ಮಾಲ್ಡೀವ್ಸ್ನಲ್ಲಿ ಭಾರತ ವಿರೋಧಿ ಸರ್ಕಾರ ಇದ್ದರೂ ಆ ದೇಶಕ್ಕೆ ಅವಶ್ಯಕ ವಸ್ತುಗಳ ಸರಬರಾಜು ಹೆಚ್ಚಿಸಲು ಭಾರತ ಸಮ್ಮತಿ
India Rises Export Quota to Maldives: ಮಾಲ್ಡೀವ್ಸ್ ದೇಶಕ್ಕೆ ಅವಶ್ಯಕ ವಸ್ತುಗಳ ರಫ್ತು ಕೋಟಾವನ್ನು ಭಾರತ ಹೆಚ್ಚಿಸಿದೆ. ಈರುಳ್ಳಿ, ಆಲೂಗಡ್ಡೆ ಇತ್ಯಾದಿ ಆಹಾರವಸ್ತುಗಳನ್ನು ಭಾರತದಿಂದ ಮಾಲ್ಡೀವ್ಸ್ಗೆ ಆಗುತ್ತಿರುವ ಸರಬರಾಜು ಇನ್ನಷ್ಟು ಹೆಚ್ಚಲಿದೆ. ಮರಳು ಸರಬರಾಜಿನ ರಫ್ತು ಕೋಟಾವನ್ನು ಶೇ. 25ರಷ್ಟು ಹೆಚ್ಚಿಸಲಾಗಿದೆ. ಮಾಲ್ಡೀವ್ಸ್ನ ಸರ್ಕಾರ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ ಭಾರತ ವಿರೋಧಿ ಸರ್ಕಾರಿ ಇದ್ದರೂ ಮಾನವೀಯತೆಯ ಆಧಾರದಲ್ಲಿ ಭಾರತದಿಂದ ಈ ವಿನಾಯಿತಿ ನೀಡಲಾಗಿದೆ.
ಮುಂಬೈ, ಏಪ್ರಿಲ್ 5: ಭಾರತ ವಿರೋಧಿ ನಿಲುವಿರುವ ಸರ್ಕಾರ ಅಸ್ತಿತ್ವದಲ್ಲಿದ್ದರೂ ಮಾಲ್ಡೀವ್ಸ್ ವಿಚಾರದಲ್ಲಿ ಭಾರತದ ಅನುಕಂಪ ಮುಂದುವರಿದಿದೆ. ವಿವಿಧ ಆಹಾರವಸ್ತುಗಳ ರಫ್ತಿಗೆ ನಿರ್ಬಂಧ ಹಾಕಲಾಗಿದ್ದರೂ ಮಾಲ್ಡೀವ್ಸ್ ದೇಶಕ್ಕೆ ಭಾರತ ವಿನಾಯಿತಿ ನೀಡಿದೆ. ಸಕ್ಕರೆ, ಗೋಧಿ, ಅಕ್ಕಿ, ಈರುಳ್ಳಿ ಇತ್ಯಾದಿ ಅಗತ್ಯ ವಸ್ತುಗಳನ್ನು (essential commodities) ಮಾಲ್ಡೀವ್ಸ್ ದೇಶಕ್ಕೆ ಸೀಮಿತ ಪ್ರಮಾಣದಲ್ಲಿ ರಫ್ತು ಮಾಡಲು ಭಾರತದ ಸರ್ಕಾರ ಅನುಮತಿಸಿದೆ. ಮಹತ್ವದ ದ್ವಿಪಕ್ಷೀಯ ಒಪ್ಪಂದದಲ್ಲಿ (bilateral mechanism) ರಫ್ತು ಕೋಟಾ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಭಾರತೀಯ ರಾಯಭಾರ ಅಧಿಕಾರಿಗಳ (Indian high commission) ಹೇಳಿಕೆಯನ್ನು ಉಲ್ಲೇಖಿಸಿರುವ ಈ ವರದಿ ಪ್ರಕಾರ ಗೋದಿ, ಅಕ್ಕಿ, ಈರುಳ್ಳಿ ಇತ್ಯಾದಿ ಅಗತ್ಯ ವಸ್ತುಗಳ ರಫ್ತು ಕೋಟಾವನ್ನು ಶೇ. 5ರಷ್ಟು ಹೆಚ್ಚಿಸಲಾಗಿದೆ.
‘ಮಾಲ್ಡೀವ್ಸ್ ಸರ್ಕಾರದ ಮನವಿ ಮೇರೆಗೆ 2024-25ರ ವರ್ಷದಲ್ಲಿ ನಿರ್ದಿಷ್ಟ ಪ್ರಮಾಣದ ಅಗತ್ಯ ವಸ್ತುಗಳ ರಫ್ತಿಗೆ ಅನುಮಿತಸಲಾಗಿದೆ. ಈ ವಸ್ತುಗಳ ಕೋಟಾವನ್ನೂ ಹೆಚ್ಚಿಸಲಾಗಿದೆ. 1981ರಲ್ಲಿ ಚಾಲನೆಗೆ ಬಂದ ದ್ವಿಪಕ್ಷೀಯ ವ್ಯವಸ್ಥೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅನುಮೋದಿತ ಪ್ರಮಾಣವು ಈವರೆಗಿನ ಗರಿಷ್ಠವೆನಿಸಿದೆ,’ ಎಂದು ರಾಯಭಾರ ಕಚೇರಿ ಅಧಿಕೃತವಾಗಿ ಹೇಳಿಕೆ ನೀಡಿದೆ.
ಇದನ್ನೂ ಓದಿ: 50 ರೂ ಇಟ್ಟುಕೊಂಡು ದೇಶ ಬಿಟ್ಟು, ಬ್ರೂನೇ ಸುಲ್ತಾನರಿಂದ ಶಭಾಷ್ಗಿರಿ ಪಡೆಯುವ ಮಟ್ಟಕ್ಕೆ ಬೆಳೆದ ರಿಯಲ್ ಎಸ್ಟೇಟ್ ಕಿಂಗ್
ಮಾಲ್ಡೀವ್ಸ್ನ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಬೇಕಾದ ಅವಶ್ಯಕ ವಸ್ತುಗಳ ಕೋಟಾವನ್ನು ಹತ್ತು ಲಕ್ಷ ಎಂಟಿಗೆ ಏರಿಸಲಾಗಿದೆ. ನದಿಯ ಮರಳು ಮತ್ತು ಕಲ್ಲುಗಳ ಕೋಟಾವನ್ನು ಶೇ. 25ರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಲಾಗಿದೆ.
ಪಿಟಿಐ ಮಾಡಿದ ಟ್ವೀಟ್
India approves highest-ever export quotas for essential commodities to Maldives in landmark bilateral agreement: Indian High Commission pic.twitter.com/xVGutfl9U6
— Press Trust of India (@PTI_News) April 5, 2024
ಹೇಳಿಕೆ ಪ್ರಕಾರ ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು, ಬೇಳೆ ಕಾಳು ಇತ್ಯಾದಿ ಅಗತ್ಯ ಆಹಾರವಸ್ತುಗಳಿಗೂ ಶೇ. 5ರಷ್ಟು ರಫ್ತು ಕೋಟಾ ಹೆಚ್ಚಿಸಲಾಗಿದೆ.
ಭಾರತದಲ್ಲಿ ಆಹಾರವಸ್ತುಗಳ ಬೆಲೆ ಏರಿಕೆಯನ್ನು ತಪ್ಪಿಸಲು ಬಹಳಷ್ಟು ಬೆಳೆಗಳ ರಫ್ತಿಗೆ ನಿರ್ಬಂಧ ಹಾಕಿದೆ. ಆದರೆ, ಮಾಲ್ಡೀವ್ಸ್ ದೇಶಕ್ಕೆ ಭಾರತ ರಿಯಾಯಿತಿ ತೋರುತ್ತಿದ್ದು, ಅಕ್ಕಿ, ಸಕ್ಕರೆ ಮತ್ತು ಈರುಳ್ಳಿ ರಫ್ತನ್ನು 2023ರಿಂದಲೂ ಮುಂದುವರಿಸುತ್ತಿದೆ. ನೆರೆಯ ದೇಶಕ್ಕೆ ಆದ್ಯತೆ ನೀಡುವ ನೀತಿಯ ಭಾಗವಾಗಿ ಮಾಲ್ಡೀವ್ಸ್ನ ಮಾನವ ಕೇಂದ್ರಿತ ಅಭಿವೃದ್ಧಿಗೆ ಬೆಂಬಲ ನೀಡಲು ಭಾರತ ಬದ್ಧವಾಗಿದೆ ಎಂದು ಇಂಡಿಯನ್ ಹೈಕಮಿಷನ್ ಹೇಳಿದೆ.
ಇದನ್ನೂ ಓದಿ: ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಬಾರಿಗೆ ಮೈಸೂರಿನ ಉದ್ಯಮಿ ರಮೇಶ್ಗೆ ಸ್ಥಾನ; ಚಂದ್ರಯಾನಕ್ಕೆ ಕೊಡುಗೆ ಕೊಟ್ಟಿದ್ದರ ಫಲಶ್ರುತಿ
ಮಾಲ್ಡೀವ್ಸ್ ದೇಶದ ಅಧ್ಯಕ್ಷರೂ ಸೇರಿದಂತೆ ಅಲ್ಲಿನ ಸಚಿವರು, ಸಂಸದರು ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಚೀನಾದೊಂದಿಗೆ ಆಪ್ತವಾಗುತ್ತಿರುವ ಮಾಲ್ಡೀವ್ಸ್ ತನ್ನ ದೇಶದಿಂದ ಕಾಲ್ತೆಗೆಯುವಂತೆ ಭಾರತೀಯ ಸೈನಿಕರಿಗೆ ಡೆಡ್ಲೈನ್ ಕೊಟ್ಟಿದೆ. ಇಂಥ ವೈರತ್ವ ತೋರುತ್ತಿರುವ ಮಾಲ್ಡೀವ್ಸ್ ದೇಶದ ಬಗ್ಗೆ ಭಾರತ ಮಾನವೀಯತೆಯ ಕಾರಣಕ್ಕೆ ಅನುಕಂಪ ತೋರುವುದನ್ನು ಮುಂದುವರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ