ಇಸ್ರೇಲ್ ಸ್ಟಾಕ್ ಎಕ್ಸ್​​ಚೇಂಜ್ ಕಟ್ಟಡಕ್ಕೆ ಬಡಿದ ಇರಾನ್ ಕ್ಷಿಪಣಿ; ಆದರೂ ನಿಲ್ಲದ ಟ್ರೇಡಿಂಗ್; ವರ್ಷದ ಗರಿಷ್ಠ ಮಟ್ಟಕ್ಕೇರಿದ ಷೇರು

Israel stock market show resilience despite missile attack by Iran: ಇಸ್ರೇಲ್ ಮೇಲೆ ಇರಾನ್ ಇವತ್ತು ಹಲವಾರು ಬ್ಯಾಲಿಸ್ಟಿಕ್ ಮಿಸೈಲ್​​ಗಳಿಂದ ದಾಳಿ ಮಾಡಿದೆ. ಆಸ್ಪತ್ರೆ ಮೊದಲಾದ ಕಟ್ಟಡಗಳಿಗೆ ಹಾನಿಯಾಗಿದೆ. ಇಸ್ರೇಲ್​​ನ ಷೇರುಪೇಟೆಯಾದ ಟೆಲ್ ಅವೀವ್ ಸ್ಟಾಕ್ ಎಕ್ಸ್​​ಚೇಂಜ್​​ನ ಕಟ್ಟಡವೂ ಹಾನಿಗೊಂಡಿದೆ. ಟೆಎಎಸ್​ಇ, ಟಿಎ-35, ಟಿಎ-125 ಇತ್ಯಾದಿ ಇಂಡೆಕ್ಸ್​​ಗಳು ಕುಸಿಯುವ ಬದಲು ಏರಿಕೆ ಕಂಡಿದ್ದು ವಿಶೇಷ.

ಇಸ್ರೇಲ್ ಸ್ಟಾಕ್ ಎಕ್ಸ್​​ಚೇಂಜ್ ಕಟ್ಟಡಕ್ಕೆ ಬಡಿದ ಇರಾನ್ ಕ್ಷಿಪಣಿ; ಆದರೂ ನಿಲ್ಲದ ಟ್ರೇಡಿಂಗ್; ವರ್ಷದ ಗರಿಷ್ಠ ಮಟ್ಟಕ್ಕೇರಿದ ಷೇರು
ಟೆಲ್ ಅವೀವ್ ಸ್ಟಾಕ್ ಎಕ್ಸ್​​ಚೇಂಜ್

Updated on: Jun 19, 2025 | 5:23 PM

ನವದೆಹಲಿ, ಜೂನ್ 19: ಇಸ್ರೇಲ್ ಮತ್ತು ಇರಾನ್ ನಡುವಿನ ಸಮರ (Israel Iran war) ತೀವ್ರಗೊಳ್ಳುತ್ತಲೇ ಹೋಗಿದೆ. ಒಬ್ಬರಿಗೊಬ್ಬರು ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಪರಸ್ಪರ ದಾಳಿ ಮಾಡಿಕೊಳ್ಳುತ್ತಲೇ ಇದ್ದಾರೆ. ಇವತ್ತು ಗುರುವಾರ ಇರಾನ್​​ನ ಹಲವು ಕ್ಷಿಪಣಿಗಳು ಇಸ್ರೇಲ್​​ನ ವಿವಿಧ ಪ್ರದೇಶಗಳ ಮೇಲೆ ಅಪ್ಪಳಿಸಿವೆ. ಇದರಲ್ಲಿ ಆಸ್ಪತ್ರೆ, ಷೇರು ವಿನಿಮಯ ಕೇಂದ್ರ ಇತ್ಯಾದಿ ಸ್ಥಳಗಳೂ ಸೇರಿವೆ. ಮಾಧ್ಯಮ ವರದಿ ಪ್ರಕಾರ ಇಸ್ರೇಲ್​​ನ ಟೆಲ್ ಅವಿವ್ ಸ್ಟಾಕ್ ಎಕ್ಸ್​​ಚೇಂಜ್ (Tel Aviv Stock Exchange) ಕಟ್ಟಡ ಈ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಿಂದ ಸಾಕಷ್ಟು ಹಾನಿಗೊಂಡಿದೆ ಎನ್ನಲಾಗಿದೆ.

ಷೇರು ವಿನಿಮಯ ಕೇಂದ್ರದ ಕಟ್ಟಡ ಹಾನಿಯಾದರೂ ಷೇರು ವ್ಯಾಪಾರಿಗಳ ಹುಮ್ಮಸ್ಸು ಅಡಗಿಲ್ಲ.ಇಸ್ರೇಲ್ ಷೇರು ಮಾರುಕಟ್ಟೆಯ ಪ್ರಮುಖ ಇಂಡೆಕ್ಸ್ ಆದ ಟಿಎಎಸ್​​ಇ ಗುರುವಾರ ಶೇ. 4.26ರವರೆಗೂ ಏರಿಕೆ ಆಯಿತು. ಸದ್ಯ ಅದು 121 ಅಂಕಗಳಷ್ಟು ಏರಿಕೆ ಆಗಿ 6,189 ಮಟ್ಟದಲ್ಲಿದೆ. ಟೆಲ್ ಅವೀವ್ ಸ್ಟಾಕ್ ಎಕ್ಸ್​​ಚೇಂಜ್​​ನ ಟಿ-35 ಇತ್ಯಾದಿ ಇತರ ಸೂಚ್ಯಂಕಗಳೂ ಕೂಡ ಏರಿಕೆ ಕಂಡಿವೆ.

ಇದನ್ನೂ ಓದಿ: ಇಸ್ರೇಲ್​ನ 1000 ಹಾಸಿಗೆಗಳ ಆಸ್ಪತ್ರೆಗೆ ಅಪ್ಪಳಿಸಿದ ಇರಾನಿನ ಕ್ಷಿಪಣಿ; ಕಂಗಾಲಾಗಿ ಓಡಿದ ರೋಗಿಗಳು

ಕುತೂಹಲ ಎಂದರೆ, ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದಾಗಿನಿಂದ ಇಲ್ಲಿಯವರೆಗೆ ಟಿಎಎಸ್​​ಇ ಇಂಡೆಕ್ಸ್ ಶೇ. 14ರಷ್ಟು ಹೆಚ್ಚಿದೆ. ಅಂದರೆ, ಸುಮಾರು 800 ಅಂಕಗಳಷ್ಟು ಏರಿಕೆ ಆಗಿದೆ. ಈ ಇಂಡೆಕ್ಸ್ 52 ವಾರದ ಗರಿಷ್ಠ ಮಟ್ಟದಲ್ಲಿದೆ.

ಟೆಲ್ ಅವೀವ್ ಸ್ಟಾಕ್ ಎಕ್ಸ್​​ಚೇಂಜ್ ಕಟ್ಟಡದ ಮೇಲೆ ಇರಾನೀ ಕ್ಷಿಪಣಿ ಬಡಿದಾಗ ಸ್ವಲ್ಪ ಹೊತ್ತು ಷೇರು ವಹಿವಾಟಿಗೆ ಹಿನ್ನಡೆಯಾದರೂ ನಂತರ ಚೇತರಿಸಿಕೊಂಡಿದೆ. ಟ್ರೇಡರ್​​ಗಳು ಹೊಸ ಹುರುಪಿನೊಂದಿಗೆ ವ್ಯವಹಾರ ಕೈಗೊಂಡಿದ್ದಾರೆ. ಹೂಡಿಕೆದಾರರೂ ಕೂಡ ವಿಶ್ವಾಸ ಮುಂದುವರಿಸಿದ್ದಾರೆ. ಇದು ಗಮನಾರ್ಹ ಸಂಗತಿ.

ಇದನ್ನೂ ಓದಿ: ಇಸ್ರೇಲ್‌-ಇರಾನ್‌ ಯುದ್ಧದಲ್ಲಿ 600ಕ್ಕೂ ಹೆಚ್ಚು ಜನ ಸಾವು, ಟೆಲ್ ಅವೀವ್ ಮೇಲೆ 400 ಕ್ಷಿಪಣಿಗಳ ದಾಳಿ

ಇರಾನ್ ಮತ್ತು ಇಸ್ರೇಲ್ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎರಡೂ ದೇಶಗಳ ಮುಖಂಡರು ಯುದ್ಧ ಮುಂದುವರಿಸುವ ಸಂಕಲ್ಪದಲ್ಲಿದ್ದಾರೆ. ಇಸ್ರೇಲ್​​ಗೆ ಅಮೆರಿಕ ನೇರ ಬೆಂಬಲ ಕೊಡುವ ಬಗ್ಗೆ ಯೋಚಿಸುತ್ತಿದೆ. ಒಂದು ವೇಳೆ ಇಸ್ರೇಲ್​​ಗೆ ಅಮೆರಿಕ ನೇರ ಬೆಂಬಲ ನೀಡಿದರೆ, ಇರಾನ್ ದೇಶಕ್ಕೆ ತಾವು ಬೆಂಬಲ ನೀಡುವುದಾಗಿ ರಷ್ಯಾ ಮತ್ತು ಚೀನಾ ಹೇಳಿವೆ. ಕೆಲವರಂತೂ ಇದು ಮೂರನೇ ವಿಶ್ವ ಮಹಾಯುದ್ಧದ ಆರಂಭ ಎಂದೇ ಬಣ್ಣಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ