ಕಳೆದ 10 ವರ್ಷದಲ್ಲಿ ದೇಶದಲ್ಲಿ ಆರ್ಥಿಕ ಪ್ರಕ್ಷುಬ್ದತೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಲೇವಡಿ
Manmohan Singh Criticizes Narendra Modi: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಲಿ ಎನ್ಡಿಎ ಸರ್ಕಾರದ ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ಡೀಮಾನಿಟೈಸೇಶನ್ ಕ್ರಮ, ಜಿಎಸ್ಟಿ ಮತ್ತು ಕೋವಿಡ್ನ ಕಳಪೆ ನಿರ್ವಹಣೆ ಇವು ಆರ್ಥಿಕತೆಯನ್ನು ನಲುಗಿಸಿವೆ. ಕಳೆದ 10 ವರ್ಷದಲ್ಲಿ ಆರ್ಥಿಕತೆ ಪ್ರಕ್ಷುಬ್ದ ಸ್ಥಿತಿಯಲ್ಲಿದೆ ಎಂದು ಸಿಂಗ್ ಲೇವಡಿ ಮಾಡಿದ್ದಾರೆ. ಪ್ರಧಾನಿ ಮೋದಿಯನ್ನು ಕಟುವಾಗಿ ಟೀಕಿಸಿರುವ ಸಿಂಗ್, ಇಷ್ಟು ನೀಚಮಟ್ಟದಲ್ಲಿ ಮಾತನಾಡುವ ಯಾವ ಪ್ರಧಾನಿಯನ್ನೂ ತಾನು ಹಿಂದೆ ನೋಡಿದ್ದಿಲ್ಲ ಎಂದಿದ್ದಾರೆ.
ನವದೆಹಲಿ, ಮೇ 30: ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಪ್ರಕ್ಷುಬ್ದತೆಯಿಂದ (economic upheaval) ಕೂಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಟೀಕಿಸಿದ್ದಾರೆ. ಜೂನ್ 1ರಂದು ನಡೆಯಲಿರುವ ಕೊನೆಯ ಹಂತದ ಮತದಾನದ ಹಿನ್ನೆಲೆಯಲ್ಲಿ ಸಾರ್ವತ್ರಿಕವಾಗಿ ಪತ್ರ ಬರೆದಿರುವ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರ್ಕಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಕಳೆದ ಹತ್ತು ವರ್ಷದಲ್ಲಿ ದೇಶದ ಆರ್ಥಿಕತೆ ಬಹಳ ಪ್ರಕ್ಷುಬ್ದವಾಗಿದೆ. ನೋಟು ಅಮಾನ್ಯೀಕರಣ, ಜಿಎಸ್ಟಿ ಕಳಪೆ ಅನುಷ್ಠಾನ, ಕೋವಿಡ್ ಅಪ ನಿರ್ವಹಣೆ ಈ ಅಂಶಗಳು ಆರ್ಥಿಕತೆಯನ್ನು ಬಾಧಿಸುತ್ತಿವೆ. ಶೇ. 6ರಿಂದ 7ರ ಜಿಡಿಪಿ ದರ ಈಗ ಸಾಮಾನ್ಯವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ. 8ರ ಆಸುಪಾಸು ಇದ್ದ ವಾರ್ಷಿಕ ಜಿಡಿಪಿ ವೃದ್ಧಿ ದರ ಬಿಜೆಪಿ ಸರ್ಕಾರದ ಅಡಿಯಲ್ಲಿ ಶೇ. 6ಕ್ಕಿಂತಲೂ ಕಡಿಮೆ ದರಕ್ಕೆ ಕುಸಿದಿದೆ’ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಏರ್ಟೆಲ್ ಪತನ ತಪ್ಪಿಸಿತು ಪಿಎಂ ಜೊತೆಗಿನ ಆ ಒಂದು ಭೇಟಿ..! ಮಿಟ್ಟಲ್ಗೆ ಮೋದಿ ಹೇಳಿದ ಆ ಮಾತೇನು?
ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಧ ಸವಾಲುಗಳ ನಡುವೆಯೂ ಜನರ ಖರೀದಿ ಶಕ್ತಿ ಹೆಚ್ಚಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರದ ಕಳಪೆ ನಿರ್ವಹಣೆಯಿಂದಾಗಿ ದೇಶದ ಕುಟುಂಬಗಳ ಹಣ ಉಳಿತಾಯ ಕಳೆದ 47 ವರ್ಷಗಳಲ್ಲೇ ಕೆಳಮಟ್ಟಕ್ಕೆ ಕುಸಿದಿದೆ ಎಂದು 2004ರಿಂದ 2014ರವರೆಗೆ ಪ್ರಧಾನಿಯಾಗಿದ್ದ ಅವರು ಕುಟುಕಿದ್ದಾರೆ.
ಪಂಜಾಬ್ ಮತದಾರರನ್ನು ಉದ್ದೇಶಿಸಿ ಪತ್ರದಲ್ಲಿ ಬರೆದಿರುವ ಅವರು, ಈ ರಾಜ್ಯದ ಜನರು ಅಭಿವೃದ್ಧಿ ಮತ್ತು ಸಂಯೋಜಿತ ಪ್ರಗತಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ಅಭಿವೃದ್ಧಿ, ಉತ್ತಮ ಸಮಾಜ ನಿರ್ಮಾಣದ ಜೊತೆಗೆ ಸಂವಿಧಾನವೇ ಸರ್ವೋಚ್ಚ ಎನಿಸುವಂತಹ ವಾತಾವರಣ ನಿರ್ಮಿಸಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕ ವೃದ್ಧಿ ಹಿಂದಿನ ಹಣಕಾಸು ವರ್ಷದಲ್ಲಿ ಶೇ. 7.6, ಈ ವರ್ಷ ಶೇ. 7: ಆರ್ಬಿಐ ಅಂದಾಜು
ಪ್ರಧಾನಿ ಹುದ್ದೆ ಘನತೆಗೆ ಕಳಂಕ ತಂದ ಮೊದಲ ವ್ಯಕ್ತಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳನ್ನು ತಾನು ಗಮನಿಸುತ್ತಿದ್ದೇನೆ. ನಿರ್ದಿಷ್ಟ ಸಮುದಾಯದ ವಿರುದ್ಧ ಅವರು ದ್ವೇಷ ಕಾರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ವಿಪಕ್ಷಗಳು ಅಥವಾ ನಿರ್ದಿಷ್ಟ ವರ್ಗದ ವಿರುದ್ಧ ಇಂಥ ನೀಚ ಮಟ್ಟದ ಭಾಷೆಯಲ್ಲಿ ಹಿಂದಿನ ಯಾವ ಪ್ರಧಾನಿಯೂ ಮಾತನಾಡಿದ್ದಿಲ್ಲ. ಪ್ರಧಾನಿ ಹುದ್ದೆಯ ಘನತೆ ಮತ್ತು ಗಾಂಭೀರ್ಯಕ್ಕೆ ಕುತ್ತು ತಂದಿರುವ ಮೊದಲ ವ್ಯಕ್ತಿ ಎಂದರೆ ಮೋದಿಜಿ ಎಂದು ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ವಿತ್ತ ಸಚಿವರೂ ಆಗಿದ್ದ ಮನಮೋಹನ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ