ತೈಲ ಬಿಕ್ಕಟ್ಟು ಹೀಗೇ ಇದ್ದರೆ ಈ ವರ್ಷದ ಜಿಡಿಪಿ ಬೆಳವಣಿಗೆ ಎಷ್ಟಕ್ಕಿಳಿಯಬಹುದು ಗೊತ್ತಾ?

India's GDP may slowdown to 6.5pc if global oil prices remains above 100 USD: ತೈಲ ಬೆಲೆ ಏರಿಕೆಯಿಂದ ಭಾರತದ ಆರ್ಥಿಕತೆಗೆ ತುಸು ಹಿನ್ನಡೆಯಾಗತೊಡಗಿದೆ. ಕೇರ್ ಎಡ್ಜ್ ರೇಟಿಂಗ್ಸ್ ಏಜೆನ್ಸಿ ಮಾಡಿರುವ ಅಂದಾಜು ಪ್ರಕಾರ ತೈಲಬೆಲೆ ಏರಿಕೆಯಿಂದ ಜಿಡಿಪಿ ಬೆಳವಣಿಗೆ ಕುಂಠಿತಗೊಳ್ಳಬಹುದು, ಹಣದುಬ್ಬರ ಹೆಚ್ಚಬಹುದು. ಒಂದು ಬ್ಯಾರಲ್ ಕಚ್ಛಾ ತೈಲ ಬೆಲೆ 100 ಡಾಲರ್​ಗಿಂತಲೂ ಹೆಚ್ಚಿದ್ದರೆ ಜಿಡಿಪಿ ಬೆಳವಣಿಗೆ ಶೇ. 7.2 ಬದಲು ಶೇ. 6.5 ಮಾತ್ರವೇ ಹೆಚ್ಚಬಹುದು.

ತೈಲ ಬಿಕ್ಕಟ್ಟು ಹೀಗೇ ಇದ್ದರೆ ಈ ವರ್ಷದ ಜಿಡಿಪಿ ಬೆಳವಣಿಗೆ ಎಷ್ಟಕ್ಕಿಳಿಯಬಹುದು ಗೊತ್ತಾ?
ಜಿಡಿಪಿ
Image Credit source: Shutterstock

Updated on: Apr 03, 2026 | 3:30 PM

ಮುಂಬೈ, ಏಪ್ರಿಲ್ 3: ಪಶ್ಚಿಮ ಏಷ್ಯಾ ಹೊತ್ತಿ ಉರಿಯುತ್ತಿದ್ದು ಜಾಗತಿಕ ತೈಲ ಬಿಕ್ಕಟ್ಟು ಸ್ಥಿತಿ ಉದ್ಭವವಾಗಿದೆ. ಇದು ಹೆಚ್ಚು ಕಾಲ ಹೀಗೇ ಮುಂದುವರಿದರೆ ಜಾಗತಿಕ ಆರ್ಥಿಕ ಹಿಂಜರಿತ ಶುರುವಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಭಾರತದ ಆರ್ಥಿಕತೆಯೂ ಈ ಪರಿಣಾಮದಿಂದ ಹೊರತಾಗಿರುವುದಿಲ್ಲ. ಕೇರ್ ಎಡ್ಜ್ ರೇಟಿಂಗ್ಸ್ (CareEdge Ratings) ವರದಿ ಪ್ರಕಾರ ದೀರ್ಘಾವಧಿ ತೈಲ ಬಿಕ್ಕಟ್ಟಿನಿಂದ ಭಾರತದ ಆರ್ಥಿಕ ಬೆಳವಣಿಗೆಯ ವೇಗ ಮಂದಗೊಳ್ಳಬಹುದು ಮತ್ತು ಹಣದುಬ್ಬರ ಹೆಚ್ಚಬಹುದು.

ಕಚ್ಛಾ ತೈಲ ಬೆಲೆ 2026-27ರ ವರ್ಷದಲ್ಲಿ ಒಂದು ಬ್ಯಾರಲ್​ಗೆ ಸರಾಸರಿ 100 ಡಾಲರ್ ಬೆಲೆ ಇದ್ದರೆ ಭಾರತದ ಆರ್ಥಿಕ ಬೆಳವಣಿಗೆ ಶೇ. 6.5 ಮಾತ್ರವೇ ಇರಬಹುದು ಎಂದು ಈ ಏಜೆನ್ಸಿ ಹೇಳುತ್ತದೆ. ಕಳೆದ ನಾಲ್ಕೈದು ಕ್ವಾರ್ಟರ್​ಗಳಿಂದ ಭಾರತದ ಜಿಡಿಪಿ ಗಮನಾರ್ಹ ವೇಗದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ 2026-27ರ ವರ್ಷದಲ್ಲೂ ಜಿಡಿಪಿ ದರ ಶೇ. 7 ಅನ್ನು ಸುಲಭವಾಗಿ ದಾಟುವ ನಿರೀಕ್ಷೆ ಇತ್ತು. ಆದರೆ, ಈಗ ಇರಾನ್ ಯುದ್ಧವು ಭಾರತದ ಬೆಳವಣಿಗೆಯ ಕಥೆಗೆ ಹಿನ್ನಡೆ ತಂದಿದೆ.

ಇದನ್ನೂ ಓದಿ: ಪೆಟ್ರೋಲ್​ಗೆ ಕೇಂದ್ರ, ರಾಜ್ಯ ತೆರಿಗೆಗಳು, ಕಮಿಷನ್​ಗಳೆಷ್ಟು? ಜಿಎಸ್​ಟಿಯಿಂದ ಬೆಲೆ ಕಡಿಮೆ ಆಗುತ್ತಾ?

ಕಚ್ಛಾ ತೈಲ ಬೆಲೆ ಬ್ಯಾರಲ್​ಗೆ 60-70 ಡಾಲರ್ ಇದ್ದಾಗ ಭಾರತದ ಜಿಡಿಪಿ ಬೆಳವಣಿಗೆ 2026-27ರಲ್ಲಿ ಶೇ. 7.2ರಷ್ಟಾಗಬಹುದು ಎನ್ನುವ ಅಂದಾಜು ಇತ್ತು. ತೈಲ ಬೆಲೆ 90 ಡಾಲರ್ ಇದ್ದರೆ ಜಿಡಿಪಿ ದರ ಶೇ. 6.7ಕ್ಕೆ ಇಳಿಯಬಹುದು. 100 ಡಾಲರ್ ಬೆಲೆ ಇದ್ದಾಗ ಶೇ. 6.5, ಮತ್ತು 110 ಡಾಲರ್ ಬೆಲೆ ಇದ್ದಾಗ ಶೇ. 6.1 ಬೆಳವಣಿಗೆ ಮಾತ್ರವೇ ದಾಖಲಾಗಬಹುದು. ಒಂದು ವೇಳೆ, ಸರಾಸರಿ ತೈಲ ಬೆಲೆ 120 ಡಾಲರ್ ಇದ್ದು ಬಿಟ್ಟರೆ ಭಾರತದ ಆರ್ಥಿಕತೆ ಶೇ. 6 ಅಥವಾ ಅದಕ್ಕಿಂತಲೂ ಕಡಿಮೆ ಆದರೂ ಆದೀತು.

ಹಣದುಬ್ಬರವೂ ಸತತ ಏರಿಕೆ ನಿರೀಕ್ಷೆ

ತೈಲ ಬೆಲೆ ಹೆಚ್ಚಿದಂತೆ ಪೆಟ್ರೋಲ್, ಡೀಸಲ್, ಎಲ್​ಪಿಜಿ ಇತ್ಯಾದಿ ಪೆಟ್ರೋಲಿಯಂ ಮತ್ತು ಗ್ಯಾಸ್ ಉತ್ಪನ್ನಗಳ ಬೆಲೆಯೂ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಬೇರೆ ಹಲವು ಸರಕುಗಳ ಬೆಲೆಗಳೂ ಏರಿಕೆ ಆಗುತ್ತವೆ. ಇದರಿಂದ ಹಣದುಬ್ಬರ ಹೆಚ್ಚುತ್ತದೆ.

ಇದನ್ನೂ ಓದಿ: ಟ್ರಂಪ್ ಸರ್ಕಾರದಿಂದ ಫಾರ್ಮಾ ಉತ್ಪನ್ನಗಳಿಗೆ ನೂರಕ್ಕೆ ನೂರು ಟ್ಯಾರಿಫ್; ಲೋಹಗಳಿಗೂ ಭರ್ಜರಿ ಸುಂಕ

ಕಚ್ಛಾ ತೈಲ ಬೆಲೆ ಬ್ಯಾರಲ್​ಗೆ 60-70 ಡಾಲರ್ ಇದ್ದಾಗ ಭಾರತದ 2026-27ರ ಹಣದುಬ್ಬರ ಶೇ. 4.3 ಇರುವ ಅಂದಾಜಿತ್ತು. ತೈಲ ಬೆಲೆ 100 ಡಾಲರ್ ಇದ್ದರೆ ಹಣದುಬ್ಬರ ಶೇ. 5 ದಾಟುವ ಸಾಧ್ಯತೆ ಇದೆ. ಹಾಗೆಯೇ, ತೈಲ ಬೆಲೆ 120 ಡಾಲರ್​ನಷ್ಟು ಇದ್ದರೆ ಹಣದುಬ್ಬರ ಶೇ. 6.5ರ ಆಸುಪಾಸು ಇರಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us