ಆರ್​ಬಿಐನಿಂದ ಸರ್ಕಾರಕ್ಕೆ ಈ ವರ್ಷ 2.87 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಹೊಸ ದಾಖಲೆ

RBI Approves Record ₹2.87 Lakh Crore Dividend to Centre: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ದಾಖಲೆ ಮಟ್ಟದ 2.87 ಲಕ್ಷ ಕೋಟಿ ರೂ. ಲಾಭಾಂಶ ನೀಡಿದೆ. ಇದು ಆರ್‌ಬಿಐ ಇತಿಹಾಸದಲ್ಲೇ ಅತಿ ದೊಡ್ಡ ವರ್ಗಾವಣೆಯಾಗಿದ್ದು, ಕಚ್ಚಾ ತೈಲ ಬೆಲೆ ಏರಿಕೆಯಂತಹ ಜಾಗತಿಕ ಸವಾಲುಗಳ ನಡುವೆ ಸರ್ಕಾರದ ವಿತ್ತೀಯ ಕೊರತೆ ನಿಯಂತ್ರಿಸಲು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ಮಹತ್ವದ ಆರ್ಥಿಕ ಬಲ ನೀಡಲಿದೆ.

ಆರ್​ಬಿಐನಿಂದ ಸರ್ಕಾರಕ್ಕೆ ಈ ವರ್ಷ 2.87 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಹೊಸ ದಾಖಲೆ
ಆರ್‌ಬಿಐ
Image Credit source: Alamy

Updated on: May 22, 2026 | 5:51 PM

ನವದೆಹಲಿ, ಮೇ 22: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2025-26ರ ಹಣಕಾಸು ವರ್ಷಕ್ಕೆ (FY26) ಕೇಂದ್ರ ಸರ್ಕಾರಕ್ಕೆ ದಾಖಲೆ ಮಟ್ಟದ 2.87 ಲಕ್ಷ ಕೋಟಿ ರೂ (₹2,86,588.46 ಕೋಟಿ) ಲಾಭಾಂಶವನ್ನು (Dividend/Surplus Transfer) ನೀಡಲು ಅನುಮೋದನೆ ನೀಡಿದೆ. ಜಾಗತಿಕ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ನಡುವೆ ಕೇಂದ್ರ ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬಲು ಈ ಬೃಹತ್ ಮೊತ್ತ ನೆರವಾಗಲಿದೆ. ಮುಂಬೈನಲ್ಲಿ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್‌ಬಿಐ ಕೇಂದ್ರೀಯ ನಿರ್ದೇಶಕರ ಮಂಡಳಿಯ 623ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆರ್‌ಬಿಐ ಇತಿಹಾಸದಲ್ಲೇ ಇದು ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ಅತಿ ದೊಡ್ಡ ಲಾಭಾಂಶವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ (FY25) ಆರ್‌ಬಿಐ 2.69 ಲಕ್ಷ ಕೋಟಿ ರೂ ವರ್ಗಾಯಿಸಿತ್ತು. ಈ ಬಾರಿ ಆ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

2025-26ರ ಆರ್ಥಿಕ ವರ್ಷದಲ್ಲಿ ರಿಸರ್ವ್ ಬ್ಯಾಂಕ್‌ನ ಒಟ್ಟು ಆದಾಯ ಶೇ. 26.42 ರಷ್ಟು ಹೆಚ್ಚಾಗಿದೆ. ರಿಸ್ಕ್ ಪ್ರೊವಿಷನ್‌ಗಿಂತ (ಆಪತ್ಕಾಲೀನ ನಿಧಿ) ಮುಂಚಿನ ನಿವ್ವಳ ಆದಾಯವು 3,95,972 ಕೋಟಿ ರೂಗೆ ತಲುಪಿದೆ (ಕಳೆದ ವರ್ಷ ಇದು ₹3,13,455 ಕೋಟಿ ಆಗಿತ್ತು). ಚಿನ್ನದ ಬೆಲೆಯಲ್ಲಿ ಆದ ಭಾರಿ ಏರಿಕೆ ಮತ್ತು ವಿದೇಶಿ ವಿನಿಮಯ ವ್ಯವಹಾರಗಳಿಂದ ಆರ್‌ಬಿಐಗೆ ಈ ಭಾರಿ ಲಾಭ ಬಂದಿದೆ.

ಇದನ್ನೂ ಓದಿ: ಐಟಿಆರ್ ಸಲ್ಲಿಸುತ್ತಿದ್ದೀರಾ? ಎಐಎಸ್ ಪರಿಶೀಲನೆ ಮರೆಯದಿರಿ; ಏನದರ ಮಹತ್ವ? ಇಲ್ಲಿದೆ ಡೀಟೇಲ್ಸ್

2026ರ ಮಾರ್ಚ್ 31 ಕ್ಕೆ ಕೊನೆಗೊಂಡಂತೆ ಆರ್‌ಬಿಐನ ಬ್ಯಾಲೆನ್ಸ್ ಶೀಟ್ ಗಾತ್ರವು ಶೇಕಡಾ 20.61 ರಷ್ಟು ವೃದ್ಧಿಯಾಗಿದ್ದು, ಬರೋಬ್ಬರಿ 91.97 ಲಕ್ಷ ಕೋಟಿ ರೂಗೆ ತಲುಪಿದೆ. ಕೇವಲ ಸರ್ಕಾರಕ್ಕೆ ಲಾಭಾಂಶ ನೀಡುವುದು ಮಾತ್ರವಲ್ಲದೆ, ಆರ್‌ಬಿಐ ತನ್ನ ಸುರಕ್ಷತೆಗಾಗಿ ಇಟ್ಟುಕೊಳ್ಳುವ ಆಪತ್ಕಾಲೀನ ನಿಧಿಗೆ (Contingent Risk Buffer – CRB) ಈ ಬಾರಿ ಭಾರಿ ಮೊತ್ತವನ್ನು ವರ್ಗಾಯಿಸಿದೆ. ಕಳೆದ ವರ್ಷ 44,861 ಕೋಟಿ ರೂ ಮೀಸಲಿಟ್ಟಿದ್ದ ಆರ್‌ಬಿಐ, ಈ ಬಾರಿ ಸಿಆರ್‌ಬಿ ನಿಧಿಗೆ 1,09,379.64 ಕೋಟಿ ರೂ ಜಮಾ ಮಾಡಿದೆ. ಇದರೊಂದಿಗೆ ಈ ತುರ್ತು ನಿಧಿಯ ಪ್ರಮಾಣವನ್ನು ಬ್ಯಾಲೆನ್ಸ್ ಶೀಟ್‌ನ ಶೇ. 6.5 ರ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ.

ಬಜೆಟ್ ಅಂದಾಜಿಗಿಂತ ಸ್ವಲ್ಪ ಕಡಿಮೆ: ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಆರ್‌ಬಿಐ ಮತ್ತು ಇತರ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಒಟ್ಟು 3.16 ಲಕ್ಷ ಕೋಟಿ ರೂ ಲಾಭಾಂಶ ಬರಬಹುದು ಎಂದು ಅಂದಾಜಿಸಿತ್ತು. ಆರ್‌ಬಿಐ ನೀಡಿದ 2.87 ಲಕ್ಷ ಕೋಟಿ ರೂ ಅದರ ನಿರೀಕ್ಷೆಗಿಂತ ಕೊಂಚ ಕಡಿಮೆಯಾಗಿದ್ದರೂ, ಮಾರುಕಟ್ಟೆಯ ತಜ್ಞರ ಅಂದಾಜಿನ (₹2.7 ಲಕ್ಷ ಕೋಟಿಯಿಂದ ₹3 ಲಕ್ಷ ಕೋಟಿ) ವ್ಯಾಪ್ತಿಯಲ್ಲೇ ಇದೆ.

ಇದನ್ನೂ ಓದಿ: ಡಾಲರ್ ಎದುರು ರುಪಾಯಿ ಹೇಗೆ ಬೇಕಾದರೂ ಕುಸಿಯಲಿ ಬಿಡಿ, ಚಿಂತೆ ಬೇಡ: ಹಣಕಾಸು ಆಯೋಗ ಅಧ್ಯಕ್ಷ ಪನಗರಿಯಾ

ಸರ್ಕಾರಕ್ಕೆ ಹೇಗೆ ನೆರವಾಗಲಿದೆ?

ಮಧ್ಯಪ್ರಾಚ್ಯದಲ್ಲಿ (Middle East) ನಡೆಯುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆ ಹೆಚ್ಚಾಗಿದ್ದು, ಭಾರತದ ಆಮದು ವೆಚ್ಚ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಆರ್‌ಬಿಐನಿಂದ ಬಂದಿರುವ ಈ ಬೃಹತ್ ಹಣವು ಸರ್ಕಾರದ ವಿತ್ತೀಯ ಕೊರತೆಯನ್ನು (Fiscal Deficit) ನಿಯಂತ್ರಣದಲ್ಲಿಡಲು ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸಲು ದಿಕ್ಸೂಚಿಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us