಯ ಸಾಮರ್ಥ್ಯ 120 GWhಕ್ಕೆ; ಬೆಸ್ ಯಾಕೆ ಮುಖ್ಯ?
ಭಾರತವು ವಿಶ್ವ ಬ್ಯಾಂಕ್‌ನ ಅತಿ ದೊಡ್ಡ ಗ್ರಾಹಕ ದೇಶಗಳಲ್ಲಿ ಒಂದಾಗಿದ್ದು, ಈಗಾಗಲೇ $37 ಬಿಲಿಯನ್ನಷ್ಟು ಮೊತ್ತದ ಸಾಲಗಳನ್ನು ಹೊಂದಿದೆ. ಪ್ರಸ್ತುತ ಕೇಳಲಾಗಿರುವ ಸಾಲವು ವಿಶ್ವ ಬ್ಯಾಂಕ್ ಭಾರತಕ್ಕೆ ವಾರ್ಷಿಕವಾಗಿ ನೀಡಲು ಒಪ್ಪಿಕೊಂಡಿರುವ $8-$10 ಬಿಲಿಯನ್ ಸಾಲದ ಕಾರ್ಯಕ್ರಮದ ಭಾಗವೇ ಆಗಿದೆ ಎಂದು ವರದಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ