
ನವದೆಹಲಿ, ಫೆಬ್ರುವರಿ 16: ಜನವರಿ ತಿಂಗಳಲ್ಲಿ ಭಾರತದ ಒಟ್ಟಾರೆ ಸರಕು ಮತ್ತು ಸೇವೆಗಳ ರಫ್ತು (India total exports) 80.45 ಬಿಲಿಯನ್ ಡಾಲರ್ ಮೊತ್ತದಷ್ಟಿದೆ. ಕಳೆದ ವರ್ಷದ (2025) ಜನವರಿಯಲ್ಲಿ 71.09 ಬಿಲಿಯನ್ ಡಾಲರ್ ರಫ್ತು ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 13.16ರಷ್ಟು ರಫ್ತು ಹೆಚ್ಚಳ ಆಗಿದೆ. ಆದರೆ, ಆಮದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ. 76.48 ಬಿಲಿಯನ್ ಡಾಲರ್ ಇದ್ದದ್ದು 90.83 ಬಿಲಿಯನ್ ಡಾಲರ್ಗೆ ಏರಿದೆ. ಇದರಿಂದ ಒಟ್ಟರೆ ವ್ಯಾಪಾರ ಅಂತರ ಅಥವಾ ಟ್ರೇಡ್ ಡೆಫಿಸಿಟ್ 5.39 ಬಿಲಿಯನ್ ಡಾಲರ್ನಿಂದ 10.38 ಬಿಲಿಯನ್ ಡಾಲರ್ಗೆ ಏರಿದಂತಾಗಿದೆ.
ಜನವರಿಯಲ್ಲಿ ಸರಕುಗಳ ಟ್ರೇಡ್ ಡೆಫಿಸಿಟ್ 34.68 ಬಿಲಿಯನ್ ಡಾಲರ್ ಇದೆ. ಆರ್ಥಿಕ ತಜ್ಞರು 26 ಬಿಲಿಯನ್ ಡಾಲರ್ ಟ್ರೇಡ್ ಡೆಫಿಸಿಟ್ ನಿರೀಕ್ಷಿಸಿದ್ದರು. ಡಿಸೆಂಬರ್ ತಿಂಗಳಲ್ಲಿ ಸರಕುಗಳ ಟ್ರೇಡ್ ಡೆಫಿಸಿಟ್ 25.04 ಬಿಲಿಯನ್ ಡಾಲರ್ ಇತ್ತು.
ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?
ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್ನಲ್ಲಿ 38.51 ಬಿಲಿಯನ್ ಡಾಲರ್ ಇದ್ದ ಸರಕುಗಳ ರಫ್ತು ಜನವರಿಯಲ್ಲಿ 36.56 ಬಿಲಿಯನ್ ಡಾಲರ್ಗೆ ಇಳಿದಿದೆ. ಆದರೆ, ಹಿಂದಿನ ವರ್ಷದ ಜನವರಿಗೆ ಹೋಲಿಸಿದರೆ ಸರಕು ರಫ್ತು ತುಸು ಏರಿಕೆ ಆಗಿದೆ. ಇದೇ ವೇಳೆ, ಸರಕುಗಳ ಆಮದು 63.55 ಬಿಲಿಯನ್ ಡಾಲರ್ನಿಂದ 71.24 ಬಿಲಿಯನ್ ಡಾಲರ್ಗೆ ಏರಿದೆ. ಹೀಗಾಗಿ, ಸರಕುಗಳ ಟ್ರೇಡ್ ಡೆಫಿಸಿಟ್ ನಿರೀಕ್ಷೆಮೀರಿ ಹೆಚ್ಚಿದೆ. ಚಿನ್ನ ಮತ್ತು ಬೆಳ್ಳಿ ಆಮದು ಮೌಲ್ಯ ಹೆಚ್ಚಾದ್ದರಿಂದ ಒಟ್ಟಾರೆ ಸರಕು ಆಮದು ಏರಿಕೆ ಆಗಲು ಕಾರಣ ಎನ್ನಲಾಗಿದೆ.
ಭಾರತದ ಮೇಲೆ ಅಮೆರಿಕ ತನ್ನ ಟ್ಯಾರಿಫ್ಗಳನ್ನು ಈ ತಿಂಗಳು ಕಡಿಮೆ ಮಾಡಿದೆ. ಶೇ. 50ರಷ್ಟು ಇದ್ದ ಟ್ಯಾರಿಫ್ ಶೇ. 18ಕ್ಕೆ ಇಳಿಕೆ ಆಗಿದೆ. ಆದರೆ, ಜನವರಿಯಲ್ಲಿ ಶೇ. 50 ಟ್ಯಾರಿಫ್ ಕ್ರಮವೇ ಜಾರಿಯಲ್ಲಿದ್ದದ್ದು. ಹೀಗಾಗಿ, ಅಧಿಕ ಟ್ಯಾರಿಫ್ ನಡುವೆಯೂ ಭಾರತದ ಸರಕುಗಳ ರಫ್ತು ತೀರಾ ಹೆಚ್ಚು ಕುಸಿತ ಕಂಡಿಲ್ಲ ಎಂಬುದು ಗಮನಾರ್ಹ.
ಫೆಬ್ರುವರಿಯಲ್ಲಿ ಭಾರತಕ್ಕೆ ಅಮೆರಿಕದ ಟ್ಯಾರಿಫ್ ಶೇ. 25ರಷ್ಟು ಮಾತ್ರವೇ ಇರಲಿದೆ. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲಿರುವುದರಿಂದ ಟ್ಯಾರಿಫ್ ಶೇ. 18ಕ್ಕೆ ಇಳಿಕೆ ಆಗಬಹುದು. ಮಾರ್ಚ್ ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಬಹುದು.
ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ