
ನವದೆಹಲಿ, ಜುಲೈ 10: ವಿಶ್ವದ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಣನೀಯವಾಗಿ ನಿಯಂತ್ರಣದಲ್ಲಿವೆ ಹಾಗೂ ಅಗ್ಗವಾಗಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೂ ಭಾರತವು ತನ್ನ ಗ್ರಾಹಕರಿಗೆ ಹೊರೆಯಾಗದಂತೆ ಇಂಧನ ದರಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಅವರು ವಿವರಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿಳಿತ ಕಾಣುತ್ತಿದ್ದರೂ, ಭಾರತದಲ್ಲಿ ಇಂಧನ ಲಭ್ಯತೆ ಮತ್ತು ಕೈಗೆಟುಕುವ ದರವನ್ನು ಕಾಯ್ದುಕೊಳ್ಳಲು ಸರ್ಕಾರ ಕೈಗೊಂಡ ಪ್ರಮುಖ ಕ್ರಮಗಳು ಮತ್ತು ದೇಶದ ಭವಿಷ್ಯದ ಇಂಧನ ತಂತ್ರಗಾರಿಕೆಯನ್ನು ಸಚಿವರು ಹಂಚಿಕೊಂಡಿದ್ದಾರೆ.
ಹರ್ದೀಪ್ ಸಿಂಗ್ ಪುರಿ ವಿವರಿಸಿದಂತೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರೂ ಭಾರತದಲ್ಲಿ ದರಗಳು ಸ್ಥಿರವಾಗಿರಲು ಪ್ರಮುಖ ಕಾರಣಗಳು ಈ ಕೆಳಕಂಡಂತಿವೆ:
ಇದನ್ನೂ ಓದಿ: ಅಮೆರಿಕದ ಸೆಂಟ್ರಲ್ ಬ್ಯಾಂಕ್ನಲ್ಲಿ ಸುಧಾರಣೆ ತರಲು ಹೊರಟವರಲ್ಲಿ ರಾಜ್ ಚೆಟ್ಟಿ, ರಘುರಾಮ್ ರಾಜನ್, ಆಶಾ ಶರ್ಮಾ
ಭಾರತವು ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಎಥನಾಲ್ ಮಿಶ್ರಣ (Ethanol Blending) ತಂತ್ರಗಾರಿಕೆಯನ್ನು ಅತ್ಯಂತ ವೇಗವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವರು ವಿವರಿಸಿದ್ದಾರೆ.
2014 ರಲ್ಲಿ ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದ ಪ್ರಮಾಣ ಕೇವಲ ಶೇಕಡಾ 1.4 ರಷ್ಟಿತ್ತು. ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ಇದು ಈಗ ಶೇ. 15 ಕ್ಕೆ ತಲುಪಿದೆ. ಪೆಟ್ರೋಲ್‌ನಲ್ಲಿ ಶೇ. 20 ರಷ್ಟು ಎಥನಾಲ್ ಮಿಶ್ರಣ ಮಾಡುವ (E20) ಗುರಿಯನ್ನು ಸರ್ಕಾರ ಹೊಂದಿದ್ದು, ಇದನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ತಲುಪಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಥನಾಲ್ ಉತ್ಪಾದನೆಗಾಗಿ ಕಬ್ಬಿನ ರಸ, ಕಾಕಂಬಿ (Molasses) ಮಾತ್ರವಲ್ಲದೆ ಹಾನಿಗೊಳಗಾದ ಧಾನ್ಯಗಳು ಮತ್ತು ಹೆಚ್ಚುವರಿ ಅಕ್ಕಿಯನ್ನು ಬಳಸಲಾಗುತ್ತಿದೆ. ಇದರಿಂದಾಗಿ ದೇಶದ ರೈತರಿಗೆ ಕಳೆದ ಹತ್ತು ವರ್ಷಗಳಲ್ಲಿ ₹1.45 ಲಕ್ಷ ಕೋಟಿಗೂ ಅಧಿಕ ಹಣ ಸಂದಾಯವಾಗಿದೆ ಎನ್ನುವ ಮಾಹಿತಿಯನ್ನೂ ಸಚಿವರ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವೋಕ್ಸಾ; ಭಾರತ ಮೂಲದ 12 ವರ್ಷದ ಬಾಲಕಿ ಮಾನ ಜಂಪಾಲ ಸ್ಥಾಪಿಸಿದ ಎಐ ಸ್ಟಾರ್ಟಪ್
2021-24ರಲ್ಲಿ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಇಂಧನ ದರ ಏರಿಕೆಯನ್ನು ಎಷ್ಟು ಸಮರ್ಥವಾಗಿ ತಡೆದಿದೆ ಎಂಬುದಕ್ಕೆ ಈ ಕೆಳಗಿನ ಅಂಕಿ-ಅಂಶಗಳು ಸಾಕ್ಷಿಯಾಗಿವೆ:
ಪ್ರಸ್ತುತ ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲೇ ಪೆಟ್ರೋಲ್ ಬೆಲೆ ಬಹುತೇಕ ಭಾರತದ ದರಗಳ ಸಮೀಪಕ್ಕೆ ಬಂದಿದೆ. ಯೂರೋಪ್ನಲ್ಲಿ ಕೆಲವೆಡೆ ಎರಡು ಪಟ್ಟು ಹೆಚ್ಚು ಬೆಲೆ ಇದೆ. ವಿಶ್ವದ ಹೆಚ್ಚಿನ ದೇಶಗಳಲ್ಲಿ ಪೆಟ್ರೋಲ್ ಬೆಲೆ ಭಾರತದಕ್ಕಿಂತ ಹೆಚ್ಚು ಇದೆ.
“ಹಸಿರು ಇಂಧನ ಮತ್ತು ಇಂಧನ ಭದ್ರತೆಯತ್ತ ಭಾರತದ ಪಯಣ ಕೇವಲ ಪರಿಸರ ರಕ್ಷಣೆಯಷ್ಟೇ ಅಲ್ಲ, ಅದು ದೇಶದ ಆರ್ಥಿಕತೆಯನ್ನು ಬಲಪಡಿಸುವ ಮತ್ತು ನಮ್ಮ ರೈತರನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಭಾರತವು ಕೇವಲ ಪೆಟ್ರೋಲ್ ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಡೀಸೆಲ್‌ನಲ್ಲೂ ಬಯೋ-ಡೀಸೆಲ್ ಮಿಶ್ರಣ ಮಾಡುವ ಮತ್ತು ಹಸಿರು ಹೈಡ್ರೋಜನ್ (Green Hydrogen) ಬಳಕೆಯನ್ನು ಹೆಚ್ಚಿಸುವತ್ತ ಬಲವಾದ ಕಾರ್ಯತಂತ್ರವನ್ನು ರೂಪಿಸುತ್ತಿದೆ” ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಪ್ರಶ್ನೆ: ಭಾರತದಲ್ಲಿ ಪೆಟ್ರೋಲ್ ಬೆಲೆ ದುಬಾರಿ ಇದೆಯಾ?
ಉತ್ತರ: ಜಾಗತಿಕವಾಗಿ ಇತರ ಹೆಚ್ಚಿನ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ.
ಪ್ರಶ್ನೆ: ಭಾರತದಲ್ಲಿ ಪೆಟ್ರೋಲ್ ಬೆಲೆ ನಿಯಂತ್ರಣ ಹೇಗೆ ಸಾಧ್ಯವಾಯಿತು?
ಉತ್ತರ: ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿತು. ಒಎಂಸಿಗಳು ಕಚ್ಚಾ ತೈಲ ಬೆಲೆ ಹೆಚ್ಚಾದರೂ ಪೆಟ್ರೋಲ್ ಬೆಲೆ ಏರಿಸಲಿಲ್ಲ.
ಪ್ರಶ್ನೆ: ಇ-20 ಇಂಧನದ ಪ್ರಯೋಜನವೇನು?
ಉತ್ತರ: ಶೇ. 20ರಷ್ಟು ಎಥನಾಲ್ ಮಿಶ್ರಣ ಇರುವ ಇಂಧನವೇ ಇ-20. ಕಬ್ಬು ಮತ್ತು ಕಾಕಂಬಿಯಿಂದ ಎಥನಾಲ್ ತಯಾರಿಸಲಾಗುತ್ತದೆ. ಇದರಿಂದ ರೈತರು ಹಾಗೂ ಸರ್ಕಾರಕ್ಕೆ ಅನುಕೂಲವಾಗುತ್ತದೆ.