ಚ್ಯಾಟ್ಜಿಪಿಟಿ, ಡೀಪ್ಸೀಕ್ ರೀತಿಯಲ್ಲಿ ಭಾರತದಿಂದ ಈ ವರ್ಷವೇ ಸ್ವಂತವಾದ ಎಐ ಮಾಡಲ್ ಬಿಡುಗಡೆ ಸಾಧ್ಯತೆ
India's own generative AI model: ಅಮೆರಿಕದ ಚ್ಯಾಟ್ಜಿಪಿಟಿ, ಜೆಮಿನಿ, ಗ್ರೋಕ್ ಇತ್ಯಾದಿ ಜನರೇಟಿವ್ ಎಐ ಮಾಡಲ್ಗಳಂತೆ ಭಾರತವೂ ಕೂಡ ಸ್ವಂತವಾದ ಎಐ ಮಾಡಲ್ ಬಿಡುಗಡೆ ಮಾಡಲಿದೆ. ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ ಇನ್ನು 8-10 ತಿಂಗಳಲ್ಲಿ ಜನರೇಟಿವ್ ಎಐ ಮಾಡಲ್ ಹೊರಬರುವ ಸಾಧ್ಯತೆ ಇದೆ. ಭಾರತದಲ್ಲಿ ನಿರ್ಮಿಸಲಾಗಿರುವ ಎಐ ಕಾಂಪ್ಯೂಟಿಂಗ್ ಫೆಸಿಲಿಟಿಯಲ್ಲಿ 18,600 ಜಿಪಿಯುಗಳಿಗೆ. ಈಗಲೇ ಬಳಕೆಗೆ 10,000 ಜಿಪಿಯುಗಳಿವೆ. ಇವುಗಳನ್ನು ಬಳಸಿ ಯಾರು ಬೇಕಾದರೂ ಎಐ ಮಾಡಲ್ ಟ್ರೈನ್ ಮಾಡಬಹುದು.

ಭುವನೇಶ್ವರ್, ಜನವರಿ 30: ಅಮೆರಿಕದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪಾರುಪತ್ಯಕ್ಕೆ ಚೀನಾ ಸೆಡ್ಡು ಹೊಡೆದ ಬೆನ್ನಲ್ಲೇ ಭಾರತವೂ ಮೈಕೊಡವಿ ಮೇಲೇಳುವಂತೆ ತೋರುತ್ತಿದೆ. ಕೇಂದ್ರ ಸಚಿವ ಡಾ. ಅಶ್ವನಿ ವೈಷ್ಣವ್ ಅವರು ಭಾರತದಿಂದ ಸ್ವಂತವಾಗಿ ಜನರೇಟಿವ್ ಎಐ ಮಾಡಲ್ ರಚನೆ ಆಗಲಿದೆ ಎಂದು ಘೋಷಿಸಿದ್ದಾರೆ. ಒಡಿಶಾದ ಉತ್ಕರ್ಷ್ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವರು, ಹತ್ತು ದಿನದೊಳಗೆ ಎಐ ಮಾಡಲ್ ಅಭಿವೃದ್ಧಿಗೊಳಿಸುವ ಗುರಿ ಇಟ್ಟುಕೊಂಡಿದ್ದಾರೆ. ಚ್ಯಾಟ್ಜಿಪಿಟಿ, ಡೀಪ್ಸೀಕ್, ಜೆಮಿನಿ ರೀತಿಯಲ್ಲಿ ಇನ್ನು 8-10 ತಿಂಗಳಲ್ಲಿ ಭಾರತದ ಕಂಪನಿಯೊಂದು ಉತ್ಕೃಷ್ಟ ಎಐ ಫೌಂಡೇಶನ್ ಮಾಡಲ್ ಅನ್ನು ಆಭಿವೃದ್ಧಿಗೊಳಿಸುವ ನಿರೀಕ್ಷೆ ಇದೆ.
ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, ಭಾರತದ ಎಐ ಕಾಂಪ್ಯೂಟಿಂಗ್ ಫೆಸಿಲಿಟಿಯಲ್ಲಿ ಸುಮಾರು 19,000 ಜಿಪಿಯುಗಳ ಸಂಗ್ರಹ ಇದೆ. ‘ನಾವು ಫ್ರೇಮ್ವರ್ಕ್ ರಚಿಸಿದ್ದೇವೆ. ಇವತ್ತು ಅದನ್ನು ಆರಂಭಿಸುತ್ತಿದ್ದೇವೆ. ಭಾರತೀಯ ಸಾಂದರ್ಭಿಕತೆ ಮತ್ತು ಸಂಸ್ಕೃತಿಗೆ ಅನುಗುಣವಾದ ಎಐ ಮಾಡಲ್ಗಳನ್ನು ಕಟ್ಟುವುದು ನಮ್ಮ ಇರಾದೆಯಾಗಿದೆ’ ಎಂದು ವೈಷ್ಣವ್ ತಿಳಿಸಿದ್ದಾರೆ.
ಇದನ್ನೂ ಓದಿ: ರೇಸ್ನಲ್ಲಿ ಚೀನಾ ಮುಂದೋಡಿದ್ಹೇಗೆ? ಭಾರತ ಹಿಂದುಳಿದಿದ್ದೇಗೆ? ನಿತಿನ್ ಕಾಮತ್ ನೇರಾನೇರ ವಿಶ್ಲೇಷಣೆ
ಭಾರತದಲ್ಲಿ ಎಐ ಡೆವಲಪ್ಮೆಂಟ್ಗೆಂದು 10,000 ಜಿಪಿಯುಗಳನ್ನು ಪಡೆಯುವ ಗುರಿ ಇಡಲಾಗಿತ್ತು. ಸಚಿವರು ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ 18,600 ಜಿಪಿಯುಗಳಿವೆ. ಇದರಲ್ಲಿ ನಿವಿಡಿಯಾದ ಎಚ್100 ಜಿಪಿಯುಗಳ ಸಂಖ್ಯೆ 12,896 ಇದೆ. ಎಚ್200 ಜಿಪಿಯುಗಳ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚಿವೆ. ಇನ್ನೂ ಬಲಶಾಲಿಯಾದ ಎಂಐ325 ಮತ್ತು ಎಂಐ325ಎಕ್ಸ್ ಜಿಪಿಯುಗಳು 742 ಸಂಖ್ಯೆಯಲ್ಲಿವೆ. ಚ್ಯಾಟ್ಜಿಪಿಟಿಯಂತಹ ಎಲ್ಎಲ್ಎಂಗಳನ್ನು ಅಭಿವೃದ್ಧಿಪಡಿಸಲು ಇಷ್ಟು ಜಿಪಿಯು ಸಾಕಾಗುತ್ತದೆ.
ಎಐ ಮಾಡಲ್ ನಿರ್ಮಿಸಲು ಇಷ್ಟು ಜಿಪಿಯು ಸಾಕು….
ಚ್ಯಾಟ್ಜಿಪಿಟಿಯನ್ನು 25,000 ಜಿಪಿಯುಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. ಡೀಪ್ಸೀಕ್ ಎಐ ಅನ್ನು ಕೇವಲ 2,000 ಜಿಪಿಯುಗಳಿಂದ ಟ್ರೈನ್ ಮಾಡಲಾಗಿದೆ. ಹೀಗಾಗಿ, ಭಾರತದ ಬಳಿ ಸದ್ಯ ಇರುವ 18,000ಕ್ಕೂ ಹೆಚ್ಚು ಜಿಪಿಯುಗಳನ್ನು ಬಳಸಿ ಒಂದು ಉತ್ಕೃಷ್ಟ ಮಟ್ಟದ ಲಾರ್ಜ್ ಲ್ಯಾಂಗ್ವೇಜ್ ಎಐ ಮಾಡಲ್ ಅನ್ನು ನಿರ್ಮಿಸಬಹುದು ಎನ್ನುವ ವಿಶ್ವಾಸ ಇದೆ.
ಸರ್ಕಾರದಿಂದ ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಾಣ
ಸರ್ಕಾರವು ಎಐ ಕಾಂಪ್ಯೂಟಿಂಗ್ ಸೌಲಭ್ಯವನ್ನು ನಿರ್ಮಿಸಿದೆ. ಇದರಲ್ಲಿ 18,600 ಜಿಪಿಯುಗಳಿವೆ. ಈಗಾಗಲೇ 10,000 ಜಿಪಿಯುಗಳು ಬಳಕೆಗೆ ಸಿದ್ಧ ಇವೆ ಎನ್ನಲಾಗಿದೆ. ಸಂಶೋಧಕರು, ಡೆವಲಪರ್ಗಳು ಯಾರು ಬೇಕಾದರೂ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಇದನ್ನೂ ಓದಿ: ಚೀನಾದ ಡೀಪ್ಸೀಕ್ ಎಐ ಮಾಡಲ್ನಿಂದ ಅಮೆರಿಕಕ್ಕೆ ಶಾಕ್ವೇವ್; ಚಿಪ್ ಕಂಪನಿಯ ಷೇರೂ ಕುಸಿಯುತ್ತಿರುವುದು ಯಾವ ಲಾಜಿಕ್ಕು?
ಈ ಯೋಜನೆಯಲ್ಲಿ ಟೆಕ್ನಿಕಲ್ ಪಾರ್ಟ್ನರ್ಗಳಿದ್ದಾರೆ. 8-10 ತಿಂಗಳಲ್ಲಿ ಎಲ್ಎಲ್ಎಂಗಳನ್ನು ಟ್ರೈನ್ ಮಾಡಬಲ್ಲಂತಹ ಕನಿಷ್ಠ ಆರು ಡೆವಲಪರ್ಗಳನ್ನು ಗುರುತಿಸಲಾಗಿದೆ. ಜಿಪಿಯು ಬಳಕೆಯ ವೆಚ್ಚ ಪ್ರಪಂಚದಲ್ಲೇ ಅತ್ಯಂತ ಅಗ್ಗದ್ದಾಗಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಅಂದುಕೊಂಡಂತೆ ಇನ್ನೊಂದು ವರ್ಷದಲ್ಲಿ ಭಾರತವೇ ಸ್ವಂತವಾಗಿ ಎಐ ಮಾಡಲ್ ಅನ್ನು ನಿರ್ಮಿಸಿದಲ್ಲಿ, ಅಮೆರಿಕ, ಚೀನಾದ ಸ್ಪೆಷಲ್ ಸಾಲಿನಲ್ಲಿ ನಿಂತಂತಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ