ನವದೆಹಲಿ: ಭಾರತೀಯ ರೈಲ್ವೆಯು (Indian Railways) ಇಡೀ ಬ್ರಾಡ್ಗೇಜ್ ಜಾಲವನ್ನು ವಿದ್ಯುದೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, 2030ರ ವೇಳೆಗೆ ವಿಶ್ವದ ಅತಿದೊಡ್ಡ ‘ಹಸಿರು ರೈಲ್ವೆ (Green Railways)’ ಜಾಲವಾಗಿ ಗುರುತಿಸಿಕೊಳ್ಳಲಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದು, ಮಾಲಿನ್ಯರಹಿತ ಇಂಧ ದಕ್ಷತೆ ಹೆಚ್ಚಿಸುವತ್ತ ಇಲಾಖೆ ಗಮನಹರಿಸಿದೆ. ಈಗಾಗಲೇ ತನ್ನ ವಿದ್ಯುದೀಕರಣಗೊಂಡ (Electrification) ಜಾಲವನ್ನು ಶೇಕಡಾ 83ಕ್ಕೆ ವಿಸ್ತರಣೆ ಮಾಡಿದೆ. 2014ರ ನಂತರ ಈವರೆಗೆ 32,0000 ರೂಟ್ ಕಿಲೋಮೀಟರ್ಗಳ ಹಳಿಗಳನ್ನು ವಿದ್ಯುದೀಕರಣ ಮಾಡಲಾಗಿದೆ ಎಂದು ವರದಿಯಾಗಿದೆ.
2030ರ ಒಳಗೆ ‘ಹಸಿರು ರೈಲ್ವೆ’ಯಾಗಿ ಪರಿವರ್ತನೆ ಹೊಂದುವ ಮೂಲಕ ಶೂನ್ಯ ಕಾರ್ಬನ್ ಉಗುಳುವಿಕೆ ಗುರಿಯನ್ನು ಸಾಧಿಸುವುದು ರೈಲ್ವೆ ಇಲಾಖೆಯ ಗುರಿಯಾಗಿದೆ ಎಂದು ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ. 2022-23ರಲ್ಲಿ 1,973 ರೂಟ್ ಕಿಲೋಮೀಟರ್ ಹಳಿ ವಿದ್ಯುದೀಕರಣಗೊಳಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 41ರ ಪ್ರಗತಿ ಸಾಧಿಸಲಾಗಿದೆ. ಪೂರ್ವ ಕರಾವಳಿ ರೈಲ್ವೆ, ದಕ್ಷಿಣ ಪೂರ್ವ ರೈಲ್ವೆ, ಪಶ್ಚಿಮ ರೈಲ್ವೆ, ಪೂರ್ವ ರೈಲ್ವೆ ಮತ್ತು ಉತ್ತರ ಕೇಂದ್ರ ರೈಲ್ವೆ ವಿಭಾಗಗಳು ಸಂಪೂರ್ಣ ವಿದ್ಯುದೀಕರಣಗೊಂಡಿವೆ. ಇದಕ್ಕೆ ಪೂರಕವಾಗಿ 1,161 ಕಿಲೋಮೀಟರ್ ದ್ವಿಗುಣ ಹಳಿ ವಿದ್ಯುದೀಕರಣ ಮಾಡಲಾಗಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿ ವರದಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Indian Railways: ರೈಲ್ವೆಯ ಆದಾಯ ಗಳಿಕೆಯು ಪ್ರಯಾಣಿಕರ ವಿಭಾಗದಲ್ಲಿ ಶೇ. 92 ಹೆಚ್ಚಳ
2021-22ರಲ್ಲಿ 6,366 ರೂಟ್ ಕಿಲೋಮೀಟರ್ ಹಳಿಯನ್ನು ವಿದ್ಯುದೀಕರಣಗೊಳಿಸಲಾಗಿತ್ತು. 2020-21ರಲ್ಲಿ 6,015 ರೂಟ್ ಕಿಲೋಮೀಟರ್ ಹಳಿಯನ್ನು ವಿದ್ಯುದೀಕರಣಗೊಳಿಸಲಾಗಿತ್ತು. ಇದರ ಹೊರತಾಗಿ, ನವದೆಹಲಿ – ಕಠ್ಗೋಡಂ, ನವದೆಹಲಿ – ಸಮ್ಖಿಯಲಿ, ಚೆನ್ನೈ – ಕನ್ಯಾಕುಮಾರಿ ನಡುವಣ ಹಳಿಗಳಲ್ಲಿ ತಡೆರಹಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ದೇಶದ ಏಳನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ (ಹೌರಾ ಮತ್ತು ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವುದು) ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದರು. 564 ಕಿ.ಮೀ ದೂರವನ್ನು 7.45 ಗಂಟೆಗಳಲ್ಲಿ ಕ್ರಮಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಈ ಮಾರ್ಗದ ಇತರ ರೈಲುಗಳಿಗೆ ಹೋಲಿಸಿದರೆ 3 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಬಾರ್ಸೋಯಿ, ಮಾಲ್ಡಾ ಮತ್ತು ಬೋಲ್ಪುರ್‌ನಲ್ಲಿ 3 ನಿಲುಗಡೆಗಳನ್ನು ಹೊಂದಿರುತ್ತದೆ. ಈ ಅತ್ಯಾಧುನಿಕ ರೈಲಿನಲ್ಲಿ ಚಾಲಕರಿಗೆ 2 ಸೇರಿದಂತೆ 16 ಬೋಗಿಗಳಿವೆ.
Published On - 3:40 pm, Sat, 31 December 22