iPhone sales: ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ: ಚೀನಾದ ಶಿಯೋಮಿಯನ್ನು ಹಿಂದಿಕ್ಕಿದ ಐಫೋನ್
Apple becomes No. 5 in India: ಆ್ಯಪಲ್ ಕಂಪನಿಯ ಐಫೋನ್ಗಳು ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಫೋನ್ಗಳ ಸಾಲಿನಲ್ಲಿ ಐದನೇ ಸ್ಥಾನ ಪಡೆದಿವೆ. ಶಿಯೋಮಿ ಫೋನ್ಗಳಿಗಿಂತ ಐಫೋನ್ ಹೆಚ್ಚು ಮಾರಾಟವಾಗುತ್ತಿದೆ. ವಿವೋ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಸ್ಯಾಮ್ಸುಂಗ್, ಒಪ್ಪೋ ಮತ್ತು ರಿಯಲ್ಮಿ ಫೋನ್ಗಳು ಕ್ರಮವಾಗಿ 2ರಿಂದ 4ನೇ ಸ್ಥಾನದಲ್ಲಿವೆ.

ನವದೆಹಲಿ, ಮೇ 26: ಸ್ಮಾರ್ಟ್ಫೋನ್ಗಳಿಗೆ ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದೆನಿಸಿರುವ ಭಾರತದಲ್ಲಿ ಇದೇ ಮೊದಲ ಬಾರಿಗೆ ಆ್ಯಪಲ್ ಐಫೋನ್ ಟಾಪ್-5 ಪಟ್ಟಿಗೆ ಏರಿದೆ. ಹಾಗೆಯೇ, ಚೀನಾದ ಒಂದು ಕಾಲದ ಅಪ್ರತಿಮ ಸ್ಮಾರ್ಟ್ಫೋನ್ ಬ್ರ್ಯಾಂಡ್ ಎನಿಸಿದ ಶಿಯೋಮಿ (Xiaomi) ಭಾರತದಲ್ಲಿ ಇದೇ ಮೊದಲ ಬಾರಿಗೆ ಟಾಪ್-5ನಿಂದ ನಿರ್ಗಮಿಸಿದೆ. ಶಿಯೋಮಿಯನ್ನು ಹಿಂದಿಕ್ಕಿ ಐಫೋನ್ (iPhone) 5ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.
ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಐದು ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳಲ್ಲಿ ಮೂರು ಚೀನೀ ಕಂಪನಿಗಳೇ ಇವೆ. ವಿವೊ, ಒಪ್ಪೊ ಮತ್ತು ರಿಯಲ್ಮಿ ಫೋನ್ಗಳು ಟಾಪ್-5ನಲ್ಲಿವೆ. ವಿವೋ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಜಪಾನ್ ದೇಶದ ಸ್ಯಾಮ್ಸುಂಗ್ ಸಂಸ್ಥೆಯ ಮೊಬೈಲ್ಗಳು ಎರಡನೇ ಸ್ಥಾನದಲ್ಲಿವೆ. ಒಪ್ಪೋ ಮತ್ತು ರಿಯಲ್ಮಿ ಫೋನ್ಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಈ ವರ್ಷದ ಮೊದಲ ಕ್ವಾರ್ಟರ್ನಲ್ಲಿ (ಜನವರಿಯಿಂದ ಮಾರ್ಚ್) ಆ್ಯಪಲ್ ಕಂಪನಿಯ ಐಫೋನ್ 5ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ಬ್ಯಾಂಕ್ ಬಿದ್ದರೂ ಮುಳಗಲ್ಲ ನಿಮ್ಮ ಹಣ; ಇನ್ಷೂರೆನ್ಸ್ ಗ್ಯಾರಂಟಿಯನ್ನು 10 ಲಕ್ಷ ರೂಗೆ ಏರಿಸಲಿದೆ ಸರ್ಕಾರ
ಭಾರತದಲ್ಲಿ ಆ್ಯಪಲ್ ದಿನೇ ದಿನೇ ತನ್ನ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳುತ್ತಿದೆ. ಮುಂದಿನ ವರ್ಷಗಳಲ್ಲೂ ಇದೇ ಟ್ರೆಂಡ್ ಮುಂದುವರಿಯಲಿದ್ದು, ಭಾರತದಲ್ಲಿ ಅಗ್ರಸ್ಥಾನ ಪಡೆದರೂ ಅಚ್ಚರಿ ಇಲ್ಲ ಎನ್ನುತ್ತಾರೆ ತಜ್ಞರು.
ಭಾರತದಲ್ಲಿ ಒಟ್ಟಾರೆ ಇರುವ ಸ್ಮಾರ್ಟ್ಫೋನ್ ಸರಾಸರಿ ಮಾರಾಟ ಬೆಲೆಗೆ ಹೋಲಿಸಿದರೆ ಐಫೋನ್ ದರ ಮೂರು ಪಟ್ಟು ಹೆಚ್ಚಿದೆ. ಆದರೂ ಕೂಡ ಶೇ. 20ರಷ್ಟು ಮಾರುಕಟ್ಟೆಯನ್ನು ಐಫೋನ್ ಆಕ್ರಮಿಸಿರುವುದು ಗಮನಾರ್ಹ ಸಂಗತಿ. ಜನರು ಐಫೋನ್ ಬ್ರ್ಯಾಂಡ್ ಮೇಲೆ ಒಲವು ಇರಿಸಿದಂತಿದೆ.
ಜಾಗತಿಕವಾಗಿಯೂ ಐಫೋನ್ ಬ್ರ್ಯಾಂಡ್ ಬಹಳ ಪ್ರಬಲವಾಗಿದೆ. ಅಮೆರಿಕದಂಥ ದೇಶಗಳಲ್ಲೂ ಜನರು ಐಫೋನ್ ಅನ್ನು ಪ್ರತಿಷ್ಠೆಯ ಸಂಗತಿಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ. ಭಾರತದಲ್ಲೂ ಇದು ಪ್ರತಿಷ್ಠೆಯ ವಸ್ತುವಾಗಿದೆ. ಬೇರೆ ಫೋನ್ಗಳಿಗಿಂತ ಇದು ದುಬಾರಿಯಾದರೂ ಜನರು ಖರೀದಿಗೆ ಮುಂದಾಗುತ್ತಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ರಿನಿವಬಲ್ ಎನರ್ಜಿ ಸಾಮರ್ಥ್ಯ 232 ಗಿ.ವ್ಯಾ.; ಜಾಗತಿಕವಾಗಿ 3ನೇ ಸ್ಥಾನದಲ್ಲಿ
ಶಿಯೋಮಿ ಇಳಿಮುಖ
ಹಲವು ವರ್ಷಗಳ ಕಾಲ ನಂಬರ್ ಒನ್ ಸ್ಥಾನದಲ್ಲಿದ್ದ ಶಿಯೋಮಿ ಸಂಸ್ಥೆ ಕಳೆದ ಎರಡು ವರ್ಷದಿಂದ ಕಳೆಗುಂದುತ್ತಲೇ ಬಂದಿದೆ. ಇಡಿ ಮತ್ತು ಐಟಿ ಇಲಾಖೆಗಳು ಕಂಪನಿಯ ಮೇಲೆ ತನಿಖೆ ನಡೆಸುತ್ತಿರುವುದು ಹಿನ್ನಡೆ ತಂದಿದೆ. ಸಿಇಒ ಸೇರಿದಂತೆ ಕಂಪನಿಯ ಉನ್ನತ ಹುದ್ದೆಯಲ್ಲಿರುವ ಹಲವರು ನಿರ್ಗಮಿಸಿದ್ದು ಅದರ ಎಲ್ಲಾ ವಿಭಾಗಗಳನ್ನು ದುರ್ಬಲಗೊಳಿಸಿದೆ. ಹೀಗಾಗಿ, ನಂಬರ್ ಒನ್ ಸ್ಥಾನದಲ್ಲಿದ್ದ ಶಿಯೋಮಿ ಕ್ರಮೇಣವಾಗಿ ಇಳಿಮುಖವಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








