ಸತತ 8ನೇ ದಿನ ಸೆನ್ಸೆಕ್ಸ್, ನಿಫ್ಟಿಗೆ ಕೆಂಪು ಬಣ್ಣ; ಎರಡು ವರ್ಷದಲ್ಲಿ ಇದೇ ಅತಿದೊಡ್ಡ ಹಿನ್ನಡೆ
Indian stock indices losing streak: ಭಾರತದ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿಯ ನಷ್ಟ ಮುಂದುವರಿದಿದೆ. ಫೆಬ್ರುವರಿ 5ರಿಂದ 14ರವರೆಗೆ ಸತತ ಎಂಟು ಸೆಷನ್ಸ್ ಈ ಸೂಚ್ಯಂಕಗಳು ಹಿನ್ನಡೆ ಕಂಡಿವೆ. 2023ರ ಫೆಬ್ರುವರಿ ಬಳಿಕ ಅತಿ ದೀರ್ಘಾವಧಿ ಮಾರುಕಟ್ಟೆ ಕುಸಿತ ಆಗಿದ್ದು ಇದೇ ಮೊದಲು. ಅಮೆರಿಕದ ಟ್ಯಾರಿಫ್ ಕ್ರಮದ ಪರಿಣಾಮವಾಗಿ ಮಾರುಕಟ್ಟೆ ಕುಸಿಯುತ್ತಿದೆ ಎನ್ನಲಾಗುತ್ತಿದೆ.

ನವದೆಹಲಿ, ಫೆಬ್ರುವರಿ 14: ಷೇರು ಮಾರುಕಟ್ಟೆಯ ರಕ್ತದೋಕುಳಿ ಮುಂದುವರಿಯುತ್ತಿದೆ. ಇವತ್ತು ಶುಕ್ರವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಮೈನಸ್ನಲ್ಲಿವೆ. ನಿಫ್ಟಿ50 ಸೂಚ್ಯಂಕ ಇವತ್ತು 102 ಅಂಕಗಳನ್ನು ಕಳೆದುಕೊಂಡಿದೆ. ಬಿಎಸ್ಇ ಸೆನ್ಸೆಕ್ಸ್ 200 ಅಂಕಗಳ ನಷ್ಟ ಮಾಡಿಕೊಂಡಿದೆ. ಪ್ರಮುಖ ಸೂಚ್ಯಂಕಗಳು ನಷ್ಟ ಕಾಣುತ್ತಿರುವುದು ಸತತ ಎಂಟನೇ ಸೆಷನ್ ಇವತ್ತಾಗಿತ್ತು. ಅಂದರೆ, ಫೆಬ್ರುವರಿ 5ರಿಂದ ಆರಂಭವಾಗಿ ಇವತ್ತಿನವರೆಗೂ ಪ್ರತೀ ದಿನವೂ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಹಿನ್ನಡೆ ಕಂಡಿವೆ. ಕೆಲ ತಿಂಗಳಿಂದಲೂ ಷೇರುಪೇಟೆ ಹಿನ್ನಡೆಯಲ್ಲಿದ್ದರೂ ಆಗೊಮ್ಮೆ ಈಗೊಮ್ಮೆ ಪಾಸಿಟಿವ್ ಆಗಿ ನಿಲ್ಲುತ್ತಿತ್ತು. ಈಗ ಸತತ ಎಂಟು ದಿನ ಮಾರುಕಟ್ಟೆ ಪತನವಾಗಿದೆ.
ಅತಿ ಹೆಚ್ಚು ಸೆಷನ್ಸ್ ಹಿನ್ನಡೆ ಕಾಣುತ್ತಿರುವುದು ಕಳೆದ ಎರಡು ವರ್ಷದಲ್ಲಿ ಇದೇ ಮೊದಲಾಗಿದೆ. 2023ರ ಫೆಬ್ರುವರಿ 17ರಿಂದ 28ರವರೆಗೆ ಸತತ ಎಂಟು ದಿನ ನಿಫ್ಟಿ50 ಸೂಚ್ಯಂಕ ಇಳಿಮುಖ ಕಂಡಿತ್ತು. ಇದಾದ ಬಳಿಕ ಈ ದೀರ್ಘಾವಧಿ ಕುಸಿತ ಆಗಿರುವುದು ಇದೇ ಮೊದಲು. ಸೆನ್ಸೆಕ್ಸ್30, ನಿಫ್ಟಿ50 ಸೂಚ್ಯಂಕಗಳಿಗೆ ಹೋಲಿಸಿದರೆ ಬೇರೆ ಮಧ್ಯಮ ಮತ್ತು ಸಣ್ಣ ಕಂಪನಿಗಳ ಷೇರುಗಳಿರುವ ಸೂಚ್ಯಂಕಗಳಂತೂ ರಕ್ಕಸ ಹೊಡೆತಕ್ಕೆ ಸಿಲುಕಿ ತರಗೆಲೆಯಂತೆ ಬಿದ್ದಿವೆ.
ಇದನ್ನೂ ಓದಿ: F-35 ಕೊಡ್ತೀವಿ ಅಂತ ಟ್ರಂಪ್ ಬಾಯಲ್ಲಿ ಹೇಳಿದ್ದಷ್ಟೇ; ಜಂಟಿ ಹೇಳಿಕೆಯಲ್ಲಿ ಅದರ ಹೆಸರಿಲ್ಲ; ಏನಿದೆ ಅದರಲ್ಲಿ?
ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಉತ್ತಮ ಸಂಧಾನಗಳನ್ನು ಮಾಡಿದ್ದರೂ, ಅಮೆರಿಕದ ಜೊತೆ ಭಾರತದ ಉತ್ತಮ ಬಾಂಧವ್ಯ ಮುಂದುವರಿಯುವ ಸ್ಪಷ್ಟ ಸೂಚನೆ ಸಿಕ್ಕಿದ್ದರೂ ಮಾರುಕಟ್ಟೆಯ ಕುಸಿತ ಮಾತ್ರ ನಿಲ್ಲಲಿಲ್ಲ.
ಮಾರುಕಟ್ಟೆಗೆ ಅಮೆರಿಕದ ಟ್ಯಾರಿಫ್ ಕಹಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನೂ ಒಳಗೊಂಡಂತೆ ಎಲ್ಲಾ ದೇಶಗಳಿಗೂ ಆಮದು ಸುಂಕ ಹಾಕುವುದಾಗಿ ಹೇಳಿದ್ದಾರೆ. ಇದು ಭಾರತದ ರುಪಾಯಿ ಕರೆನ್ಸಿ ಮೇಲೆ ಪರಿಣಾಮ ಬೀರಬಹುದು. ಮೊದಲೇ ಹಿನ್ನಡೆಯಲ್ಲಿರುವ ರುಪಾಯಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದು ಮುಂದುವರಿಯುತ್ತದೆ.
ಇದನ್ನೂ ಓದಿ: ಎನ್ಪಿಎಸ್ ವಾತ್ಸಲ್ಯ; ಮಕ್ಕಳ ಹಣಕಾಸು ಭದ್ರತೆಗೆ ಒಳ್ಳೆಯ ಸ್ಕೀಮ್; ಈ ಯೋಜನೆಯ ವಿವರ
ಭಾರತ ಮಾತ್ರವಲ್ಲ ಉದಯೋನ್ಮುಖ ಆರ್ಥಿಕತೆಗಳ ದೇಶಗಳಿಗೂ ಇದೇ ಸಂಕಷ್ಟ ಎದುರಾಗಿದೆ. ಈ ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆಗಳಿಂದ ವಿದೇಶೀ ಹೂಡಿಕೆಗಳು ಹೊರಹೋಗುವುದು ಮುಂದುವರಿಯುವ ನಿರೀಕ್ಷೆ ಇದೆ. ಭಾರತದ ಮಾರುಕಟ್ಟೆಯಿಂದ ಈ ವರ್ಷದ ಎರಡು ತಿಂಗಳಲ್ಲಿ ಒಂದು ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ವಿದೇಶೀ ಹೂಡಿಕೆಗಳು ಹೊರಹೋಗಿವೆ.
ಮ್ಯೂಚುವಲ್ ಫಂಡ್ ಇತ್ಯಾದಿ ದೇಶೀಯ ಫಂಡ್ಗಳು ಮಾರುಕಟ್ಟೆಗೆ ಹಣ ಹರಿಸುತ್ತಿರುವುದರಿಂದ ತೀರಾ ಹೆಚ್ಚಿನ ಮಟ್ಟಕ್ಕೆ ಮಾರುಕಟ್ಟೆ ಕುಸಿತ ಆಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




