ಈ ಹಣಕಾಸು ವರ್ಷದ ಮೊದಲ ಆರು ತಿಂಗಳ ಆರ್ಥಿಕ ಬೆಳವಣಿಗೆ ಬಗ್ಗೆ ಹಣಕಾಸು ಸಚಿವಾಲಯ ತೃಪ್ತಿ
Indian economic growth: ಸದ್ಯದ ಆರ್ಥಿಕ ಬೆಳವಣಿಗೆ ಸಾಗುತ್ತಿರುವ ಪರಿಯು ಹಣಕಾಸು ಸಚಿವಾಲಯಕ್ಕೆ ಸಮಾಧಾನ ತಂದಂತಿದೆ. ಹಣಕಾಸು ವರ್ಷದ ಮೊದಲಾರ್ಧವಾದ ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಸರಿಯಾಗಿ ಇದೆ ಎಂದು ಮಾಸಿಕ ಆರ್ಥಿಕ ಪರಾಮರ್ಶೆ ವರದಿಯಲ್ಲಿ ಹೇಳಲಾಗಿದೆ. ಹಾಗೆಯೇ, ಕೆಲ ತರಕಾರಿ ಬೆಲೆಗಳ ಏರಿಕೆ ಹೊರತಾಗಿ ಒಟ್ಟಾರೆ ಹಣದುಬ್ಬರ ಹತೋಟಿಯಲ್ಲಿದೆ ಎಂಬುದು ಅದರ ಅನಿಸಿಕೆ.
ನವದೆಹಲಿ, ಅಕ್ಟೋಬರ್ 28: ಈ ಹಣಕಾಸು ವರ್ಷದ (2024-25) ಮೊದಲಾರ್ಧವಾದ ಏಪ್ರಿಲ್ನಿಂದ ಸೆಪ್ಟಂಬರ್ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ವೇಗದ ಬಗ್ಗೆ ಹಣಕಾಸು ಸಚಿವಾಲಯ ಸಮಾಧಾನ ಪಟ್ಟಿದೆ. ಗ್ರಾಮೀಣ ಭಾಗದಲ್ಲಿನ ಬೇಡಿಕೆ, ಕೃಷಿ ಚಟುವಟಿಕೆ ಗರಿಗೆದರಿರುವುದು, ಸರ್ವಿಸ್ ಸೆಕ್ಟರ್ ಸುಧಾರಿಸಿರುವು, ಬಾಹ್ಯ ವಲಯ ಸ್ಥಿರವಾಗಿರುವುದು ಇವೆಲ್ಲಾ ಅಂಶಗಳು ಭಾರತದ ಆರ್ಥಿಕ ಪ್ರಗತಿಗೆ ಪೂರಕವಾಗಿ ಪರಿಣಮಿಸಿವೆ. ಕೆಲ ತರಕಾರಿಗಳ ಬೆಲೆ ಏರಿಕೆ ಬಿಟ್ಟರೆ ಹಣದುಬ್ಬರ ನಿಯಂತ್ರಣದ ವ್ಯಾಪ್ತಿಯಲ್ಲೇ ಇದೆ ಎನ್ನುವುದು ಹಣಕಾಸು ಸಚಿವಾಲಯದ ಅನಿಸಿಕೆ.
ಆರ್ಥಿಕ ಬೆಳವಣಿಗೆಗೆ ವಿಲನ್ ಆಗಬಹುದಾದ ಸಂಗತಿಗಳು…
ಮೊದಲಾರ್ಧದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಸಮಾಧಾನಗೊಂಡಿರುವ ಹಣಕಾಸು ಸಚಿವಾಲಯ, ಮುಂದಿನ ದಿನಗಳಲ್ಲಿ ತೊಡರುಗಾಲಾಗಿ ಪರಿಣಮಿಸಬಲ್ಲ ಕೆಲ ಸಂಗತಿಗಳನ್ನು ಗುರುತಿಸಿದೆ. ಜಾಗತಿಕ ರಾಜಕೀಯ ಸಂಘರ್ಷಗಳು, ಜಾಗತಿಕ ಆರ್ಥಿಕ ಭೇದಗಳು, ಕೆಲ ಮುಂದುವರಿದ ದೇಶಗಳಲ್ಲಿನ ಹಣಕಾಸು ಮಾರುಕಟ್ಟೆಗಳ ದುಬಾರಿ ಮೌಲ್ಯ ಇವೇ ಮುಂತಾದ ಸಂಗತಿಗಳನ್ನು ಹೆಸರಿಸಲಾಗಿದೆ. ಭಾರತದ ಮೇಲೆ ಇವುಗಳ ಪರಿಣಾಮ ಬೀರಬಹುದು. ಜನರು ವೆಚ್ಚ ಮಾಡಲು ಹಿಂದೇಟು ಹಾಕುವಂತೆ ಮಾಡಬಹುದು ಎಂದು ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ಪರಾವರ್ಶೆ ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ: ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಹಣದುಬ್ಬರದ ಸಮಸ್ಯೆ ಹೆಚ್ಚಿಲ್ಲ….
ದೇಶದಲ್ಲಿ ಹಣದುಬ್ಬರದಿಂದ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ವರದಿಯಲ್ಲಿ ಹೇಳಲಾಗಿರುವ ಅಂಶವಾಗಿದೆ. ‘ಕೆಲ ತರಕಾರಿಗಳ ಬೆಲೆಯಲ್ಲಿ ಗಣನೀಯ ಹೆಚ್ಚಳ ಆಗಿರುವುದು ಬಿಟ್ಟರೆ ಒಟ್ಟಾರೆ ಹಣದುಬ್ಬರವು ನಿಯಂತ್ರಣ ಮಟ್ಟದಲ್ಲೇ ಇದ್ದಂತಿದೆ. ಜಲಾಶಯಗಳ ಮಟ್ಟ, ಉತ್ತಮ ಮುಂಗಾರು ಬೆಳೆಗಳಿಂದಾಗಿ ಮಧ್ಯಮಾವಧಿಯಲ್ಲಿ ಉತ್ತಮ ಆಹಾರ ಧಾನ್ಯ ದಾಸ್ತಾನು ಆಗಬಹುದು. ಇದರಿಂದ ಬೆಲೆ ಏರಿಕೆಯ ಒತ್ತಡ ಕಡಿಮೆ ಆಗಬಹುದು,’ ಎಂದು ಸೆಪ್ಟೆಂಬರ್ ತಿಂಗಳ ಮಾಸಿಕ ಆರ್ಥಿಕ ಪರಾಮರ್ಶೆ ವರದಿಯಲ್ಲಿ ಹೇಳಲಾಗಿದೆ.
‘ಆರ್ಬಿಐ ಮತ್ತು ಐಐಎಂಎ ಸಮೀಕ್ಷೆಗಳು ಸೂಚಿಸಿದಂತೆ ಗೃಹ ಹಾಗೂ ಉದ್ಯಮ ವಲಯಗಳು ಬೆಲೆ ಏರಿಕೆ ಬಗ್ಗೆ ಹೆಚ್ಚು ವ್ಯಾಕುಲಗೊಂಡಿಲ್ಲ. ಕೆಲ ಆಹಾರ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಆರ್ಥಿಕತೆಯ ಒಳಗೆ ಸುಪ್ತವಾಗಿರುವ ಬೇಡಿಕೆ ಎಷ್ಟಿದೆ ಎಂಬುದನ್ನು ಈ ಹಣದುಬ್ಬರದಿಂದ ಸರಿಯಾಗಿ ಅಂದಾಜು ಮಾಡಲು ಆಗದೇ ಇರಬಹುದು’ ಎನ್ನುತ್ತಿದೆ ಈ ವರದಿ.
ಇದನ್ನೂ ಓದಿ: ಎಸ್ಜಿಬಿ vs ಗೋಲ್ಡ್ ಇಟಿಎಫ್ vs ಡಿಜಿಟಲ್ ಗೋಲ್ಡ್; ಯಾವುದು ಉತ್ತಮ? ಇಲ್ಲಿದೆ ಒಂದು ಹೋಲಿಕೆ
ಭಾರತದಲ್ಲ ಹಣದುಬ್ಬರವು ಶೇ. 5.49ರಷ್ಟಿತ್ತು. ಕೆಲ ತಿಂಗಳು ಶೇ. 5ರ ಒಳಗೆ ಹಣದುಬ್ಬರ ಇದೆ. ಒಟ್ಟಾರೆ, ಆರ್ಬಿಐ ನಿಗದಿ ಮಾಡಿಕೊಂಡಿರುವ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 2ರಿಂದ 6ರ ಶ್ರೇಣಿಯಲ್ಲೇ ಹಣದುಬ್ಬರ ಇದೆ. ಆದರೆ, ಹಣದುಬ್ಬರವನ್ನು ಶೇ. 4ಕ್ಕೆ ತಂದು ನಿಲ್ಲಿಸುವ ಮೂಲ ಸಂಕಲ್ಪ ಮಾತ್ರ ಈಡೇರುತ್ತಿಲ್ಲ. ಪ್ರತೀ ತಿಂಗಳೂ ಈರುಳ್ಳಿ, ಟೊಮೆಟೋ ಇತ್ಯಾದಿ ತರಕಾರಿಗಳ ಬೆಲೆ, ಹಣ್ಣುಗಳ ಬೆಲೆಗಳಲ್ಲಿ ಹೆಚ್ಚಳ ಆಗುತ್ತಿರುವುದು ಹಣದುಬ್ಬರ ನಿರೀಕ್ಷಿತ ರೀತಿಯಲ್ಲಿ ಇಳಿಕೆ ಆಗದಂತೆ ಮಾಡುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ