ಬೆಂಗಳೂರು, ಆಗಸ್ಟ್ 15: ಈ ದೇಶವನ್ನು ಆ ದೇವರೇ ನೋಡಿಕೊಳ್ಳುತ್ತಿದ್ದಾನೆ. ಭಾರತೀಯರು ಇಲ್ಲಿ ಸರಿಯಾದ ಕಾಲಘಟ್ಟದಲ್ಲಿ ಹುಟ್ಟಲು ಪುಣ್ಯ ಮಾಡಿದ್ದಾರೆ ಎಂದು ವಿಶ್ವಖ್ಯಾತ ಹೃದಯತಜ್ಞ ಡಾ. ದೇವಿ ಶೆಟ್ಟಿ ಹೇಳಿದ್ದಾರೆ. ಕಳೆದ ವಾರ ಇಲ್ಲಿ ನಡೆದ ಮನಿಕಂಟ್ರೋಲ್ನ ಸ್ಟಾರ್ಟಪ್ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಮುಂಬರುವ ದಶಕದಲ್ಲಿ ಭಾರತದ ಆರೋಗ್ಯಪಾಲನೆ ವ್ಯವಸ್ಥೆಯಲ್ಲಿ ಬಹಳ ದೊಡ್ಡ ಪರಿವರ್ತನೆ ಆಗಲಿದೆ ಎಂದಿದ್ದಾರೆ. ಹಾಗೆಯೇ, ಹಣದ ಸಂಕೋಲೆಯಿಂದ ಹೆಲ್ತ್ ಕೇರ್ ವ್ಯವಸ್ಥೆ ಬೇರ್ಪಡೆ ಆಗುತ್ತಿದೆ. ಈ ಪರಿವರ್ತನೆ ಆಗುತ್ತಿರುವ ವಿಶ್ವದ ಮೊದಲ ದೇಶ ಭಾರತವಾಗಲಿದೆ. ನಾವು ಭಾರತೀಯರು ಗರ್ಭದ ಲಾಟಿ ಜಯಿಸಿದ್ದೇವೆ ಎಂದು ದೇವಿಶೆಟ್ಟಿ ಹೇಳಿದ್ದಾರೆ.
‘ನಿಮ್ಮ ನಮ್ಮ ಪ್ರತಿಭೆ ಎಷ್ಟೇ ಮಟ್ಟದಲ್ಲಿರಲಿ, ನಾವು ಭಾರತೀಯರೆಲ್ಲರೂ ಗರ್ಭದ ಲಾಟರಿ (Uterine lottery) ಜಯಿಸಿದ್ದೇವೆ. ನೀವು ಅಫ್ಘಾನಿಸ್ತಾನದಲ್ಲಿ ಹುಟ್ಟಿದ್ದರೆ ನೀವೆಷ್ಟೇ ಪ್ರತಿಭಾನ್ವಿತರಾದರೂ ಉಪಯೋಗಕ್ಕೆ ಬರುತ್ತಿರಲಿಲ್ಲ. ನೀವು ಯುದ್ಧಪೀಡಿತ ಪ್ರದೇಶಗಳಲ್ಲಿ ಹುಟ್ಟಬಹುದಿತ್ತು. ಆದರೆ, ಅದೃಷ್ಟಕ್ಕೆ ನೀವು ಸರಿಯಾದ ಗರ್ಭದಲ್ಲಿ ಜಯಿಸಿದ್ದೀರಿ,’ ಎಂದು ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಯನ್ನೇ ಮಾಡಿದ ನಾರಾಯಣ ಹೆಲ್ತ್ ಆಸ್ಪತ್ರೆಯ ಸಂಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ.
‘ನಾವು 500 ವರ್ಷಗಳ ಹಿಂದೆ ಜನಿಸಿದ್ದರೆ ಏನೂ ಮಾಡಲು ಸಾಧ್ಯವಿರುತ್ತಿರಲಿಲ್ಲ. ಯಾವ ಹೊಸ ಪ್ರಯೋಗ, ಉದ್ದಿಮೆಗಾರಿಕೆ ಇರಲಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ದೇಶದಲ್ಲಿ ನಾವೆಲ್ಲರೂ ಜಯಿಸಿದ್ದೇವೆ. ದೇವರ ಈ ಆಶೀರ್ವಾದಕ್ಕೆ ನಾವು ಕೃತಜ್ಞರಾಗಿರಬೇಕು. ದೇವರಿಂದಲೇ ನೇರವಾಗಿ ಆಳ್ವಿಕೆ ಆಗುತ್ತಿರುವ ದೇಶ ಯಾವುದಾದರೂ ಇದ್ದರೆ ಅದು ಭಾರತ’ ಎಂದಿದ್ದಾರೆ.
ಭಾರತವು ತನ್ನ ಹೆಲ್ತ್ಕೇರ್ ವ್ಯವಸ್ಥೆ ಹಣದ ಬಂಧದಿಂದ ಮುಕ್ತಗೊಳ್ಳಲಿರುವ ಮೊದಲ ದೇಶವಾಗಲಿದೆ. ಒಂದು ದೇಶದ ಹಣಬಲ ಅಥವಾ ಒಂದು ಕುಟುಂಬದ ಹಣಬಲಕ್ಕೂ ದೇಶದ ಜನಸಾಮಾನ್ಯರಿಗೆ ಸಿಗುವ ಆರೋಗ್ಯಪಾಲನೆಯ ಗುಣಮಟ್ಟಕ್ಕೂ ಸಂಬಂಧ ಇರುವುದಿಲ್ಲ ಎಂಬುದನ್ನು ಭಾರತ ರುಜುವಾತು ಮಾಡಲಿದೆ ಎಂದು ಡಾ. ದೇವಿಶೆಟ್ಟಿ ನಿರೀಕ್ಷಿಸಿದ್ದಾರೆ.
ಭಾರತ ಅತ್ಯುಚ್ಚ ಆರೋಗ್ಯಪಾಲನೆ ವ್ಯವಸ್ಥೆ ಪಡೆಯಲಿದೆ. ಈ ಪರಿವರ್ತನೆ ಆಗಲು ನೂರು ಅಥವಾ ಐವತ್ತು ವರ್ಷ ಬೇಕಾಗುವುದಿಲ್ಲ. ಮುಂದಿನ ದಶಕದಲ್ಲಿ ಇದು ಸಾಕಾರಗೊಳ್ಳಲಿದೆ. ಮುಂದಿನ ಐದರಿಂದ ಹತ್ತು ವರ್ಷದೊಳಗೆ ಈ ಪರಿವರ್ತನೆ ಆಗುತ್ತದೆ. ಜನಸಾಮಾನ್ಯರಿಗೆ ಈ ಹೆಲ್ತ್ಕೇರ್ ಪರಿವರ್ತನೆ ಬಹಳ ಕ್ಷಿಪ್ರ ಅವಧಿಯಲ್ಲಿ ಆಗುತ್ತದೆ ಎಂದು ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯ ಬಂದಾಗ ಭಾರತದ ಆರ್ಥಿಕತೆ ಹೇಗಿತ್ತು? ಬ್ರಿಟಿಷರು ಬರುವ ಮುನ್ನ ಹೇಗಿತ್ತು?
ಯಾವ ರೀತಿಯಲ್ಲಿ ಹೆಲ್ತ್ಕೇರ್ ವ್ಯವಸ್ಥೆ ಪರಿವರ್ತನೆ ಆಗುತ್ತದೆ? ಜನಸಾಮಾನ್ಯರಿಗೆ ಹೇಗೆ ಅದು ಲಾಭ ಆಗುತ್ತದೆ ಎಂಬುದಕ್ಕೆ ಅವರು ಮೊಬೈಲ್ ನೆಟ್ವರ್ಕ್ ಉದಾಹರಣೆ ಕೊಟ್ಟಿದ್ದಾರೆ. ‘ಸ್ಲಮ್ನಲ್ಲಿ ವಾಸಿಸುತ್ತಿರುವವರಿರಲಿ, ಬಂಗಲೆಯಲ್ಲಿ ಇರುವವರಿರಲಿ, ಎಲ್ಲರಿಗೂ ಒಂದೇ ರೀತಿಯ ಮೊಬೈಲ್ ನೆಟ್ವರ್ಕ್ ಸಿಗುತ್ತದೆ. ಟಿವಿಯಲ್ಲಿ ಬರುವ ಚಾನಲ್ಗಳೂ ಕೂಡ ಎಲ್ಲರಿಗೂ ಒಂದೇ. ನಾವು ಮನರಂಜನೆಯನ್ನು ಜನಪರಗೊಳಿಸಿದ್ದೇವೆ. ಹಾಗೆಯೇ, ಹೆಲ್ತ್ಕೇರ್ ವ್ಯವಸ್ಥೆ ಕೂಡ ಯಾವುದೇ ಭೇದ ಇಲ್ಲದೆ ಪ್ರತಿಯೊಬ್ಬರನ್ನೂ ತಲುಪಲಿದೆ’ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ