
ನವದೆಹಲಿ, ಮಾರ್ಚ್ 24: ಭಾರತದ ಕ್ರೀಡಾ ಆರ್ಥಿಕತೆ ಬಹಳ ವೇಗದಲ್ಲಿ ಬೆಳೆಯುತ್ತಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕ್ರೀಡಾ ಆರ್ಥಿಕತೆಯ (Indian Sports Economy) ಗಾತ್ರ ಎರಡು ಬಿಲಿಯನ್ ಡಾಲರ್ ದಾಟಿದೆ. ಡಬ್ಲ್ಯುಪಿಪಿ ಮೀಡಿಯಾದ ವರದಿಯೊಂದರ ಪ್ರಕಾರ ಸ್ಪೋರ್ಟ್ಸ್ ಎಕನಾಮಿ ಗಾತ್ರ 2.13 ಬಿಲಿಯನ್ ಡಾಲರ್ ಮುಟ್ಟಿದೆ. ಅಂದರೆ, 18,864 ಕೋಟಿ ರೂ ಗಾತ್ರದ ಆರ್ಥಿಕತೆಯು ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅಡಕವಾಗಿದೆ.
ಭಾರತೀಯ ಕ್ರೀಡಾ ಕ್ಷೇತ್ರದ ಆರ್ಥಿಕತೆ ಕಳೆದ ನಾಲ್ಕು ವರ್ಷದಲ್ಲಿ ಅದ್ವಿತೀಯವಾಗಿ ಹಿಗ್ಗಿದೆ. ಶೇ. 19ರ ಸಿಎಜಿಆರ್ನಲ್ಲಿ ಬೆಳೆದಿದೆ. ನಾಲ್ಕು ವರ್ಷದ ಹಿಂದೆ ಇದ್ದುದಕ್ಕೆ ಹೋಲಿಸಿದರೆ ಅದರ ಗಾತ್ರ ಎರಡು ಪಟ್ಟು ಹೆಚ್ಚಿದೆ. ಅಂದರೆ, ನಾಲ್ಕೇ ವರ್ಷದಲ್ಲಿ ಡಬಲ್ ಆಗಿದೆ.
ಭಾರತದ ಕ್ರೀಡಾ ಆರ್ಥಿಕತೆಗೆ ಅತಿಹೆಚ್ಚು ಕೊಡುಗೆ ಕೊಡುತ್ತಿರುವುದು ಕ್ರಿಕೆಟ್. ಶೇ 89ರಷ್ಟು ಕೊಡುಗೆ ಇದರದ್ದು. 2024ರಲ್ಲಿ ಒಟ್ಟಾರೆ ಕ್ರೀಡಾ ಆರ್ಥಿಕತೆಯಲ್ಲಿ ಕ್ರಿಕೆಟ್ನ ಪಾಲು ಶೇ. 84 ಇತ್ತು. ಕುತೂಹಲ ಎಂದರೆ 2024ರಲ್ಲಿ ಒಟ್ಟಾರೆ ಭಾರತೀಯ ಕ್ರೀಡಾ ಆರ್ಥಿಕತೆ ಹೊಂದಿದ್ದ ಗಾತ್ರಕ್ಕಿಂತ ದೊಡ್ಡದಾಗಿ ಕ್ರಿಕೆಟ್ ಈಗ ಬೆಳೆದಿದೆ ಎಂಬುದು ಡಬ್ಲ್ಯುಪಿಪಿ ಮೀಡಿಯಾದ ‘ಸ್ಪೋರ್ಟಿಂಗ್ ನೇಶನ್: ಬ್ಯುಲ್ಡಿಂಗ್ ಎ ಲೆಗಸಿ’ ವರದಿಯಿಂದ ತಿಳಿದುಬರುತ್ತದೆ.
ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು
ಡಬ್ಲ್ಯುಪಿಪಿ ಮೀಡಿಯಾದ ಅಧ್ಯಯನದಲ್ಲಿ, ಕ್ರೀಡಾ ಆರ್ಥಿಕತೆಯ ಗಾತ್ರವನ್ನು ಅಳೆಯಲು ಮೂರು ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಪ್ರಾಯೋಜತ್ವ, ಕ್ರೀಡಾಪಟು ಪ್ರಚಾರ, ಜಾಹೀರಾತು ವೆಚ್ಚ, ಈ ಮೂರು ಆದಾಯ ಮೂಲಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಭಾರತದಲ್ಲಿ ಕ್ರಿಕೆಟ್ ಪ್ರಾಬಲ್ಯ ನಿಚ್ಚಳವಾಗಿ ಕಾಣುತ್ತದೆ. ಶೇ. 89ರಷ್ಟು ಕ್ರೀಡಾ ಆರ್ಥಿಕತೆಯು ಕ್ರಿಕೆಟ್ನದ್ದಾಗಿದೆ. ಇತರ ಕ್ರೀಡೆಗಳ ಪಾಲು ಶೇ. 11 ಮಾತ್ರ. ಫುಟ್ಬಾಲ್ ಕಳೆದ ವರ್ಷ ಹೆಚ್ಚಿನ ಬೆಳವಣಿಗೆ ಹೊಂದಿಲ್ಲದಿರುವುದು ಇದಕ್ಕೆ ಕಾರಣ. ಪ್ರೋಕಬಡ್ಡಿ ಲೀಗ್ ಮೂಲಕ ಕಬಡ್ಡಿ ತನ್ನ ಸ್ಥಾನ ಉಳಿಸಿಕೊಂಡಿದೆ.
ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಅಕೌಂಟ್ಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?
ಆದರೆ, ಆದಾಯ ಗಳಿಕೆ ಮತ್ತು ವೀಕ್ಷಣೆ ಎರಡರಲ್ಲೂ ಕ್ರಿಕೆಟ್ಗೆ ಭಾರತದಲ್ಲಿ ಯಾವ ಕ್ರೀಡೆಯೂ ಸಾಟಿ ಇಲ್ಲ. ಅದರಲ್ಲೂ ಐಪಿಎಲ್ನ ಕೊಡುಗೆಯೂ ಗಣನೀಯವಾಗಿ ಇದೆ. ಮಹಿಳಾ ಕ್ರಿಕೆಟ್ ಕೂಡ ಇತ್ತಿಚಿನ ವರ್ಷಗಳಲ್ಲಿ ಕೊಡುಗೆ ನೀಡುತ್ತಿದೆ.
ಕ್ರೀಡಾ ಆರ್ಥಿಕತೆಗೆ ಮಾಧ್ಯಮ ವೆಚ್ಚದ ಕೊಡುಗೆ ಶೇ. 50ರಷ್ಟು ಇದೆ. 9,571 ಕೋಟಿ ರೂ ಅನ್ನು ಮಾಧ್ಯಮಗಳು ಕ್ರೀಡಾ ಪ್ರಸಾರಕ್ಕೆ ವ್ಯಯಿಸುತ್ತವೆ. ಇದರಲ್ಲಿ ಕ್ರಿಕೆಟ್ಗೆ ಮಾಡುವ ವೆಚ್ಚವೇ 9,026 ಕೋಟಿ ರೂ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ