
ಮುಂಬೈ, ಏಪ್ರಿಲ್ 15: ಕಳೆದ ವಾರದ ಕೊನೆಯಲ್ಲಿ ಕಂಡಿದ್ದ ಏರಿಕೆಯನ್ನು ಷೇರು ಮಾರುಕಟ್ಟೆ (Stock Market) ಇವತ್ತೂ ಮುಂದುವರಿಸಿದೆ. ಸತತ ಎರಡು ಸೆಷನ್ ಮಾರುಕಟ್ಟೆಯಲ್ಲಿ ಗೂಳಿ ಓಟ ನಡೆದಿದೆ. ಹಿಂದಿನ ಸೆಷನ್ನದಕ್ಕಿಂತಲೂ ಇವತ್ತು ಮಾರುಕಟ್ಟೆ ಪಾಸಿಟಿವ್ ಆಗಿದೆ. ಬಿಎಸ್ಇ ಮತ್ತು ಎನ್ಎಸ್ಇನ ಬಹುತೇಕ ಎಲ್ಲಾ ಸೂಚ್ಯಂಕಗಳು ಹಸಿರು ಬಣ್ಣದಲ್ಲಿವೆ. ಅಂದರೆ, ಎಲ್ಲಾ ಸೆಕ್ಟರ್ಗಳ ಷೇರುಗಳಿಗೆ ಬೇಡಿಕೆ ಬಂದಿದೆ. ಶೇ. 2ಕ್ಕಿಂತಲೂ ಹೆಚ್ಚು ಏರಿಕೆ ಆಗಿದೆ. ಸೆನ್ಸೆಕ್ಸ್ ಒಂದು ಹಂತದಲ್ಲಿ 1,750 ಅಂಕಗಳಷ್ಟು ಏರಿತ್ತು. ನಿಫ್ಟಿ ಬರೋಬ್ಬರಿ 540 ಅಂಕಗಳಷ್ಟು ಹೆಚ್ಚಳ ಕಂಡಿತು. ಹಿಂದಿನ ವಾರದಲ್ಲಿ ಕಂಡಿದ್ದ ನಷ್ಟವನ್ನು ಮಾರುಕಟ್ಟೆ ತರಾತುರಿಯಲ್ಲಿ ಮತ್ತೆ ಗಳಿಸುವಂತೆ ಕಂಡು ಬರುತ್ತಿದೆ.
ನಿನ್ನೆ ಅಮೆರಿಕದ ಷೇರು ಪೇಟೆ ಜೊತೆಗೆ ಬಾಂಡ್ ಮಾರುಕಟ್ಟೆ ಕೂಡ ಕುಸಿದಿತ್ತು. ಸಾಮಾನ್ಯವಾಗಿ ಎರಡೂ ಕೂಡ ತದ್ವಿರುದ್ಧ ದಿಕ್ಕಿನಲ್ಲಿರುತ್ತವೆ. ಒಂದೇ ದಿಕ್ಕಿನಲ್ಲಿರುವುದು ಬಹಳ ಅಪರೂಪ. ಬಸವ್ ಕ್ಯಾಪಿಟಲ್ ಸಂಸ್ಥೆಯ ಸಂದೀಪ್ ಪಾಂಡೆ ಪ್ರಕಾರ ಷೇರು ಮಾರುಕಟ್ಟೆ ಜೊತೆಗೆ ಬಾಂಡ್ ಮಾರುಕಟ್ಟೆ ಕುಸಿಯಲು ಚೀನಾ ಮಾಡಿದ ತಂತ್ರ ಕಾರಣವಂತೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗ ಆಮದು ಸುಂಕ ಕ್ರಮ ತೆಗೆದುಕೊಳ್ಳುವ ಸುಳಿವು ಇತ್ತು. ಇದನ್ನು ಅರಿತು ಚೀನಾ ಹಾಗೂ ಕೆಲ ದೇಶಗಳು ಸಾಕಷ್ಟು ಯುಎಸ್ ಸರ್ಕಾರಿ ಬಾಂಡ್ಗಳನ್ನು ಖರೀದಿಸಿದ್ದುವು. ಈಗ ಟ್ಯಾರಿಫ್ ಕ್ರಮ ಜಾರಿಗೊಳಿಸಿದ ಬಳಿಕ ಚೀನಾ ಯುಎಸ್ ಬಾಂಡ್ಗಳನ್ನು ಮಾರಿದೆ. ಇದರಿಂದಾಗಿ ಬಾಂಡ್ ಮಾರುಕಟ್ಟೆ ಕುಸಿದಿದೆ ಎನ್ನುತ್ತಾರೆ ಪಾಂಡೆ.
ಇದನ್ನೂ ಓದಿ: PM Mudra Scheme: ಮಹಿಳೆಯರಿಗೆ ವರದಾನವಾಗುತ್ತಿರುವ ಪಿಎಂ ಮುದ್ರಾ ಯೋಜನೆ
ಅಮೆರಿಕದ ಷೇರು ಮಾರುಕಟ್ಟೆಯ ಕುಸಿತವನ್ನು ತಡೆಯಲಾದರೂ ಡೊನಾಲ್ಡ್ ಟ್ರಂಪ್ ತಮ್ಮ ಟ್ಯಾರಿಫ್ ನಿಲುವನ್ನು ಸ್ವಲ್ಪ ಮೆತ್ತಗಾಗಿಸಬಹುದು. ವಿವಿಧ ದೇಶಗಳ ಜೊತೆ ಸಂಧಾನ ಅಥವಾ ಮಾತುಕತೆ ನಡೆಸಲು ಮುಂದಾಗಬಹುದು ಎಂಬುದು ಮಾರುಕಟ್ಟೆಯ ಆಶಯ. ಇದು ಷೇರು ಮಾರುಕಟ್ಟೆ ಗರಿಗೆದರಲು ಒಂದು ಕಾರಣ.
ಅಮೆರಿಕದ ಡಾಲರ್ ಮೌಲ್ಯ ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಎರಡು ವರ್ಷದಲ್ಲಿ ಯುಎಸ್ ಡಾಲರ್ ಇಂಡೆಕ್ಸ್ 100ಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಇದು ವಿದೇಶಿ ಹೂಡಿಕೆದಾರರ ಧೋರಣೆಯನ್ನು ಬದಲಾಗುವಂತೆ ಮಾಡುತ್ತಿರಬಹುದು.
ಟ್ಯಾರಿಫ್ ಹೇಗೇ ಇರಲಿ ಬಡ್ಡಿದರ ಇಳಿಸಲೇಬೇಕು ಎಂದು ಫೆಡರಲ್ ರಿಸರ್ವ್ ಮೇಲೆ ಡೊನಾಲ್ಡ್ ಟ್ರಂಪ್ ಬಾರಿ ಬಾರಿ ಒತ್ತಡ ಹಾಕುತ್ತಿದ್ದಾರೆ. ಆದರೆ, ಈ ಸಂಸ್ಥೆ ಅಮೆರಿಕ ಅಧ್ಯಕ್ಷರ ಒತ್ತಡಕ್ಕೆ ಬಗ್ಗುತ್ತಿಲ್ಲ. ಟ್ಯಾರಿಫ್ನಿಂದ ಹಣದುಬ್ಬರ ಹೆಚ್ಚುತ್ತದೆ. ಹೀಗಾಗಿ, ಬಡ್ಡಿದರ ಇಳಿಸಲು ಸಾಧ್ಯವಿಲ್ಲ ಎಂದು ಫೆಡರಲ್ ರಿಸರ್ವ್ ಸ್ಪಷ್ಟವಾಗಿ ಹೇಳಿದೆ. ಈ ಗಟ್ಟಿ ನಿಲುವು ಮಾರುಕಟ್ಟೆಗೆ ಸಕಾರಾತ್ಮಕ ಎನಿಸಿದೆ.
ಇದನ್ನೂ ಓದಿ: ಪಿಎಂಜೆಎವೈ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ನಲ್ಲಿ ಒಳಗೊಳ್ಳದ ಚಿಕಿತ್ಸೆಗಳ್ಯಾವುವು? ಇಲ್ಲಿದೆ ಕೆಲ ಮಾಹಿತಿ
ಈ ಬಾರಿಯ ಆರ್ಬಿಐ ಎಂಪಿಸಿ ಸಭೆಯಲ್ಲಿ ಮಾಡಲಾಗಿರುವ ಅಂದಾಜು ಪ್ರಕಾರ ಈ ವರ್ಷ (2025-26) ಹಣದುಬ್ಬರವು ನಿಯಂತ್ರಣದಲ್ಲೇ ಇರುವ ಸಾಧ್ಯತೆ ಇದೆ. ಹಾಗೆಯೇ, ಬಡ್ಡಿದರವನ್ನು ಏರಿಸುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಸತತ ಎರಡು ಬಾರಿ ಬಡ್ಡಿದರ ಇಳಿಸಲಾಗಿದೆ. ಈ ವರ್ಷದಲ್ಲಿ ಇನ್ನೂ ಎರಡು ಬಾರಿ ಬಡ್ಡಿ ಇಳಿಸುವ ಸಾಧ್ಯತೆ ಇದೆ. ಇದು ಮಾರುಕಟ್ಟೆಯಲ್ಲಿ ವಿಶ್ವಾಸ ಮೂಡಲು ಕಾರಣವಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ