
ಬೆಂಗಳೂರು, ಸೆಪ್ಟೆಂಬರ್ 18: ಆ್ಯಪಲ್ ಕಂಪನಿಯ ಹೊಸ ಐಫೋನ್ಗಳು ಭಾರತದಲ್ಲಿ ಬಿಡುಗಡೆ ಆಗಿವೆ. ಐಫೋನ್ 18 ಪ್ರೋ ಮತ್ತು ಐಫೋನ್ 18 ಪ್ರೋ ಮ್ಯಾಕ್ಸ್ ಫೋನ್ಗಳು ಇಂದು ಸೆಪ್ಟೆಂಬರ್ 18ರಿಂದ ಗ್ರಾಹಕರ ಕೈ ಸೇರತೊಡಗಿವೆ. ದೆಹಲಿ, ಬೆಂಗಳೂರು, ಮುಂಬೈ, ಪುಣೆ ಮತ್ತು ನೊಯ್ಡಾದಲ್ಲಿರುವ ಆ್ಯಪಲ್ ಸ್ಟೋರ್ಗಳ ಬಳಿ ಐಫೋನ್ ಪ್ರಿಯರ ದಂಡೇ ನೆರೆದಿತ್ತು. ರೀಟೇಲ್ ಸ್ಟೋರ್ಗಳಲ್ಲಿ ಹಬ್ಬದ ರೀತಿಯ ವಾತಾವರಣವೇ ಕಂಡು ಬಂದಿತ್ತು.
ಸೆಪ್ಟೆಂಬರ್ 12ರಂದು ಹೊಸ ಐಫೋನ್ಗಳಿಗೆ ಪ್ರೀ ಆರ್ಡರ್ ಬುಕಿಂಗ್ ಆರಂಭವಾಗಿತ್ತು. ಬುಕಿಂಗ್ ಮಾಡಿದವರಿಗೆ ಇಂದು ಫೋನ್ ಪಡೆಯುವ ಸುಗ್ಗಿ, ಸಂಭ್ರಮ. ಬೆಂಗಳೂರಿನ ಫೀನಿಕ್ಸ್ ಮಾಲ್ನಲ್ಲಿರುವ ಆ್ಯಪಲ್ ಸ್ಟೋರ್ನ ಸಿಬ್ಬಂದಿ ಇವತ್ತು ಗ್ರಾಹಕರನ್ನು ಕರತಾಡನ ಮತ್ತು ಹರ್ಷೋದ್ಗಾರಗಳ ಮೂಲಕ ಬರಮಾಡಿಕೊಂಡಿದ್ದು ರಂಜನೀಯ ಎನಿಸಿತು. ಗ್ರಾಹಕರೂ ಕೂಡ ಬೆಳ್ಳಂಬೆಳಗ್ಗೆಯೇ ಸರದಿಯಲ್ಲಿ ನಿಂತು ಫೋನ್ ಪಡೆಯುವ ಕಾತರತೆಯಲ್ಲಿ ಇದ್ದದ್ದು ಕಂಡು ಬಂದಿತು. ಈ ಫೀನಿಕ್ಸ್ ಮಾಲ್, ಬೆಂಗಳೂರಿನ ಹೆಬ್ಬಾಳದಲ್ಲಿದೆ.
ಫೀನಿಕ್ಸ್ ಮಾಲ್ನಲ್ಲಿರುವ ಆ್ಯಪಲ್ ಸ್ಟೋರ್ನಲ್ಲಿ ಕಂಡ ದೃಶ್ಯ
ಇದನ್ನೂ ಓದಿ: iPhone Offer: ಐಫೋನ್ 18 ರಿಲೀಸ್ ಬೆನ್ನಲ್ಲೇ ಐಫೋನ್ 17 ಪ್ರೊ, ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆ
ದೆಹಲಿ, ಮುಂಬೈ, ಪುಣೆ ಮತ್ತು ನೋಯಿಡಾದಲ್ಲಿರುವ ಆ್ಯಪಲ್ ರೀಟೇಲ್ ಸ್ಟೋರ್ಗಳಲ್ಲೂ ಇದೇ ರೀತಿಯ ವಾತಾವರಣ ಕಂಡುಬಂದಿದೆ. ಸ್ಟೋರ್ ಇರುವ ಮಾಲ್ಗಳಲ್ಲಿ ಗ್ರಾಹಕರು ಬೆಳಕು ಮೂಡುವ ಮುನ್ನವೇ ಜಮಾಯಿಸಿ, ಕಾದು ಕೂತಿದ್ದರು.
ಹೊಸ ಐಫೋನ್ ಖರೀದಿಸಿದ ಗ್ರಾಹಕನ ಸಂತಸದ ಮಾತು
ಐಫೋನ್ 18 ಪ್ರೋ ಮತ್ತು ಪ್ರೋ ಮ್ಯಾಕ್ಸ್ ಫೋನ್ಗಳು ಆ್ಯಪಲ್ ಸ್ಟೋರ್ಗಳಲ್ಲಿ ಮಾತ್ರವಲ್ಲ, ರಿಲಯನ್ಸ್ ಡಿಜಿಟಲ್ ಇತ್ಯಾದಿ ಪ್ರಮುಖ ಮಳಿಗೆಗಳಲ್ಲೆಡೆ ಮಾರಾಟಕ್ಕೆ ಲಭ್ಯ ಇದೆ. ಇಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲೂ ಸಿಗುತ್ತವೆ.
ಐಫೋನ್ 18 ಪ್ರೋ ಸ್ಮಾರ್ಟ್ಫೋನ್ನ ಬೆಲೆ 1,64,900 ರೂನಿಂದ ಆರಂಭವಾಗುತ್ತದೆ. ಇದರಲ್ಲಿ 256ಜಿಬಿ ಸ್ಟೋರೇಜ್ ಸೌಲಭ್ಯ ಇರುತ್ತದೆ.
512 ಜಿಬಿ, 1 ಟಿಬಿ ಮತ್ತು 2 ಟಿಬಿ ಸ್ಟೋರೇಜ್ ಸಾಮರ್ಥ್ಯ ಇರುವ ಐಫೋನ್ 18 ಪ್ರೋ ಫೋನ್ಗಳ ಬೆಲೆ ಇನ್ನೂ ಹೆಚ್ಚಿದೆ. 2 ಟಿಬಿ ಸಾಮರ್ಥ್ಯದ್ದರ ಬೆಲೆ 3.15 ಲಕ್ಷ ರೂ ಆಗುತ್ತದೆ.
ಇದನ್ನೂ ಓದಿ: ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿ; 2GB-3GB RAM ಫೋನ್ಗಳು ಮತ್ತೆ ಬರಲಿವೆ
ಐಫೋನ್ 18 ಪ್ರೋ ಮ್ಯಾಕ್ಸ್ ಫೋನ್ ಬೆಲೆ 1,79,900 ರೂನಿಂದ ಆರಂಭವಾಗಿ 3,29,900 ರೂವರೆಗೆ ಅದರ ವೇರಿಯೆಂಟ್ಗಳ ಬೆಲೆ ಇದೆ.
ಈಗ ಹೊಸ ಐಫೋನ್ ಬಿಡುಗಡೆಯಾದ ಮೇಲೆ ಹಿಂದಿನ ಆವೃತ್ತಿಯ ಐಫೋನ್ 17 ಇತ್ಯಾದಿ ಫೋನ್ಗಳು ಡಿಸ್ಕೌಂಟ್ನಲ್ಲಿ ಸೇಲ್ ಆಗುತ್ತಿವೆ. ಹಳೆಯ ಐಫೋನ್ ಇದ್ದರೆ ಎಕ್ಸ್ಚೇಂಜ್ ಆಫರ್ ಬಳಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:55 am, Fri, 18 September 26