AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಬಿಐ ಅಂದುಕೊಂಡಷ್ಟೆಲ್ಲ ಜಿಡಿಪಿ ಈಗ ಬೆಳೆಯಲ್ಲ: ನೊಮುರಾ ಹೇಳಿಕೆ

Indian economic growth story: ಭಾರತದ ಆರ್ಥಿಕತೆ ಮಂದಗತಿಯ ಚಕ್ರ ಪ್ರವೇಶಿಸಿದೆ. ಜಿಡಿಪಿ ನಿರೀಕ್ಷಿಸಿದ ಮಟ್ಟದಲ್ಲಿ ಹೆಚ್ಚಲ್ಲ ಎಂದು ಜಪಾನೀ ಬ್ರೋಕರೇಜ್ ಸಂಸ್ಥೆ ನೊಮುರಾ ಅಭಿಪ್ರಾಯಪಟ್ಟಿದೆ. 2024-25ರಲ್ಲಿ ಆರ್ಥಿಕತೆ ಶೇ. 7.2ರಷ್ಟು ಬೆಳೆಯಬಹುದು ಎನ್ನುವ ಆರ್​ಬಿಐ ಅಂದಾಜನ್ನು ನೊಮುರಾ ತಳ್ಳಿಹಾಕಿದೆ. ಆರ್​​ಬಿಐ ತೀರಾ ಹೆಚ್ಚು ಆಶಾದಾಯಕವಾಗಿದೆ. ಆದರೆ, ಅದು ಅಂದುಕೊಂಡಷ್ಟು ಮಟ್ಟದಲ್ಲಿ ಈಗ ಆರ್ಥಿಕತೆ ಬೆಳೆಲ್ಲ ಎಂದು ನೊಮುರಾ ಹೇಳಿದೆ.

ಆರ್​ಬಿಐ ಅಂದುಕೊಂಡಷ್ಟೆಲ್ಲ ಜಿಡಿಪಿ ಈಗ ಬೆಳೆಯಲ್ಲ: ನೊಮುರಾ ಹೇಳಿಕೆ
ಭಾರತದ ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2024 | 12:49 PM

Share

ನವದೆಹಲಿ, ಅಕ್ಟೋಬರ್ 29: ಹಲವು ಬ್ರೋಕರೇಜ್ ಸಂಸ್ಥೆಗಳು ಹಾಗೂ ಆರ್​ಬಿಐ ಮೊದಲಾದ ಸಂಸ್ಥೆಗಳು ಭಾರತದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ ಶೇ. 7ರ ದರದ ಆಸುಪಾಸಿನಲ್ಲಿ ಬೆಳೆಯಬಹುದು ಎಂದು ಅಂದಾಜು ಮಾಡಿವೆ. ಆದರೆ, ಜಪಾನ್​ನ ಬ್ರೋಕರೇಜ್ ಸಂಸ್ಥೆ ನೊಮುರಾ ಭಿನ್ನ ರಾಗ ಹಾಡುತ್ತಿದೆ. ಭಾರತದ ಆರ್ಥಿಕತೆ ಆವರ್ತಕ ನಿಧಾನಗತಿಯ ಚಕ್ರದ (cyclical slowdown) ಆರಂಭದಲ್ಲಿದೆ. ಜಿಡಿಪಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ವೇಗದಲ್ಲಿ ಬೆಳೆಯುತ್ತದೆ ಎಂದು ನೊಮುರಾ ಅಭಿಪ್ರಾಯಪಟ್ಟಿದೆ.

2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ 7.2ರಷ್ಟು ಹೆಚ್ಚಾಗಬಹುದು ಎಂದು ಆರ್​ಬಿಐ ಮಾಡಿದ್ದ ಅಂದಾಜನ್ನು ನೊಮುರಾ ಸಾರಸಗಟಾಗಿ ತಳ್ಳಿಹಾಕಿದೆ. ಆರ್​ಬಿಐ ತೀರಾ ಹೆಚ್ಚು ಆಶಾದಾಯಕವಾಗಿದೆ. ಭಾರತದ ಆರ್ಥಿಕತೆ ಅಷ್ಟು ವೇಗದಲ್ಲಿ ಹೆಚ್ಚಾಗಲ್ಲ. 2024-25ರಲ್ಲಿ ಜಿಡಿಪಿ ದರ ಶೇ. 6.7ಕ್ಕಿಂತಲೂ ಕಡಿಮೆ ಇರಬಹುದು. 2025-26ರಲ್ಲಿ ಶೇ. 6.8 ರಷ್ಟಾಗಬಹುದು ಎಂದು ಜಪಾನ್ ಮೂಲದ ಈ ಬ್ರೋಕರೇಜ್ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಈ ಹಣಕಾಸು ವರ್ಷದ ಮೊದಲ ಆರು ತಿಂಗಳ ಆರ್ಥಿಕ ಬೆಳವಣಿಗೆ ಬಗ್ಗೆ ಹಣಕಾಸು ಸಚಿವಾಲಯ ತೃಪ್ತಿ

ನಗರವಾಸಿಗಳ ಅನುಭೋಗ ಪ್ರಮಾಣ ಇಳಿಮುಖ

ಭಾರತದ ನಗರಭಾಗದ ಅನುಭೋಗ ಸೂಚಕಗಳು (ಜನರ ವೆಚ್ಚ) ಇತ್ತೀಚೆಗೆ ಕಡಿಮೆ ಮಟ್ಟವನ್ನು ಬೊಟ್ಟು ಮಾಡುತ್ತಿವೆ. ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಇಳಿಮುಖ, ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ, ಎಫ್​ಎಂಸಿಜಿ ಕಂಪನಿಗಳಿಗೆ ನಗರಭಾಗದಲ್ಲಿ ಬಿಸಿನೆಸ್ ಇಳಿಮುಖವಾಗುತ್ತಿರುವುದು, ಇತ್ಯಾದಿ ಸಂಗತಿಗಳನ್ನು ನೊಮುರಾ ತನ್ನ ಅನಿಸಿಕೆಗೆ ಸೇರಿಸಿಕೊಂಡಿದೆ.

ಕಂಪನಿಗಳು ತಮ್ಮ ಸಂಬಳ ವೆಚ್ಚವನ್ನು ಕಡಿಮೆ ಮಾಡುತ್ತಿವೆ. ಲಿಸ್ಟೆಡ್ ಕಂಪನಿಗಳ ವೇತನ ವೆಚ್ಚವು ಸೆಪ್ಟೆಂಬರ್ ಕ್ವಾರ್ಟರ್​ನಲ್ಲಿ ಶೇ. 0.8ರಷ್ಟು ಮಾತ್ರ ಹೆಚ್ಚಾಗಿದೆ. ಜೂನ್ ಕ್ವಾರ್ಟರ್​ನಲ್ಲಿ ಇದು ಶೇ. 1.2 ಇತ್ತು. 2023-24ರಲ್ಲಿ ಶೇ. 2.5, 2022-23ರಲ್ಲಿ ಶೇ. 10.8ರಷ್ಟು ವೇತನ ವೆಚ್ಚ ಹೆಚ್ಚಳವಾಗಿತ್ತು ಎಂದು ನೊಮುರಾ ವಿಶ್ಲೇಷಿಸಿದೆ.

ಇದನ್ನೂ ಓದಿ: Income Disparity: ಭಾರತದಲ್ಲಿ ಆದಾಯ ಅಸಮಾನತೆ ಅಂತರದಲ್ಲಿ ಗಣನೀಯ ಇಳಿಕೆ: ಎಸ್​ಬಿಐ ಅಧ್ಯಯನ ವರದಿ

ಕೋವಿಡ್ ನಂತರ ಹೆಚ್ಚಿದ್ದ ಬೇಡಿಕೆ ಈಗ ಮಂದಗೊಂಡಿದೆ. ಹಣಕಾಸು ನೀತಿ ಬಿಗಿಯಾಗಿದೆ. ಅಸುರಕ್ಷಿತ ಸಾಲಗಳ ಮೇಲೆ ಆರ್​ಬಿಐ ಹಾಕಿರುವ ಬಿಗಿಪಟ್ಟುಗಳಿಂದಾಗಿ ಪರ್ಸನಲ್ ಲೋನ್ ಕಡಿಮೆ ಆಗಿದೆ. ಎನ್​ಬಿಎಫ್​ಸಿಗಳ ಬಿಸಿನೆಸ್ ಕಡಿಮೆ ಆಗಿದೆ ಎಂದು ಈ ಬ್ರೋಕರೇಜ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ