ನವದೆಹಲಿ, ಮಾರ್ಚ್ 12: ಕಳೆದ ಒಂದೆರಡು ವರ್ಷದಿಂದ ಭಾರತದ ಷೇರು ಮಾರುಕಟ್ಟೆಯ ಭರ್ಜರಿ ಓಟದಲ್ಲಿ ಮುಂಚೂಣಿಯಲ್ಲಿದ್ದ ಬ್ಯಾಂಕಿಂಗ್ ವಲಯ ಈ ವರ್ಷ ಸಾಕಷ್ಟು ತೊಡಕುಗಳನ್ನು ಎದುರಿಸುತ್ತಿರುವಂತೆ ತೋರುತ್ತಿದೆ. ಷೇರುಮಾರುಕಟ್ಟೆ ಕುಸಿತದಲ್ಲಿ (stock market crash) ಬ್ಯಾಂಕಿಂಗ್ ಸೆಕ್ಟರ್ ಕುಸಿತವೂ ಗಮನಾರ್ಹವಾಗಿದೆ. ಈ ಮಧ್ಯೆ ಇಂಡಸ್ಇಂಡ್ ಬ್ಯಾಂಕ್ ನಿನ್ನೆ ಮಂಗಳವಾರ ಒಂದೇ ದಿನ ಶೇ. 27ರಷ್ಟು ಕುಸಿತ ಕಂಡಿತು. ಅದರ ಇತಿಹಾಸದಲ್ಲೇ ಅದು ಕಂಡ ಅತಿ ಹೀನಾಯ ಕುಸಿತ. ಕಳೆದ ಆರು ತಿಂಗಳಲ್ಲಿ ಅದರ ಷೇರುಮೌಲ್ಯ ಅರ್ಧದಷ್ಟು ಕುಸಿದು ಹೋಗಿತ್ತು. ನಿನ್ನೆ ಡಿಢೀರ್ ಕುಸಿತ ಕಂಡಿದ್ದ ಇಂಡಸ್ಇಂಡ್ ಬ್ಯಾಂಕ್ (IndusInd Bank) ಷೇರು ಇವತ್ತು ಅಷ್ಟೇ ವೇಗವಾಗಿ ತಿರುಗಿ ನಿಂತಿದೆ. ಶೇ. 5-6ರಷ್ಟು ಏರಿಕೆ ಕಂಡಿದೆ. ಮಧ್ಯಾಹ್ನ 2:30ರ ವೇಳೆ ಇದರ ಷೇರುಬೆಲೆ 690 ರೂ ಆಸುಪಾಸಿನಲ್ಲಿತ್ತು.
ತನ್ನ ಡಿರೈವೇಟಿವ್ಸ್ ಪೋರ್ಟ್ಫೋಲಿಯೋದಲ್ಲಿ ಲೆಕ್ಕಾಚಾರ ತುಸು ವ್ಯತ್ಯಾಸವಾಗಿ ಹೋಗಿದೆ. ಹಿಂದಿನ ಫಾರೆಕ್ಸ್ ಟ್ರಾನ್ಸಾಕ್ಷನ್ಗಳಿಗೆ ಹೆಡ್ಜಿಂಗ್ ಮಾಡಲು ಎಷ್ಟು ವೆಚ್ಚವಾಗಬಹುದು ಎಂದು ಅಂದಾಜು ಮಾಡುವಲ್ಲಿ ವ್ಯತ್ಯಾಸವಾಗಿದೆ. ಅಂದರೆ, ಕಡಿಮೆ ಹೆಡ್ಜಿಂಗ್ ವೆಚ್ಚವನ್ನು ಅಕೌಂಟ್ಗಳಲ್ಲಿ ತೋರಿಸಲಾಗಿದೆ. ಇದರಿಂದ ಇಂಡಸ್ಇಂಡ್ ಬ್ಯಾಂಕ್ನ ಮೌಲ್ಯ ಶೇ. 2.35ರಷ್ಟು ಕಡಿಮೆ ಆಗಬಹುದು. ಅಂದರೆ, 1,600ರಿಂದ 2,000 ಕೋಟಿ ರೂನಷ್ಟು ನೆಟ್ ವರ್ತ್ ಕಡಿಮೆ ಆಗಬಹುದು ಎಂಬುದನ್ನು ಸ್ವತಃ ಬ್ಯಾಂಕ್ ಒಪ್ಪಿಕೊಂಡಿತು.
ಇದನ್ನೂ ಓದಿ: ಪಿಎಂ ಸೂರ್ಯಘರ್: ಕೇವಲ 13 ತಿಂಗಳಲ್ಲಿ 10 ಲಕ್ಷ ಮೈಲಿಗಲ್ಲು ಮುಟ್ಟಿದ ರೂಫ್ಟಾಪ್ ಸೋಲಾರ್ ಸ್ಕೀಮ್
ಆರ್ಬಿಐ ನಿರ್ದೇಶನದ ಮೇರೆಗೆ ಪರಿಶೀಲನೆ ನಡೆಸಿದಾಗ 2024ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಈ ತಪ್ಪು ಲೆಕ್ಕಾಚಾರಗಳು ನಡೆದಿರುವುದು ತಿಳಿದುಬಂದಿವೆ. ಮಾರ್ಚ್ 10, ಸೋಮವಾರ ಇಂಡಸ್ಇಂಡ್ ಬ್ಯಾಂಕ್ ತನ್ನ ಎಕ್ಸ್ಚೇಂಜ್ ಫೈಲಿಂಗ್ನ್ಲಲಿ ಈ ಮಾಹಿತಿಯನ್ನು ಪ್ರಕಟಿಸಿತು.
ಇಂಡಸ್ಇಂಡ್ ಬ್ಯಾಂಕ್ನ ಷೇರು ಮಾರ್ಚ್ 5ರಿಂದಲೇ ಕುಸಿಯಲು ಆರಂಭಿಸಿತು. ಯಾವಾಗ ಈ ಬ್ಯಾಂಕು ತನ್ನ ಡಿರೈವೇಟಿವ್ಸ್ನ ತಪ್ಪು ಲೆಕ್ಕಾಚಾರ ಮಾಡಿರುವುದನ್ನು ಒಪ್ಪಿಕೊಂಡಿತೋ, ಹೂಡಿಕೆದಾರರ ಜಂಘಾಬಲವೇ ಉಡುಗಿ ಹೋದಂತಾಗಿತ್ತು. ಮಾರ್ಚ್ 11, ನಿನ್ನೆ ಮಂಗಳವಾರ ಶೇ. 27ರಷ್ಟು ಷೇರುಕುಸಿತವಾಯಿತು. ಹಿಂದೆಯೇ ಈ ದೋಷಗಳು ಆಗಿದ್ದು ಗೊತ್ತಾದರೂ ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ ಎಂಬುದು ಹೂಡಿಕೆದಾರರ ಪ್ರಶ್ನೆಯಾಗಿದ್ದಿರಬಹುದು.
ಇದನ್ನೂ ಓದಿ: ಏರ್ಟೆಲ್ ಆಯ್ತು, ಈಗ ಜಿಯೋ ಕೂಡ ಸ್ಟಾರ್ಲಿಂಕ್ ಜೊತೆ ಒಪ್ಪಂದ; ಏನಿದು ಸ್ಟಾರ್ಲಿಂಕ್ ಇಂಟರ್ನೆಟ್?
ಇಂಡಸ್ಇಂಡ್ ಬ್ಯಾಂಕ್ ಹಿಂದೂಜಾ ಗ್ರೂಪ್ ಕಂಪನಿಗೆ ಸೇರಿದ ಬ್ಯಾಂಕು. ಬ್ಯಾಂಕ್ನ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ. ಬ್ಯಾಂಕಿಗೆ ಎಷ್ಟೇ ಬಂಡವಾಳದ ಅಗತ್ಯಬಿದ್ದರೂ ತಾವು ವ್ಯವಸ್ಥೆ ಮಾಡುವುದಾಗಿ ಮಾಲೀಕರಾದ ಅಶೋಕ್ ಹಿಂದೂಜಾ ನಿನ್ನೆ ಸಂಜೆ ಭರವಸೆ ನೀಡಿದ್ದರು. ಇದು ಹೂಡಿಕೆದಾರರ ವಿಶ್ವಾಸ ಮರಳಿ ಸಿಗುವಂತೆ ಮಾಡಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Wed, 12 March 25