ಎಐನಿಂದ ಕೋಡಿಂಗ್ ಕೆಲಸಕ್ಕೆ ಕತ್ತರಿ; ಭಾರತದ ಐಟಿ ಸೆಕ್ಟರ್ ಕಥೆ ಹೇಗೆ? ಸಾಫ್ಟ್​ವೇರ್ ಕಂಪನಿಗಳ ಮುಂದಿನ ದಾರಿ ಏನು?

Artificial Intelligence effect on Indian IT industry: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸಾಕಷ್ಟು ವೇಗದಲ್ಲಿ ಬೆಳೆಯುತ್ತಿದ್ದು, ವಿಶ್ವದ ಹೆಚ್ಚಿನ ಉದ್ಯಮಗಳ ಮೇಲೆ ಇದರ ಪರಿಣಾಮ ಬೀರುತ್ತದೆ. ಆದರೆ, ಸಾಫ್ಟ್​ವೇರ್ ಸೇವೆಗಳಿಗೆ ಹೆಚ್ಚಿನ ಹೊಡೆತ ಕೊಡಲಿದೆ. ಭಾರತದ ಐಟಿ ಸೆಕ್ಟರ್ ಬುನಾದಿಯೇ ಇಂಥ ಸಾಫ್ಟ್​ವೇರ್ ಸರ್ವಿಸ್​ಗಳೇ. ಬಿಟ್ಸ್ ಪಿಲಾನಿ ಗ್ರೂಪ್ ವೈಸ್ ಚಾನ್ಸಲರ್ ರಾಮಗೋಪಾಲ್ ರಾವ್ ಪ್ರಕಾರ ಸಾಂಪ್ರದಾಯಿಕ ಐಟಿ ಸರ್ವಿಸ್ ಕೆಲಸಗಳೆಲ್ಲವನ್ನೂ ಎಐ ಏಜೆಂಟ್​ಗಳೇ ನಿಭಾಯಿಸುತ್ತವೆ. ಭಾರತೀಯ ಐಟಿ ಕಂಪನಿಗಳು ಈ ಸೆಕ್ಟರ್​ನ ವ್ಯಾಲ್ಯೂ ಚೈನ್​ನಲ್ಲಿ ಮೇಲೇರುವುದು ಅನಿವಾರ್ಯ.

ಎಐನಿಂದ ಕೋಡಿಂಗ್ ಕೆಲಸಕ್ಕೆ ಕತ್ತರಿ; ಭಾರತದ ಐಟಿ ಸೆಕ್ಟರ್ ಕಥೆ ಹೇಗೆ? ಸಾಫ್ಟ್​ವೇರ್ ಕಂಪನಿಗಳ ಮುಂದಿನ ದಾರಿ ಏನು?
ಎಐ

Updated on: Feb 16, 2025 | 4:24 PM

ನವದೆಹಲಿ, ಫೆಬ್ರುವರಿ 16: ಗೂಗಲ್​ನ ಕ್ಲಿಷ್ಟಕರ ತಂತ್ರಾಂಶದಲ್ಲಿ ಕಾಲುಭಾಗದಷ್ಟನ್ನು ಎಐ ನೆರವಿನಿಂದಲೇ ಮಾಡಲಾಗುತ್ತದೆ ಎಂದು ಇತ್ತೀಚೆಗೆ ಆ ಕಂಪನಿಯ ಸಿಇಒ ಸುಂದರ್ ಪಿಚೈ ಹೇಳಿದ್ದರು. ಹಾಗೆಯೇ, ಸಾಫ್ಟ್​ವೇರ್ ಡೆವಲಪರ್​ಗಳ ಕೆಲಸವನ್ನು ತಮ್ಮ ಎಐ ಏಜೆಂಟ್​ಗಳು ಮಾಡಬಲ್ಲುವು ಎಂದು ಓಪನ್​ಎಐ ಸಂಸ್ಥೆಯ ಸಿಇಒ ಕೂಡ ಹೇಳಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಉದ್ಯಮದವರೆಲ್ಲರೂ ಬಹುತೇಕ ಇದೇ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ಬಿಟ್ಸ್ ಪಿಲಾನಿ ಶಿಕ್ಷಣ ಸಂಸ್ಥೆಯ ಗ್ರೂಪ್ ವೈಸ್-ಚಾನ್ಸಲರ್ ಡಾ| ರಾಮಗೋಪಾಲ್ ರಾವ್ ಪ್ರಕಾರ ಪ್ರಮುಖ ಎಐ ಕಂಪನಿಗಳು ಶೇ. 25ರಿಂದ 30ರಷ್ಟು ಕೋಡಿಂಗ್ ಮಾಡುತ್ತಿವೆಯಂತೆ. ತಾನು ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಖುದ್ದಾಗಿ ತಿಳಿದುಕೊಂಡ ವಿಷಯ ಎಂದು ಹೇಳಿದ್ದಾರೆ ರಾವ್.

ಗಂಭೀರವಾದ ಸಂಗತಿ ಎಂದರೆ, ಈಗ ಸಾಫ್ಟ್​ವೇರ್ ಸರ್ವಿಸ್ ಕೆಲಸಗಳಿಗೆ ಈಗ ಕುತ್ತು ಬರುತ್ತಿದೆ. ಮುಂದಿನ ದಿನಗಳಲ್ಲಿ ಎಐನಿಂದ ಮಾಡಲು ಸಾಧ್ಯವಿಲ್ಲದ ಸ್ಥಾನಗಳಿಗೆ ಮಾತ್ರ ನೇಮಕಾತಿ ಆಗಬೇಕಾಗುತ್ತದೆ. ಸಾಫ್ಟ್​ವೇರ್ ಡೆವಲಪ್ಮೆಂಟ್​ನ ನಿಯಮಗಳನ್ನು ಎಐ ಮರುಸೃಷ್ಟಿಸುತ್ತಿದೆಯಂತೆ. ಹಾಗಂತ ರಾಮಗೋಪಾಲ್ ರಾವ್ ತಮ್ಮ ಎಕ್ಸ್​ನಲ್ಲಿ ಹಾಕಿರುವ ಪೋಸ್ಟ್​ವೊಂದರಲ್ಲಿ ತಿಳಿಸಿದ್ದಾರೆ.

ಅಮೆರಿಕದ ಕಂಪನಿಗಳು ತಮ್ಮ ಐಟಿ ವೆಚ್ಚ ಉಳಿಸಲು ಸಾಫ್ಟ್​ವೇರ್ ಸರ್ವಿಸ್​ಗಳಿಗಾಗಿ ಭಾರತೀಯ ಐಟಿ ಕಂಪನಿಗಳಿಗೆ ಹೊರಗುತ್ತಿಗೆ ನೀಡುತ್ತವೆ. ಆದರೆ, ಈಗ ಎಐ ಚಾಲಿತ ಆಟೊಮೇಶನ್​ನಿಂದಾಗಿ ಭಾರತೀಯರಿಗೆ ಇರುವ ಒಂದು ಅವಕಾಶ ಕೈತಪ್ಪಬಹುದು. ಭಾರತೀಯ ಕಂಪನಿಗಳು ವ್ಯಾಲ್ಯೂ ಚೈನ್​ನಲ್ಲಿ ಮೇಲೆ ಹೋಗಬೇಕು. ಎಐ ಕನ್ಸಲ್ಟಿಂಗ್, ಆಟೊಮೇಶನ್ ಸಲ್ಯೂಶನ್ಸ್ ಇತ್ಯಾದಿ ಸೇವೆಗಳನ್ನು ಒದಗಿಸುವ ಕೆಲಸ ಮಾಡಬೇಕು ಎಂಬುದು ಬಿಟ್ಸ್ ಪಿಲಾನ್ ವೈಸ್ ಚಾನ್ಸಲರ್ ಹೇಳಿದ್ದಾರೆ.

ಇದನ್ನೂ ಓದಿ: BSNL: 17 ವರ್ಷಗಳ ಬಳಿಕ ನಷ್ಟದಿಂದ ಮೇಲೆದ್ದ ಬಿಎಸ್​ಎನ್​ಎಲ್; ಈ ಬಾರಿ 262 ಕೋಟಿ ರೂ. ಲಾಭ

ಎಐನಿಂದಾಗಿ ವಿಶ್ವಾದ್ಯಂತ ಸಾಕಷ್ಟು ಉದ್ಯೋಗನಷ್ಟ ಆಗುತ್ತದೆ ಎನ್ನುವುದಕ್ಕೆ ಈಗಾಗಲೇ ಬಲವಾದ ಪುರಾವೆಗಳು ಸಿಕ್ಕಿವೆ. ಗೂಗಲ್, ಓಪನ್​ಎಐ, ಮೈಕ್ರೋಸಾಫ್ಟ್ ಇತ್ಯಾದಿ ಸಂಸ್ಥೆಗಳು ಉದ್ಯೋಗಿಗಳಿಗೆ ಕತ್ತರಿ ಹಾಕುತ್ತಿವೆ. ಕಳೆದ ವರ್ಷ ಗೂಗಲ್ ಸಂಸ್ಥೆ ಎಐ ಮರುರಚನೆ ಹೆಸರಲ್ಲಿ ಒಂದು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟಿತ್ತು. ಓಪನ್ ಎಐನಂತೆ ಮೆಟಾ ಕೂಡ ಎಐ ಏಜೆಂಟ್​ಗಳನ್ನು ನಿರ್ಮಿಸುತ್ತಿದ್ದು, ಈ ಯಂತ್ರಗಳು ಸಂಕೀರ್ಣ ಸಾಫ್ಟ್​ವೇರ್ ಮತ್ತು ಕೋಡಿಂಗ್ ಮಾಡಬಲ್ಲುವಂತೆ. ಹೀಗಾಗಿ, ಭಾರತೀಯ ಐಟಿ ಕಂಪನಿಗಳು ತಮ್ಮ ಕೆಲಸದ ರೂಪುರೇಖೆ ಬದಲಿಸಿಕೊಳ್ಳುವುದು ಅನಿವಾರ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Sun, 16 February 25