ನವದೆಹಲಿ, ಮಾರ್ಚ್ 10: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಸತತ ಏರಿಕೆ ಕಂಡಿದೆ. ಮಾರ್ಚ್ 1ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 6.55 ಬಿಲಿಯನ್ ಡಾಲರ್ನಷ್ಟು ಏರಿ 625.626 ಬಿಲಿಯನ್ ಡಾಲರ್ ಮಟ್ಟ ತಲುಪಿದೆ. ಹಿಂದಿನ ವಾರದಲ್ಲಿ (ಫೆ. 23) 2.975 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿತ್ತು. ಮಾರ್ಚ್ 1ರ ವಾರದಲ್ಲಿ ಎಸ್ಡಿಆರ್ ಮತ್ತು ಐಎಂಎಫ್ನಲ್ಲಿನ ನಿಧಿ ಕಡಿಮೆ ಆದರೂ ಕೂಡ ಒಟ್ಟಾರೆ ಫಾರೆಕ್ಸ್ ಸಂಪತ್ತು ಗಣನೀಯವಾಗಿ ಹೆಚ್ಚಿದೆ. ಇದರಲ್ಲಿ ಬಹುಪಾಲು ವಿದೇಶೀ ಕರೆನ್ಸಿ ಸಂಪತ್ತು ಹೆಚ್ಚಳ ಕಾರಣವಾಗಿದೆ. ಇದು 6.043 ಬಿಲಿಯನ್ ಡಾಲರ್ನಷ್ಟು ಏರಿದೆ. ಚಿನ್ನದ ಮೀಸಲು ತೀರಾ ಹೆಚ್ಚಿಲ್ಲವಾದರೂ 569 ಮಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ.
ಎಸ್ಡಿಆರ್ ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ 17 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಐಎಂಎಫ್ನಲ್ಲಿ ಭಾರತ ಇರಿಸುವ ನಿಧಿ 41 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ ಎಂದು ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ.
ಒಟ್ಟಾರೆ ಫಾರೆಕ್ಸ್ ಮೀಸಲು ನಿಧಿ: 625.626 ಬಿಲಿಯನ್ ಡಾಲರ್
ಇದನ್ನೂ ಓದಿ: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ
ಭಾರತದ ಫಾರೆಕ್ಸ್ ಮೀಸಲು ಸಂಪತ್ತು 2021ರ ಅಕ್ಟೋಬರ್ ತಿಂಗಳಲ್ಲಿ ಉಚ್ಛ್ರಾಯ ಮಟ್ಟಕ್ಕೆ ಹೋಗಿತ್ತು. ಆಗ ಒಟ್ಟು ನಿಧಿ 645 ಬಿಲಿಯನ್ ಡಾಲರ್ ಆಗಿತ್ತು. ಅದಾದ ಬಳಿಕ 600 ಬಿಲಿಯನ್ ಡಾಲರ್ಗಿಂತ ಕಡಿಮೆಗೆ ಬಂದಿದೆ. ಈಗ ಕಳೆದ ಕೆಲ ತಿಂಗಳಿಂದ ಸಂಪತ್ತು ಹೆಚ್ಚುತ್ತಾ ಬಂದಿದೆ.
ಭಾರತದ ಫಾರೆಕ್ಸ್ ಮೀಸಲು ನಿಧಿ ಭಾರತೀಯ ಮೌಲ್ಯದಲ್ಲಿ 51,000 ಕೋಟಿ ರೂಗೂ ಹೆಚ್ಚಿದೆ. ವಿಶ್ವದಲ್ಲಿ ಅತಿ ಹೆಚ್ಚು ಫಾರೆಕ್ಸ್ ಸಂಪತ್ತು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಅಮೆರಿಕದ ಫಾರೆಕ್ಸ್ ರಿಸರ್ವ್ಸ್ 777 ಬಿಲಿಯನ್ ಡಾಲರ್ ಇದ್ದು ನಾಲ್ಕನೇ ಸ್ಥಾನದಲ್ಲಿದೆ. ಸ್ವಿಟ್ಜರ್ಲ್ಯಾಂಡ್ನದ್ದು 818 ಬಿಲಿಯನ್ ಡಾಲರ್ ಇದ್ದು ಮೂರನೇ ಸ್ಥಾನದಲ್ಲಿದೆ. ಚೀನಾ ಮತ್ತು ಜಪಾನ್ ಅತಿಹೆಚ್ಚು ಫಾರೆಕ್ಸ್ ಸಂಪತ್ತು ಹೊಂದಿರುವ ದೇಶಗಳಾಗಿವೆ.
ಇನ್ನು, ಪಾಕಿಸ್ತಾನದ ಜಿಡಿಪಿಗಿಂತ ಭಾರತದ ಫಾರೆಕ್ಸ್ ಮೀಸಲು ನಿಧಿ ಹೆಚ್ಚೂಕಡಿಮೆ ಎರಡು ಪಟ್ಟು ಹೆಚ್ಚಿದೆ. 2023ಕ್ಕೆ ಪಾಕಿಸ್ತಾನದ ಜಿಡಿಪಿ 339 ಬಿಲಿಯನ್ ಡಾಲರ್ ಇರಬಹುದು ಎಂಬ ಅಂದಾಜು ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ