
ನವದೆಹಲಿ, ಸೆಪ್ಟೆಂಬರ್ 17: ಅಮೆರಿಕದ ಸಂಸತ್ತು (US Congress) ಅನುಮೋದಿಸಿರುವ ಕಾಯ್ದೆಗೆ (‘Sanctioning Russia and Iran Act’) ಕಾಯ್ದೆಗೆ ಭಾರತ ಸರ್ಕಾರವು ತನ್ನ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿದೆ. ಈ ಕುರಿತು ವಿದೇಶಾಂಗ ಸಚಿವಾಲಯವು (MEA) ವಿಶೇಷ ಪ್ರಕಟಣೆ ಹೊರಡಿಸಿದ್ದು, ದೇಶದ 140 ಕೋಟಿ ಜನರ ಇಂಧನ ಭದ್ರತೆ ಹಾಗೂ ಭಾರತೀಯ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
ಅಮೆರಿಕ ಕಾಂಗ್ರೆಸ್ನಲ್ಲಿ ಮಸೂದೆ ಅಂಗೀಕಾರವಾಗಿರುವುದನ್ನು ಭಾರತ ಸರ್ಕಾರವು ಗಮನಿಸಿದ್ದು, ಈ ವಿಷಯದಲ್ಲಿ ಮುಂದಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ದೇಶದ 140 ಕೋಟಿ ಪ್ರಜೆಗಳ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಬದ್ಧವಾಗಿದೆ. ವಿವಿಧ ಮೂಲಗಳಿಂದ (Diversified Sourcing) ಇಂಧನ ಆಮದು ಮಾಡಿಕೊಳ್ಳುವುದು ಮತ್ತು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳಿಗೆ ಅನುಗುಣವಾಗಿ ತೈಲ ಖರೀದಿ ನಿರ್ಧಾರಗಳನ್ನು ಕೈಗೊಳ್ಳುವುದು ಮುಂದುವರಿಯಲಿದೆ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಭಾರತದ ಮೇಲೆ ಅಮೆರಿಕ ಶೇ. 100 ಟ್ಯಾರಿಫ್ ಹಾಕುವ ಭೀತಿ; ಬೃಹತ್ ಸುಂಕದ ತಡೆ ಬಂದರೆ ಭಾರತಕ್ಕಾಗುವ ಹಾನಿ ದೊಡ್ಡದೇ
ಉನ್ನತ ಮಟ್ಟದ ಮಾತುಕತೆ: ಕಳೆದ ಕೆಲವು ತಿಂಗಳುಗಳಲ್ಲಿ ಅಮೆರಿಕದ ಉನ್ನತ ಅಧಿಕಾರಿಗಳು ಮತ್ತು ಪ್ರತಿನಿಧಿಗಳೊಂದಿಗೆ ಈ ವಿಷಯದ ಕುರಿತು ಸವಿಸ್ತಾರವಾಗಿ ಚರ್ಚಿಸಲಾಗಿದೆ. ಈ ಮಸೂದೆಯು ಕೇವಲ ದ್ವಿಪಕ್ಷೀಯ ಬಾಂಧವ್ಯದ ಮೇಲಷ್ಟೇ ಅಲ್ಲದೆ, ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆಯೂ ಬೀರುವ ಪರಿಣಾಮಗಳನ್ನು ಭಾರತವು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪತ್ರಕರ್ತೆಯ ಎಕ್ಸ್ ಪೋಸ್ಟ್
ವ್ಯಾಪಾರ ಮತ್ತು ಆರ್ಥಿಕ ಹಿತಾಸಕ್ತಿ ರಕ್ಷಣೆ: ದೇಶದ ವ್ಯಾಪಾರ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ತೀರ್ಮಾನಗಳನ್ನು ಕೈಗೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ. ಈ ಕಾಯ್ದೆಯು ಜಾರಿಗೆ ಬಂದರೆ ಉಂಟಾಗಬಹುದಾದ ಆರ್ಥಿಕ ಹಾಗೂ ವಾಣಿಜ್ಯ ಸವಾಲುಗಳನ್ನು ಎದುರಿಸಲು ಸರ್ಕಾರವು ಭಾರತೀಯ ಉದ್ಯಮ ಮತ್ತು ವಾಣಿಜ್ಯ ಮಂಡಳಿಗಳೊಂದಿಗೆ (Trade & Industry Bodies) ನಿಕಟವಾಗಿ ಕಾರ್ಯಾಚರಿಸಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಅಮೆರಿಕದ ಶೇ.100 ಸುಂಕ ಬೆದರಿಕೆಗೆ ಭಾರತದ ಖಡಕ್ ಪ್ರತ್ಯುತ್ತರ: 140 ಕೋಟಿ ಜನರ ಇಂಧನ ಭದ್ರತೆ ನಮಗೆ ಮೊದಲ ಆದ್ಯತೆ
ಅಮೆರಿಕದ ಸಂಸತ್ತು ಅನುಮೋದನೆ ನೀಡಿರುವ ಈ ಕಾಯ್ದೆಯು ರಷ್ಯಾ ಹಾಗು ಇರಾನ್ನಿಂದ ತೈಲ ಮತ್ತು ಅನಿಲ ಖರೀದಿಸುವ ದೇಶಗಳ ಮೇಲೆ ಗರಿಷ್ಠ ಶೇ. 100ರಷ್ಟು ಟ್ಯಾರಿಫ್ ಹಾಕುವ ಅಧಿಕಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡುತ್ತದೆ. ರಷ್ಯಾದಿಂದ ಹೆಚ್ಚು ತೈಲ ಖರೀದಿಸುವ ರಾಷ್ಟ್ರಗಳಲ್ಲಿ ಚೀನಾ ಮತ್ತು ಭಾರತ ಇದೆ. ಹೀಗಾಗಿ, ಭಾರತದ ಮೇಲೆ ಟ್ರಂಪ್ ಶೇ. 100 ಟ್ಯಾರಿಫ್ ಹಾಕುವ ಅವಕಾಶ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Thu, 17 September 26